ಶುಕ್ರವಾರ, ಮೇ 27, 2022
28 °C

ಪೆದ್ದಪಲ್ಲಿಯಲ್ಲಿ ಹುಣ್ಣಿಮೆ ಸಂಭ್ರಮ

ಪ್ರಜಾವಾಣಿ ವಾರ್ತೆ/ Updated:

ಅಕ್ಷರ ಗಾತ್ರ : | |

ಕೆಜಿಎಫ್: ಪೆದ್ದಪಲ್ಲಿ ಎಂದರೆ ಸಾಕು ಪುರಾತನ ಪ್ರಸಿದ್ಧ ಗಂಗಮ್ಮ ದೇವಾಲಯ ಮತ್ತು ಗ್ರಾಮದ ಕಲಾವಿದರ ತಂಡ ಜ್ಞಾಪಕಕ್ಕೆ ಬರುತ್ತದೆ.ಪೆದ್ದಪಲ್ಲಿ ಗ್ರಾಮದಲ್ಲಿ ಪ್ರತಿ ಹುಣ್ಣಿಮೆಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡುವ ಮೂಲಕ ಪೆದ್ದಪಲ್ಲಿ ಕಲಾವಿದರು ಸುತ್ತಮುತ್ತಲ ಗ್ರಾಮಗಳಲ್ಲಿ ಹೆಸರುವಾಸಿಯಾಗಿದ್ದಾರೆ.2004ರಲ್ಲಿ ಗ್ರಾಮದಲ್ಲಿದ್ದ ಸಂಗೀತ ವಿದ್ವಾನ್ ರಾಮಯ್ಯ ಎಂಬುವರು ಕೆಲವು ಕಲಾಭಿಮಾನಿಗಳನ್ನು ಮತ್ತು ಕಲಾವಿದರನ್ನು ಸೇರಿಸಿಕೊಂಡು ಒಂದು ಸಣ್ಣ ತಂಡ ಕಟ್ಟಿದರು. ಈ ಬಳಗ ನಿರ್ದಿಷ್ಟ ಸಮಯಕ್ಕೆ ಒಂದೆಡೆ ಸೇರಿಕೊಂಡು ಸಾಂಸ್ಕೃತಿಕ ಕಾರ್ಯಕ್ರಮ ನೀಡಬೇಕು ಎಂಬ ಕಲ್ಪನೆಗೆ ಒತ್ತುಕೊಟ್ಟರು. ಇದರಂತೆ ಪ್ರತಿ ಹುಣ್ಣಿಮೆಗೆ ದೇವಾಲಯದ ಆವರಣದಲ್ಲಿ ಒಂದು ಕಾರ್ಯಕ್ರಮ ನೀಡುವ ಯೋಜನೆ ರೂಪಿಸಿದರು. ಈ ಯೋಜನೆ ಬರುಬರುತ್ತಾ ಜನಪ್ರಿಯಗೊಂಡು ಇದುವರೆವಿಗೂ 101 ಹುಣ್ಣಿಮೆ ಕಂಡಿದೆ.ತಂಡದ ಜನಪ್ರಿಯತೆ ಕಂಡ ಸಣ್ಣಪುಟ್ಟ ಕಲಾವಿದರು ಹಾಗೂ ಕಲೆಯಲ್ಲಿ ಆಸಕ್ತಿಯುಳ್ಳವರು ಸಹ ತಂಡಕ್ಕೆ ಸೇರ್ಪಡೆಯಾಗುತ್ತ ಬಂದರು. ಇಂದು ಸುಮಾರು 25 ಕಲಾವಿದರು ತಂಡದಲ್ಲಿ ಸಕ್ರಿಯವಾಗಿ ಇದ್ದಾರೆ. ಗ್ರಾಮದ ಹಿರಿಯ ಪೆದ್ದಪಲ್ಲಿ ಮುನಿಸ್ವಾಮಿ, ಜಿ.ನಾರಾಯಣ, ಶ್ರೀನಿವಾಸಮೂರ್ತಿ ಅವರಂತಹವರು ಮುಂದೆ ನಿಂತು ಕೊಂಡು ಕಲಾವಿದರನ್ನು ಬೆಂಬಲಿಸುತ್ತಿದ್ದಾರೆ.ಪ್ರತಿ ಹುಣ್ಣಿಮೆಗೆ ದೇವಾಲಯ ಅಲಂಕೃತಗೊಳ್ಳುತ್ತದೆ. ಬೆಳಿಗ್ಗೆ ಅಭಿಷೇಕ, ಪ್ರಸಾದ ವಿನಿಯೋಗ ನಡೆಯುತ್ತದೆ. ನಂತರ ಸಂಜೆ ನಾಲ್ಕು ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ವೇದಿಕೆ ಸಜ್ಜಾಗುತ್ತದೆ. ಪಂಡರಿ ಭಜನೆ, ನಾಟಕ, ಬುರ‌್ರಕಥೆ, ಹಾಡುಗಾರಿಕೆ  ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮ ರಾತ್ರಿವರೆವಿಗೂ ನಡೆಯುತ್ತದೆ. ಈ ಕಾರ್ಯಕ್ರಮ ನೋಡಲು ಸುಮಾರು ಒಂದು ಸಾವಿರಕ್ಕೂ ಹೆಚ್ಚು ಜನ ಪ್ರತಿ ಹುಣ್ಣಿಮೆಗೂ ಗ್ರಾಮಕ್ಕೆ ಬರುತ್ತಾರೆ.ಸಮೀಪದ ಯರ‌್ರನಾಗನಹಳ್ಳಿ, ಪಿಚ್ಚಹಳ್ಳಿ, ಕೂಡುಗಲ್, ಘಟ್ಟರಾಗಡಹಳ್ಳಿ, ಕೊತ್ತೂರು ಮೊದಲಾದ ಗ್ರಾಮಗಳ ಕಲಾವಿದರಿಗೆ ಪೆದ್ದಪಲ್ಲಿ ಕಲಾವಿದರ ತಂಡದಲ್ಲಿ ಪಾಲ್ಗೊಳ್ಳುವುದೆಂದರೆ ಒಂದು ರೀತಿಯ ಹೆಮ್ಮೆ.ಹುಣ್ಣಿಮೆ ಕಾರ್ಯಕ್ರಮ ಎಷ್ಟೊಂದು ಜನಪ್ರಿಯವೆಂದರೆ, ಕಾರ್ಯಕ್ರಮದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಪ್ರೇರೇಪಿತರಾದ ಮಕ್ಕಳು ಸಹ ತಂಡ ಕಟ್ಟಿಕೊಂಡಿದ್ದಾರೆ. ಹತ್ತು ವರ್ಷಗಳಿಂತ ಕಡಿಮೆ ವಯಸ್ಸುಳ್ಳ ಕೆಲವು ಮಕ್ಕಳು ಸಹ ಹಾರ‌್ಮೋನಿಯಂ, ತಬಲ ಬಾರಿಸುತ್ತಾರೆ. ಶಾಸ್ತ್ರೀಯವಾಗಿ ಹಾಡು ಹಾಡುತ್ತಾರೆ. ಅವರ ಉತ್ಸಾಹ ಕಂಡು ಪೋಷಕರು ಸಹ ಮಕ್ಕಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ.ಪ್ರತಿ ಕಾರ್ಯಕ್ರಮಕ್ಕೂ ಸುಮಾರು 4ರಿಂದ 5ಸಾವಿರ ರೂಪಾಯಿ ಖರ್ಚು ಬರುತ್ತದೆ. ತಂಡದ ಕಾರ್ಯಕ್ರಮ ವೀಕ್ಷಿಸುವ ದಾನಿಗಳು ಸ್ವಯಂ ಪ್ರೇರಿತರಾಗಿ ಹುಣ್ಣಿಮೆ ಕಾರ್ಯಕ್ರಮದ ಖರ್ಚು ವಹಿಸಿಕೊಳ್ಳುತ್ತಾರೆ. ಕೆಲವೊಮ್ಮೆ ದಾನಿಗಳು ಸಿಗದೆ ಹೋದಾಗ ತಂಡದ ಕಲಾವಿದರೇ ಹಣ ಹೊಂದಿಸಿಕೊಂಡು ಕಾರ್ಯಕ್ರಮ ನಿರೂಪಿಸುತ್ತಾರೆ ಎಂದು ತಂಡದ ಪ್ರಮುಖ ಕಲಾವಿದ ತ್ಯಾಗರಾಜ್ ಹೇಳುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.