ಭಾನುವಾರ, ನವೆಂಬರ್ 17, 2019
29 °C

ಪೆಟ್ರೋಲ್ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ

Published:
Updated:

ಉಡುಪಿ: `ಕೇಂದ್ರದ ಕಾಂಗ್ರೆಸ್ ಸರ್ಕಾರ ಪೆಟ್ರೋಲ್ ಬೆಲೆ ಹೆಚ್ಚಳ ಹಾಗೂ ರಾಜ್ಯ ಸರ್ಕಾರದ ಜನವಿರೋಧಿ ಬಜೆಟ್ ಖಂಡಿಸಿ' ಸಿಪಿಐಎಂ ಜಿಲ್ಲಾ ಸಮಿತಿ ಸದಸ್ಯರು ಉಡುಪಿಯ ಗಡಿಯಾರ ಗೋಪುರ ಎದುರು ಸೋಮವಾರ  ಪ್ರತಿಭಟನೆ ನಡೆಸಿದರು.ಕೇಂದ್ರ ಸರ್ಕಾರ ವಿದೇಶಿ ಬಂಡವಾಳ ಆಹ್ವಾನ ನೀಡಿ ರೂಪಾಯಿ ಅಪಮೌಲ್ಯಕ್ಕೆ ಕಾರಣವಾಗಿದೆ. ರೂಪಾಯಿ ಅಪಮೌಲ್ಯದ ನೆಪವೊಡ್ಡಿ ಪೆಟ್ರೋಲ್ ದರ ಹೆಚ್ಚಿಸಿರುವುದು ಸರಿಯಲ್ಲ. ಕೂಡಲೇ ಏರಿಸಿದ ಬೆಲೆ ಇಳಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಕಳೆದ ಆರು ವಾರಗಳಲ್ಲಿ ನಾಲ್ಕು ಬಾರಿ ಪೆಟ್ರೋಲ್ ಬೆಲೆ ಹೆಚ್ಚಳವಾಗಿದ್ದು, ಲೀಟರ್‌ಗೆ 7.50 ರೂಪಾಯಿ ಹೆಚ್ಚಿಸಲಾಗಿದೆ. ಪೆಟ್ರೋಲ್ ದರ ಹೆಚ್ಚಳದಿಂದ ಇತರೆ ವಸ್ತುಗಳ ದರ ಹೆಚ್ಚಾಗಿದೆ. ರಾಜ್ಯ ಸರ್ಕಾರ ಬಜೆಟ್ ಮಂಡನೆಯಲ್ಲಿ ಬೆಲೆಗಳನ್ನು ಹತೋಟಿ ಮಾಡುವ ಯಾವುದೇ ಕ್ರಮ ಕೈಗೊಂಡಿಲ್ಲ.

ಡೀಸೆಲ್ ತೆರಿಗೆ ಅಲ್ಪ ಪ್ರಮಾಣದಲ್ಲಿ ಕಡಿತಗೊಳಿಸಿದರೂ, ನೈಸರ್ಗಿಕ ವಿಕೋಪ ಮೊದಲಾದ ಕ್ಷೇತ್ರಗಳಿಗೆ ಮೀಸಲಿಟ್ಟ ಹಣ ಕಳೆದ ವರ್ಷಕ್ಕಿಂತ ಕಡಿಮೆಯಾಗಿದೆ. ಹಿಂದಿನ ಬಿಜೆಪಿ ಸರ್ಕಾರ ಹೇರಿದ ಮಾರಾಟ ತೆರಿಗೆ ಮತ್ತು ವ್ಯಾಟ್ ತೆರಿಗೆಯನ್ನು ಹಾಗೆಯೆ ಮುಂದುವರಿಸಿದ್ದು ಬಿಜೆಪಿಗಿಂತ ತಾನೇನು ಕಡಿಮೆ ಇಲ್ಲ ಎಂದು ಕಾಂಗ್ರೆಸ್ ಪಕ್ಷ ತೋರಿಸಿದೆ ಎಂದು ಅವರು ದೂರಿದರು.ಚಿಲ್ಲರೆ ವ್ಯಾಪಾರದಲ್ಲಿ ವಿದೇಶಿ ಬಂಡವಾಳವನ್ನು ಆಹ್ವಾನಿಸುವುದಾಗಿ ಹೇಳಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ವಿದೇಶಿ ಬಂಡವಾಳವನ್ನು ಆಕರ್ಷಿಸಲು ನಾಲ್ಕು ದೇಶಗಳಲ್ಲಿ `ಹೆಲ್ಪ್ ಡೆಸ್ಕ್'  ಸ್ಥಾಪಿಸುವುದಾಗಿ ಹೇಳಿಕೆ ನೀಡುವ ಮೂಲಕ ಕಾಂಗ್ರೆಸ್ ಯಾರ ಪರ? ಎಂಬುದನ್ನು ಸ್ಪಷ್ಟ ಪಡಿಸಿದ್ದಾರೆ.ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ಒಂದೇ ನಾಣ್ಯದ ಎರಡು ಮುಖಗಳಿದ್ದ ಹಾಗೆ ಎಂದು ಪ್ರತಿಭಟನಾಕಾರರು ಟೀಕಿಸಿದರು. ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ತೀವ್ರವಾದ ಹೋರಾಟ ಮಾಡುವುದಾಗಿ ಅವರು ಎಚ್ಚರಿಕೆ ನೀಡಿದರು. ಸಿಪಿಐಎಂ ಕಾರ್ಯದರ್ಶಿ ಮಂಡಳಿ ಸದಸ್ಯ ಬಾಲಕೃಷ್ಣ ಶೆಟ್ಟಿ, ದೋಗು ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)