ಗುರುವಾರ , ಮೇ 6, 2021
23 °C

ಪೂರ್ವ ಭಾಗದಲ್ಲಿ ಸಿದ್ಧ: ಉಳಿದೆಡೆ ಯಾವಾಗ?

ಎನ್.ಸಿದ್ದೇಗೌಡ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜಧಾನಿಯ ನಾಗರಿಕರು ಬಹು ಕಾತರದಿಂದ ಕಾಯುತ್ತಿರುವ ಮೆಟ್ರೊ ರೈಲು ಸಂಚಾರವು ಇನ್ನು ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದೆ. ಅದರೊಂದಿಗೆ ಬಹುವರ್ಷಗಳ ಕನಸು ನನಸಾಗಲಿದೆ.ಸದ್ಯ ಪ್ರಗತಿಯಲ್ಲಿರುವ ಮೊದಲ ಹಂತದ ಯೋಜನೆಯಲ್ಲಿ ನಗರದಲ್ಲಿ ಒಟ್ಟು 42.30 ಕಿ.ಮೀ. ಉದ್ದದಷ್ಟು ಮೆಟ್ರೊ ರೈಲು ಮಾರ್ಗ ನಿರ್ಮಾಣವಾಗಲಿದೆ. ಅದರಲ್ಲಿ ರೈಲು ಸಂಚಾರ ಆರಂಭವಾಗಲಿರುವುದು 6.7 ಕಿ.ಮೀ. ಉದ್ದದ ಬೈಯಪ್ಪನಹಳ್ಳಿಯಿಂದ ಎಂ.ಜಿ. ರಸ್ತೆವರೆಗಿನ ರೀಚ್- 1ರ ಮಾರ್ಗದಲ್ಲಿ ಮಾತ್ರ. ಉಳಿದ 35.6 ಕಿ.ಮೀ. ಮಾರ್ಗ ರೈಲು ಸಂಚಾರಕ್ಕೆ ಸಿದ್ಧವಾಗುವುದೆಂಬ ಪ್ರಶ್ನೆ ಕುತೂಹಲ ಕೆರಳಿಸಿದೆ.ನಗರದ ಕೇಂದ್ರ ಭಾಗವಾದ ವಿಧಾನಸೌಧ ಮತ್ತು ಮೆಜೆಸ್ಟಿಕ್ ಪ್ರದೇಶಗಳಿಂದ ನಾಲ್ಕು ದಿಕ್ಕುಗಳ ಕಡೆಗೆ ರೈಲು ಮಾರ್ಗ ನಿರ್ಮಾಣ ಪೂರ್ಣಗೊಳ್ಳದ ಹೊರತು ಮೆಟ್ರೊ ಯೋಜನೆಯ ಪ್ರಯೋಜನದ ಸಂಪೂರ್ಣ ಅನುಭವ ಸಾರ್ವಜನಿಕರಿಗೆ ಆಗಲು ಸಾಧ್ಯವಿಲ್ಲ.ಬೆಂಗಳೂರು ಮೆಟ್ರೊ ರೈಲು ನಿಗಮದ ಪ್ರಕಾರ ಮೊದಲ ಹಂತದ ಎಲ್ಲ ಮಾರ್ಗಗಳಲ್ಲಿ 2013ರ ಮಾರ್ಚ್ ವೇಳೆಗೆ ರೈಲು ಓಡಾಟ ಪ್ರಾರಂಭವಾಗಲಿದೆ.ಸ್ವಸ್ತಿಕ್ ವೃತ್ತದಿಂದ- ಯಶವಂತಪುರ- ಹೆಸರಘಟ್ಟ ಕ್ರಾಸ್‌ವರೆಗಿನ ರೀಚ್- 3, 3ಎ ಮತ್ತು 3ಬಿ ಮಾರ್ಗದಲ್ಲಿ 2012ರ ಡಿಸೆಂಬರ್ ವೇಳೆಗೆ ರೈಲು ಸಂಚಾರ ಆರಂಭವಾಗುವ ಸಾಧ್ಯತೆ ಇದೆ.ಉಳಿದಂತೆ ಸ್ವಸ್ತಿಕ್‌ನಿಂದ ಕೆ.ಆರ್. ರಸ್ತೆ ಪ್ರವೇಶದ್ವಾರದವರೆಗಿನ ಯು.ಜಿ.- 1 ಮತ್ತು ಮಿನ್ಸ್ಕ್ ಚೌಕದಿಂದ ಮಾಗಡಿ ರಸ್ತೆ ಪ್ರವೇಶ ದ್ವಾರದವರೆಗಿನ ಯು.ಜಿ.- 2ರ ಸುರಂಗ ಮಾರ್ಗ, ಮಾಗಡಿ ರಸ್ತೆಯಿಂದ ಮೈಸೂರು ರಸ್ತೆಯ ನಾಯಂಡಹಳ್ಳಿವರೆಗಿನ ರೀಚ್- 2, ಕೆ.ಆರ್.ರಸ್ತೆಯಿಂದ- ಸೌತ್ ಎಂಡ್ ವೃತ್ತ- ಬನಶಂಕರಿ- ಪುಟ್ಟೇನಹಳ್ಳಿವರೆಗಿನ ರೀಚ್- 4 ಮತ್ತು ರೀಚ್- 4 ಎ ಮಾರ್ಗದಲ್ಲಿ 2013ರ ಮಾರ್ಚ್ ಅಂತ್ಯದ ವೇಳೆಗೆ ರೈಲುಗಳ ಸಂಚಾರ ಶುರುವಾಗಲಿದೆ.ಸುರಂಗ ಮಾರ್ಗದ ಭಾಗವಾಗಿ ಉತ್ತರ ಮತ್ತು ದಕ್ಷಿಣ ಕಾರಿಡಾರ್‌ನಲ್ಲಿ 3 ಹಾಗೂ ಪೂರ್ವ ಮತ್ತು ಪಶ್ಚಿಮ ಕಾರಿಡಾರ್‌ನಲ್ಲಿ 5- ಒಟ್ಟು 8 ನಿಲ್ದಾಣಗಳು ನೆಲದಡಿಯಲ್ಲಿ ನಿರ್ಮಾಣಗೊಳ್ಳಲಿವೆ. ಈ 8 ನಿಲ್ದಾಣಗಳ ಪೈಕಿ ಮೆಜೆಸ್ಟಿಕ್‌ನಲ್ಲಿ ಒಂದು ಮೇಲೆ, ಮತ್ತೊಂದು ಕೆಳಗೆ ಪ್ಲಸ್ ಆಕಾರದಲ್ಲಿ ನಿರ್ಮಾಣವಾಗುವ 2   ನೆಲದಡಿಯ ನಿಲ್ದಾಣಗಳು ಸೇರಿವೆ. ಈ ಎರಡು ನಿಲ್ದಾಣಗಳ ನಿರ್ಮಾಣ ಕಾರ್ಯದ ಟೆಂಡರ್ ಇನ್ನು ಅಂತಿಮಗೊಂಡಿಲ್ಲ. ಉಳಿದಂತೆ ಆರು ನಿಲ್ದಾಣಗಳ ನಿರ್ಮಾಣ ಕಾಮಗಾರಿಗೆ ಚಾಲನೆ ಸಿಕ್ಕಿದೆ.ಮೆಜೆಸ್ಟಿಕ್‌ನಿಂದ ವಿಧಾನಸೌಧದ ಕಡೆಗೆ ಜೋಡಿ ಸುರಂಗ ಮಾರ್ಗ ನಿರ್ಮಿಸುವ ಕಾರ್ಯ ಪ್ರಗತಿಯಲ್ಲಿದೆ. ಜೋಡಿ ಸುರಂಗದ ಪೈಕಿ ಒಂದನೇ ಸುರಂಗವು  330 ಮೀಟರ್‌ಗೂ ಹೆಚ್ಚು ಉದ್ದ ಸಿದ್ಧವಾಗಿದೆ, ಎರಡನೇ ಸುರಂಗವು 50 ಮೀಟರ್‌ನಷ್ಟು ನಿರ್ಮಾಣಗೊಂಡಿದೆ. ಸ್ವಸ್ತಿಕ್‌ನಿಂದ ಕೆ.ಆರ್. ಮಾರುಕಟ್ಟೆವರೆಗೆ ಸುರಂಗ ಕೊರೆಯುವ ಕಾರ್ಯ ಇನ್ನಷ್ಟೇ ಆರಂಭವಾಗಬೇಕಿದೆ.ರೀಚ್- 2, 3, 3ಎ, 3ಬಿ, 4, 4ಎ ಮಾರ್ಗಗಳಲ್ಲಿ ಮೇಲ್ಸೇತುವೆಗಾಗಿ ಪಿಲ್ಲರ್‌ಗಳ ನಿರ್ಮಾಣ ಕಾರ್ಯ ಮುಕ್ತಾಯ ಹಂತದಲ್ಲಿದೆ. ಸೇತುವೆ ಜೋಡಣೆ ಹಾಗೂ ನಿಲ್ದಾಣಗಳ ನಿರ್ಮಾಣ ಕಾರ್ಯ 50ರಷ್ಟು ಪೂರ್ಣಗೊಂಡಿದೆ. ಈ ಕಾರ್ಯಗಳು ಮುಗಿದ ಮೇಲೆ ಹಳಿ ಅಳವಡಿಕೆ ಕಾರ್ಯ, ವಿದ್ಯುತ್ ಪೂರೈಕೆ, ಸಿಗ್ನಲ್ ವ್ಯವಸ್ಥೆ ಮಾಡಬೇಕಿದೆ. ನಂತರ ಪರೀಕ್ಷಾರ್ಥ ರೈಲು ಸಂಚಾರ ನಡೆಸಿ, ಸಂಬಂಧಪಟ್ಟ ಸಂಸ್ಥೆಗಳಿಂದ ಸುರಕ್ಷತಾ ಪ್ರಮಾಣ ಪತ್ರ ಪಡೆದುಕೊಳ್ಳಬೇಕಾಗಿದೆ.ಸದ್ಯ ಮೆಟ್ರೊಗೆ ಬೈಯಪ್ಪನಹಳ್ಳಿ ಮತ್ತು ಪೀಣ್ಯದಲ್ಲಿ ಎರಡು ಕಡೆ ಡಿಪೋಗಳಿವೆ. ರೈಲುಗಳ ಓಡಾಟಕ್ಕೆ ಡಿಪೋ ಇರುವುದು ಅವಶ್ಯ. ಹೀಗಾಗಿ ರೀಚ್- 1ರ ನಂತರ ರೀಚ್- 3ರಲ್ಲಿ ರೈಲು ಸಂಚಾರ ಆರಂಭಿಸಲು ನಿಗಮದ ಅಧಿಕಾರಿಗಳು ಉತ್ಸುಕವಾಗಿದ್ದಾರೆ.ಎಲ್ಲೆಲ್ಲಿ ಎಷ್ಟೆಷ್ಟು ಪ್ರಗತಿ ಆಗಿದೆ

ರೀಚ್- 1: 
ಬೈಯಪ್ಪನಹಳ್ಳಿಯಿಂದ ಎಂ.ಜಿ.ರಸ್ತೆವರೆಗೆ. ರೈಲು ಸಂಚಾರಕ್ಕೆ ಮಾರ್ಗ ಸಿದ್ಧವಾಗಿದೆ.ರೀಚ್- 2: ಮಾಗಡಿ ರಸ್ತೆಯಿಂದ ಮೈಸೂರು ರಸ್ತೆವರೆಗೆ.ಎತ್ತರಿಸಿದ ಮಾರ್ಗಕ್ಕಾಗಿ ಒಟ್ಟು 242 ಪಿಲ್ಲರ್‌ಗಳ ಪೈಕಿ 177ರ ನಿರ್ಮಾಣ ಕಾರ್ಯ ಪೂರ್ಣ. ಶೇಕಡಾ 77ರಷ್ಟು ಮೇಲ್ಸೇತುವೆ ಸಿದ್ಧ. ನಿಲ್ದಾಣಗಳ ತಳಹದಿ ಕಾರ್ಯ ಶೇ 99ರಷ್ಟು ಮುಗಿದಿದೆ. ಮೊದಲ ಮಹಡಿ ಮತ್ತು ಪ್ಲಾಟ್‌ಫಾರಂಗೆ ಸಿಮೆಂಟ್ ತೊಲೆಗಳನ್ನು ಜೋಡಿಸುವ ಕಾರ್ಯ ಪ್ರಗತಿಯಲ್ಲಿದೆ.ರೀಚ್- 3: ಯಶವಂತಪುರದಿಂದ ಸ್ವಸ್ತಿಕ್‌ವರೆಗೆ.205 ಪಿಲ್ಲರ್‌ಗಳ ಪೈಕಿ 165 ಸಿದ್ಧವಾಗಿವೆ. 106 ಪಿಲ್ಲರ್‌ಗಳ ನಡುವೆ ಸೇತುವೆ ಜೋಡಣೆ ಕಾರ್ಯ ಮುಗಿದಿದೆ. ನಿಲ್ದಾಣಗಳ ನಿರ್ಮಾಣ ಕಾರ್ಯ ಶೇ 50ರಷ್ಟು ಪೂರ್ಣಗೊಂಡಿದೆ.ರೀಚ್- 3ಎ: ಯಶವಂತಪುರದಿಂದ ಪೀಣ್ಯ ಡಿಪೋವರೆಗೆ.215 ಪಿಲ್ಲರ್‌ಗಳ ಪೈಕಿ 80 ಸಿದ್ಧವಾಗಿವೆ. 45 ಪಿಲ್ಲರ್‌ಗಳ ನಡುವೆ ಜೋಡಣೆ ಕಾರ್ಯ ಪೂರ್ಣಗೊಂಡಿದೆ. ನಿಲ್ದಾಣಗಳ ನಿರ್ಮಾಣ ಕಾರ್ಯ ಶುರುವಾಗಿದೆ.ರೀಚ್- 3ಬಿ: ಪೀಣ್ಯ ಡಿಪೋದಿಂದ ಹೆಸರಘಟ್ಟದವರೆಗೆ.83 ಪಿಲ್ಲರ್‌ಗಳ ಪೈಕಿ 19 ಸಿದ್ಧವಾಗಿವೆ. ನಿಲ್ದಾಣಗಳ ನಿರ್ಮಾಣ ಕಾರ್ಯ ಆರಂಭವಾಗಿದೆ.ರೀಚ್- 4: ಕೆ.ಆರ್.ಮಾರ್ಕೆಟ್‌ನಿಂದ ಆರ್.ವಿ.ರಸ್ತೆವರೆಗೆ.147 ಪಿಲ್ಲರ್‌ಗಳ ಪೈಕಿ 145 ಸಿದ್ಧವಾಗಿವೆ. 104 ಪಿಲ್ಲರ್‌ಗಳ ನಡುವೆ ಸೇತುವೆ ಜೋಡಣೆ ಕಾರ್ಯ ಮುಕ್ತಾಯ ಹಂತದಲ್ಲಿದೆ. ಕೆ.ಆರ್. ರಸ್ತೆ ನಿಲ್ದಾಣ ನಿರ್ಮಾಣ ಕಾರ್ಯ ಶೇ 80ರಷ್ಟು ಪೂರ್ಣ ಗೊಂಡಿದೆ. ಲಾಲ್‌ಬಾಗ್ ನಿಲ್ದಾಣ ಶೇ 74ರಷ್ಟು, ಜಯನಗರ ಶೇ 65ರಷ್ಟು, ಆರ್.ವಿ. ರಸ್ತೆ ನಿಲ್ದಾಣ ಶೇ 64ರಷ್ಟು ಪೂರ್ಣಗೊಂಡಿದೆ.ರೀಚ್- 4ಎ: ಆರ್.ವಿ.ರಸ್ತೆಯಿಂದ ಪುಟ್ಟೇನಹಳ್ಳಿವರೆಗೆ.141 ಪಿಲ್ಲರ್‌ಗಳ ಪೈಕಿ 51 ಸಿದ್ಧವಾಗಿವೆ. 18 ಪಿಲ್ಲರ್‌ಗಳ ನಡುವೆ ಸೇತುವೆ ಜೋಡಣೆ ಪೂರ್ಣಗೊಂಡಿದೆ. ನಿಲ್ದಾಣಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ.ಯುಜಿ- 1: ಸ್ವಸ್ತಿಕ್‌ನಿಂದ ಕೆ.ಆರ್. ಮಾರುಕಟ್ಟೆವರೆಗೆ.

ಎರಡು ನೆಲದಡಿಯ ನಿಲ್ದಾಣಗಳ ನಿರ್ಮಾಣ ಕಾರ್ಯಕ್ಕೆ ಚಾಲನೆ ಸಿಕ್ಕಿದೆ. ಸುರಂಗ ಕೊರೆಯುವ ಕಾರ್ಯ ಇನ್ನಷ್ಟೇ ಆರಂಭವಾಗಬೇಕಿದೆ.ಯುಜಿ- 2: ಮಿನ್ಸ್ಕ್ ಚೌಕದಿಂದ ಮಾಗಡಿ ರಸ್ತೆ ಪ್ರವೇಶ ದ್ವಾರದವರೆಗೆ.

 4 ನೆಲದಡಿಯ ನಿಲ್ದಾಣಗಳು, ಸುರಂಗ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಒಂದು ನೆಲದಡಿಯ ನಿಲ್ದಾಣ ನಿರ್ಮಾಣ ಕಾಮಗಾರಿ ಆರಂಭವಾಗಬೇಕಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.