ಮಂಗಳವಾರ, ನವೆಂಬರ್ 12, 2019
19 °C

ಪೆರ್ನೆ: 100 ಮೀಟರ್ ದೂರದಲ್ಲಿತ್ತು ಶಾಲೆ!

Published:
Updated:

ಮಂಗಳೂರು: ಉಪ್ಪಿನಂಗಡಿ ಸಮೀಪದ ಪೆರ್ನೆಯಲ್ಲಿ ಮಂಗಳವಾರ ಅನಿಲ ಟ್ಯಾಂಕರ್ ಮಗುಚಿ ಸಂಭವಿಸಿದ ಅಗ್ನಿ ದುರಂತದ ಕರಾಳ ಮೆಲುಕು ಹಲವಾರು ವಿದ್ಯಮಾನಗಳನ್ನು ಮನಸ್ಸಿನಾಳಕ್ಕೆ ನಾಟುವಂತೆ ಮಾಡಿವೆ. ಘಟನೆ ನಡೆದ ಕೇವಲ 100 ಮೀಟರ್ ದೂರದಲ್ಲಿ ಶಾಲೆ ಇದ್ದುದು ಇಂತಹ ವಿದ್ಯಮಾನಗಳಲ್ಲಿ ಒಂದು.ಶ್ರೀ ರಾಮಚಂದ್ರ ಹೈಸ್ಕೂಲ್ ಇರುವುದು ದುರಂತ ಸಂಭವಿಸಿದ ಸ್ಥಳದಿಂದ  ಕೂಗಳತೆಯ ದೂರದಲ್ಲಿ. ದುರಂತ ಸಂಭವಿಸಿದಾಗ ಶಾಲೆಯಲ್ಲಿ 90 ವಿದ್ಯಾರ್ಥಿಗಳು ಮತ್ತು 13 ಮಂದಿ ಶಿಕ್ಷಕರು ಇದ್ದರು. ಒಂದು ವೇಳೆ ಶಾಲೆಯ ಸಮೀಪದಲ್ಲೇ ಈ ದುರಂತ ಸಂಭವಿಸಿದ್ದರೆ ಆಗಬಹುದಾಗಿದ್ದ ಹಾನಿಯನ್ನು ಊಹಿಸುವುದೂ ಕಷ್ಟವಾಗುತ್ತಿತ್ತು.`ಭಾರಿ ಶಬ್ದ ಕೇಳಿಸಿದ ಬೆನ್ನಲ್ಲೇ ಬೆಂಕಿಯ ಉಂಡೆ ನಮಗೆ ಕಾಣಿಸಿತು. ದಟ್ಟ ಹೊಗೆಯೂ ಮೇಲೇಳುತ್ತಿತ್ತು. ನಾವೆಲ್ಲ ಒಂದೂವರೆ ಕಿ.ಮೀ. ದೂರ ಓಡಿದೆವು. ಪೊಲೀಸರು ಹೇಳಿದ ನಂತರ ಮಧ್ಯಾಹ್ನ 2.30ರ ಹೊತ್ತಿಗಷ್ಟೇ ನಾವೆಲ್ಲ ಶಾಲೆಗೆ ಮರಳಿದೆವು' ಎಂದು ಶಾಲೆಯ ಮುಖ್ಯೋಪಾಧ್ಯಾಯ ಐತಪ್ಪ ಶೇಣವ ಬುಧವಾರ ಸ್ಥಳಕ್ಕೆ ಭೇಟಿ ನೀಡಿದ `ಪ್ರಜಾವಾಣಿ'ಗೆ ತಿಳಿಸಿದರು.ಭಯಾನಕ ವಿಡಿಯೊ ದೃಶ್ಯ: ಟ್ಯಾಂಕರ್ ಸಮೀಪ ಇದ್ದ ಆಮ್ನಿಯ ಚಾಲಕ ವಸಂತ ಅವರು ಬೆಂಕಿಯಿಂದ ಪಾರಾಗಿ ಹೊರಬಂದ ದೃಶ್ಯವನ್ನು ಕೆಲವು ವ್ಯಕ್ತಿಗಳು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದರು. ಬುಧವಾರ ಹಲವರ ಮೊಬೈಲ್‌ಗಳಿಗೆ ಈ ದೃಶ್ಯ ಹರಿದಾಡಿತ್ತು. ಆದರೆ ಈ ದೃಶ್ಯ ಅತ್ಯಂತ ಭಯಾನಕವಾಗಿತ್ತು.ಬೆಂಕಿಯಲ್ಲಿ ಬೆಂದಿದ್ದ ಅವರು ಸುತ್ತಮುತ್ತ ಇದ್ದವರಲ್ಲಿ ನೀರು ಬೇಡುತ್ತಿದ್ದುದು ಮತ್ತು ತಮ್ಮನ್ನು ಶೀಘ್ರ ಆಸ್ಪತ್ರೆಗೆ ಸೇರಿಸುವಂತೆ ಮೊರೆಯಿಡುತ್ತಿದ್ದ ಶಬ್ದವೆಲ್ಲ ವಿಡಿಯೊದಲ್ಲಿ ಸೆರೆಯಾಗಿದೆ. ಅಲ್ಲೇ ಇದ್ದ ಆಟೊವೊಂದರಲ್ಲಿ ಅವರು ಹತ್ತಿ ಕುಳಿತು ತಮ್ಮನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯುವಂತೆ ಅವರು ಹೇಳಿದ್ದು ಸಹ ದಾಖಲಾಗಿದೆ. ಆದರೆ ಅವರು ಮಂಗಳವಾರ ಸಂಜೆ ಆಸ್ಪತ್ರೆಯಲ್ಲಿ ಅಸುನೀಗಿದ್ದರು. ವಿಶೇಷವೆಂದರೆ ಮೊದಲು ಬೆಂಕಿಯ ಜ್ವಾಲೆಯಿಂದ ಅವರು ತಪ್ಪಿಸಿಕೊಂಡು ಬಂದಿದ್ದರಂತೆ. ಆದರೆ ತಮ್ಮ ಆಮ್ನಿಯನ್ನು ಸುರಕ್ಷಿತ ಸ್ಥಳದಲ್ಲಿ ಇರಿಸಲೆಂದು ಮತ್ತೆ ಹೋದವರನ್ನು ಬೆಂಕಿ ಆಹುತಿ ಪಡೆಯಿತು.ದುರಂತಗಳ ಸರಮಾಲೆ: ಶೋಭಾ ರೈ ಅವರು ತಮ್ಮ ಮನೆಯ ಮುಂಭಾಗ ಬಟ್ಟೆ ಒಗೆಯುತ್ತಿದ್ದರು. ಅಲ್ಲೇ ಸಮೀಪ ಟ್ಯಾಂಕರ್ ಮಗುಚಿಬಿದ್ದು ಬೆಂಕಿಯ ಕೆನ್ನಾಲಗೆ ಹಬ್ಬಿ ಅವರು ಸ್ಥಳದಲ್ಲೇ ಸುಟ್ಟು ಕರಕಲಾದರು. ಅವರ ಪತಿ ಸುಂದರ ರೈ ವೃತ್ತಿಯಲ್ಲಿ ಕಂಡಕ್ಟರ್. ಸಮೀಪದ ಬಸ್ ನಿಲ್ದಾಣದಲ್ಲಿ ಅವರು ಬಸ್‌ಗಾಗಿ ಕಾಯುತ್ತಿದ್ದಾಗ ಈ ದುರಂತ ಸಂಭವಿಸಿತ್ತು. `ನನ್ನ ಕುಟುಂಬಕ್ಕೂ ದುರಂತಕ್ಕೂ ಬಹಳ ಸಂಬಂಧ ಇದ್ದಂತಿದೆ, 1998ರಲ್ಲಿ ನನ್ನ ಮದುವೆಯ ದಿನವೇ ಉಪ್ಪಿನಂಗಡಿಯಲ್ಲಿ ಎಲ್‌ಪಿಜಿ ಟ್ಯಾಂಕರ್ ಕಾರಿಗೆ ಡಿಕ್ಕಿ ಹೊಡೆದುದಿಂದ ನನ್ನ ಅಮ್ಮ ಸಹಿತ ಆರು ಮಂದಿ ಕುಟುಂಬದ ಸದಸ್ಯರು ಸತ್ತಿದ್ದರು. ಇಂದು ಅದೇ ಎಲ್‌ಪಿಜಿ ಟ್ಯಾಂಕರ್‌ಗೆ ನನ್ನ ಪತ್ನಿಯೂ ಬಲಿಯಾದಳು' ಎಂದು ಅವರು ಹೇಳಿದಾಗ ಮುಖದಲ್ಲಿ ದುಃಖ ಮಡುಗಟ್ಟಿತ್ತು.ದುರಂತದಲ್ಲಿ ಸತ್ತ ಖತೀಜಮ್ಮಳಿಗೆ ಐವರು ಮಕ್ಕಳು. ಅವರಲ್ಲಿ ನಾಲ್ವರು ಪುತ್ರಿಯರು ಮತ್ತು ಒಬ್ಬ ಪುತ್ರ. ಅವರೆಲ್ಲ ಶಾಲೆಗೆ ಹೋಗಿದ್ದರಿಂದ ಎಲ್ಲರೂ ಬದುಕುಳಿದರು. ಆರು ವರ್ಷದ ಹಿಂದೆ ಮನೆ ಬಿಟ್ಟು ಹೋದ ಅವರ ಪತಿ ಮತ್ತೆ ಮನೆಗೆ ಮರಳಿಲ್ಲ. ಮನೆಯ ಬಾಡಿಗೆ ಕೊಡುವುದಕ್ಕೂ ಅವರಿಗೆ ಗತಿ ಇಲ್ಲ. ಇದೀಗ ಐವರು ಮಕ್ಕಳು  ಅಮ್ಮನನ್ನು ಕಳೆದುಕೊಂಡು ತಬ್ಬಲಿಗಳಾಗಿದ್ದಾರೆ.`ಎಚ್‌ಪಿಸಿಎಲ್ ವಿರುದ್ಧ ಕಾನೂನು ಕ್ರಮ'

ಮಂಗಳೂರು: ಉಪ್ಪಿನಂಗಡಿಯ ಪೆರ್ನೆಯಲ್ಲಿ ಮಂಗಳವಾರ ಸಂಭವಿಸಿದ ಅನಿಲ ಟ್ಯಾಂಕರ್ ಅಗ್ನಿ ದುರಂತಕ್ಕೆ ಸಂಬಂಧಿಸಿ ಹಿಂದೂಸ್ತಾನ್ ಪೆಟ್ರೋಲಿಯಂ (ಎಚ್‌ಪಿಸಿಎಲ್) ಕಂಪೆನಿ ಅಧಿಕಾರಿ ನೀಡಿದ ಪ್ರತಿಕ್ರಿಯೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ ಹರ್ಷ ಗುಪ್ತ, `ದುರ್ಘಟನೆಯ ನಂತರ ಸರ್ಕಾರಿ ಸಂಸ್ಥೆಯಾದ ಎಚ್‌ಪಿಸಿಎಲ್ ಕಂಪೆನಿ ಸ್ಪಂದಿಸಿದ ರೀತಿ ದುರದೃಷ್ಟಕರ' ಎಂದು ಬುಧವಾರ ನಡೆದ ಸಭೆಯಲ್ಲಿ ಕಟುವಾಗಿ ಟೀಕಿಸಿದ್ದಾರೆ.

`ಎಚ್‌ಪಿಸಿಎಲ್ ಕಂಪೆನಿಯನ್ನು ಈ ಘಟನೆಯಲ್ಲಿ ಆರೋಪಿಗಳನ್ನಾಗಿ ಮಾಡಲು ಜಿಲ್ಲಾಡಳಿತ ಹಿಂಜರಿಯುವುದಿಲ್ಲ. ಮುಗ್ಧ ಜನರ ಜೀವನದ ಜೊತೆ ಕಂಪೆನಿ ಆಟವಾಡಿದೆ. ಇವರ ವಿರುದ್ಧ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಲಿದೆ' ಎಂದು ಖಾರವಾಗಿಯೇ ತಿಳಿಸಿದರು.

ಉಪ್ಪಿನಂಗಡಿಯಲ್ಲಿ ಇನ್ನೊಂದು ಅಗ್ನಿಶಾಮಕ ಠಾಣೆ ಸ್ಥಾಪಿಸಲು ಅವರು ಸೂಚನೆ ನೀಡಿದರು.

ಪ್ರತಿಕ್ರಿಯಿಸಿ (+)