ಸೋಮವಾರ, ಮೇ 17, 2021
31 °C

ಪೂರ್ಣ ಅಂಕಕ್ಕೆ ಅವಕಾಶ ಇಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಿದ್ಯಾರ್ಥಿ ಉತ್ತೀರ್ಣ ಆಗಲಿ ಎಂಬ ದೃಷ್ಟಿಯಿಂದ ಆತ ಗಳಿಸಿರುವ ಸರಾಸರಿ ಶೇಕಡಾವಾರು ಅಂಕವನ್ನು ಪೂರ್ಣ ಸಂಖ್ಯೆ ಮಾಡಲು (`ರೌಂಡಿಂಗ್ ಆಫ್~) ಕಾನೂನಿನ ಅಡಿ ಅವಕಾಶ ಇಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.`ವಿದ್ಯಾರ್ಥಿ ಉತ್ತೀರ್ಣನಾಗಬೇಕಾದರೆ ಎಲ್ಲ ವಿಷಯಗಳಲ್ಲಿ ಆತ ಸರಾಸರಿಯಾಗಿ ಕನಿಷ್ಠ ಅಂಕ ಶೇ 40 ಪಡೆದಿರಬೇಕು ಎಂದಾದರೆ ಅಷ್ಟು ಅಂಕ ಪಡೆಯಲೇಬೇಕು. ಒಂದು ವೇಳೆ ಆತ ಶೇ 39.66... ಹೀಗೆ ಕಡಿಮೆ ಸರಾಸರಿ ಮೊತ್ತ ಗಳಿಸಿದರೆ ಅದನ್ನು ಶೇ 40ಕ್ಕೆ `ರೌಂಡಿಂಗ್ ಆಫ್~ ಮಾಡಿ ಆತನನ್ನು ಉತ್ತೀರ್ಣಗೊಳಿಸುವುದು ಕಾನೂನುಬಾಹಿರ~ ಎಂದು ನ್ಯಾಯಮೂರ್ತಿಗಳಾದ ಎಚ್.ಜಿ.ರಮೇಶ್ ಹಾಗೂ ಎ.ಎಸ್.ಪಾಚ್ಚಾಪುರೆ ಅವರನ್ನು ಒಳಗೊಂಡ ವಿಭಾಗೀಯ ಪೀಠ ತಿಳಿಸಿದೆ.ಗುಲ್ಬರ್ಗದ ಅಮೀರ್ ವಾಸಿಮ್ ಎಂಬ ವಿದ್ಯಾರ್ಥಿಯ ಅಂಕವನ್ನು `ರೌಂಡಿಂಗ್ ಆಫ್~ ಮಾಡಿ ಆತನನ್ನು ಉತ್ತೀರ್ಣಗೊಳಿಸುವಂತೆ ಏಕಸದಸ್ಯ ಪೀಠ ಹೊರಡಿಸಿದ್ದ ಆದೇಶವನ್ನು ರದ್ದು ಮಾಡಿರುವ ವಿಭಾಗೀಯ ಪೀಠ ಈ ತೀರ್ಪು ನೀಡಿದೆ. ಏಕಸದಸ್ಯ ಪೀಠದ ಆದೇಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಮೇಲ್ಮನವಿ ಮೂಲಕ ಪ್ರಶ್ನಿಸಿತ್ತು.ಅಮೀರ್, ಪಿಯುಸಿ ಪರೀಕ್ಷೆಯ ರಸಾಯನ ವಿಜ್ಞಾನ, ಭೌತ ವಿಜ್ಞಾನ ಹಾಗೂ ಗಣಿತದಲ್ಲಿ ಸರಾಸರಿ ಶೇ 39.66 ಅಂಕ ಪಡೆದಿದ್ದ. ಆತನನ್ನು  ಪರೀಕ್ಷಾ ಮಂಡಳಿ ಅನುತ್ತೀರ್ಣಗೊಳಿಸಿತ್ತು. ಅದನ್ನು ಆತ ಏಕಸದಸ್ಯಪೀಠದ ಮುಂದೆ ಪ್ರಶ್ನಿಸಿದ್ದಾಗ ಆತನ ಪರ ತೀರ್ಪು ಬಂದಿತ್ತು. ಅದನ್ನು ಪ್ರಾಧಿಕಾರ ವಿಭಾಗೀಯ ಪೀಠದಲ್ಲಿ ಪ್ರಶ್ನಿಸಿತ್ತು.`ಸಂಬಂಧಿತ ತರಗತಿಗಳಲ್ಲಿನ ಉತ್ತೀರ್ಣಗೊಂಡ ವಿಷಯಗಳ ಅಂಕಗಳ ಕುರಿತು `ಕರ್ನಾಟಕ ಪ್ರವೇಶ ನಿಯಮ 2006~ ರಲ್ಲಿ ಸ್ಪಷ್ಟ ಉಲ್ಲೇಖವಿದೆ.ಅದರಲ್ಲಿ `ರೌಂಡಿಂಗ್ ಆಫ್~ ಅಂಕದ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಆದುದರಿಂದ ಈ ರೀತಿ ಅಂಕ ನೀಡುವುದು ಸರಿಯಲ್ಲ~ ಎಂದು ನ್ಯಾಯಮೂರ್ತಿಗಳು ಉಲ್ಲೇಖಿಸಿದ್ದಾರೆ.ಹಕ್ಕುಪತ್ರ ವಿತರಣೆಗೆ ತಡೆ: ಕೇಂದ್ರ ಸರ್ಕಾರ ಪ್ರಾಯೋಜಿತ ರಾಜೀವ್ ಗಾಂಧಿ ಗ್ರಾಮೀಣ ಗೃಹ ನಿರ್ಮಾಣ ಯೋಜನೆ (ನವಗ್ರಾಮ ಆಶ್ರಯ ಗೃಹ ಯೋಜನೆ) ಅಡಿ ಹೊಸಕೋಟೆ ತಾಲ್ಲೂಕಿನಲ್ಲಿ ಮನೆಯ ಹಕ್ಕುಪತ್ರವನ್ನು ಪಡೆದುಕೊಂಡಿರುವವರು ಕಟ್ಟಡ ನಿರ್ಮಾಣ ಮುಂದುವರಿಸದಂತೆ ಹೈಕೋರ್ಟ್ ಆದೇಶಿಸಿದೆ.`ಈಗಾಗಲೇ ಹಕ್ಕುಪತ್ರ ಪಡೆದುಕೊಂಡಿದ್ದರೆ, ಅಂಥವರು ಸದ್ಯ ಯಥಾಸ್ಥಿತಿ ಕಾಯ್ದುಕೊಳ್ಳಬೇಕು~ ಎಂದಿರುವ ಕೋರ್ಟ್, ಹಕ್ಕುಪತ್ರ ವಿತರಣೆಯನ್ನು ಮುಂದುವರಿಸದಂತೆ ಸ್ಥಳೀಯ ಮುಖಂಡರಿಗೂ ಆದೇಶಿಸಿದೆ.

`ಕೆಂಬಾಳಿಗನಹಳ್ಳಿ ಗ್ರಾಮದಲ್ಲಿ ಸತ್ತವರ ಹೆಸರಿನಲ್ಲಿಯೂ ಹಕ್ಕುಪತ್ರ ವಿತರಣೆ ಮಾಡಲಾಗುತ್ತಿದೆ.ಈಗಾಗಲೇ ಮನೆ ಇರುವವರಿಗೂ ಮನೆ ನೀಡಲು ಸ್ಥಳೀಯ ಮುಖಂಡರು ಹೊರಟಿದ್ದಾರೆ~ ಎಂದು ದೂರಿ ಶ್ಯಾಮಲಾದೇವಿ ಹಾಗೂ ಇತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ನೇತೃತ್ವದ ವಿಭಾಗೀಯ ಪೀಠ ನಡೆಸುತ್ತಿದೆ.53 ಮನೆಗಳ ಪೈಕಿ 20 ಮಂದಿಗೆ ಈಗಾಗಲೇ ಹಕ್ಕುಪತ್ರ ವಿತರಣೆ ಮಾಡಿಯಾಗಿದೆ. ಇಲ್ಲಿ ಅನ್ಯಾಯ, ಅಕ್ರಮ ನಡೆಯುತ್ತಿರುವ ಕುರಿತು ಸ್ಥಳೀಯ ಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನ ಆಗಿಲ್ಲ ಎನ್ನುವುದು ಅರ್ಜಿದಾರರ ದೂರು. ವಿಚಾರಣೆ ಮುಂದೂಡಲಾಗಿದೆ.ನ್ಯಾಯಮೂರ್ತಿಗಳ ಪಿಂಚಣಿ; ಆದೇಶ: ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳು 80 ವರ್ಷ ವಯಸ್ಸಿನ ಆರಂಭದಿಂದಲೇ ಅವರ ಮೂಲ ವೇತನದ ಶೇ 20ರಷ್ಟು ಹೆಚ್ಚುವರಿ ಪಿಂಚಣಿ ಪಡೆಯಲು ಅರ್ಹರಾಗಿರುತ್ತಾರೆ ಎಂದು ಹೈಕೋರ್ಟ್ ಆದೇಶಿಸಿದೆ.80 ವರ್ಷ ಮುಗಿದ ಮೇಲೆ ಈ ಸೌಲಭ್ಯ ನೀಡುತ್ತಿರುವುದನ್ನು ಪ್ರಶ್ನಿಸಿ ನಿವೃತ್ತ ನ್ಯಾಯಮೂರ್ತಿ ಆರ್. ಜಿ.ದೇಸಾಯಿ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ ನಡೆಸಿದರು.80-85 ವರ್ಷ ವಯಸ್ಸಿನವರೆಗೆ ಇವರು ಶೇ 20, 90ರ ವರೆಗೆ ಶೇ 30, 95ರ ವರೆಗೆ ಶೇ 40, 100ರ ವರೆಗೆ ಶೇ 50ರಷ್ಟು ಹೆಚ್ಚುವರಿ ಪಿಂಚಣಿ ಪಡೆಯಲು ಅರ್ಹರು. 79 ವರ್ಷ ಮುಗಿದು 80ನೇ ವರ್ಷಕ್ಕೆ ಕಾಲಿಟ್ಟ ದಿನದಿಂದಲೇ ಈ ಹೆಚ್ಚುವರಿ ಪಿಂಚಣಿ ಯೋಜನೆ ಜಾರಿಗೊಳಿಸಬೇಕು ಎಂದು ಅವರು ನಿರ್ದೇಶಿಸಿದ್ದಾರೆ.

ಮಾಧ್ಯಮ- ವಕೀಲರ ಜಟಾಪಟಿ: ಇಂದು ವಿಚಾರಣೆ

ಮಾರ್ಚ್ 2ರಂದು ನಗರದ ಸಿವಿಲ್ ಕೋರ್ಟ್ ಆವರಣದಲ್ಲಿ ನಡೆದ ವಕೀಲರು, ಪೊಲೀಸರು ಮತ್ತು ಮಾಧ್ಯಮದವರ ನಡುವಿನ ಜಟಾಪಟಿ ಪ್ರಕರಣದ ವಿಚಾರಣೆಯನ್ನು ವಿಶೇಷ ಪೀಠ ಸೋಮವಾರದಿಂದ ಕೈಗೆತ್ತಿಕೊಳ್ಳಲಿದೆ.ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಅವರು ಈ ಪ್ರಕರಣದ ವಿಚಾರಣೆಯಿಂದ ಹಿಂದಕ್ಕೆ ಸರಿದ ಹಿನ್ನೆಲೆಯಲ್ಲಿ ನ್ಯಾಯಮೂರ್ತಿಗಳಾದ ಅಜಿತ್ ಗುಂಜಾಳ್ ಹಾಗೂ ಬಿ.ವಿ.ನಾಗರತ್ನಾ ಅವರನ್ನು ಒಳಗೊಂಡ ವಿಶೇಷ ಪೀಠವನ್ನು ಈ ಪ್ರಕರಣದ ವಿಚಾರಣೆಗೆಂದು ರಚನೆ ಮಾಡಲಾಗಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.