ಪೆಟ್ರೋಲ್ ಬೆಲೆ ಏರಿಕೆಗೆ ವ್ಯಾಪಕ ಪ್ರತಿಭಟನೆ

7

ಪೆಟ್ರೋಲ್ ಬೆಲೆ ಏರಿಕೆಗೆ ವ್ಯಾಪಕ ಪ್ರತಿಭಟನೆ

Published:
Updated:

ನವದೆಹಲಿ/ಚೆನ್ನೈ/ವಿಜಯವಾಡ (ಪಿಟಿಐ/ಐಎಎನ್‌ಎಸ್): ಪೆಟ್ರೋಲ್ ಬೆಲೆ ಏರಿಕೆಗೆ ಗುರುವಾರ ದೇಶಾದ್ಯಂತ ವ್ಯಾಪಕ ಪ್ರತಿಭಟನೆ ವ್ಯಕ್ತವಾಗಿದೆ. ಬೆಲೆ ಏರಿಕೆಯನ್ನು ಜನತೆಯ ಮೇಲಿನ ಬರ್ಬರ ದಾಳಿ ಎಂದು ಬಣ್ಣಿಸಿರುವ ಎಡಪಕ್ಷಗಳು ಮೇ 31 ರಂದು ದೇಶಾದ್ಯಂತ ಪ್ರತಿಭಟನೆ ನಡೆಸಲು ಕರೆ ನೀಡಿವೆ. ಸಿಪಿಐಎಂ, ಸಿಪಿಐ, ಆರ್‌ಎಸ್‌ಪಿ ಹಾಗೂ ಫಾವರ್ಡ್ ಬ್ಲಾಕ್ ಪಕ್ಷಗಳು ತಕ್ಷಣವೇ ಬೆಲೆ ಏರಿಕೆಯನ್ನು ವಾಪಸ್ ಪಡೆಯಬೇಕೆಂದು ಒಕ್ಕೊರಲಿನಿಂದ ಆಗ್ರಹಿಸಿವೆ.ಚೆನ್ನೈನ ಸೈದಾಪೇಟ್‌ನಲ್ಲಿರುವ ಭಾರತೀಯ ತೈಲ ಕಂಪೆನಿಯ ಮುಂದೆ ಸಿಪಿಐ ಪಕ್ಷದ ರಾಜ್ಯ ಕಾರ್ಯದರ್ಶಿ ಡಿ. ಪಾಂಡಿಯನ್ ಅವರ ನೇತೃತ್ವದಲ್ಲಿ ಸಿಪಿಐ ಹಾಗೂ ಡಿವೈಎಫ್‌ಐ ಸಂಘಟನೆಗಳು ಪ್ರತಿಭಟನೆ ನಡೆಸಿದರು. ಪ್ರತಿಭಟನೆಗೆ ಅನುಮತಿ ಪಡೆದಿಲ್ಲ ಎಂಬ ಕಾರಣಕ್ಕೆ ಹಲವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು.ಅತ್ತ ಆಂಧ್ರಪ್ರದೇಶದಲ್ಲೂ ಪೆಟ್ರೋಲ್ ಬೆಲೆ ಏರಿಕೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಇಲ್ಲಿನ ವಿಜಯವಾಡ ಹಾಗೂ ಕೃಷ್ಣಾ ಜಿಲ್ಲೆಯಲ್ಲಿ ತೆಲುಗು ದೇಶಂ, ಸಿಪಿಎಂ, ಸಿಪಿಐ ಹಾಗೂ ಬಿಜೆಪಿ ಪಕ್ಷಗಳು ಪ್ರತಿಭಟನೆ ನಡೆಸಿವೆ.

ಹಲವು ಕಡೆ ರಸ್ತೆ ತಡೆ ನಡೆಸಿರುವ ಈ ಪಕ್ಷಗಳು ಬೆಲೆ ಏರಿಕೆಗೆ ಬದಲಾಗಿ ಅಬಕಾರಿ ಹಾಗೂ ಮಾರಾಟ ಸುಂಕವನ್ನೇಕೆ ಕೇಂದ್ರ ಸರ್ಕಾರ ರದ್ದು ಮಾಡುವುದಿಲ್ಲ ಎಂದು ಪ್ರಶ್ನಿಸಿದ್ದು, ತತ್‌ಕ್ಷಣವೇ ಬೆಲೆ ಏರಿಕೆಯನ್ನು ವಾಪಸ್ ತೆಗೆದುಕೊಳ್ಳಬೇಕೆಂದು ಆಗ್ರಹಿಸಿವೆ.ಈ ಮಧ್ಯೆ ರಸ್ತೆತಡೆಯಲ್ಲಿ ತೊಡಗಿದ್ದ ಎಲ್ಲಾ ಪಕ್ಷದ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು. ಮುಂಬರುವ ಆಂಧ್ರಪ್ರದೇಶದ ಉಪಚುನಾವಣೆಯು ಕಾಂಗ್ರೆಸ್ ಪಾಲಿಗೆ ಕಷ್ಟದಾಯಕವಾಗಬಹುದೆಂಬ ಆತಂಕವನ್ನು ಇಲ್ಲಿನ ಸ್ಥಳಿಯ ಕಾಂಗ್ರೆಸ್ ನಾಯಕರು ವ್ಯಕ್ತಪಡಿಸಿದ್ದಾರೆ.ಶಿವಸೇನೆ ಮುಖ್ಯಸ್ಥ ಬಾಳಠಾಕ್ರೆ ಅವರು ಕಳೆದ ಮೂರು ವರ್ಷಗಳಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವು 16 ಬಾರಿ ಪೆಟ್ರೋಲ್ ಬೆಲೆಯನ್ನು ಏರಿಸಿದೆ. ಪ್ರತಿಪಕ್ಷಗಳೆಲ್ಲಾ ಒಗ್ಗೂಡಲು ಇದು ಸುಸಮಯ. ಎಲ್ಲಾ ಪಕ್ಷಗಳು ಒಗ್ಗೂಡಿ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ನಡೆಸಬೇಕೆಂದು ಕರೆ ನೀಡಿದ್ದಾರೆ.

 

ಈ ಮಧ್ಯೆ ಪೆಟ್ರೋಲ್ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಗ್ರಾಹಕರ ನೆರವಿಗೆ ಧಾವಿಸಿರುವ ಉತ್ತರಾಖಂಡ ರಾಜ್ಯದ ಮುಖ್ಯಮಂತ್ರಿ ವಿಜಯ್ ಬಹುಗುಣ ಅವರು ತಮ್ಮ ರಾಜ್ಯದಲ್ಲಿ ಮಾರಾಟವಾಗುವ ಪೆಟ್ರೋಲ್ ಮೇಲಿನ ವ್ಯಾಟ್ ತೆರಿಗೆಯನ್ನು ಇಳಿಸಿದ್ದಾರೆ. ಹೀಗಾಗಿ ಇಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 1 ರೂ 87 ಪೈಸೆಯಷ್ಟು ಅಗ್ಗವಾಗಲಿದೆ.

ಏತನ್ಮಧ್ಯೆ ಇಂಧನ ಸಚಿವ ಎಸ್. ಜೈಪಾಲ್ ರೆಡ್ಡಿ ಅವರು ತಮ್ಮ ತುಕ್‌ಮೇನಿಸ್ತಾನ ಪ್ರವಾಸವನ್ನು ಮೊಟಕುಗಳಿಸಿದ್ದು ಗುರುವಾರ ಸಂಜೆ ದೇಶಕ್ಕೆ ವಾಪಸಾಗಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry