ಶುಕ್ರವಾರ, ಸೆಪ್ಟೆಂಬರ್ 20, 2019
25 °C

ಪೆಟ್ರೋಲ್ ದರ ಏರಿಕೆಗೆ ಸರ್ವತ್ರ ವಿರೋಧ

Published:
Updated:

ನವದೆಹಲಿ/ಚಂಡೀಗಡ/ಅಗರ್ತಲ/ಲಖ್ನೋ/ಚೆನ್ನೈ/ಬೆಂಗಳೂರು (ಪಿಟಿಐ)/ಐಎಎನ್‌ಎಸ್): ಪೆಟ್ರೋಲ್ ದರ ಏರಿಕೆಯ ಬಿಸಿ ಸಾಮಾನ್ಯ ಜನರಿಗೆ ಮಾತ್ರವಲ್ಲ ಸ್ವಯಂ ಯುಪಿಎ ಸರ್ಕಾರಕ್ಕೂ ತಟ್ಟಲಾರಂಭಿಸಿದೆ. ಸರ್ಕಾರದ ಒಂದು ಭಾಗವಾದ ತೃಣಮೂಲ ಕಾಂಗ್ರೆಸ್ ದರ ಏರಿಕೆಯನ್ನು ಖಂಡಿಸಿದೆ. ರೈಲ್ವೆ ಸಚಿವ ದಿನೇಶ್ ತ್ರಿವೇದಿ ಅವರು ದರ ಏರಿಕೆಯು ಹಣದುಬ್ಬರವು ಮತ್ತಷ್ಟು ಹೆಚ್ಚಲು ಕಾರಣವಾಗುವುದಲ್ಲದೆ ಸಾಮಾನ್ಯ ಜನರ ಮೇಲೆ ಅಧಿಕ ಹೊರೆ ಬಿದ್ದಂತಾಗಿದೆ ಎಂದು ಹೇಳಿದ್ದಾರೆ.ಸಾಮಾನ್ಯ ಜನರನ್ನು ದೃಷ್ಟಿಯಲ್ಲಿಟ್ಟುಕೊಂಡು ತೈಲ ಕಂಪೆನಿಗಳ ಹೊರೆ ತಗ್ಗಿಸಲು ಸರ್ಕಾರ ದಾರಿ ಹುಡುಕಬೇಕೆಂದು ತ್ರಿವೇದಿ ಹೇಳಿದ್ದಾರೆ. ಮತ್ತೊಂದು ಅಂಗಪಕ್ಷ ಡಿಎಂಕೆ ಸಹ ಬೆಲೆ ಏರಿಕೆಯನ್ನು ತಕ್ಷಣವೇ ವಾಪಸ್ ಪಡೆಯಬೇಕೆಂದು ಆಗ್ರಹಿಸಿದೆ.ಕರ್ನಾಟಕ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರು ಬೆಲೆ ಏರಿಕೆಯನ್ನು ಖಂಡಿಸಿದ್ದು, ಒಂದು ವೇಳೆ ಯುಪಿಎ ಸರ್ಕಾರ ಬೆಲೆ ಏರಿಕೆಯನ್ನು ವಾಪಸ್ ಪಡೆದರೆ ತಾವು ಪೆಟ್ರೋಲ್ ಮೇಲಿನ ತೆರಿಗೆ ಕಡಿತಗೊಳಿಸುವುದಾಗಿ ತಿಳಿಸಿದ್ದಾರೆ.ತ್ರಿಪುರಾದ ಎಡರಂಗ ಸರ್ಕಾರವು ತೈಲ ಬೆಲೆ ಏರಿಕೆಯನ್ನು ಖಂಡಿಸಿದ್ದು, ತಕ್ಷಣವೇ ದರ ಏರಿಕೆಯನ್ನು ವಾಪಸ್ ಪಡೆಯಬೇಕೆಂದು ಒತ್ತಾಯಿಸಿದೆ. ರಾಜ್ಯದಲ್ಲಿ ಹಲವೆಡೆ ಪ್ರತಿಭಟನೆಗಳು ನಡೆದಿವೆ.ದರ ಏರಿಕೆಯ ನಿರ್ಧಾರ ಕರುಣೆ ಇಲ್ಲದ್ದು ಎಂದು ಟೀಕಿಸಿರುವ ಸಿಪಿಎಂ ಪಕ್ಷವು ತಕ್ಷಣ ವಾಪಸ್ ಪಡೆಯಬೇಕೆಂದು ಆಗ್ರಹಿಸಿದೆ. ಅಲ್ಲದೆ ಏರುತ್ತಿರುವ ಹಣದುಬ್ಬರಕ್ಕೆ ಹಾಗೂ ಶ್ರೀ ಸಾಮಾನ್ಯನ ಬವಣೆಗೆ ಯುಪಿಎ ಸರ್ಕಾರವೇ ಹೊಣೆ ಎಂದು ಹೇಳಿದೆ. ಪಶ್ಚಿಮ ಬಂಗಾಳದಲ್ಲಿ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್‌ಸಿಂಗ್ ಬಾದಲ್ ಅವರು ಸರ್ಕಾರವು ತೈಲ ಬೆಲೆ ಹೆಚ್ಚಿಸಲು ತೀರ್ಮಾನಿಸಿರುವುದು ಸಂಪೂರ್ಣವಾಗಿ ನ್ಯಾಯೋಚಿತವಲ್ಲ ಎಂದು ಹೇಳಿದ್ದಾರೆ. ಇದರಿಂದ ಇನ್ನಷ್ಟು ಬೆಲೆಗಳು ಏರುವುದಲ್ಲದೆ ಅಭಿವೃದ್ದಿಯ ಪ್ರಮಾಣ ಕುಂಠಿತಗೊಳ್ಳಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.ಪ್ರಮುಖ ವಿರೋಧಪಕ್ಷ ಬಿಜೆಪಿ ಪೆಟ್ರೋಲ್ ಬೆಲೆ ಏರಿಕೆಗೆ ಭಾರಿ ವಿರೋಧ ವ್ಯಕ್ತಪಡಿಸಿದ್ದು, ಶುಕ್ರವಾರ ಅದು ನವದೆಹಲಿಯ ಜಂತರ್‌ಮಂತರ್ ಬಳಿ ಪ್ರತಿಭಟನೆ ನಡೆಸಿದೆ. ಯುಪಿಎ ಸರ್ಕಾರದ ಕ್ರಮವು ಸಾಮಾನ್ಯ ಜನರ ಬದುಕನ್ನು ಇನ್ನಷ್ಟು ಕಠಿಣವನ್ನಾಗಿಸಿದೆ ಎಂದು ದೂರಿದೆ.ಅತ್ತ ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷದ ಕಾರ್ಯಕರ್ತರು ದರ ಏರಿಕೆ ವಿರುದ್ದ ಪ್ರತಿಭಟನೆ ನಡೆಸುತ್ತಿದ್ದಾಗ ಲಖ್ನೋದಲ್ಲಿ ಮಹಿಳೆಯರೂ ಸೇರಿದಂತೆ ಸೇರಿದ್ದ ನೂರಾರು ಪ್ರತಿಭಟನಕಾರರನ್ನು ಚದುರಿಸಲು ಪೊಲೀಸರು ಜಲಫಿರಂಗಿಯನ್ನು ಬಳಸಿದ್ದಾರೆ.ಭಾರತೀಯ ರಿಸರ್ವ್ ಬ್ಯಾಂಕ್ ಸಹ ಪೆಟ್ರೋಲ್ ಬೆಲೆ ಏರಿಕೆಗೆ ಆತಂಕ ವ್ಯಕ್ತಪಡಿಸಿದ್ದು, ಹಣದುಬ್ಬರ ಇನ್ನಷ್ಟು ಹೆಚ್ಚಳವಾಗಬಹುದು ಎಂದು ಎಚ್ಚರಿಸಿದೆ. ಆದರೆ ಯೋಜನಾ ಆಯೋಗದ ಉಪಾಧ್ಯಕ್ಷ ಮಾಂಟೆಕ್ ಸಿಂಗ್ ಆಹ್ಲುವಾಲಿಯಾ ಅವರು ತೈಲ ಬೆಲೆ ಏರಿಕೆ ಸಿಹಿ ಸುದ್ದಿ ಎಂದಿದ್ದು, ಇದರಿಂದ ಆರ್ಥಿಕ ಅಭಿವೃದ್ದಿಯಲ್ಲಿ ಸ್ಥಿರತೆ ಕಾಣಲಿದೆ ಎಂದು ಹೇಳಿದ್ದಾರೆ.

 

Post Comments (+)