ಪೆವಿಲಿಯನ್ ನೆನಪಿನಲ್ಲಿ ತೇಲಿದ `ಮೈಸೂರು ಎಕ್ಸ್‌ಪ್ರೆಸ್'

7
ಕ್ರೀಡಾ ನೀತಿ ಕೈಪಿಡಿ ಬಿಡುಗಡೆ

ಪೆವಿಲಿಯನ್ ನೆನಪಿನಲ್ಲಿ ತೇಲಿದ `ಮೈಸೂರು ಎಕ್ಸ್‌ಪ್ರೆಸ್'

Published:
Updated:

ಮೈಸೂರು: `ಈ ಮೈದಾನಕ್ಕೂ ನನಗೂ ಅದೇನೋ ಒಂಥರಾ ಮರೆಯಲಾಗದ ನಂಟು. ನನ್ನ ಕಾಲೇಜು ದಿನಗಳಲ್ಲಿ ಇಲ್ಲಿ ಕಳೆದ ಒಂದೊಂದು ಕ್ಷಣ ಇವತ್ತಿಗೂ ಮರೆತಿಲ್ಲ. ಬಿಪಿಎಡ್ ಹುಡುಗರ ಹಾಸ್ಟೆಲ್‌ಗಳಲ್ಲಿ ಯಾವ ರೂಮು ಹೇಗಿರುತ್ತದೆ ಎಂದು ನೋಡಿದ್ದೇನೆ. ಕಿಟಕಿಯಿಂದ ಏನೇನು ಹೊರಗೆ ಎಸೆಯುತ್ತೀರಿ, ಕೋಣೆಗಳು ಎಷ್ಟು ಸ್ವಚ್ಛವಾಗಿರುತ್ತವೆ ಅನ್ನೋದು ಗೊತ್ತು..'ಪೆವಿಲಿಯನ್ ಸ್ಪೋರ್ಟ್ಸ್ ಮೈದಾನದಲ್ಲಿ ಗುರುವಾರ ಸಂಜೆ, ತಮ್ಮ ಕಾಲೇಜು ದಿನಗಳ ನೆನಪುಗಳತ್ತ ಜಾರಿದ ಅಂತರರಾಷ್ಟ್ರೀಯ ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ಮಾತುಗಳಿಗೆ ದೈಹಿಕ ಶಿಕ್ಷಣ ಸ್ನಾತಕೋತ್ತರ ವಿದ್ಯಾರ್ಥಿಗಳ ಸಮೂಹದಲ್ಲಿ ನಗೆಯ ಹೊನಲು ಹರಿದಿತ್ತು. ಮೈಸೂರು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ಕ್ರೀಡಾ ನೀತಿ ಕೈಪಿಡಿಯನ್ನು ಬಿಡುಗಡೆ ಮಾಡಿದ ಅವರು, ಮಹಾರಾಜ ಕಾಲೇಜು ಮೈದಾನದಲ್ಲಿ ಆಡಿದ್ದನ್ನು, ದೈಹಿಕ ಶಿಕ್ಷಣ ವಿಭಾಗದ ಪಕ್ಕದ ನೆಟ್ಸ್‌ನಲ್ಲಿ ಅಭ್ಯಾಸ ಮಾಡಿದ ದಿನಗಳ ನೆನಪುಗಳನ್ನು ಮೆಲುಕು ಹಾಕಿದರು.`ಮೈಸೂರೆಂದರೆ ತುಂಬಾ ಇಷ್ಟ. ಅದರಲ್ಲೂ ಈ ಜಾಗ (ಪೆವಿಲಿಯನ್) ಬಹಳ ಹಿತ ನೀಡುವ ಸ್ಥಳ. ಇನ್ನು ಕೆಲವು ದಿನ ಬೆಂಗಳೂರಿನಲ್ಲಿರುತ್ತೇನೆ. ನಂತರ ಮೈಸೂರಿಗೆ ಬಂದು ಇದ್ದು ಬಿಡುತ್ತೇನೆ' ಎಂದರು.`2020ರ ವೇಳೆಗೆ ಭಾರತವು ಕ್ರೀಡೆಯಲ್ಲಿ ವಿಶೇಷ ಸಾಧನೆ ಮಾಡಲಿದ್ದು, ಕ್ರೀಡೆಯೂ ಈ ದೇಶದಲ್ಲಿ ವೃತ್ತಿಪರ ಹಾಗೂ ದೊಡ್ಡ ಉದ್ಯಮವಾಗಿ ಬೆಳೆಯುತ್ತದೆ. ನಮ್ಮಲ್ಲಿ ಮೊದಲಿನಿಂದಲೂ ಕ್ರೀಡಾ ಸಂಸ್ಕೃತಿ ಇಲ್ಲ. ಅದೇ ಬೇರೆ ದೇಶಗಳಲ್ಲಿ ಕ್ರೀಡೆಯು ಅಲ್ಲಿಯ ಜನರ ಜೀವನಶೈಲಿಯಾಗಿದೆ. ಅಂತಹ ಸಂಸ್ಕೃತಿ ನಮ್ಮಲ್ಲಿಯೂ ಬೆಳೆಯಬೇಕು. ಇನ್ನು ಕೆಲವೇ ವರ್ಷಗಳಲ್ಲಿ ಅಂತಹ ಒಂದು ಜಾಗೃತಿ ಬೆಳೆಯುವ ನಿರೀಕ್ಷೆ ಇದೆ. ಆದ್ದರಿಂದ ದೈಹಿಕ ಶಿಕ್ಷಣದ ವಿದ್ಯಾರ್ಥಿಗಳು ನಿಮ್ಮ ವೃತ್ತಿಯನ್ನು ಗಂಭೀರವಾಗಿ ಮತ್ತು ಪ್ರೀತಿಯಿಂದ ನಿರ್ವಹಿಸಬೇಕು' ಎಂದು ಆಶಯ ವ್ಯಕ್ತಪಡಿಸಿದರು.`ಪದವಿ, ಸ್ನಾತಕೋತ್ತರ ಪದವಿ ಗಳಿಸಿ, ಉದ್ಯೋಗ ಪಡೆಯುವುದು ಮಾತ್ರ ಗುರಿಯಾಗಬಾರದು. ಅದರ ನಂತರವೇ ನಿಜವಾದ ವೃತ್ತಿಪರತೆ ಮತ್ತು ಆಸಕ್ತಿ ಬೆಳೆಯ ಬೇಕು. ಒಬ್ಬ ಅಂತರರಾಷ್ಟ್ರೀಯ ಅಥ್ಲೀಟ್ ಅಥವಾ ಒಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆಲ್ಲುವ ಕ್ರೀಡಾ ತಂಡವನ್ನು ರೂಪಿಸುವುದು ತರಬೇತುದಾರರು ಅಥವಾ ದೈಹಿಕ ಶಿಕ್ಷಕರ ಗುರಿಯಾಗಬೇಕು' ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ. ವಿ.ಜೆ. ತಳವಾರ್, `ಸೌಲಭ್ಯಗಳನ್ನು ಕೊಡುವುದು ದೊಡ್ಡ ಮಾತಲ್ಲ. ಆದರೆ ಅವುಗಳ ಸರಿಯಾದ ಉಪಯೋಗ ಮಾಡಿಕೊಳ್ಳುವುದು ವಿದ್ಯಾರ್ಥಿಗಳ ಕರ್ತವ್ಯ. ಈ ದೇಶದಲ್ಲಿ ಮೈದಾನಗಳ ಸಂಖ್ಯೆ ಕಡಿಮೆಯಾಗುತ್ತ, ಆಸ್ಪತ್ರೆಗಳ ಸಂಖ್ಯೆಯು ಹೆಚ್ಚುತ್ತಿದೆ. ಆದರೆ ಮೈದಾನಗಳು ಹೆಚ್ಚಾಗಿ  ಕ್ರೀಡೆ ಬೆಳೆದರೆ ಆಸ್ಪತ್ರೆಗಳ ಸಂಖ್ಯೆ ಕಡಿಮೆಯಾಗಿ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ ಎಂದು ಹಿಂದೊಮ್ಮೆ ವೈದ್ಯನಾಥನ್ ಅವರು ಹೇಳಿದ ಒಂದು ಮಾತು ಇಲ್ಲಿ ಪ್ರಸ್ತುತವಾಗುತ್ತದೆ. ಒಳ್ಳೆಯ ಕಾರ್ಯಗಳನ್ನು ಮಾಡುವ ಅವಕಾಶ ಸಿಕ್ಕಾಗ ಸಮಾಜಕ್ಕೆ ಮತ್ತು ಸಂಸ್ಥೆಗೆ ಉಪಯೋಗವಾಗುವಂತಹ ಕಾರ್ಯ ಮಾಡಬೇಕು. ಅದರಿಂದ ಹಲವರಿಗೆ ಉಪಯೋಗವಾಗುತ್ತದೆ' ಎಂದು ಹೇಳಿದರು.ಕೈಪಿಡಿಯ ರಚನೆಯಲ್ಲಿ ಕಾರ್ಯ ನಿರ್ವಹಿಸಿದ ವಿಶ್ರಾಂತ ದೈಹಿಕ ಶಿಕ್ಷಣ ನಿರ್ದೇಶಕ ಪ್ರೊ. ಶೇಷಣ್ಣ, ಪ್ರೊ. ತಿರುಮಲೈ ಗೋಪಾಲನ್, ವಿವಿ ಮುದ್ರಣಾಲಯದ ನಿರ್ದೇಶಕ ಆನಂದ್, ಪಿಎಚ್.ಡಿ. ಗಳಿಸಿದ ವಾಲಿಬಾಲ್ ತರಬೇತುದಾರ ಡಾ. ಸುರೇಶ್ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ. ಸಿ. ಕೃಷ್ಣ, ಕುಲಸಚಿವ ಪ್ರೊ. ಪಿ.ಎಸ್. ನಾಯಕ್ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry