ಪೆನುಕೊಂಡ ಬಳಿ ಭೀಕರ ರೈಲು ಅಪಘಾತ

7

ಪೆನುಕೊಂಡ ಬಳಿ ಭೀಕರ ರೈಲು ಅಪಘಾತ

Published:
Updated:
ಪೆನುಕೊಂಡ ಬಳಿ ಭೀಕರ ರೈಲು ಅಪಘಾತ

ಪೆನುಕೊಂಡ (ಆಂಧ್ರಪ್ರದೇಶ): ಹುಬ್ಬಳ್ಳಿಯಿಂದ ಬೆಂಗಳೂರಿಗೆ ಬರುತ್ತಿದ್ದ ಹಂಪಿ ಎಕ್ಸ್‌ಪ್ರೆಸ್ ರೈಲು ಮಂಗಳವಾರ ಬೆಳಗಿನ ಜಾವ ಇಲ್ಲಿನ ರೈಲ್ವೆ ನಿಲ್ದಾಣದಲ್ಲಿ ನಿಂತಿದ್ದ ಸರಕು ಸಾಗಣೆ ರೈಲಿಗೆ ಡಿಕ್ಕಿ ಹೊಡೆದು ಭೀಕರ ಅಪಘಾತ ಸಂಭವಿಸಿದೆ. ಘಟನೆಯಲ್ಲಿ 25 ಪ್ರಯಾಣಿಕರು ಮೃತಪಟ್ಟಿದ್ದು, 55 ಜನರು ಗಾಯಗೊಂಡಿದ್ದಾರೆ. ಮೃತರಲ್ಲಿ ಬಹುತೇಕರು ಕರ್ನಾಟಕದ ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಯವರು.ಮೃತರಲ್ಲಿ 19 ಪುರುಷರು, ಮೂವರು ಮಹಿಳೆಯರು ಮತ್ತು ಮೂವರು ಮಕ್ಕಳು ಸೇರಿದ್ದಾರೆ. ಈ ಪೈಕಿ ಇದುವರೆಗೆ ಎಂಟು ಪುರುಷರು, ಇಬ್ಬರು ಮಹಿಳೆಯರು ಮತ್ತು ಮೂವರು ಮಕ್ಕಳ ಗುರುತು ಪತ್ತೆಹಚ್ಚಲಾಗಿದೆ. ಇನ್ನೂ 12 ಜನರ ಗುರುತು ಪತ್ತೆಯಾಗಬೇಕಿದೆ. ಕೆಲವು ಮೃತದೇಹಗಳು ಬಹುಪಾಲು ಸುಟ್ಟು ಕರಕಲಾಗಿರುವುದು ಗುರುತು ಪತ್ತೆಗೆ ಅಡ್ಡಿಯಾಗಿದೆ.
ರೈಲು ಬಳ್ಳಾರಿ ಮಾರ್ಗವಾಗಿ ಬೆಳಿಗ್ಗೆ 6 ಗಂಟೆಗೆ ಬೆಂಗಳೂರು ತಲುಪಬೇಕಿತ್ತು. ಅನಂತಪುರ ಜಿಲ್ಲೆಯ ಪೆನುಕೊಂಡ ರೈಲು ನಿಲ್ದಾಣದಲ್ಲಿ ಎರಡು ನಿಮಿಷಗಳ ನಿಲುಗಡೆಯ ನಂತರ ಬೆಂಗಳೂರಿನತ್ತ ಪ್ರಯಾಣಿಸಬೇಕಿತ್ತು.

 

ಆದರೆ, ಎರಡನೇ ಹಳಿಯ ಮೇಲೆ ಆಗಲೇ ಗೂಡ್ಸ್ ರೈಲು ನಿಂತಿತ್ತು. ನಿಲ್ದಾಣ ಸಮೀಪಿಸಿದ ಬಳಿಕ ಚಾಲಕ ಕೆಂಪು ದೀಪದ ಸಂಕೇತವನ್ನು ನಿರ್ಲಕ್ಷಿಸಿ ಅದೇ ಮಾರ್ಗದಲ್ಲಿ ಮುಂದುವರಿದ ಪರಿಣಾಮ ಬೆಳಗಿನ ಜಾವ 3.09ಕ್ಕೆ ಗೂಡ್ಸ್ ರೈಲಿಗೆ ಹಂಪಿ ಎಕ್ಸ್‌ಪ್ರೆಸ್ ಮುಖಾಮುಖಿಯಾಗಿದೆ.`ಎರಡನೇ ಮಾರ್ಗದಲ್ಲಿ ಆಗಲೇ ಗೂಡ್ಸ್ ರೈಲು ನಿಂತಿದ್ದರೂ ಚಾಲಕ ಕೆಂಪು ದೀಪವನ್ನು ನಿರ್ಲಕ್ಷಿಸಿ ಮುಂದಕ್ಕೆ ಸಾಗಿರುವುದರಿಂದಲೇ ಅಪಘಾತ ಸಂಭವಿಸಿದೆ ಎಂದು ಮೇಲ್ನೋಟಕ್ಕೆ ಕಂಡಬಂದಿದೆ~ ಎಂದು ದಕ್ಷಿಣ ನೈರುತ್ಯ ರೈಲ್ವೆ ವಿಭಾಗೀಯ ವ್ಯವಸ್ಥಾಪಕ ಮಣಿ ತಿಳಿಸಿದರು.`ನಿಲ್ದಾಣವಾದ ಕಾರಣ ರೈಲು ಕಡಿಮೆ ವೇಗದಲ್ಲಿ ಸಂಚರಿಸುತ್ತಿತ್ತು. ಇಲ್ಲವಾದರೆ ಸಾವುನೋವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇತ್ತು~ ಎಂದು ರಕ್ಷಣಾ ಕಾರ್ಯದ ನೇತೃತ್ವ ವಹಿಸಿದ್ದ ಅವರು ಮಾಧ್ಯಮಗಳಿಗೆ ತಿಳಿಸಿದರು.ಕರಕಲಾದ ದೇಹಗಳು: ಡಿಕ್ಕಿಯ ರಭಸಕ್ಕೆ ಹಂಪಿ   ಎಕ್ಸ್‌ಪ್ರೆಸ್‌ನ ಎಂಜಿನ್‌ನ ಪಕ್ಕದ ಬೋಗಿ ನುಜ್ಜುಗುಜ್ಜಾಗಿ, ಬೆಂಕಿ ಹೊತ್ತಿಕೊಂಡಿದೆ. ಆ ಬೋಗಿಯಲ್ಲಿದ್ದವರ ಪೈಕಿ 16 ಜನ ಸುಟ್ಟು ಕರಕಲಾಗಿದ್ದಾರೆ. ಕೆಲ ಮೃತದೇಹಗಳ ಗುರುತು ಪತ್ತೆಹಚ್ಚಲೂ ಸಾಧ್ಯವಾಗದಷ್ಟು ಸುಟ್ಟುಹೋಗಿವೆ. ಮೂರನೇ ಬೋಗಿಯೂ ಜಖಂಗೊಂಡಿದ್ದು, ಅದರಲ್ಲಿದ್ದ ಆರು ಜನರು ಸಾವಿಗೀಡಾಗಿದ್ದಾರೆ.

ಮೃತರಲ್ಲಿ ಬಹುತೇಕರು ಕೊಪ್ಪಳ, ಗಂಗಾವತಿ, ಬಳ್ಳಾರಿ ಮತ್ತಿತರ ಪ್ರದೇಶಗಳಿಂದ ಬೆಂಗಳೂರಿಗೆ ಕೂಲಿ ಕೆಲಸ ಹುಡುಕಿ ಹೊರಟವರು. ಈಗಾಗಲೇ ಗುರುತು ಪತ್ತೆಯಾಗಿರುವ ಮೃತರ ಸಂಬಂಧಿಗಳು ಪೆನುಕೊಂಡ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದತ್ತ ಧಾವಿಸುತ್ತಿದ್ದಾರೆ.

 

ಅಲ್ಲಿ ಬೀಡುಬಿಟ್ಟಿರುವ ರೈಲ್ವೆ ಇಲಾಖೆ ಅಧಿಕಾರಿಗಳು, ಆಂಧ್ರಪ್ರದೇಶ ಮತ್ತು ಕರ್ನಾಟಕ ಪೊಲೀಸರ ನೆರವಿನಲ್ಲಿ ಮೃತ ದೇಹಗಳನ್ನು ವಾರಸುದಾರರಿಗೆ ಒಪ್ಪಿಸುವ ಪ್ರಕ್ರಿಯೆ ಆರಂಭಿಸಿದ್ದಾರೆ.ಹಾನಿಗೀಡಾದ ಎರಡೂ ಬೋಗಿಗಳು `ಜನರಲ್ ಕಂಪಾರ್ಟ್‌ಮೆಂಟ್~ಗಳಾಗಿದ್ದು, ಕಿಕ್ಕಿರಿದು ತುಂಬಿದ್ದವು. ಬಳ್ಳಾರಿ ನಿಲ್ದಾಣದಲ್ಲೇ ಈ ಬೋಗಿಗಳಲ್ಲಿ ಪ್ರಯಾಣಿಸಲು 262 ಜನರು ಟಿಕೆಟ್ ಖರೀದಿಸಿದ ವಿವರ ರೈಲ್ವೆ ಇಲಾಖೆ ಬಳಿ ಇದೆ. ಜನಸಂದಣಿ ಜಾಸ್ತಿ ಇದ್ದ ಕಾರಣದಿಂದಲೇ ಹೆಚ್ಚಿನ ಪ್ರಯಾಣಿಕರು ತಕ್ಷಣ ಹೊರಬರಲಾರದೇ ಬೆಂಕಿಗೆ ಸಿಲುಕಿರುವ ಸಾಧ್ಯತೆ ಇದೆ ಎಂಬುದು ಪರಿಶೀಲನೆ ವೇಳೆ ತಿಳಿದುಬಂದಿದೆ.ಹತ್ತು ಮಂದಿ ಸ್ಥಿತಿ ಗಂಭೀರ:

ಗಾಯಾಳುಗಳಲ್ಲಿ ಹತ್ತು ಜನರ ಸ್ಥಿತಿ ಗಂಭೀರವಾಗಿದೆ. 45 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳಲ್ಲಿ ಎಂಟು ಜನರನ್ನು ಪುಟ್ಟಪರ್ತಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಒಂಬತ್ತು ಗಾಯಾಳುಗಳಿಗೆ ಬೆಂಗಳೂರಿನ ಎರಡು ಆಸ್ಪತ್ರೆಗಳಲ್ಲಿ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದಂತೆ ಪೆನುಕೊಂಡ, ಹಿಂದೂಪುರ ಮತ್ತು ಪಾವಗಡ ಆಸ್ಪತ್ರೆಗಳಿಗೆ ಗಾಯಾಳುಗಳನ್ನು ದಾಖಲಿಸಲಾಗಿದೆ.ಗಾಯಗೊಂಡಿರುವವರಲ್ಲೂ ಕೆಲವರ ಗುರುತು ಪತ್ತೆ ಇನ್ನೂ ಸಾಧ್ಯವಾಗಿಲ್ಲ. ಘಟನೆಯಲ್ಲಿ ರೈಲಿನ ಎರಡನೇ ದರ್ಜೆ ಬೋಗಿಗಳಿಗೆ ಹಾನಿಯಾಗಿದೆ. ಈ ಬೋಗಿಗಳಲ್ಲಿ ಆಸನ ಕಾಯ್ದಿರಿಸದೇ ಪ್ರಯಾಣಿಸುವ ವ್ಯವಸ್ಥೆ ಇರುವುದರಿಂದ ಮೃತರು ಮತ್ತು ಗಾಯಾಳುಗಳ ಗುರುತು ಪತ್ತೆಗೆ ಅಡ್ಡಿಯಾಗಿದೆ. ಜೊತೆಗಿದ್ದ ಪ್ರಯಾಣಿಕರು ಮತ್ತು ಸಂಬಂಧಿಗಳ ನೆರವು ಪಡೆದು ಗುರುತಿಸಲಾಗುತ್ತಿದೆ.ಪರಿಹಾರ, ಉದ್ಯೋಗ:

ಮಧ್ಯಾಹ್ನ 1.20ಕ್ಕೆ ರೈಲ್ವೆ ಸಚಿವ ಮುಕುಲ್ ರಾಯ್ ಸ್ಥಳಕ್ಕೆ ಭೇಟಿನೀಡಿ ಪರಿಶೀಲನೆ ನಡೆಸಿದರು. ಘಟನೆಗೆ ಕಾರಣವಾದ ಅಂಶಗಳು ಮತ್ತು ಪರಿಹಾರ ಕಾರ್ಯದಲ್ಲಿನ ಪ್ರಗತಿ ಕುರಿತು ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳಿಂದ ಮಾಹಿತಿ ಪಡೆದರು. ನಂತರ ಪೆನುಕೊಂಡದ ಪಂಚಾಯತ್ ರಾಜ್ ವಸತಿ ಗೃಹದಲ್ಲಿ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್.ಕಿರಣ್‌ಕುಮಾರ್ ರೆಡ್ಡಿ, ರೈಲ್ವೆ ಖಾತೆ ರಾಜ್ಯ ಸಚಿವ ಕೆ.ಎಚ್.ಮುನಿಯಪ್ಪ, ಕರ್ನಾಟಕದ ಜವಳಿ ಸಚಿವ ಆರ್.ವರ್ತೂರು ಪ್ರಕಾಶ್ ಮತ್ತಿತರರ ಜೊತೆ ಸಮಾಲೋಚನೆ ನಡೆಸಿದರು.ಬಳಿಕ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಮುಕುಲ್ ರಾಯ್, `ರೈಲು ಅಪಘಾತದಲ್ಲಿ 25 ಜನರು ಮೃತಪಟ್ಟಿರುವುದು ಅತ್ಯಂತ ದುರದೃಷ್ಟಕರ ಸಂಗತಿ. ಮೃತರ ಕುಟುಂಬಕ್ಕೆ ರೈಲ್ವೆ ಇಲಾಖೆ ವತಿಯಿಂದ ತಲಾ ಐದು ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು. ಮೃತರ ಕುಟುಂಬದ ಸದಸ್ಯರು ಬಯಸಿದಲ್ಲಿ ಇಲಾಖೆಯಲ್ಲಿ ಒಂದು ಉದ್ಯೋಗವನ್ನು ನೀಡಲಾಗುವುದು~ ಎಂದು ಪ್ರಕಟಿಸಿದರು.ಗಂಭೀರವಾಗಿ ಗಾಯಗೊಂಡಿರುವವರಿಗೆ ತಲಾ ರೂ 1 ಲಕ್ಷ ಮತ್ತು ಸಣ್ಣಪುಟ್ಟ ಗಾಯಗಳಾಗಿರುವವರಿಗೆ ರೂ 25,000 ಪರಿಹಾರ ನೀಡಲಾಗುವುದು. ಗಾಯಾಳುಗಳ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ರೈಲ್ವೆ ಇಲಾಖೆ ಭರಿಸಲಿದೆ ಎಂದು ತಿಳಿಸಿದರು.ತನಿಖೆಗೆ ಆದೇಶ:

ಚಾಲಕ ಸಂಕೇತ ನಿರ್ಲಕ್ಷಿಸಿರುವುದೇ ಘಟನೆಗೆ ಕಾರಣ ಎಂಬುದು ತಕ್ಷಣದ ಪರಿಶೀಲನೆ ವೇಳೆ ತಿಳಿದುಬಂದಿದೆ. ಘಟನೆ ಕುರಿತು ಹೆಚ್ಚಿನ ತನಿಖೆ ನಡೆಸುವಂತೆ ರೈಲ್ವೆ ಸುರಕ್ಷತಾ ಮಂಡಳಿಗೆ ಆದೇಶಿಸಲಾಗಿದೆ. ಮಂಡಳಿಯ ಮುಖ್ಯ ಆಯುಕ್ತರು ಈಗಾಗಲೇ ಆಂಧ್ರಪ್ರದೇಶಕ್ಕೆ ಆಗಮಿಸಿದ್ದು, ತನಿಖೆ ನಡೆಸಿ ವರದಿ ಸಲ್ಲಿಸುತ್ತಾರೆ. ವರದಿ ಪರಿಶೀಲಿಸಿ ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಮುನ್ನೆಚ್ಚರಿಕೆ ವಹಿಸಲಾಗುವುದು ಎಂದು ರಾಯ್ ಹೇಳಿದರು.ರೈಲ್ವೆ ಪ್ರಯಾಣಿಕರ ಸುರಕ್ಷತೆಗೆ ಇಲಾಖೆ ಆದ್ಯತೆ ನೀಡುತ್ತಿದೆ. ಯೂರೋಪ್ ರಾಷ್ಟ್ರಗಳಲ್ಲಿ ಜಾರಿಯಲ್ಲಿರುವ ಮಾದರಿಯ ಸುರಕ್ಷತಾ ವಿಧಾನಗಳನ್ನು ಅಳವಡಿಸಿಕೊಳ್ಳಲು ತೀರ್ಮಾನಿಸಲಾಗಿದೆ ಎಂದರು. ಅಪಘಾತ ಸಂಭವಿಸಿದ ಬಳಿಕ ಪರಿಹಾರ ಕಾರ್ಯಕ್ಕೆ ನೆರವಾದ ಆಂಧ್ರಪ್ರದೇಶ ಮುಖ್ಯಮಂತ್ರಿ, ಸಚಿವರು ಮತ್ತು ಸರ್ಕಾರದ ಅಧಿಕಾರಿಗಳಿಗೆ ರಾಯ್ ಕೃತಜ್ಞತೆ ಸಲ್ಲಿಸಿದರು.ರೈಲ್ವೆ ಮಂಡಳಿ ಅಧ್ಯಕ್ಷ ವಿನಯ್ ಮಿತ್ತಲ್, ಸದಸ್ಯರಾದ ಕೆ.ಕೆ.ಶ್ರೀವಾತ್ಸವ (ಸಂಚಾರ), ಕೇಶವ್ ಚಂದ್ರ (ತಾಂತ್ರಿಕ), ದಕ್ಷಿಣ ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಎ.ಕೆ.ಮಿತ್ತಲ್, ದಕ್ಷಿಣ ವಲಯ ರೈಲ್ವೆ ಸುರಕ್ಷತಾ ಮಂಡಳಿ ಆಯುಕ್ತ ಎಸ್.ಕೆ.ಮಿತ್ತಲ್ ತಕ್ಷಣವೇ ಸ್ಥಳಕ್ಕೆ ದೌಡಾಯಿಸಿ ಪರಿಹಾರ ಕಾರ್ಯಗಳನ್ನು ಪರಿಶೀಲಿಸಿದರು.ಅದೃಷ್ಟಶಾಲಿ ಶಾಸಕ ಬಯ್ಯಾಪುರ

ಬೆಂಗಳೂರು:
ರೈಲು ಅಪಘಾತದಲ್ಲಿ ಯಾವುದೇ ಅಪಾಯವಿಲ್ಲದೆ ಪಾರಾದ ಅದೃಷ್ಟಶಾಲಿಗಳ ಪೈಕಿ ಕುಷ್ಟಗಿಯ ಶಾಸಕ ಅಮರೇಗೌಡ ಬಯ್ಯಾಪುರ ಅವರೂ ಒಬ್ಬರು.ರೈಲು ಅಪಘಾತದ ಕುರಿತು  `ಪ್ರಜಾವಾಣಿ~ಯೊಂದಿಗೆ ಶಾಸಕರು ಅನುಭವ ಹಂಚಿಕೊಂಡರು. `ಅಪಘಾತ ಸಂಭವಿಸಿದ ಸಮಯದಲ್ಲಿ ಪ್ರಯಾಣಿಕರು ನಿದ್ರೆಯಲ್ಲಿದ್ದರು. ನಾನು ನಾಲ್ಕನೆಯ ಬೋಗಿಯಲ್ಲಿದ್ದೆ. ಇದ್ದಕ್ಕಿದ್ದಂತೆ ಮಹಿಳೆಯರು ಹಾಗೂ ಮಕ್ಕಳ ಚೀರಾಟ ಬಲವಾಗಿ ಕೇಳಿಸಿತು. ನೀರಿನ ಬಾಟಲಿಗಳು ಉರುಳಿಬಿದ್ದವು~ ಎಂದು ವಿವರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry