ಬುಧವಾರ, ನವೆಂಬರ್ 20, 2019
21 °C

ಪೆರ್ನೆ ದುರಂತ: ಮೃತರ ಸಂಖ್ಯೆ 9ಕ್ಕೆ

Published:
Updated:

ಉಪ್ಪಿನಂಗಡಿ: ಪೆರ್ನೆಯಲ್ಲಿ ಮಂಗಳವಾರ ಅನಿಲ ಸಾಗಿಸುವ ಬುಲೆಟ್ ಟ್ಯಾಂಕರ್ ಪಲ್ಟಿಯಾಗಿ ಸಂಭವಿಸಿದ ಬೆಂಕಿ ದುರಂತದಲ್ಲಿ ಗಂಭೀರ ಗಾಯಗೊಂಡು ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪೆರ್ನೆ ಗ್ರಾಮದ ವಿಮಲಾ (25) ಶುಕ್ರವಾರ ಮೃತಪಟ್ಟಿದ್ದಾರೆ.ಅಡ್ಕಹಿತ್ತಿಲು ಅಣ್ಣು ನಾಯ್ಕ ಅವರ ಪುತ್ರಿ ವಿಮಲಾ ಪೆರ್ನೆ ಗ್ರಾಮದ ಕಾರ್ಲ ಅಂಗನವಾಡಿಯಲ್ಲಿ ಕೆಲಸ ಮಾಡುತ್ತಿದ್ದರು. ಮಂಗಳವಾರ ಬೆಳಿಗ್ಗೆ ಪೆರ್ನೆ ಪೇಟೆಯಲ್ಲಿ ತರಕಾರಿ ಖರೀದಿಸಿ ವಾಪಸಾಗುತ್ತಿದ್ದ ವೇಳೆ ಸುಂದರ ರೈ ಮನೆಗೆ ತೆರಳಿದ್ದರು. ಅವರ ಪತ್ನಿ ಇಂದಿರಾ ಜತೆ ಮಾತನಾಡುತ್ತಿದ್ದ ವೇಳೆ ಈ ದುರಂತ ಸಂಭವಿಸಿತ್ತು.ಟ್ಯಾಂಕರ್ ಪಲ್ಟಿಯಾಗಿ ಬೆಂಕಿಯ ಜ್ವಾಲೆ ಹರಡುತ್ತಿದ್ದಂತೆ ವಿಮಲಾ ಹಾಗೂ ಇಂದಿರಾ ಮನೆಯ ಹಿಂಬಾಗಿಲ ಮೂಲಕ ಓಡಿದ್ದರು. ಆದರೂ ವಿಮಲಾ ಮತ್ತು ಇಂದಿರಾ ಅವರಿಗೆ ಸುಟ್ಟ ಗಾಯಗಳಾಗಿದ್ದವು. ಮಂಗಳೂರಿನ  ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿಮಲಾ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ವಿಮಲಾ ಅವರ ಏಕೈಕ ಸೋದರ ವರ್ಷದ ಹಿಂದೆ ಅನಾರೋಗ್ಯದಿಂದ ಮೃತಪಟ್ಟಿದ್ದರು. ಅವರಿಗೆ ತಂದೆ, ತಾಯಿ ಹಾಗೂ ಇಬ್ಬರು ಸಹೋದರಿಯರು ಇದ್ದಾರೆ.

ಪ್ರತಿಕ್ರಿಯಿಸಿ (+)