ಗುರುವಾರ , ಮೇ 13, 2021
35 °C

ಪೆಟ್ರೋಲ್ ಬೆಲೆ ಏರಿಕೆ ಖಂಡಿಸಿ ಬಿಜೆಪಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪೆಟ್ರೋಲ್ ಬೆಲೆ ಮತ್ತು ಬಸ್ ಪ್ರಯಾಣ ದರ ಹೆಚ್ಚಿಸಿರುವ ಕ್ರಮವನ್ನು ವಿರೋಧಿಸಿ ಬಿಜೆಪಿ ಕಾರ್ಯಕರ್ತರು ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ಮಾಡಿದರು.ಪ್ರತಿಭಟನೆಯಲ್ಲಿ ಮಾತನಾಡಿದ ಸಂಸದ ಅನಂತಕುಮಾರ್, `ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರ ಪೆಟ್ರೋಲ್ ಹಾಗೂ ಬಸ್ ಪ್ರಯಾಣ ದರ ಹೆಚ್ಚಿಸುವ ಮೂಲಕ ಜನಸಾಮಾನ್ಯರನ್ನು ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸಿದೆ' ಎಂದು ದೂರಿದರು.ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನತೆ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಇಂತಹ ಸ್ಥಿತಿಯಲ್ಲಿ ಪೆಟ್ರೋಲ್ ಮತ್ತು ಬಸ್ ಪ್ರಯಾಣ ದರವನ್ನು ಒಟ್ಟಿಗೆ ಹೆಚ್ಚಿಸುವ ಮೂಲಕ ಕಾಂಗ್ರೆಸ್ ಜನಸಾಮಾನ್ಯರ ಬದುಕನ್ನು ಮತ್ತಷ್ಟು ದುರ್ಬರವಾಗಿಸಿದೆ ಎಂದರು.ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸರ್ಕಾರದ ನಂತರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಎಂಟು ವರ್ಷಗಳಲ್ಲಿ 13ಕ್ಕೂ ಹೆಚ್ಚು ಬಾರಿ ಪೆಟ್ರೋಲ್ ಬೆಲೆ ಹೆಚ್ಚಿಸಿದೆ. ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ, ಡೀಸೆಲ್ ಬೆಲೆಗೆ ಅನುಗುಣವಾಗಿ ಬಿಎಂಟಿಸಿ ಬಸ್ ಪ್ರಯಾಣ ದರದಲ್ಲಿ ಶೇ 4ರಿಂದ 5ರಷ್ಟು ಹೆಚ್ಚಳ ಮಾಡುತ್ತಿತ್ತು.ಆದರೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದ ಒಂದು ತಿಂಗಳಲ್ಲೇ ಶೇ 16ರಷ್ಟು ಹೆಚ್ಚಳ ಮಾಡಿದೆ. ಈ ಜನವಿರೋಧಿ ನೀತಿ ವಿರುದ್ಧ ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ಹಾಗೂ ರಾಜ್ಯದೆಲ್ಲೆಡೆ ಪಕ್ಷ ಹೋರಾಟ ನಡೆಸಲಿದೆ ಎಂದು ಹೇಳಿದರು.ಶಾಸಕ ಆರ್.ಅಶೋಕ ಮಾತನಾಡಿ, `ಡೀಸೆಲ್ ದರ ಮತ್ತು ಕಾರ್ಮಿಕರ ವೇತನ ಹೆಚ್ಚಳದ ಕಾರಣಕ್ಕೆ ಹಿಂದಿನ ಯಾವುದೇ ಸರ್ಕಾರ ಇಷ್ಟು ದೊಡ್ಡ ಪ್ರಮಾಣದಲ್ಲಿ ಬಸ್ ಪ್ರಯಾಣ ದರ ಹೆಚ್ಚಿಸಿರಲಿಲ್ಲ. ಡೀಸೆಲ್ ಬೆಲೆಗೆ ಅನುಗುಣವಾಗಿ ಪ್ರಯಾಣ ದರದಲ್ಲಿ ಶೇ 2ರಷ್ಟು ಹೆಚ್ಚಳ ಮಾಡಬೇಕಿತ್ತು' ಎಂದು ತಿಳಿಸಿದರು.ಎಪಿಎಲ್ ಪಡಿತರ ಚೀಟಿ ಹೊಂದಿರುವವರಿಗೆ ಅಕ್ಕಿ ನಿಲ್ಲಿಸುವ ನಿರ್ಧಾರ ಕೈಗೊಂಡಿರುವುದರಿಂದ 34 ಲಕ್ಷಕ್ಕೂ ಹೆಚ್ಚು ಎಪಿಎಲ್ ಕಾರ್ಡ್‌ದಾರರಿಗೆ ಅಕ್ಕಿ ಸಿಗುವುದಿಲ್ಲ. ಇದರಿಂದಾಗಿ ಅವರು ಮಾರುಕಟ್ಟೆಯಲ್ಲಿ ಹೆಚ್ಚಿನ ಹಣ ಕೊಟ್ಟು ಅಕ್ಕಿ ಖರೀದಿಸಬೇಕಾಗುತ್ತದೆ. ಆದ್ದರಿಂದ ಎಪಿಎಲ್ ಕಾರ್ಡ್‌ದಾರರಿಗೆ ಹಿಂದಿನಂತೆಯೇ ಅಕ್ಕಿ ವಿತರಿಸಬೇಕು.ಬಸ್ ಪ್ರಯಾಣ ದರ ಹೆಚ್ಚಿಸಿರುವ ಕ್ರಮವನ್ನು ಹಿಂಪಡೆಯಬೇಕು. ಇಲ್ಲದಿದ್ದರೆ ರಾಜ್ಯದೆಲ್ಲೆಡೆ ಉಗ್ರ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಸಚಿವರು ಜನತೆಗೆ ಪೊಳ್ಳು ಭರವಸೆಗಳನ್ನು ಕೊಡುತ್ತಿದ್ದಾರೆ. ಮುಖ್ಯಮಂತ್ರಿಗಳು ಅಗ್ಗದ ದರದಲ್ಲಿ ಜನಸಾಮಾನ್ಯರಿಗೆ ಮದ್ಯ ಸಿಗಬೇಕೆಂದು ಹೇಳಿದ್ದಾರೆ. ಅಬಕಾರಿ ಸಚಿವರು ಪ್ರತಿ ಬೀದಿಯಲ್ಲೂ ಮದ್ಯದಂಗಡಿ ತೆರೆಯಲು ಪರವಾನಗಿ ನೀಡುವುದಾಗಿ ಹೇಳಿಕೆ ಕೊಟ್ಟಿದ್ದಾರೆ. ಅಲ್ಲದೇ, ಆ ಸಂಬಂಧ ಚರ್ಚಿಸಲು ಸರ್ವಪಕ್ಷಗಳ ಸಭೆ ಕರೆಯಲು ನಿರ್ಧರಿಸಿದ್ದಾರೆ. ಮದ್ಯದ ದೊರೆಗಳ ಲಾಬಿಗೆ ಮಣಿದಿರುವ ಸರ್ಕಾರ ರಾಜ್ಯವನ್ನು ಕುಡುಕರ ರಾಜ್ಯವನ್ನಾಗಿ ಮಾಡಲು ಹೊರಟಿದೆ. ಗೃಹ ಸಚಿವರು ಡಿಸ್ಕೊಥೆಕ್ ಮತ್ತು ಲೈವ್‌ಬ್ಯಾಂಡ್‌ಗಳಿಗೆ ಅನುಮತಿ ಕೊಡುವ ಬಗ್ಗೆ ಮರುಪರಿಶೀಲನೆ ನಡೆಸುವುದಾಗಿ ಹೇಳಿದ್ದಾರೆ. ಇದು ನಾಚಿಕೆಗೇಡು ಎಂದು ಟೀಕಿಸಿದರು.ಪೆಟ್ರೋಲಿಯಂ ಸಚಿವ ಎಂ.ವೀರಪ್ಪ ಮೊಯಿಲಿ ಅವರು ಪೆಟ್ರೋಲಿಯಂ ಮಂತ್ರಿಗಳಿಗೆ ಸದಾ ತೈಲ ಆಮದು ಕೂಟದ ಬೆದರಿಕೆ ಇದೆ ಎಂದು ಹೇಳಿರುವುದು ದೇಶದ ಕಾನೂನು ಸುವ್ಯವಸ್ಥೆಗೆ ಹಿಡಿದ ಕೈಗನ್ನಡಿ.  ಕೇಂದ್ರ ಸಚಿವರಿಗೆ ರಕ್ಷಣೆ ಇಲ್ಲ ಎಂದಾದರೆ ಜನಸಾಮಾನ್ಯರ ಗತಿ ಏನು ಎಂದು ಪ್ರಶ್ನಿಸಿದರು.

ಸಂಸದ ಪಿ.ಸಿ.ಮೋಹನ್, ಶಾಸಕರಾದ ಜಗದೀಶಕುಮಾರ, ಎಲ್.ಎ.ರವಿಸುಬ್ರಹ್ಮಣ್ಯ  ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.