ಪೆಡಲ್ ಪವರ್

7

ಪೆಡಲ್ ಪವರ್

Published:
Updated:

ಮೊದಲಿನಿಂದಲೂ ಬೈಕು ಕಾರುಗಳ ಹುಚ್ಚು ಹತ್ತಿಸಿಕೊಂಡಿದ್ದವರು ತಿಪಟೂರಿನ ಜಿ. ಆದಿತ್ಯ ಮಂಜು. ಹೊಗೆಯುಗುಳುತ್ತ ರೊಯ್ ರೊಯ್ ಸದ್ದು ಮಾಡುತ್ತಿದ್ದ ಬೈಕುಗಳೆಂದರೆ ಅವರಿಗೆ ಎಲ್ಲಿಲ್ಲದ ಪ್ರೀತಿ. ಕಾರು ಬೈಕ್ ರೇಸುಗಳೆಂದರೆ ಊಟ ನಿದ್ರೆಯನ್ನೂ ತೊರೆಯುವಷ್ಟು ತಲ್ಲೆನತೆ. ಅಂಥ ಮಂಜು ಒಂದು ದಿನ ಬದಲಾದರು. ಊರಿನಲ್ಲಿ ನಡೆಯುತ್ತಿದ್ದ ಪರಿಸರ ಕಾರ್ಯಕ್ರಮ ಹಾಗೂ `ರಾಕ್ ರೈಡರ್~ ಸೈಕಲ್ ಮೇಲಿನ ಮೋಹ ಅವರಿಗೆ ಬೇರೆಯದೇ ದಿಕ್ಕು ತೋರಿದವು.

ಮೈತ್ರೇಯ ಪರಿಸರ ಮತ್ತು ಗ್ರಾಮೀಣ ಅಧ್ಯಯನ ಕೇಂದ್ರ ಏರ್ಪಡಿಸಿದ್ದ `ಹಸಿರು ತಿಪಟೂರು~ ಮೇಳದಲ್ಲಿ ಸೈಕಲ್ ಮಹತ್ವ ತಿಳಿಸಲು ಮುಂದಾದರು. ಗಿಡ ನೆಡುವ ಕಾರ್ಯಕ್ರಮ, ಸಭೆ ಸಮಾರಂಭಗಳಲ್ಲಿ ಸೈಕಲ್ಲುಗಳು ಹೊಳೆಯತೊಡಗಿದವು. ಜಿ.ತಿಪ್ಪೇಸ್ವಾಮಿ, ಶ್ರಿಕಾಂತ್ ಕೆಳಹಟ್ಟಿ, ಮನೋಹರ್ ಪಟೇಲ್, ಪುನೀತ್ ಮತ್ತಿತರರು ಮಂಜು ಬೆನ್ನಿಗೆ ನಿಂತರು.

ಅಲ್ಲದೆ ರಾಜ್ಯದ ಪ್ರಮುಖ ಸೈಕ್ಲಿಸ್ಟ್‌ಗಳನ್ನು ಸೈಕಲ್ ಪರ ಸಂಘಟನೆಗಳನ್ನು ಪರಿಚಯ ಮಾಡಿಕೊಂಡರು. ಬೆಂಗಳೂರಿನ ವ್ಹೀಲ್ ಲೈಫ್ ಅಡ್ವೆಂಚರ್ ಸಂಘಟನೆಯ ಕೆಲಸ ಕಾರ್ಯಗಳು ಇವರಿಗೆ ಸ್ಫೂರ್ತಿ. ಬೆಂಗಳೂರು, ಮೈಸೂರು ಹಾಗೂ ಮಂಗಳೂರಿನಲ್ಲಿ ಮಾತ್ರ ವಿದೇಶಿ ಸೈಕಲ್‌ಗಳು ಲಭ್ಯವಿದ್ದವು. ಆರಾಮದಾಯಕ ಆಮದು ಸೈಕಲ್‌ಗಳು ಸಣ್ಣ ಊರುಗಳಿಗೂ ಸಿಗಬೇಕು ಎಂಬ ಏಕೈಕ ಕಾರಣಕ್ಕೆ ಒಂದಷ್ಟು ಬಂಡವಾಳ ಹೂಡಿ `ಪೆಡಲ್ ಪವರ್~ ಹೆಸರಿನ ಅಂಗಡಿ ತೆರೆದಿದ್ದಾರೆ. ಇಲ್ಲಿ ಸೈಕಲ್ಲುಗಳು, ಸೈಕಲ್ ಆಕ್ಸೆಸರಿಗಳು, ಚಾರಣಕ್ಕೆ ಅಗತ್ಯವಾದ ಸರಕುಗಳು ಲಭ್ಯ. 

ಶಾಲಾ ಕಾಲೇಜುಗಳ ಯುವಕರನ್ನು ಕಟ್ಟಿಕೊಂಡು ಸೈಕಲ್ ಸವಾರಿ ಮಾಡುವುದು ಮಂಜು ಅವರ ಮುಖ್ಯ ಹವ್ಯಾಸ. ನಾಗಪುರಿ ಅರಣ್ಯ, ಮೈಸೂರು, ಸಕಲೇಶಪುರ ಮುಂತಾದೆಡೆಗಳಿಗೆ ಸೈಕಲ್‌ನಲ್ಲೇ ಯಾತ್ರೆ ಹೊರಟದ್ದಿದೆ. ನೀಲೇಶ್ ಧುಮಾಲ್ ಎಂಬ ಸೈಕ್ಲಿಸ್ಟ್ ಇವರಿಗೆ ಬಗೆ ಬಗೆಯ ತರಬೇತಿ ನೀಡಿದ್ದಾರೆ.

ವಾರಕ್ಕೊಮ್ಮೆ ಸೈಕಲ್ ಮ್ಯಾರಥಾನ್ ನಡೆಸುತ್ತಿರುವ ಇವರಿಗೆ ಬಿ.ಎಚ್.ರಸ್ತೆಯ ಬದಿಯಲ್ಲಿ ಪ್ರತ್ಯೇಕ ಸೈಕಲ್ ಪಥ ನಿರ್ಮಿಸುವ ಮಹತ್ವದ ಆಸೆ ಇದೆ. ಸಣ್ಣ ಊರುಗಳು ಕೂಡ ದೊಡ್ಡ ನಗರಗಳಷ್ಟೇ ವೇಗವಾಗಿ ಬೆಳೆಯುತ್ತಿವೆ. ಆದ್ದರಿಂದ ಇಲ್ಲಿ ಮೊದಲಿನಿಂದಲೇ ಜಾಗೃತಿ ಮೂಡಿದರೆ ಪರಿಸರ ಉಳಿದೀತು ಎಂಬ ಆಶಯದೊಂದಿಗೆ ಯುವಕರು ಮತ್ತು ಮಕ್ಕಳಲ್ಲಿ ಸೈಕಲ್ ಪ್ರೀತಿ ಹೆಚ್ಚುವಂತೆ ಅವರು ನೋಡಿಕೊಳ್ಳುತ್ತಿದ್ದಾರೆ.

`ಒಂದಲ್ಲಾ ಒಂದು ದಿನ ನಮ್ಮೂರಲ್ಲಿ ಎಲ್ಲರೂ ಸೈಕಲ್ ತುಳಿಯುತ್ತಾರೆ. ಹೊಗೆಯುಗುಳುವ ವಾಹನಗಳು ಕಡಿಮೆಯಾಗುತ್ತವೆ. ಅಂಥ ಒಳ್ಳೆ ದಿನ ಬಂದೇ ಬರುತ್ತದೆ~ ಎಂಬ ವಿಶ್ವಾಸ ಮಂಜು ಅವರದು. ಮಂಜುನಾಥ್ ದೂರವಾಣಿ ಸಂಖ್ಯೆ: 9686499969.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry