ಬುಧವಾರ, ನವೆಂಬರ್ 13, 2019
22 °C

ಪೆಡಲ್ ತುಳಿಯದೆ ಸೈಕಲ್ ಓಡಿಸಿ!

Published:
Updated:
ಪೆಡಲ್ ತುಳಿಯದೆ ಸೈಕಲ್ ಓಡಿಸಿ!

ಬೆಂಗಳೂರು:  ನೀವು ಈ ಸೈಕಲ್ ಮೇಲೆ ಏರಿ ಕುಳಿತು ಬಟನ್ ಅದುಮಿದರೆ ಸಾಕು, ತಂತಾನೆ ಅದು ಮುಂದಕ್ಕೆ ಓಡುತ್ತದೆ. ಪೆಡಲ್ ತುಳಿಯುವ ತಾಪತ್ರಯ ಇಲ್ಲ. ಬೆವರು ಹರಿಸುವ ತೊಂದರೆ ಇಲ್ಲ. ಪೆಟ್ರೋಲ್ ಹಾಕಿಸುವ ಕಿರಿಕಿರಿ ಅಂತೂ ಮೊದಲೇ ಇಲ್ಲ. ಸುಮ್ಮನೇ ಎಕ್ಸಿಲೇಟರ್ ಕಿವಿ ಹಿಂಡಿದರೆ ಸಾಕು, ಅದು ಭರ‌್ರೆಂದು ಓಡುತ್ತದೆ ಮೋಪೆಡ್‌ನಂತೆ!ಸೋಲಾರ್ (ಸೌರಶಕ್ತಿ) ಬೈಸಿಕಲ್ ಮಾಡಿರುವ `ಮ್ಯಾಜಿಕ್' ಇದು. ನಗರದ ದೀಪಾ ಸೋಲಾರ್ ಲೈಟಿಂಗ್ ಸಿಸ್ಟಮ್ಸ ಸಂಸ್ಥೆ ಮಾಮೂಲಿ ಸೈಕಲ್‌ಗೆ ಇಂತಹ ವಿಶಿಷ್ಟ ವಿನ್ಯಾಸ ಮಾಡಿದೆ. ನಗರದ ಮಹಾರಾಣಿ ವಿಜ್ಞಾನ ಕಾಲೇಜಿನಲ್ಲಿ ಮಂಗಳವಾರ ಏರ್ಪಡಿಸಿದ್ದ ಸೌರಶಕ್ತಿ ಕುರಿತ ಕಾರ್ಯಾಗಾರದಲ್ಲಿ ಈ ಸೈಕಲ್ ಎಲ್ಲರ ಗಮನ ಸೆಳೆಯಿತು.ತಲಾ 12 ವಾಟ್ ಸಾಮರ್ಥ್ಯದ ಎರಡು ಸೋಲಾರ್ ಫಲಕಗಳನ್ನು ಹ್ಯಾಂಡಲ್ ಮುಂದೆ ಅಳವಡಿಸಲಾಗಿದೆ. ಪೆಡಲ್ ಮೇಲ್ಭಾಗದ ಖಾಲಿ ಆವರಣದಲ್ಲಿ ತಲಾ 7.5 ಆ್ಯಂಪ್ ಅವರ್ (ಎ.ಎಚ್) ಸಾಮರ್ಥ್ಯದ ಎರಡು ಬ್ಯಾಟರಿಗಳನ್ನು ಸಹ ಕೂಡಿಸಲಾಗಿದೆ. ಸೋಲಾರ್ ಫಲಕದಲ್ಲಿ ಉತ್ಪಾದನೆಯಾಗುವ ವಿದ್ಯುತ್ ಬ್ಯಾಟರಿಯಲ್ಲಿ ಸಂಗ್ರಹವಾಗುತ್ತದೆ.ಬಿಸಿಲು ಪ್ರಖರವಾಗಿ ಇಲ್ಲದಿದ್ದರೂ ಬೆಳಕು ಚೆನ್ನಾಗಿದ್ದರೆ ಸಾಕು, ಈ ಫಲಕಗಳು ಸಿಕ್ಕ ಶಾಖದಲ್ಲಿಯೇ ವಿದ್ಯುತ್ ಉತ್ಪಾದನೆ ಮಾಡುತ್ತವೆ. ಹ್ಯಾಂಡಲ್ ಜಾಗದಲ್ಲಿ ಬೈಕ್‌ನಂತೆಯೇ ಎಕ್ಸಿಲೇಟರ್ ಹಾಗೂ ಬ್ರೇಕ್ ಕೂಡಿಸಲಾಗಿದೆ. ಬಿಸಿಲು ಹೆಚ್ಚಿದ್ದಾಗ  ಸೈಕಲ್‌ಗೆ ಓಡಲು `ಶಕ್ತಿ' ನೀಡುವ ಜತೆಗೆ ಬ್ಯಾಟರಿಗೆ ಹೆಚ್ಚುವರಿ ವಿದ್ಯುತ್ ರವಾನೆ ಮಾಡುತ್ತವೆ ಮೇಲಿನ ಸೌರ ಫಲಕಗಳು.

ಅಲ್ಲಿಂದ ಪಡೆಯುವ ವಿದ್ಯುತ್, ರಾತ್ರಿಯಲ್ಲೂ 35 ಕಿ.ಮೀ. ದೂರ ಕ್ರಮಿಸಲು ತಾಕತ್ತು ನೀಡುತ್ತದೆ. ಇಲ್ಲದಿದ್ದರೆ ಆ ವಿದ್ಯುತ್ ಮೂಲಕ 20 ವಾಟಿನ ಎರಡು ಬಲ್ಬುಗಳನ್ನು ರಾತ್ರಿ ಇಡೀ ಬೆಳಗಿಸಲು ಸಾಧ್ಯವಿದೆ. ಮೊಬೈಲ್ ರೀಚಾರ್ಜ್ ಮಾಡಿಕೊಳ್ಳಲು ಸಹ ಅದರಲ್ಲಿ ಅವಕಾಶ ಕಲ್ಪಿಸಲಾಗಿದೆ.ಮೋಡ ಮುಸುಕಿದ ವಾತಾವರಣ ಇದ್ದು, ಸೌರ ವಿದ್ಯುತ್ ಉತ್ಪಾದನೆ ಸಾಧ್ಯವೇ ಇಲ್ಲ ಎನ್ನುವ ಸಂದರ್ಭದಲ್ಲಿ ಪೆಡಲ್ ತುಳಿದು ಸೈಕಲ್ ಮುನ್ನಡೆಸುವ ಅವಕಾಶ ಅದರಲ್ಲಿದೆ. ಆದರೆ, ಅದರ ಬೆಲೆ ಮಾತ್ರ ಕೊಂಚ ದುಬಾರಿ. ದೀಪಾ ಸಂಸ್ಥೆ ಸದ್ಯ ಎರಡು ಸೋಲಾರ್ ಬೈಸಿಕಲ್‌ಗಳನ್ನು ಸಿದ್ಧಪಡಿಸಿದೆ. ಪ್ರತಿಯೊಂದಕ್ಕೆ ತಲಾ ರೂ 28,000 ಖರ್ಚಾಗಿದೆ ಎಂದು ಹೇಳುತ್ತಾರೆ, ಸಂಸ್ಥೆಯ ಮಾರಾಟ ವ್ಯವಸ್ಥಾಪಕ ಎಚ್.ಆರ್. ಶಿವಕುಮಾರ್.`ಸಂಸ್ಥೆಯಲ್ಲಿ ಲಭ್ಯವಿದ್ದ ಸಲಕರಣೆಗಳನ್ನೇ ಬಳಸಿಕೊಂಡು ಈ ಬೈಸಿಕಲ್ ವಿನ್ಯಾಸ ಮಾಡಲಾಗಿದೆ. ಇಂತಹ ಸೈಕಲ್‌ಗಳಿಗೆ ಬೇಡಿಕೆ ಬಂದಿದ್ದಾದಲ್ಲಿ ಇನ್ನಷ್ಟು ಬದಲಾವಣೆ ಮಾಡಲು ಯತ್ನಿಸಬಹುದು. ಖರ್ಚೂ ಇನ್ನಷ್ಟು ತಗ್ಗಬಹುದು' ಎಂದು ಅವರು ಹೇಳುತ್ತಾರೆ.`ಸೋಲಾರ್ ಕಾರು ಮತ್ತು ಬೈಕ್‌ಗಳ ಉಪಯೋಗ ಜಗತ್ತಿನ ವಿವಿಧ ಕಡೆ ಜನಪ್ರಿಯಗೊಂಡಿದೆ. ಸೋಲಾರ್ ಸೈಕಲ್‌ಗಳ ಪರಿಕಲ್ಪನೆ ಈಗೀಗ ಎಲ್ಲೆಡೆ ವ್ಯಾಪಕವಾಗಿ ಪ್ರಚಾರ ಪಡೆಯುತ್ತಿದೆ. ಮಾಲಿನ್ಯರಹಿತವಾದ, ಇಂಧನ ಅಪವ್ಯಯವನ್ನೂ ಮಾಡದ ಇಂತಹ ವಾಹನಗಳ ಸಂಖ್ಯೆ ಹೆಚ್ಚಾಗಬೇಕಿದೆ' ಎಂದು ರಾಷ್ಟ್ರೀಯ ಸೌರಶಕ್ತಿ ತಂತ್ರಜ್ಞಾನ ತರಬೇತಿ ಕೇಂದ್ರದ ನಿರ್ದೇಶಕ ಡಾ.ಎಚ್. ನಾಗನಗೌಡ ಆಶಿಸುತ್ತಾರೆ.ಪ್ರದರ್ಶನದಲ್ಲಿ ಇದ್ದ ಈ ಬೈಸಿಕಲ್, ಕಾರ್ಯಾಗಾರಕ್ಕೆ ಬಂದವರನ್ನೆಲ್ಲ ಸೂಜಿಗಲ್ಲಿನಂತೆ ಸೆಳೆಯುತ್ತಿತ್ತು. ಮಹಾರಾಣಿ ವಿಜ್ಞಾನ ಕಾಲೇಜಿನ ಹುಡುಗಿಯರಂತೂ ಪೆಡಲ್ ತುಳಿಯದೆ, ಎಕ್ಸಿಲೇಟರ್ ತಿರುವುತ್ತಾ ಸೈಕಲ್ ಸವಾರಿ ಮಾಡಿ ಮೋಜು ಅನುಭವಿಸಿದರು.

ದೀಪಾ ಸೋಲಾರ್ ಲೈಟಿಂಗ್ ಸಂಸ್ಥೆ ಸಂಪರ್ಕ ಸಂಖ್ಯೆ: 080-23188480

ಪ್ರತಿಕ್ರಿಯಿಸಿ (+)