ಪೆಟ್ರೋಲ್ ದುಂದು ತಡೆಯಿರಿ

7

ಪೆಟ್ರೋಲ್ ದುಂದು ತಡೆಯಿರಿ

Published:
Updated:

ಪೆಟ್ರೋಲ್ ಬೆಲೆ ಗಗನಕ್ಕೆ ಏರುವುದನ್ನು ತಡೆಯುವ ನಿಟ್ಟಿನಲ್ಲಿ ಪೆಟ್ರೋಲ್ ಬೆಲೆ ಮಾರಾಟದ ಅವಧಿಯನ್ನು ಕಡಿತಗೊಳಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. `ರಾತ್ರಿ ಎಂಟರಿಂದ ಬೆಳಿಗ್ಗೆ ಎಂಟು ಗಂಟೆಯವರೆಗೆ ಪೆಟ್ರೋಲ್ ಬಂಕ್‌ಗಳನ್ನು ಮುಚ್ಚುವ ಪ್ರಸ್ತಾವವೊಂದು ಸಾರ್ವಜನಿಕರಿಂದಲೇ ಬಂದಿದೆ, ಆ ಬಗ್ಗೆ ಪರಿಶೀಲಿಸುತ್ತಿದ್ದೇವೆ' ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ವೀರಪ್ಪ ಮೊಯಿಲಿ ಹೇಳಿದ್ದಾರೆ.ಪೆಟ್ರೋಲ್‌ನ ದುಂದು ತಡೆಯಬೇಕು ಎನ್ನುವುದು ಸರಿಯೇ. ಒಂದೇ ಸಮನೆ ಏರುತ್ತಿರುವ ಪೆಟ್ರೋಲಿಯಂ ಉತ್ಪನ್ನಗಳ ಬಳಕೆಯಿಂದಾಗಿ ನಮ್ಮ ಆಮದು ವೆಚ್ಚ ತೀರಾ ಹೆಚ್ಚಾಗಿದೆ. ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ನಮ್ಮ ರೂಪಾಯಿಯ ಮೌಲ್ಯ ಕೆಳಮುಖವಾಗಿ ಚಲಿಸುತ್ತಿರುವುದಕ್ಕೆ ಇದೂ ಒಂದು ಮುಖ್ಯ ಕಾರಣ. ಆದರೆ ಅದಕ್ಕಾಗಿ ಪೆಟ್ರೋಲ್ ಬಂಕ್‌ಗಳನ್ನು ರಾತ್ರಿ ವೇಳೆ ಮುಚ್ಚುವ ಪ್ರಸ್ತಾವ ಅಷ್ಟು ಸೂಕ್ತವಾದುದಲ್ಲ. ಹೀಗೆ ಮಾಡುವುದರಿಂದ ಜನರಲ್ಲಿ ಅನಗತ್ಯ ಗೊಂದಲ ಹೆಚ್ಚಾಗಿ ಹಗಲಿನ ವೇಳೆ ಪೆಟ್ರೋಲ್ ಪಂಪ್‌ಗಳಲ್ಲಿ ನೂಕುನುಗ್ಗಲು ಉಂಟಾಗಬಹುದೇ ಹೊರತು ಬಳಕೆ ಕಡಿಮೆಯಾಗುವುದಿಲ್ಲ.ಸಣ್ಣ ದೂರಕ್ಕೂ ದ್ವಿಚಕ್ರ ವಾಹನಗಳಲ್ಲಿ ಓಡಾಡುವುದು, ಕಾರಿನಲ್ಲಿ ಒಬ್ಬರೇ ಕುಳಿತು ಪ್ರಯಾಣಿಸುವುದು, ಕೆಲಸ ಇಲ್ಲದಿದ್ದರೂ ಸುಮ್ಮನೆ ವಾಹನಗಳಲ್ಲಿ ತಿರುಗಾಡುವುದು- ಮುಂತಾಗಿ ನಮ್ಮಲ್ಲಿ ಪೆಟ್ರೋಲ್ ಅಪವ್ಯಯದ ಪ್ರವೃತ್ತಿ ಹೆಚ್ಚಾಗಿದೆ ಎನ್ನುವುದು ನಿಜ. ದೇಶಕ್ಕೆ ಪೆಟ್ರೋಲ್ ಎಷ್ಟು ದುಬಾರಿಯಾಗಿದೆ, ಪೆಟ್ರೋಲ್ ಆಮದಿನಿಂದ ಸರ್ಕಾರದ ಬೊಕ್ಕಸಕ್ಕೆ ಎಷ್ಟು ಹೊರೆ ಬೀಳುತ್ತಿದೆ, ನಮ್ಮ ಆರ್ಥಿಕತೆ ದುರ್ಬಲವಾಗಲು ಪೆಟ್ರೋಲ್ ದುಂದು ಹೇಗೆ ಕಾರಣವಾಗಿದೆ ಎನ್ನುವುದರ ತಿಳಿವಳಿಕೆ ಸಮಾಜಕ್ಕೆ ಬರಬೇಕು.ಅನಗತ್ಯವಾಗಿ ಪೆಟ್ರೋಲ್ ಪೋಲು ಮಾಡದಂತೆ, ಅಗತ್ಯ ಬಿದ್ದಾಗ ಮಾತ್ರ ಖಾಸಗಿ ವಾಹನಗಳನ್ನು ಬಳಸುವಂತೆ ಜನರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಸರ್ಕಾರ ಪ್ರಚಾರ ಅಭಿಯಾನಕ್ಕೆ ಮುಂದಾಗಬೇಕು. ಅದೇ ವೇಳೆ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಸುಧಾರಿಸುವ ಮೂಲಕ ಜನರು ಸಾರ್ವಜನಿಕ ಬಸ್‌ಗಳನ್ನು ಬಳಸಲು ಉತ್ಸಾಹಿತರಾಗುವಂತೆಯೂ ನೋಡಿಕೊಳ್ಳಬೇಕು. ಮಹಾನಗರಗಳ ಜನರು ಸೈಕಲ್ ಬಳಸುವುದನ್ನು ಜನಪ್ರಿಯಗೊಳಿಸಲು ಪ್ರತ್ಯೇಕ ಟ್ರ್ಯಾಕ್ ಮುಂತಾದ ಕೆಲಸವೂ ನಡೆಯಬೇಕು.ಆದರೆ ಈ ಕೆಲಸವನ್ನು ಜನಪ್ರತಿನಿಧಿಗಳು ಮಾಡಲು ಸಾಧ್ಯವಿದೆಯೇ? ಸರ್ಕಾರದ ಮಟ್ಟದಲ್ಲಿ ಪೆಟ್ರೋಲ್ ದುಂದು ತಡೆಯಲು ಯಾವ ಕ್ರಮಗಳನ್ನು ಕೈಗೊಳ್ಳಲಾಗಿದೆ? ಅಗತ್ಯವೇ ಇಲ್ಲದಿದ್ದರೂ ಸರ್ಕಾರಿ ಕಾರುಗಳ ಬಳಕೆ ಹೆಚ್ಚಾಗಿದೆ.ರಾಜಕಾರಣಿಗಳು ಮತ್ತು ಅವರ ಹಿಂಬಾಲಕರು ಸಾಲು ಸಾಲು ಕಾರುಗಳಲ್ಲಿ ಸಂಚರಿಸುವ ಪ್ರವೃತ್ತಿ ಈಗಲೂ ಇದೆ. `ವಾರದಲ್ಲಿ ಒಂದು ದಿನ ಸಾರ್ವಜನಿಕ ಬಸ್‌ನಲ್ಲಿ ಪ್ರಯಾಣಿಸಿ' ಎಂದು ಜನರಿಗೆ `ಬಸ್ ಡೇ' ಬಗ್ಗೆ ಪ್ರಚಾರ ಮಾಡುವ ಸರ್ಕಾರದ ಎಷ್ಟು ಅಧಿಕಾರಿಗಳು, ರಾಜಕಾರಣಿಗಳು ಆ ದಿನ ಬಸ್ಸಿನಲ್ಲಿ ಓಡಾಡುತ್ತಾರೆ? `ದೇಶದ ಸಲುವಾಗಿ ಪೆಟ್ರೋಲ್ ಉಳಿಸಿ' ಎಂದು ಅಧಿಕಾರಸ್ಥರು ಜನರಿಗೆ ಮನವಿ ಮಾಡುವ ಮುನ್ನ ತಾವು ಅದನ್ನು ಪಾಲಿಸಿ ತೋರಿಸಬೇಕು.ಪೆಟ್ರೋಲ್ ಮಿತವ್ಯಯಕ್ಕೆ ಸ್ವಪ್ರೇರಣೆಯಿಂದ ಜನರೂ ಕೈಜೋಡಿಸಬೇಕು. ಹಾಗಾದಾಗ ಮಾತ್ರ ಪೆಟ್ರೋಲ್‌ನ ದುಂದು ವೆಚ್ಚವನ್ನು ಪರಿಣಾಮಕಾರಿಯಾಗಿ ತಡೆಯಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry