ಪೆಡಲ್ ಮೇಲೆ ಪಾದವೂರಿ...

ಸೈಕಲ್ ಒಂದು ವಾಹನವಷ್ಟೇ ಅಲ್ಲ, ಅದು ಬಹುತೇಕ ಎಲ್ಲರ ಬದುಕಿನ ಬಾಲ್ಯದ ಅವಿಸ್ಮರಣೀಯ ನೆನಪುಗಳ ವಾಹಕವೂ ಹೌದು. ಎಲ್ಲರ ಮಂಡಿ ಮೇಲಿನ ಗಾಯದ ಗುರುತುಗಳ ಹಿಂದೆ ಸೈಕಲ್ ಕಲಿಕೆಯ ಸಾಹಸಗಾಥೆಯೂ ಅಡಗಿರುತ್ತದೆ. ಬಿದ್ದು ಎದ್ದು ಗುದ್ದಿ ಮತ್ತೆ ಪೆಡಲ್ ತುಳಿದು ಏನೆಲ್ಲ ಮಾಡಿ ಬ್ಯಾಲೆನ್ಸ್ ಹಿಡಿದು ಬೀಗುವ ಸೈಕಲ್ ಕಲಿಕೆ ಮನುಷ್ಯ ಬದುಕಿನ ಯಶಸ್ಸಿನ ಸಶಕ್ತ ರೂಪಕವೂ ಹೌದು. ‘ಸೈಕಲ್ ಹೊಡಿಯೋದು’ ಎನ್ನುವುದೊಂದು ನುಡಿಗಟ್ಟೇ ಆಗಿರುವುದರ ಹಿಂದೆ ಇಂಥ ಎಷ್ಟೋ ಅನುಭವಗಳಿವೆ. ನಮ್ಮೆಲ್ಲರ ನೆನಪಿನ ಭಾಗವಾಗಿರುವ ಸೈಕಲ್ ಕಲಿಕೆಯ ರಸನಿಮಿಷಗಳನ್ನು ಮತ್ತೆ ನೇವರಿಸುವಂತೆ ಮಾಡುವ ಬರಹವಿದು
ಅದು ಹತ್ತನೇ ತರಗತಿ. ‘ಭಯ’ ಶೀರ್ಷಿಕೆಯ ಪಾಠ. ಮಕ್ಕಳು ಸೈಕಲ್ ಕಲಿಕೆಯ ಸಂದರ್ಭದಲ್ಲಿ ಎದುರಿಸುವ ಭಯದ ಪ್ರಸಂಗಗಳನ್ನು ವಿವರಿಸುತ್ತಿದ್ದರು ಟೀಚರ್. ತಕ್ಷಣವೇ ಮಾತಿಗೆ ವಿರಾಮ ನೀಡಿ, ‘ಎಲ್ಲರಿಗೂ ಸೈಕಲ್ ಹೊಡೆಯಲು ಬರುತ್ತದೆ ಅಲ್ಲವೇ’ ಎಂದು ಕೇಳಿದರು. ಶಾಲಾ ಕೊಠಡಿಯೊಳಗಿದ್ದ ಗಂಡು–ಹೆಣ್ಣು ಸೇರಿ ಎಂಬತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ‘ಹೌದು ಟೀಚರ್’ ರಾಗವಾಗಿ ಕಿರುಚಿದ್ದರು.
‘ಮತ್ತೆ, ಯಾರಿಗೆ ಸೈಕಲ್ ಬರೊಲ್ಲ ಕೈ ಎತ್ತಿ’ ಎನ್ನುವ ಟೀಚರ್ ಮಾತು ಕಿವಿಗೆ ಬೀಳುತ್ತಲೇ, ಮೂರನೇ ಬೆಂಚಿನಲ್ಲಿದ್ದ ಹುಡುಗ ಕೊರಳನ್ನು ನಿಧಾನವಾಗಿ ಡೆಸ್ಕ್ ಮರೆಯೊಳಗೆ ತಗ್ಗಿಸಿದ್ದ. ಮಧ್ಯದ ಬೆಂಚಿನ ವಿದ್ಯಾರ್ಥಿಯೊಬ್ಬ ಕತ್ತು ಬಗ್ಗಿಸಿದ್ದ. ಕೊನೆಯ ಬೆಂಚಿನ ಹುಡುಗ ಸೊಂಟವನ್ನು ಜಾರಿಸಿ ಟೀಚರ್ರಿಂದ ಮುಖ ಮರೆ ಮಾಚುವ ಪ್ರಯತ್ನದಲ್ಲಿದ್ದ!
ಆದರೆ ಸೈಕಲ್ ಹೊಡೆಯಲು ಬರುತ್ತದೆ ಎನ್ನುವ ಹೆಮ್ಮೆಯಲ್ಲಿದ್ದ ಹುಡುಗ–ಹುಡುಗಿಯರು ಸುಮ್ಮನೆ ಇರಬೇಕಲ್ಲ! ‘ಟೀಚರ್... ಟೀಚರ್... ಇವನಿಗೆ ಸೈಕಲ್ ಬರೋಲ್ಲ’ ಎಂದು ತಲೆತಗ್ಗಿಸಿದ್ದವನನ್ನು, ಸೊಂಟ ಜಾರಿಸಿದ್ದವನನ್ನು ಮೇಲೆ ಎಬ್ಬಿಸಿದ್ದರು. ‘ಏನ್ರೋ ನಿಮಗೆ ಸೈಕಲ್ ಹೊಡೆಯುವುದಕ್ಕೆ ಬರೊಲ್ಲವೇ?’ ಎನ್ನುವ ಟೀಚರ್ ಮಾತು ಅವರನ್ನು ಮತ್ತಷ್ಟು ಕುಗ್ಗಿಸಿತ್ತು. ‘ನೋಡಿ, ಹುಡುಗಿಯರೇ ಸೈಕಲ್ ಹೊಡೀತಾರೆ ನಿಮಗೇನಾಗಿದೆ’ ಎನ್ನುವ ಮಾತುಗಳನ್ನು ಅರಗಿಸಿಕೊಳ್ಳಲು ಅಡ್ಡಿ ಎನ್ನುವಂತೆ ಸಹಪಾಠಿಗಳಿಂದ ಕೇಕೆ–ನಗು.
ಮಕ್ಕಳು ಅಂಬೆಗಾಲಿನಲ್ಲಿ ಮನೆಯ ಹೊಸ್ತಿಲು ದಾಟಿದಾಗ ಮನೆ ಮಂದಿಗೆಲ್ಲ ಸಂಭ್ರಮ. ಕಂದನಿಗೆ ತಿಲಕವಿಟ್ಟು ಆರತಿ ಬೆಳಗಿ ಸಂಭ್ರಮಿಸುವ ಜತೆಗೆ ‘ನಮ್ಮ ಪಾಪು ಹೊಸ್ತಿಲು ದಾಟಿದ’ ಎಂದು ನೆರೆಹೊರೆಯವರಿಗೂ ಅಕ್ಕರೆ–ಸಕ್ಕರೆ ಹಂಚುವರು.
ಅಂಬೆಗಾಲಿನಲ್ಲಿ ಹೊಸ್ತಿಲು ದಾಟಿದಂತೆ ಸೈಕಲ್ ಒಳಪೆಡಲ್ ಕಲಿಕೆಯೂ ಬಾಲ್ಯದ ಮಹತ್ವದ ಸಂಭ್ರಮ. ಒಳಪೆಡಲ್ ಕಲಿತು, ಕಂಬಿ ಏರಿ ನಂತರ ಸೀಟಿನ ಮೇಲೆ ಕುಳಿತಾಗಿನ ಗತ್ತೇ ಗಮ್ಮತ್ತು. ಮನೆಯ ಮುಂದೆ ಕಾರು ತಂದು ನಿಲ್ಲಿಸಿಕೊಂಡರೂ ಈ ಸೈಕಲ್ ಕಲಿಕೆಯ ಪುಳಕಗಳ ಮರೆಯಲಾದೀತೇ?
ಹಿರಿಯರ ಸೈಕಲ್ ಕಲಿಕೆಯ ಬಗ್ಗೆ ಒಮ್ಮೆ ಕೇಳಿ ನೋಡಿ, ರಸ ಪ್ರಸಂಗಗಳು, ಉದ್ದದ ಪುರಾಣ–ಪ್ರವಚನ–ಸಾಹಸದ ಕಥೆಗಳೇ ಬಿಚ್ಚಿಕೊಳ್ಳುತ್ತವೆ. ಶಾಲಾ ಮೈದಾನ, ಊರ ಹೊರಗಿನ ಧಾನ್ಯ ಒಕ್ಕಣೆ ಮಾಡುವ ಕಣಗಳು, ನೀರಿಲ್ಲದೆ ಬತ್ತಿದ ಕೆರೆಯ ಅಂಗಳ, ಮನೆಯ ಮುಂದಿನ ರಸ್ತೆಗಳು ಇಲ್ಲೆಲ್ಲಾ ಬಿದ್ದು ಪೆಟ್ಟು ಮಾಡಿಕೊಂಡು ಟಾರು ರಸ್ತೆಗೆ ಇಳಿದ... ಇತ್ಯಾದಿ ಗಳಿಗೆಗಳನ್ನು ರಸವತ್ತಾಗಿ ಜೇನು ತೆಗೆದಂತೆ ಬಿಡಿಸುವರು.
ಸಾಮಾನ್ಯವಾಗಿ ಸೈಕಲ್ ಕಲಿಕೆಗೆ ಪ್ರಶಸ್ತ ಮುಹೂರ್ತ ದಸರೆ ಇಲ್ಲವೇ ಬೇಸಿಗೆ ರಜೆ. ಹಳ್ಳಿಗಳಲ್ಲಿ ಈ ಅವಧಿಯಲ್ಲಿ ಶಾಲೆ ಅಂಗಳಗಳನ್ನು ನೋಡಿ, ಶಾಲೆಯಲ್ಲಿ ಏಕದನಿಯಲ್ಲಿ ಅ...ಅರಸ, ಇ, ಇಲಿ... ಈ, ಈಟಿ... ಎಂದು ಹೇಳಿದಂತೆ ಎಂಟ್ಹತ್ತು ಸ್ನೇಹಿತರು ಸಮೂಹ ಸನ್ನಿ ಎನ್ನುವಂತೆ ತಮ್ಮ ತಮ್ಮ ಸೈಕಲ್ಗಳಲ್ಲಿ ಒಳಪೆಡಲ್ ಕಲಿಯುತ್ತಿರುತ್ತಾರೆ.
ಹುಡುಗುತನಕ್ಕೆ ಸವಾಲು
ಎರಡು–ಮೂರು–ನಾಲ್ಕನೇ ತರಗತಿಯೊಳಗೆ ಸೈಕಲ್ ಕಲಿಯಬೇಕು ಎನ್ನುವ ಅಲಿಖಿತ ನಿಯಮಗಳು ತಾನಾಗಿಯೇ ಮಕ್ಕಳ ಮೇಲೆ ಬಿದ್ದಿರುತ್ತದೆ. ಒಂದು ಅರ್ಥದಲ್ಲಿ ಅದು ಹುಡುಗುತನಕ್ಕೂ ಸವಾಲೇ. ಇದಕ್ಕೂ ಮುನ್ನ ಸೈಕಲ್ ಕಲಿಕೆಯ ಆರಂಭ ಎನ್ನುವಂತೆ ಟೈರಿನ ಓಟ. ಬುರ್ ಬುರ್ ಎಂದು ಸದ್ದು ಮಾಡುತ್ತ ಸೈಕಲ್ನ ಟೈರುಗಳನ್ನು ಕೋಲುಗಳಲ್ಲಿ ಹೊಡೆದು ಕೊಂಡು ಗುಂಪು ಗುಂಪಾಗಿ ಮಕ್ಕಳು ಬೀದಿ ಬೀದಿ ಸುತ್ತುವ ದೃಶ್ಯ ಎಲ್ಲ ಹಳ್ಳಿಗಳಲ್ಲಿಯೂ ಸಾಮಾನ್ಯ.
ಒಂದು ವೇಳೆ ಏಳನೇ ತರಗತಿ ದಾಟಿ ಹೈಸ್ಕೂಲ್ ಅಂಗಳಕ್ಕೆ ಕಾಲಿಟ್ಟರೂ ಸೈಕಲ್ ಬರುತ್ತಿಲ್ಲ ಎಂದಾದರೆ ಆ ಹುಡುಗ ಅನುಭವಿಸುವ ಕೀಳರಿಮೆ–ಮೂದಲಿಕೆ–ಹೀಗಳಿಕೆ ಅನುಭವಿಸಿದವನಿಗೇ ಗೊತ್ತು.
ಮಗುವಿಗೆ ಹಲ್ಲು ಬಂದಾಗ ಕೈಗೆ ಸಿಕ್ಕಿದ್ದೆಲ್ಲವನ್ನು ಬಾಯಿಗೆ ಇಟ್ಟುಕೊಂಡು ಜಗಿಯುವುದೋ ಹಾಗೆ ಸೈಕಲ್ ಕಲಿತ ಸಂಭ್ರಮ. ಊರಿನ ಸಂದಿ–ಗೊಂದಿಯ ರಸ್ತೆಗಳನ್ನು ಬಿಡದೆ ನುಗ್ಗಿಸುವ ಆಟ. ಮನೆಯಲ್ಲಿರುವುದು ಒಂದೇ ಸೈಕಲ್ ಆದರಂತೂ ಮುಗಿದೇ ಹೋಯಿತು. ಅಪ್ಪ ಮನೆ ಮುಂದೆ ನಿಲ್ಲಿಸಿದ ಸೈಕಲ್ ಕ್ಷಣಾರ್ಧದಲ್ಲಿ ಮಂಗ ಮಾಯ. ಏನೋ ಕೆಲಸವಿದ್ದು, ಮತ್ತೆಲ್ಲಿಗೋ ಹೋಗಬೇಕಾದವನಿಗೆ ಕಾಣುವುದು ನಟರಾಜ ಸರ್ವೀಸಿನ ಕಾಲ್ನಡಿಗೆಯೇ.
ಕೆಲವು ಮನೆಗಳಲ್ಲಿ ಅಪ್ಪಂದಿರು ಮಕ್ಕಳಿಗೆ ಸೈಕಲ್ ಕಲಿಸಿದ್ದಿದೆ. ಆದರೆ ಇದು ಬೆರಳೆಣಿಕೆ. ದ್ರೋಣಾಚಾರ್ಯನಿಲ್ಲದೆ ಏಕಲವ್ಯನಂತೆ ಏಕಾಂಗಿಯಾಗಿ ಸೈಕಲ್ ಕಲಿಕೆಯೇ ಚೆಂದ ಮತ್ತು ಹಿರಿಮೆ.
‘ಸೈಕಲ್ ಕಲಿಕೆಯಲ್ಲಿ ನಾನು ಬಿದ್ದಿಲ್ಲ’ ಎಂದು ನಿಜವನ್ನೇ ಹೇಳಿದರೂ ಖಂಡಿತ ಈ ಮಾತಿಗೆ ಬಹುಮತ ಸಿಕ್ಕುವುದಿಲ್ಲ. ಹಳ್ಳಕ್ಕೆ ಬಿದ್ದು ಕಾಲು ಮುರಿದುಕೊಂಡೆ, ಹೊಂಡಕ್ಕೆ ಬಿದ್ದು ಕೈ ಮುರಿಯಿತು, ತಲೆ ಒಡೆದುಕೊಂಡೆ, ತುಟಿಗೆ ಪೆಟ್ಟಾಯಿತು. ಹೀಗೆ ಸೈಕಲ್ ಸಹವಾಸಕ್ಕೆ ಬಿದ್ದು ಪೆಟ್ಟು ಮಾಡಿಕೊಂಡ ಪ್ರಸಂಗಗಳಿಂದಲೇ ಸೈಕಲ್ ಪಯಣದ ಕಥೆ ಬಿಚ್ಚಿಕೊಳ್ಳುವುದು. ಅವನು ನನಗಿಂತ ಮೊದಲು ಸೈಕಲ್ ಕಲಿತ, ಸೀಟಿಗೆ ಹತ್ತಿಕೊಂಡ ಎನ್ನುವ ಹೊಟ್ಟೆ ಉರಿ ಎಷ್ಟು ಇರುತ್ತದೆಯೋ ಅಷ್ಟೇ ಸಹಿಷ್ಣುತೆ–ಪ್ರೀತಿಯೂ ಸೈಕಲ್ ಕಲಿಕೆಯಲ್ಲಿದೆ.
ಬಲಕ್ಕೆ–ಎಡಕ್ಕೆ ಒಬ್ಬೊಬ್ಬ ಗೆಳೆಯರು ಹ್ಯಾಂಡಲ್ ಹಿಡಿದು ಮಧುಮಗಳನ್ನು ಕರೆದುಕೊಂಡು ಹೋಗುವಂತೆ ಗೆಳೆಯನಿಗೆ ಸೈಕಲ್ ಕಲಿಸುತ್ತಾರೆ. ಅದೂ ಒಂದು ರೀತಿ ಗಮ್ಮತ್ತು. ಸೈಕಲ್ ಸಹವಾಸ ನಮ್ಮೊಳಗೊಬ್ಬ ಪುಟ್ಟ ತಂತ್ರಜ್ಞನನ್ನೂ ಹುಟ್ಟು ಹಾಕುತ್ತದೆ. ಲಟಕಾಸಿ ಸೈಕಲ್ಗಳಾಗಿದ್ದರೆ ಅದರ ಚೈನು ಬಿಚ್ಚಿ, ಬ್ರೇಕ್ ಟೈಟ್ ಮಾಡಿ, ಪೆಡಲ್ ಕಿತ್ತು ಹೋಗಿದ್ದರೆ ತಂತಿಯಿಂದ ಕೊಳವೆಗಳನ್ನು ಕಟ್ಟಿ, ಚಕ್ರ ತಿರುಗುವಾಗ ಕಟ ಕಟ ಶಬ್ದ ಮಾಡಿದರೆ ಹಳೆಯ ಗ್ರೀಸು ಬಳಿದು... ಇತ್ಯಾದಿ ನಾನಾ ಬಗೆಯಲ್ಲಿ ತಂತ್ರಜ್ಞಾನದ ಕೆಲಸಗಳು!
ಸೈಕಲ್ ಸಾಹಸಗಳು
ಒಳಪೆಡಲ್ ಕಲಿತ ನಂತರ ಕಂಬಿ ಏರುವ ಸಾಹಸವಿದೆಯಲ್ಲ ಅದು ಮಕ್ಕಳಿಗೆ ದವಡೆ ಹಲ್ಲುಗಳು ಬಂದಂತೆ. ಒಳಪೆಡಲ್ ತುಳಿಯುತ್ತಲೇ ಬಲಗಾಲನ್ನು ಮೇಲೆತ್ತಿ ಕಂಬಿ ಮೇಲಕ್ಕೆ ಹೋಗುವ ಆಟ. ಸ್ನೇಹಿತ ತನಗಿಂತಲೂ ಮೊದಲೇ ಸೀಟಿನ ಮೇಲೆ ಕುಳಿತಾಗ ಆಗುವ ಬೇಸರ–ಅಸೂಯೆ–ಹುಟ್ಟುವ ಛಲ ಅಷ್ಟಿಷ್ಟಲ್ಲ.
ಸೈಕಲ್ ಕಲಿಕೆಯ ಆರಂಭದಲ್ಲಿಯೇ ಹುಡುಗರ ಮನಸ್ಸಿನೊಳಗೆ ನಾನಾ ಬಗೆ ಕಲ್ಪನೆಗಳು ಕುಳಿತಿರುತ್ತವೆ. ಹಕ್ಕಿ ಮರಿಯೊಂದು ತನ್ನ ಬಲಿಯದ ರೆಕ್ಕೆಗಳನ್ನು ಅಗಲಿಸಿ ಪಟಪಟನೆ ಹಾರಲು ನಡೆಸುವ ಪ್ರಯತ್ನದಂತೆ. ‘ಸೈಕಲ್ ಕಲಿತ ಮೇಲೆ ಇವನಿಗೆ ಕಾಲೇ ನಿಲ್ಲಲ್ಲ’ ಎನ್ನುವ ಅಜ್ಜ–ಅಜ್ಜಿ–ಅವ್ವನ ಮಾತುಗಳು ಇದಕ್ಕೆ ಸಾಕ್ಷಿ. ಶಾಲೆಗೆ, ಪಾಠದ ಮನೆಗೆ, ತೋಟಕ್ಕೆ, ಜೀರುಂಡೆ ಹಿಡಿಯಲು, ಬಾರೆ ಹಣ್ಣು ತರಲು, ಪಕ್ಕದ ಊರಿನ ಹುಡುಗನ ಮೇಲೆ ಕ್ರಿಕೆಟ್ ಮ್ಯಾಚ್ ಆಡಲು ಹೋಗಲು ಈ ವಾಹನ ಬೇಕೇ ಬೇಕು. ಕೊನೆಗೆ ಕೆರೆ ಕಡೆಯ ಬಯಲಿಗೆ ಹೋಗಬೇಕು ಎಂದರೂ ಸೈಕಲ್ ಬೇಕೇ ಬೇಕು! ಸೈಕಲ್ ಚಕ್ರಗಳೇ ಕಾಲುಗಳು ಎನ್ನುವಂತಾಗಿರುತ್ತದೆ. ಸೈಕಲ್ ಕಲಿತ ತಕ್ಷಣ ಊರೂರು ಸುತ್ತಬಹುದು, ಬೇಕಾದಲ್ಲಿ ಹೋಗಬಹುದು ಎಂದು ಒಂದು ಕಾಲು ನೆಲದ ಮೇಲಿದ್ದು ಮತ್ತೊಂದು ಒಳಪೆಡಲ್ ತುಳಿವಾಗಲೇ ಮನದಲ್ಲಿ ಮಂಡಿಗೆ ಸವಿದಿರುತ್ತೇವೆ.
ಗಣೇಶ ಹಬ್ಬದ ಸೈಕಲ್ ಸ್ಪರ್ಧೆಗಳಲ್ಲಿ ತಾಲ್ಲೂಕು ಕೇಂದ್ರಕ್ಕೆ ಒಂದು ರೌಂಡ್ ಹೋಗಿ ಬಂದ ಹುಡುಗರಿದ್ದಾರೆ. ಇನ್ನೂ ಮುಂದೆ ಹೋಗಿ ನೋಡುವುದಾದರೆ ಸೈಕಲ್ ವೇಗವಾಗಿ–ಅತಿ ನಿಧಾನವಾಗಿ ಚಲಾಯಿಸುವ ಸ್ಪರ್ಧೆಗಳೂ ನಡೆಯುತ್ತಿದ್ದವು. ಗೆದ್ದವನೇ ಹಳ್ಳಿ ಹೀರೊ!
ಹೈಸ್ಕೂಲ್ನಲ್ಲಿದ್ದಾಗ ಮಂಜುನಾಥ ಎನ್ನುವ ಗೆಳೆಯನಿದ್ದ. ಅವನಿಗೆ ಸೈಕಲ್ ಮೇಲೆ ತೀವ್ರ ಅಟಾಚ್ಮೆಂಟ್. ಕ್ಯಾರಿಯರ್ನಲ್ಲಿ ಸ್ನೇಹಿತರನ್ನು ಕೂರಿಸಿಕೊಳ್ಳುತ್ತಿದ್ದ. ಆದರೆ ಸ್ನೇಹಿತರಿಗೆ ಹೋಗಲಿ ತನ್ನ ತಮ್ಮನಿಗೇ ಆ ಸೈಕಲ್ ಚಲಾಯಿಸಲು ಕೊಡದಷ್ಟು ಪ್ರೀತಿ ಅದರ ಮೇಲೆ. ಅವನು ಸೈಕಲ್ ಹೊಡೆಯುವುದನ್ನು ನೋಡುವುದೇ ಬೆರಗು. ಅಂಥ ಹೈ ಸ್ಪೀಡು. ಶಾಲೆಯಲ್ಲಿ ಅವನನ್ನು ಸೈಕಲ್ ಮಂಜ ಎಂದು ಮುಖ್ಯೋಪಾಧ್ಯಾಯರೇ ಹೆಸರಿಟ್ಟ ಮೇಲೆ ನಮ್ಮದೇನು! ಬೋರ್ವೆಲ್ನಿಂದ ನೀರು ತೆಗೆದುಕೊಂಡು ಹೋಗುತ್ತಿದ್ದ ಹಿರಿಯ ಹೆಂಗಸಿಗೆ ಡಿಕ್ಕಿ ಹೊಡೆದು ಬಿಂದಿಗೆ ಚೂರಾಗಿ ಆಕೆ ಅವನ ಅಪ್ಪನ ಬಳಿ ಜಗಳ ತೆಗೆದು, ಆ ಬೇಸರದಲ್ಲಿ ಎರಡು ಮೂರು ದಿನ ಶಾಲೆಗೆ ಚಕ್ಕರ್ ಹೊಡೆದ ನಂತರವೇ ಅವನ ಹೈ ಸ್ಪೀಡಿಗೆ ಬ್ರೇಕ್ ಬಿದ್ದದ್ದು.
ಶಾಲೆಯಲ್ಲಿನ ಸಣ್ಣ ಕಿರಿಕ್ಕುಗಳಿಗೂ ತನ್ನ ಅಜ್ಜಿಯನ್ನು ನಮ್ಮ ವಿರುದ್ಧ ಅಸ್ತ್ರವಾಗಿ ಬಳಸಿಕೊಳ್ಳುತ್ತಿದ್ದ ಗೆಳೆಯನೊಬ್ಬ ಇದ್ದ. ಅವನಿಗೆ ಏಳನೇ ತರಗತಿಯಲ್ಲೂ ಸೈಕಲ್ ಚಲಾಯಿಸಲು ಬರುತ್ತಿರಲಿಲ್ಲ. ಅಜ್ಜಿಯಿಂದ ಬೈಸಿದ ಕಾರಣಕ್ಕೆ ಮತ್ತೊಬ್ಬ ಗೆಳೆಯನಿಗೆ ಇವನನ್ನು ಕಂಡರೆ ಅಷ್ಟಕ್ಕಷ್ಟೇ. ಇಬ್ಬರ ತೋಟದ ಹಾದಿಯೂ ಒಂದೇ. ಒಮ್ಮೆ ತೋಟಕ್ಕೆ ನಡೆದು ಹೋಗುತ್ತಿದ್ದ ಅಜ್ಜಿಯ ಮುದ್ದಿನ ಮೊಮ್ಮಗನನ್ನು, ‘ಬಾ ನಿನ್ನ ಬಿಡುವೆ’ ಎಂದು ಸೈಕಲ್ ಹತ್ತಿಸಿಕೊಂಡ ಗೆಳೆಯ, ಅವನ ತೋಟ ಸಿಕ್ಕರೂ ನಿಲ್ಲಿಸದೆ ಒಂದು ಫರ್ಲಾಂಗ್ ದೂರ ಸೈಕಲ್ ಹೊಡೆದಿದ್ದ. ಎಷ್ಟು ಚೀರಿದರೂ ಸೈಕಲ್ ನಿಲ್ಲಿಸದಿದ್ದಾಗ ಹಿಂಬದಿಯಲ್ಲಿ ಕುಳಿತಿದ್ದವನು ಲಟಕ್ಕನೆ ಸೀಟಿನ ಕೆಳಗಿದ್ದ ಬೀಗ ಜಡಿದ. ಚಕ್ರದ ಕಡ್ಡಿಗಳು ಬಿಲ್ಲಿನ ಆಕಾರ ಪಡೆದಿದ್ದವು. ಇಬ್ಬರ ನಡುವೆ ಮಾರಾಮಾರಿ.
ಶಾಲೆಯ ಅಂಗಳದಲ್ಲಿ ನಿಲ್ಲಿಸಿದ್ದ ಬೀಗವಿಲ್ಲದ ಸೈಕಲ್ಲನ್ನು ಮಾಲೀಕನಿಗೆ ಗೊತ್ತಿಲ್ಲದಂತೆ ಯಾಮಾರಿಸಿ ರೈಡ್ ಮಾಡಿಕೊಂಡು ಹೋಗಿದ್ದು, ಪೋಸ್ಟ್ ಮ್ಯಾನ್, ಬಣ್ಣದ ಆಟಿಕೆಗಳನ್ನು, ಬೊಂಬಾಯಿ ಮಿಠಾಯಿಯನ್ನು, ಹುಳಿ ಕಿತ್ತಳೆಯನ್ನು ಮಾರಲು ಬರುತ್ತಿದ್ದ ಸಾಬರ ಸೈಕಲ್ಲನ್ನು ಕದ್ದು ಹೊಡೆದಾಡಿದ್ದು ಹೀಗೆ ಹತ್ತು ಹಲವು ಪ್ರಸಂಗಗಳು ಪ್ರತಿಯೊಬ್ಬರ ಬದುಕಿನ ಬಾಲ್ಯದ ಸೈಕಲ್ ಸಹವಾಸದ ಪುಟಗಳಲ್ಲಿ ಬೆಚ್ಚನೆ ಕುಳಿತಿವೆ. ಆಗಾಗ್ಗೆ ಮೆಲುಕಾಡುತ್ತವೆ.
ಸಿಂಗಾರ... ಬಂಗಾರ
ತಾವು ಸಿಂಗರಿಸಿಕೊಳ್ಳಬೇಕು ಎನ್ನುವುದಕ್ಕಿಂತ ಸೈಕಲ್ ಅನ್ನು ಚೆಂದಗೊಳಿಸಿ ಸಿಂಗರಿಸುವುದೇ ಅಮಿತೋತ್ಸಾಹ. ಬಣ್ಣ ಬಣ್ಣದ ತುರಾಯಿ, ಚಕ್ರದ ಕಡ್ಡಿಗಳಿಗೆ ಬಣ್ಣದ ರಿಂಗುಗಳು, ಸ್ಟಿಕ್ಕರ್ಗಳು ಹೀಗೆ ನಾನಾ ತರಹದ ವಸ್ತುಗಳಿಂದ ಸೈಕಲ್ ಸಿಂಗರಿಸುತ್ತೇವೆ. ಅದರಲ್ಲೂ ಆಯುಧ ಪೂಜೆ ದಿನ ಬಾಳೆದಿಂಡು, ಬಣ್ಣದ ಪ್ಲಾಸ್ಟಿಕ್ ಹಾರಗಳನ್ನು ತುಂಬಿಕೊಂಡು ಸೈಕಲ್ ಕಂಗೊಳಿಸುತ್ತದೆ. ನಾಲ್ಕೈದು ತಿಂಗಳಿಗೆ ಒಮ್ಮೆ ಓರಾಯಿಲ್ ಮಾಡಿಸುತ್ತಿದ್ದ ಅಪ್ಪ, ಮಗನೂ ಸೈಕಲ್ ಕಲಿತ ಮೇಲೆ ತಿಂಗಳಿಗೊಮ್ಮೆ ಸೈಕಲ್ನ ಅಂಗಾಂಗಗಳನ್ನು ಬಿಚ್ಚಿಸುವನು.
ಮಕ್ಕಳ ಸೈಕಲ್ ಯಾತ್ರೆಯ ಬಗ್ಗೆ ಆರಂಭದಲ್ಲಿ ಅಪ್ಪಂದಿರು ಸುಮ್ಮನಿದ್ದರೂ ಸೀಟು ಹರಿದುಕೊಂಡು ಬರುವುದು ಹೆಚ್ಚಾದಾಗ, ನಿತ್ಯ ಒಂದೊಂದು ಚಕ್ರದ ಕಡ್ಡಿಗಳು ಬೆಂಡಾದಾಗ, ಆಗಾಗ್ಗೆ ಪಂಕ್ಚರ್ ಆದಾಗ, ಸೈಕಲ್ ರಿಪೇರಿ ಕಾಸು ಹೆಚ್ಚಾದಾಗ ಮಗನ ಸೈಕಲ್ ಸಹವಾಸಕ್ಕೆ ಗೊಣಗುಟ್ಟುವರು.
ಜೊತೆಗೆ ಇಂಥದ್ದೇ ಬೆಲ್, ಇಂಥದ್ದೇ ಕವರ್ ಸೀಟು ಇರಬೇಕು ಎನ್ನುವ ಹಟ ಬೇರೆ. ಮಕ್ಕಳು ಸಿನಿಮಾ ನಟರ ಅಭಿಮಾನಿಯಾಗಿದ್ದರಂತೂ ಅವರ ಚಿತ್ರವೇ ಸೀಟಿನ ಕವರ್ ಆಗಬೇಕು. ಹಳ್ಳಿಗಳಲ್ಲಿ ಸಾಮಾನ್ಯವಾಗಿ ಯಾರೂ ಬಾಡಿಗೆಗೆ ಸೈಕಲ್ ಪಡೆಯುತ್ತಿರಲಿಲ್ಲ. ಆದರೆ ಊರು ದೊಡ್ಡದಾಗುತ್ತಿದ್ದಂತೆಯೇ ಸೈಕಲ್ ಶಾಪುಗಳಲ್ಲಿ ಬಾಡಿಗೆ ಬೈಸಿಕಲ್ಗಳು ಸಿಕ್ಕುವಂತಾಯಿತು. ಅವುಗಳಲ್ಲಿ ಅಂದವಿಲ್ಲ–ಚೆಂದವಿಲ್ಲ. ಅಂಗಿ ಕಳಚಿದ ಮೂಳೆ ಕಾಣುವ ದೇಹದಂತೆ ಕಾಣುತ್ತಿದ್ದವು ಈ ಬಾಡಿಗೆ ಸೈಕಲ್ಗಳು.
ಮೇರೆ ಸಪ್ನೋಂಕಿ ರಾಣಿ ಕಬ್ ಆಯೇಗಿ ತೂ
‘ನಾಗರಹಾವು’ ಚಿತ್ರದಲ್ಲಿ ಅಂಬರೀಷ್ ‘ಮೇರೆ ಸಪ್ನೋಂಕಿ ರಾಣಿ ಕಬ್ ಆಯೇಗಿ ತೂ’ ಎಂದು ಆರತಿಯನ್ನು ಹಿಂಬಾಲಿಸಿ ಚುಡಾಯಿಸುವುದು ಸೈಕಲ್ ಮೇಲೆ ಕುಳಿತೇ ಅಲ್ಲವೇ. ಹಳ್ಳಿಯ ಕಾಲೇಜು ಹೈಕಳು ಇದೇ ಧಾಟಿಯಲ್ಲೇ ಪ್ರೇಮ ನಿವೇದಿಸಿಕೊಳ್ಳಲು ಹುಡುಗಿಯರ ಹಿಂಬಾಲಿಸುವುದು. ಒಂದು ಊರಿನಿಂದ ಮತ್ತೊಂದು ಊರಿಗೆ ಹುಡುಗಿಯೊಬ್ಬಳು ಸೈಕಲ್ನಲ್ಲಿ ಕಾಲೇಜಿಗೆ ಹೋಗುತ್ತಿದ್ದಾಳೆ ಎಂದರೆ ಆ ಸೈಕಲನ್ನು ಹಿಂಬಾಲಿಸುವ ಗಂಡು ಹೈಕಳ ಸೈಕಲ್ಲುಗಳು ಹಲವು.
ಈಗ್ಗೆ ಹತ್ತು ಹದಿನೈದು ವರುಷಗಳ ಹಿಂದೆ ಮದುವೆ ಮುಹೂರ್ತದ ತರುವಾಯ ಅಳಿಯನನ್ನು ಮಾನವ ಮನೆಗೆ ಕರೆತರುತ್ತಿದ್ದು ಸೈಕಲ್ಲಿನಲ್ಲಿಯೇ. ಪೇಟ ಕಟ್ಟಿ–ಕಚ್ಚೆ ಪಂಚೆತೊಟ್ಟ ಅಳಿಯನನ್ನು ಸೈಕಲ್ಲಿನ ಮೇಲೆ ಕೂರಿಸಿಕೊಂಡು ಎಡಕ್ಕೊಬ್ಬ–ಬಲಕ್ಕೊಬ್ಬ ತಳ್ಳಿಕೊಂಡು ಬರುತ್ತಿದ್ದರೆ ಆತ ಮೊದಲ ಬಾರಿ ಸೈಕಲ್ ಏರಿದವನಂತೆ ನಗುತ್ತ ಮಾವನ ಮನೆ ಅಂಗಳ ಸೇರುತ್ತಿದ್ದ. ಎತ್ತರವಾಗಿ ಬೆಳೆದ ಮೊಮ್ಮಗನನ್ನು ನೋಡಿ ‘ನಮ್ಮ ಹುಡುಗ ಎಲ್ಡನೇ ಕ್ಲಾಸಲ್ಲೇ ಸೈಕಲ್ ಕಲಿತ. ಅದಕ್ಕೆ ಗಣದಂತೆ ಬೆಳೀತು’, ‘ಸೈಕಲ್ ಹೊಡೆಯೋ ಉದ್ದ ಆಗುತ್ತೀಯಾ’ ಎನ್ನುವ ಉದ್ದ–ದಪ್ಪದ ಗುಣಾಕಾರಗಳು ಬಾಲ್ಯದ ದಿನಗಳಲ್ಲಿ ಅಜ್ಜಿ–ಅಜ್ಜಿಯರ ಬೆಂಬಲದಂತೆ ಕೇಳಿಸುತ್ತದೆ.
ಈಗ ಭಾರವಲ್ಲದ, ಹೆಚ್ಚು ಬಿಡಿ ಭಾಗಗಳು ಇಲ್ಲದ, ಟ್ರೆಕ್ಕಿಂಗ್ಗೆ ಅನುಕೂಲವಾಗುವ ಇತ್ಯಾದಿ ನಾನಾ ಕಾರಣಕ್ಕೆ ನಾನಾ ನಮೂನೆಯ ಸೈಕಲ್ಗಳು ಮಾರುಕಟ್ಟೆಯಲ್ಲಿ ಬಂದಿಳಿದಿವೆ. ಉದ್ದ ಆಗಲು ಸೈಕಲ್ ತುಳಿದಂತೆ ಬೊಜ್ಜು ಕರಗಿಸಲು ಸೈಕಲ್ ತುಳಿಯುವ ಜನರಿದ್ದಾರೆ. ಹಳ್ಳಿಯ ಮಕ್ಕಳಲ್ಲಿ ಸೈಕಲ್ ಸಹವಾಸ–ಮಜಾ ಅನುಭವದ ಖಣಜವಾಗಿದ್ದರೆ ಇತ್ತೀಚಿನ ನಗರದ ಮಕ್ಕಳಿಗೆ ಮಾಲ್ಗಳಲ್ಲಿ ಸೈಕಲ್ ತುಳಿದಿದ್ದು ಮಾತ್ರ ಗೊತ್ತು. ಬಾಲ್ಯದ ಸೈಕಲ್ ಆಟ–ಹುಡುಗಾಟದ ಬಗ್ಗೆ ಪ್ರತಿಯೊಬ್ಬರೂ ಹೇಳುತ್ತಾ ಹೋದರೆ ದೀರ್ಘ ಪ್ರಬಂಧವೇ ಆದೀತು.
***
ಸೈಕಲ್ ಕಲಿಸಿದ ಅಪ್ಪು
ನನಗೆ ಸೈಕಲ್ ಕಲಿಸಿದ್ದು ಅಪ್ಪು (ಪುನೀತ್ ರಾಜ್ಕುಮಾರ್). ನನಗಿಂತ ಅವರು ಐದು ವರುಷ ದೊಡ್ಡವರು. ಆಗ ನಾನು ಐದನೇ ತರಗತಿಯಲ್ಲಿ ಓದುತ್ತಿದ್ದೆ. ಸದಾಶಿವನಗರದ ರಸ್ತೆಗಳೇ ನಮ್ಮ ಕಲಿಕೆಯ ತಾಣಗಳು. ಅಪ್ಪು ಅವರ ಹತ್ತಿರ ಒಂದು ಸೈಕಲ್ ಇತ್ತು. ಆ ಸೈಕಲ್ಲಿನಲ್ಲಿಯೇ ನಾನು ಮೊದಲು ಕಲಿತಿದ್ದು. ಬಿದ್ದು ಎದ್ದಿದ್ದು ಸುಮಾರು ಸಲ. ಫುಟ್ಬಾಲ್ ಸಹ ಅವರೇ ಕಲಿಸಿದ್ದು. ಸೈಕಲ್ ಹೊಡೆಯುವಾಗ ಕೆಲವು ಟೆಕ್ನಿಕ್ಗಳಿವೆ. ಬಾರ್ ಮೇಲೆ–ಕ್ಯಾರಿಯರ್ ಮೇಲೆ ಹೊಡೆಯುವುದು. ಶಾರ್ಟ್ ಕಟ್ ಇತ್ಯಾದಿ. ಇವುಗಳನ್ನೆಲ್ಲ ಹೇಳಿಕೊಟ್ಟರು. ಸೈಕಲ್ ಕಲಿಯುವಾಗ ಬಿದ್ದು ಮಂಡಿಗೆ ಪೆಟ್ಟಾಗಿತ್ತು. ಆ ಗುರ್ತು ಇಂದಿಗೂ ಇದೆ. ಅಷ್ಟರ ಮಟ್ಟಿಗೆ ಏಟು ಬಿದ್ದಿತ್ತು.
–ವಿಜಯ್ ರಾಘವೇಂದ್ರ, ನಟ
***
ಹಿಂಬಾಲಿಸಿದರು... ಮುಂಬಾಲಿಸಿದರು
ಹುಟ್ಟುಹಬ್ಬದ ಉಡುಗೊರೆಯಾಗಿ ಅಪ್ಪ ನನಗೆ ಸೈಕಲ್ ಕೊಡಿಸಿದರು. ಅದು ನನ್ನ ಮೊದಲ ಸೈಕಲ್. ಈ ಮುಂಚೆಯೇ ಅಣ್ಣ ಸೈಕಲ್ ಕಲಿಸಿದ್ದ. ನನ್ನೊಬ್ಬಳನ್ನೇ ಹತ್ತಿಸಿ ಕೈ ಬಿಟ್ಟ. ಅವನ ಹೊಸ ಸೈಕಲ್ ಬೀಳಿಸಿ ಡ್ಯಾಮೇಜ್ ಮಾಡಿದ್ದೆ. ಶಾಲೆಗೆ ಹೋಗುವಾಗ ಇಂಥ ನಿರ್ದಿಷ್ಟ ಜಾಗಕ್ಕೆ ಯಾರು ಬೇಗ ತಲುಪುತ್ತಾರೆ ಎಂದು ಸ್ನೇಹಿತೆಯರೆಲ್ಲ ಚಾಲೆಂಜ್ ಕಟ್ಟಿಕೊಳ್ಳುತ್ತಿದ್ದೆವು. ಮರಳಿನಲ್ಲಿ ಸೈಕಲ್ ಜಾರುತ್ತದೆ. ಹೀಗೆ ಜಾರಿ ಬಿದ್ದು ಕಾಲು–ಕೈಗೆ ಪೆಟ್ಟು ಮಾಡಿಕೊಂಡಿದ್ದೇನೆ. ನನ್ನ ಸೈಕಲ್ ಮುಂಭಾಗದಲ್ಲಿದ್ದ ಬಾಸ್ಕೆಟ್ನಲ್ಲಿ ನಮ್ಮ ಮನೆಯ ನಾಯಿ ಮರಿಯನ್ನು ಹಾಕಿಕೊಂಡು ಸುತ್ತಾಡುತ್ತಿದ್ದೆ.
ಏಳನೇ ತರಗತಿಯಲ್ಲಿರುವಾಗಲೇ ನನ್ನ ಸೈಕಲ್ ಹಿಂಬಾಲಿಸುವ ಹುಡುಗರ ಸಂಖ್ಯೆ ಹೆಚ್ಚು. ಕಪ್ಪು ಸ್ವೆಟರ್ ತೊಟ್ಟು ಶಾಲೆಗೆ ಹೋಗುತ್ತಿದ್ದೆ. ಒಂದು ದಿನ ಶಾಲೆಗೆ ಚಕ್ಕರ್ ಆದರೆ ಬೇರೆ ಕಾಲೇಜಿನ ಹುಡುಗರು ಬ್ಲಾಕ್ ಸ್ವೆಟರ್ ಹುಡುಗಿ ಬಂದಿಲ್ಲವಾ ಎಂದು ಕೇಳುತ್ತಿದ್ದರಂತೆ. ಹುಡುಗರು ಹಿಂಬಾಲಿಸುತ್ತಿದ್ದರೆ ನಾನು ಜೋರಾಗಿ ಸೈಕಲ್ ತುಳಿಯುತ್ತಿದ್ದೆ. ಅವರೂ ವೇಗವಾಗಿ ಹಿಂಬಾಲಿಸುತ್ತಿದ್ದರು. ಏಕಾಏಕಿ ನಿಧಾನ ಮಾಡುತ್ತಿದ್ದೆ. ಅವರು ಮುಂದೆ ಹೋಗುತ್ತಿದ್ದರು. ತಕ್ಷಣವೇ ಶಾರ್ಟ್ ಕಟ್ನಲ್ಲಿ ಮನೆಯ ದಾರಿ ನೋಡುತ್ತಿದ್ದೆ. ಒಂದು ದಿನ ಇಬ್ಬರು ಮತ್ತೊಂದು ದಿನ ಮೂವರು ನಾಲ್ವರು ಹುಡುಗರು ಹಿಂಬಾಲಿಸುತ್ತಿದ್ದರು.
ಕೆಲವು ಹುಡುಗರು ನನ್ನ ಸೈಕಲ್ಗೆ ಎದುರಾಗಿ ಬರುತ್ತಿದ್ದರು. ಒಮ್ಮೆ ಬೇರೆ ಕಾಲೇಜಿನ ಸೀನಿಯರ್ ಹುಡುಗ ಬೈಕ್ನಲ್ಲಿ ಹಿಂಬಾಲಿಸಿದ. ಬೈಕ್ ಹಿಂಬದಿಯಲ್ಲಿ ಕುಳಿತವನು ನನ್ನ ಫೋಟೊ ತೆಗೆದ. ಅದು ಅಪ್ಪನಿಗೆ ಗೊತ್ತಾಯಿತು. ಅವರ ಕಾಲೇಜಿಗೆ ಹೋಗಿ ದೂರು ನೀಡಿದರು. ಡಾನ್ಸ್, ಸಂಗೀತ, ಡ್ರಾಯಿಂಗ್ ಕ್ಲಾಸ್ಗೆ ಹೋಗುತ್ತಿದ್ದು ಸೈಕಲ್ ಮೇಲೇ. ಅಂದು ತುಳಿದ ಸೈಕಲ್ ಇಂದಿನ ನನ್ನ ಸಿನಿಮಾ ವೃತ್ತಿ ಜೀವನಕ್ಕೂ ನೆರವಾಗುತ್ತಿದೆ. ಜಿಮ್ನಲ್ಲಿ ವರ್ಕೌಟ್ ಮಾಡುವುದಕ್ಕಿಂತ ಸೈಕಲ್ ತುಳಿಯುವುದು ಇಷ್ಟ. ನಾನು ಮತ್ತು ಅಣ್ಣ ಆಗಾಗ್ಗೆ ಸೈಕ್ಲಿಂಗ್ ಮಾಡುತ್ತೇವೆ. ಬಾಲ್ಯದಲ್ಲಿ ಶಾಲಾ ದಿನಗಳಲ್ಲಿ ಮೋಜಿಗಾಗಿ ಸೈಕಲ್ ತುಳಿದರೆ, ಈಗ ದೈಹಿಕ ಕಸರತ್ತಿಗಾಗಿ ಸೈಕ್ಲಿಂಗ್.
–ಹರಿಪ್ರಿಯಾ, ನಟಿ
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.