ಪೆಟ್ರೋಲ್ ಬೆಲೆ ಏರಿಕೆ ವಿರುದ್ಧ ಬಿಜೆಪಿ ಧರಣಿ

7

ಪೆಟ್ರೋಲ್ ಬೆಲೆ ಏರಿಕೆ ವಿರುದ್ಧ ಬಿಜೆಪಿ ಧರಣಿ

Published:
Updated:

ಹಾಸನ: ಕೇಂದ್ರ ಸರ್ಕಾರ ಮತ್ತೆ ತೈಲ ಬೆಲೆ ಏರಿಸಿರುವುದನ್ನು ಖಂಡಿಸಿ ಮಂಗಳವಾರ ಬಿಜೆಪಿ ಕಾರ್ಯಕರ್ತರು ಹಾಸನದಲ್ಲಿ ಪ್ರತಿಭಟನೆ ನಡೆಸಿದರು.ನಗರದ ಮಹಾವೀರ ಸರ್ಕಲ್‌ನಿಂದ ಮೆರವಣಿಗೆ ಆರಂಭಿಸಿ ಪ್ರತಿಭಟನಾಕಾರರು, ಹೇಮಾವತಿ ಪ್ರತಿಮೆ ಮೂಲಕ ಜಿಲ್ಲಾಧಿಕಾರಿ ಕಚೇರಿ ಮುಂದೆ ಬಂದು, ಸ್ವಲ್ಪ ಹೊತ್ತು ರಸ್ತೆ ತಡೆ ನಡೆಸಿದರು. ಬಳಿಕ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಬಂದು ಸಭೆ ನಡೆಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ರೇಣು ಕುಮಾರ್, `ಒಂದು ವರ್ಷದಲ್ಲಿ ಇಷ್ಟೊಂದು ಬಾರಿ ತೈಲ ಬೆಲೆಯನ್ನು ಏರಿಸಿದ ಉದಾಹರಣೆ ಇಲ್ಲ. ವಿಶ್ವದ ಶ್ರೇಷ್ಠ ಆರ್ಥಿಕ ತಜ್ಞರಲ್ಲಿ ಒಬ್ಬರೆನಿಸಿಕೊಂಡ ಮನಮೋಹನ ಸಿಂಗ್ ಹಾಗೂ ಅರ್ಥ ಶಾಸ್ತ್ರ ಪ್ರವಿಣ ಎನಿಸಿಕೊಂಡ ಪಿ. ಚಿದಂಬರಂ ಸರ್ಕಾರದಲ್ಲಿದ್ದರೂ ರೂಪಾಯಿ ಬೆಲೆ ದಿನೇದಿನೇ ಕುಸಿಯುತ್ತಲೇ ಇದೆ' ಎಂದು ಟೀಕಿಸಿದರು.ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಎಂ.ಎಸ್. ಕೃಷ್ಣೇಗೌಡ, ನಗರಸಭೆ ಮಾಜಿ ಸದಸ್ಯ ಪ್ರಸನ್ನ ಕುಮಾರ್, ಪ್ರಧಾನ ಕಾರ್ಯದರ್ಶಿ ಉದಯ ಕುಮಾರ್, ಶೋಭಾ ಶುಭಕರ, ಶ್ರೀನಿವಾಸ್, ರವಿಕುಮಾರ್, ಮನೋಹರ್, ವಿಜಯಕುಮಾರ್, ಬಿ.ಆರ್. ರವಿ, ನಾಗೇಶ್ ಪ್ರತಿಭಟನೆಯಲ್ಲಿದ್ದರು.

ನೀರು ಕಲುಷಿತ:  ಕಾರ್ಖಾನೆ ವಿರುದ್ಧ ಧರಣಿ

ಹಾಸನ: `ಹಾಸನದ ಕೈಗಾರಿಕಾ ಪ್ರದೇಶದ ಎರಡು ಸಂಸ್ಥೆಗಳು ಸುತ್ತಮುತ್ತಲಿನ ಗ್ರಾಮಗಳ ನೀರು ಗಾಳಿಯನ್ನು ಕಲುಷಿತಗೊಳಿಸುತ್ತಿದ್ದು, ಇವುಗಳನ್ನು ಮುಚ್ಚಬೇಕು'ಎಂದು ಆಗ್ರಹಿಸಿ ಮಂಗಳವಾರ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಚೆಂಡು ಹೂವು ಸಂಸ್ಕರಣಾ ಘಟಕ ಓಮ್ನಿಕಾನ್ ಸಂಸ್ಥೆ ಮುಂದೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಓಮ್ನಿಕಾನ್ ಸಂಸ್ಥೆ ಚೆಂಡು ಹೂವು ಸಂಸ್ಕರಣೆ ಮಾಡಿದ ನೀರನ್ನು ನೇರವಾಗಿ ಚರಂಡಿಗೆ ಬಿಡುವುದರಿಂದ ಇಡೀ ಪರಿಸರದಲ್ಲಿ ಕೆಟ್ಟ ವಾಸನೆ ಬೀರುತ್ತಿದೆ. ರಾಸಾಯನಿಕ ಮಿಶ್ರಿತ ಈ ನೀರು ಅಕ್ಕಪಕ್ಕದ ಕೆರೆಗಳನ್ನು ಸೇರಿ, ಜನ ಜಾನುವಾರುಗಳಿಗೆ ರೋಗ ಬರುವಂತಾಗಿದೆ. 1 ವರ್ಷದಿಂದ ಜನರು ಈ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.ಅದರಂತೆ ಎಂ.ಜಿ. ರೆಕ್ಲಮೇಶನ್ಸ್ ಎಂಬ ಸಂಸ್ಥೆ ಟೈರ್‌ಗಳನ್ನು ಸುಟ್ಟು, ಅದರಿಂದ ರಾಸಾಯನಿಕ ಪುಡಿ ತಯಾರಿ ಸುತ್ತಿದೆ. ಟೈರ್ ಸುಟ್ಟ ವಾಸನೆ ಇಡೀ ಪರಿಸರದಲ್ಲಿ ತುಂಬಿ ಉಸಿರಾಡುವುದೂ ಕಷ್ಟವಾಗುತ್ತಿದೆ. ಸುತ್ತಮುತ್ತಲಿನ ಹಳ್ಳಿಗಳ ಜನರು, ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳೂ ಈ ದುರ್ವಾಸನೆಯಲ್ಲಿ ವಾಸಿಸುವಂತಾಗಿದೆ.ನೀರು ಕಲುಷಿತವಾಗಿರುವುದು ಒಂದು ಸಮಸ್ಯೆಯಾದರೆ ವಾಯು ಮಾಲಿನ್ಯದಿಂದ ಸುತ್ತಮುತ್ತಲಿನ ಗಿಡಗಳೂ ಒಣಗುವಂತಾಗಿದೆ. ಈ ಕಾರ್ಖಾನೆಗಳು ಉಂಟುಮಾಡುವ ಮಾಲಿನ್ಯವನ್ನು ನಿಯಂತ್ರಿಸಬೇಕು ಅಥವಾ ಕೂಡಲೇ ಎರಡೂ ಕಂಪನಿಗಳನ್ನು ಮುಚ್ಚಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಮಧು, ಚನ್ನೇಗೌಡ, ಗಿಡ್ಡೇಗೌಡ, ಕುಮಾರ್ ಸೌದ್ರಳ್ಳಿ, ಯೋಗೀಶ್ ಪಾಲ್ಗೊಂಡಿದ್ದರು.

ಕ್ಷುಲ್ಲಕ ಕಾರಣಕ್ಕೆ ದೂರು: ಪ್ರಾಂಶುಪಾಲರ ವಿರುದ್ಧ ಪ್ರತಿಭಟನೆ

ಹಾಸನ: `ಕ್ಷುಲ್ಲಕ ಕಾರಣಕ್ಕೆ ಪ್ರಾಂಶುಪಾಲರು ತಮ್ಮ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ' ಎಂದು ಆರೋಪಿಸಿ ವಿದ್ಯಾರ್ಥಿಗಳು ಪ್ರಾಂಶುಪಾಲರ ವಿರುದ್ಧ ಪ್ರತಿಭಟನೆ ನಡೆಸಿದ ಘಟನೆ ಹಾಸನದ ಕಲಾ ಕಾಲೇಜಿನಲ್ಲಿ ಮಂಗಳವಾರ ನಡೆದಿದೆ.

`ಸೋಮವಾರ ಕಾಲೇಜಿನಲ್ಲಿ ವಿದ್ಯಾರ್ಥಿಯನ್ನು ಚುಡಾಯಿಸಿದ ಸಣ್ಣ ಘಟನೆ ನಡೆದಿತ್ತು. ಕಾಲೇಜು ಆವರಣದೊಳಗೆ ಪೊಲೀಸರಿಗೆ ಬರಲು ಅನುಮತಿ ಇರುವುದಿಲ್ಲ. ಆದರೆ ಪ್ರಾಂಶುಪಾಲರು ಪೊಲೀಸರನ್ನು ಕರೆದು ನಮ್ಮ ವಿರುದ್ಧ ದೂರು ನೀಡಿದ್ದಾರೆ. ಪೊಲೀಸರು ಒಬ್ಬ ವಿದ್ಯಾರ್ಥಿಯ ವಿರುದ್ಧ ಪೆಟ್ಟಿ ಕೇಸ್ ದಾಖಲಿಸಿದ್ದಾರೆ. ಕಾಲೇಜಿಗೆ ನ್ಯಾಕ್ `ಎ' ಗ್ರೇಡ್ ಮಾನ್ಯತೆ ಲಭಿಸಿದೆ, ಆದರೆ ಸೌಲಭ್ಯಗಳೇ ಇಲ್ಲ. ಪ್ರಾಂಶುಪಾಲರು ಅತ್ತ ಗಮನ ಹರಿಸುವ ಬದಲು ನಮಗೆ ಅನ್ಯಾಯ ಮಾಡುತ್ತಿದ್ದಾರೆ' ಎಂದು ವಿದ್ಯಾರ್ಥಿಗಳು      ಆರೋಪಿಸಿದರು.

ಉಪನ್ಯಾಸಕರು ಕರೆದು ಸಮಾಧಾನ ಹೇಳಿದರೂ ಕೇಳದ ವಿದ್ಯಾರ್ಥಿಗಳು ಸ್ವಲ್ಪ ಹೊತ್ತು ಪ್ರಾಂಶುಪಾಲರ ವಿರುದ್ಧ ಘೋಷಣೆ ಕೂಗಿದರು.ಚುಡಾಯಿಸುವುದನ್ನು ಸಹಿಸಲ್ಲ: ಘಟನೆ ಬಗ್ಗೆ ಮಾಧ್ಯಮದವರಿಗೆ ವಿವರ ನೀಡಿದ ಪ್ರಾಂಶುಪಾಲ ಐ ಎಂ. ಮೋಹನ್, `ಪೊಲೀಸರನ್ನು ಕಾಲೇಜಿಗೆ ಕರೆಸಿ ಒಬ್ಬ ವ್ಯಕ್ತಿವಿರುದ್ಧ ದೂರು ನೀಡಿದ್ದು ನಿಜ. ಸೋಮವಾರ ಕಾಲೇಜಿನ ವಿದ್ಯಾರ್ಥಿಗಳು ಹೊರಗಿನಿಂದ ಒಬ್ಬ ವ್ಯಕ್ತಿಯನ್ನು ಕರೆಯಿಸಿದ್ದರು. ಆ ವ್ಯಕ್ತಿ ವಿದ್ಯಾರ್ಥಿನಿಯೊಬ್ಬಳನ್ನು ಚುಡಾಯಿಸಿದ್ದ. ಆಕೆ ಬಂದು ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರನ್ನು ಕರೆಯಿಸಿದ್ದೆವು. ವಿದ್ಯಾರ್ಥಿಗಳ ಜತೆಗೆ ಬಂದ ಬೇಲೂರು ತಾಲ್ಲೂಕಿನ ಆ ವ್ಯಕ್ತಿ ನಕಲಿ ಬಸ್ ಪಾಸನ್ನೂ ಹೊಂದಿದ್ದ. ಇದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಇಂಥ ಅವ್ಯವಸ್ಥೆಯನ್ನು ಸಹಿಸಿಕೊಂಡು ಇರಲು ಸಾಧ್ಯವಿಲ್ಲ. ಕಾಲೇಜಿನ ಮಕ್ಕಳಿಗೆ ರಕ್ಷಣೆ ಕೊಡಬೇಕಾದ ಹೊಣೆಗಾರಿಕೆಯೂ ನಮ್ಮ ಮೇಲಿದೆ' ಎಂದಿದ್ದಾರೆ.ಕ್ಷಮೆ ಯಾಚನೆ: ಪ್ರತಿಭಟನೆಗೆ ಇಳಿದ ವಿದ್ಯಾರ್ಥಿಗಳನ್ನು ಮಾತುಕತೆಗೆ ಆಹ್ವಾನಿಸಿದ ಪ್ರಾಂಶುಪಾಲರು ಹಾಗೂ ಇತರ ಸಿಬ್ಬಂದಿ ನಡೆದ ವಿಚಾರವನ್ನು ತಿಳಿಸಿದರು. ಕೊನೆಗೆ ವಿದ್ಯಾರ್ಥಿಗಳೇ ಪ್ರಾಂಶುಪಾಲ ಕ್ಷಮೆ ಯಾಚಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry