ಪೆಶಾವರ: ಉಗ್ರರ ದಾಳಿಗೆ 10 ಬಲಿ

7

ಪೆಶಾವರ: ಉಗ್ರರ ದಾಳಿಗೆ 10 ಬಲಿ

Published:
Updated:

ಇಸ್ಲಾಮಾಬಾದ್ (ಐಎಎನ್‌ಎಸ್): ಪೆಶಾವರದ ಬಾಚಾಖಾನ್ ವಿಮಾನ ನಿಲ್ದಾಣದ ಮೇಲೆ ತಾಲಿಬಾನ್ ಉಗ್ರರು ಶನಿವಾರ ರಾತ್ರಿ ನಡೆಸಿದ ದಾಳಿಯಲ್ಲಿ ಕನಿಷ್ಠ ಹತ್ತು ಜನ ಮೃತಪಟ್ಟಿದ್ದಾರೆ.ರಾತ್ರಿ 8-30ರ ಹೊತ್ತಿಗೆ ಸ್ಫೋಟಕ ತುಂಬಿದ್ದ ಎರಡು ವಾಹನಗಳನ್ನು ವಿಮಾನ ನಿಲ್ದಾಣದೊಳಗೆ ನುಗ್ಗಿಸಿದ್ದು, ನಂತರ ನಾಲ್ಕು ರಾಕೆಟ್‌ಗಳಿಂದ ದಾಳಿ ನಡೆಸಲಾಯಿತು. ಇವುಗಳಲ್ಲಿ ಕೆಲವು ಅಲ್ಲಿಯ ಗೋಡೆಗಳಿಗೆ ಅಪ್ಪಳಿಸಿದಾಗ ಸ್ಫೋಟಗೊಂಡಿವೆ. ಎರಡು ರಾಕೆಟ್‌ಗಳು ರನ್‌ವೇಗೆ ಅಪ್ಪಳಿಸಿದಾಗ  ನಾಲ್ವರು ಮೃತಪಟ್ಟು 40 ಜನ ಗಾಯಗೊಂಡರು ಎಂದು ವರದಿಯಾಗಿದೆ.ದಾಳಿಯಿಂದಾಗಿ ಎಲ್ಲ ಅಂತರರಾಷ್ಟ್ರೀಯ ಹಾಗೂ ದೇಶಿಯ ವಿಮಾನಯಾನ ಸಂಚಾರವನ್ನು ರದ್ದುಗೊಳಿಸಲಾಯಿತು. ಇತ್ತೀಚೆಗೆ ಈ ಭಾಗದಲ್ಲಿ ನಡೆಸಲಾದ ಮಿಲಿಟರಿ ಕಾರ‌್ಯಾಚರಣೆಗೆ ಪ್ರತಿಯಾಗಿ ಈ ದಾಳಿ ನಡೆಸಲಾಗಿದೆ ಎಂದು ಸೇನೆ ತಿಳಿಸಿದೆ. ಆದರೆ ದಾಳಿಯಲ್ಲಿ ತಮ್ಮ ಆಸ್ತಿಪಾಸ್ತಿಗೆ ಧಕ್ಕೆಯಾಗಿಲ್ಲ ಎಂದು ವಿಮಾನ ನಿಲ್ದಾಣ ಅಧಿಕಾರಿಗಳು ತಿಳಿಸಿದ್ದಾರೆ. ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಹಾಗೂ ಪ್ರಧಾನಿ ರಜಾ ಪರ್ವೇಜ್ ಅಷ್ರಫ್ ದಾಳಿಯನ್ನು ಖಂಡಿಸಿದ್ದಾರೆ.ಐವರು ಉಗ್ರರ ಹತ್ಯೆ

ವಿಮಾನ ನಿಲ್ದಾಣ ಬಳಿ ಅಡಗಿಕೊಂಡಿದ್ದ ಭಯೋತ್ಪಾದಕರ ವಿರುದ್ಧ ಭಾನುವಾರ ಕಾರ್ಯಾಚರಣೆ ನಡೆಸಲಾಗಿದ್ದು, ಐವರು ತಾಲಿಬಾನ್ ಉಗ್ರರು ಹಾಗೂ ಒಬ್ಬ ಪೊಲೀಸ್ ಕಾನ್‌ಸ್ಟೇಬಲ್ ಮೃತಪಟ್ಟಿದ್ದಾರೆ.

ಈ ನಡುವೆ ದಾಳಿಯನ್ನು ತಾನೇ ನಡೆಸಿರುವುದಾಗಿ ಪಾಕ್ ಮೂಲದ ತೆಹ್ರೀಕ್- ಎ- ತಾಲಿಬಾನ್ ಹೊಣೆ ಹೊತ್ತುಕೊಂಡಿದೆ. `ದಾಳಿ ಹೊಣೆ ನಾವೇ ಹೊರುತ್ತಿದ್ದು, ಪೆಶಾವರದ ವಿಮಾನ ನಿಲ್ದಾಣವೇ ನಮ್ಮ ಗುರಿಯಾಗಿತ್ತು' ಎಂದು ತಾಲಿಬಾನ್ ವಕ್ತಾರ ಎಷಾನುಲ್ಲಾ ಎಹ್ಸಾನ್ ದೂರವಾಣಿ ಕರೆ ಮಾಡಿ ತಿಳಿಸಿದ್ದಾಗಿ ಜಿಯೊ ಸುದ್ದಿ ಸಂಸ್ಥೆ ತಿಳಿಸಿದೆ.ಭಾನುವಾರ ಬೆಳಿಗ್ಗೆ ಕನಿಷ್ಠ 7 ಜನ ಉಗ್ರರು ಸಮೀಪದ ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ಅಡಗಿಕೊಂಡಿದ್ದರು. ಈ ಕಟ್ಟಡ ಮಾಜಿ ಸಚಿವ ಕಾಶಿಫ್ ಖಾನ್ ನಿವಾಸದ ಬಳಿ ಇದೆ ಎಂದು ಸೇನೆ ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry