ಪೃಥ್ವಿ ಆತ್ಮಹತ್ಯೆ; ಸಮಗ್ರ ತನಿಖೆಗೆ ಆಗ್ರಹ

7

ಪೃಥ್ವಿ ಆತ್ಮಹತ್ಯೆ; ಸಮಗ್ರ ತನಿಖೆಗೆ ಆಗ್ರಹ

Published:
Updated:

ಬ್ರಹ್ಮಾವರ: ರಾಷ್ಟ್ರೀಯ ಅಥ್ಲೀಟ್ ಪೃಥ್ವಿ ಪೂಜಾರಿ ಆತ್ಮಹತ್ಯೆ ಪ್ರಕರಣದ ಸಮಗ್ರ ತನಿಖೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ತಂಡ ರಚಿಸಬೇಕು. ನಿಷ್ಪಕ್ಷಪಾತ ತನಿಖೆ ನಡೆಸಿ ನ್ಯಾಯ ದೊರಕಿಸಿ ಕೊಡಬೇಕು ಎಂದು ಬಿಲ್ಲವ ಸಮುದಾಯ ಆಗ್ರಹಿಸಿದೆ.ಬ್ರಹ್ಮಾವರ ರೋಟರಿ ಭವನದ ಬಳಿ ಶನಿವಾರ ಸಂಜೆ ಶ್ರದ್ಧಾಂಜಲಿ ಮತ್ತು ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಮಾಜಿ ಸಚಿವ ವಸಂತ ವಿ.ಸಾಲಿಯಾನ್, ಸ್ಥಳೀಯ ಪೋಲಿಸರಿಂದ ನ್ಯಾಯ ಒದಗಿಸಲು ಸಾಧ್ಯವಾಗುತ್ತಿಲ್ಲ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಶೇಷ ತಂಡ ರಚಿಸಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು. ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಪ್ರತಿಭಾನ್ವಿತ ಕ್ರೀಡಾಪಟುವಿನ ನಿಧನದಿಂದ ಸಮಾಜಕ್ಕೆ ಮತ್ತು ಕ್ರೀಡಾಕ್ಷೇತ್ರಕ್ಕೆ ಆಘಾತವಾಗಿದೆ. ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಉನ್ನತ ಮಟ್ಟದ ತನಿಖೆಗೆ ಚರ್ಚಿಸುವೆ ಎಂದರು.ಉದಯೋನ್ಮುಖ ಕ್ರೀಡಾ ಪ್ರತಿಭೆ ಅರಳುವ ಮುನ್ನವೇ ಮುದುಡಲು ಕಾರಣರಾದವರಿಗೆ ಕಠಿಣ ಶಿಕ್ಷೆ ಕೊಡಿಸಬೇಕು. ನೊಂದ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಬಿಲ್ಲವ ಸಮುದಾಯದ ಮಾಣಿ ಗೋಪಾಲ ಆಗ್ರಹಿಸಿದರು.ಮಾಜಿ ಶಾಸಕರಾದ ಸುನೀಲ್ ಕುಮಾರ್, ಗೋಪಾಲ ಪೂಜಾರಿ, ಉಡುಪಿ ನಗರಸಭೆ ಅಧ್ಯಕ್ಷ ಕಿರಣ್ ಕುಮಾರ್, ಜಿಲ್ಲಾ ಪಂಚಾಯಿತಿ ಸದಸ್ಯೆ ಮಲ್ಲಿಕಾ ಬಾಲಕೃಷ್ಣ ಪೂಜಾರಿ, ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಅಧ್ಯಕ್ಷ ಕಾರ್ಕಡ ರಾಜು ಪೂಜಾರಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಸರಸು ಬಂಗೇರ, ಉದ್ಯಮಿ ಧನಂಜಯ ಅಮೀನ್, ಜಯಪ್ರಕಾಶ್ ಉಪ್ಪೂರು, ಶಂಕರ ಪೂಜಾರಿ, ಸತೀಶ್ ಪೂಜಾರಿ, ಬಾರ್ಕೂರು ಸತೀಶ್ ಪೂಜಾರಿ ಮತ್ತಿತರರಿದ್ದರು. ನಂತರ ಬಿಲ್ಲವ ಸಮುದಾಯದಿಂದ ಉಡುಪಿಯಲ್ಲಿ ಎಸ್‌ಪಿಗೆ ಮನವಿಪತ್ರ ಸಲ್ಲಿಸಲಾಯಿತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry