ಪೇಚಿಗೆ ಸಿಲುಕಿದ ಬೆಂಗಳೂರು ವಿವಿ

7
ಬಿ.ಇಡಿ ಪ್ರಶ್ನೆಪತ್ರಿಕೆಗಳ ಮೌಲ್ಯಮಾಪನ ಪ್ರಕ್ರಿಯೆ

ಪೇಚಿಗೆ ಸಿಲುಕಿದ ಬೆಂಗಳೂರು ವಿವಿ

Published:
Updated:

ಬೆಂಗಳೂರು: ಮೌಲ್ಯಮಾಪನ ಪ್ರಕ್ರಿಯೆಯನ್ನು ಬಹಿಷ್ಕರಿಸುವಂತೆ ಬಿ.ಇಡಿ ಕಾಲೇಜಿನ ಆಡಳಿತ ಮಂಡಳಿಗಳು ಉಪನ್ಯಾಸಕರಿಗೆ ಒತ್ತಡ ಹೇರಿದ ಹಿನ್ನೆಲೆಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಬಿ.ಇಡಿ ಕೋರ್ಸ್‌ನ ಪ್ರಶ್ನೆಪತ್ರಿಕೆಗಳ ಮೌಲ್ಯಮಾಪನ ಪ್ರಕ್ರಿಯೆ ಮತ್ತೆ ಸಮಸ್ಯೆಗೆ ಸಿಲುಕಿದೆ. ಇದೇ ಡಿಸೆಂಬರ್ 4ರಿಂದ ಬಿ.ಇಡಿ ಕೋರ್ಸ್‌ಗಳ ದ್ವಿತೀಯ ಸೆಮಿಸ್ಟರ್ ಪರೀಕ್ಷೆಯ ಮೌಲ್ಯಮಾಪನ ಪ್ರಕ್ರಿಯೆಯನ್ನು ಆರಂಭಿಸಬೇಕಿತ್ತು. ಆದರೆ, ಬಹುತೇಕ ಬಿ.ಇಡಿ ಕಾಲೇಜಿನ ಆಡಳಿತ ಮಂಡಳಿಗಳು ಉಪನ್ಯಾಸಕರಿಗೆ ಮೌಲ್ಯಮಾಪನ ಕೇಂದ್ರದಿಂದ ಹೊರಗುಳಿಯಬೇಕೆಂದು ಒತ್ತಡ ಹೇರಿರುವ ವಿಚಾರ ಬಹಿರಂಗಗೊಂಡಿದೆ. ಇದರಿಂದಾಗಿ ನಿಗದಿತ ಕಾಲದಲ್ಲಿ ಪ್ರಕ್ರಿಯೆ ಆರಂಭಗೊಂಡಿಲ್ಲ.  ಈ ಬಗ್ಗೆ `ಪ್ರಜಾವಾಣಿ'ಯೊಂದಿಗೆ ಮಾತನಾಡಿದ ಹಂಗಾಮಿ ಕುಲಪತಿ ಡಾ.ಎನ್.ರಂಗಸ್ವಾಮಿ, `ಮೂಲಸೌಕರ್ಯದ ಕೊರತೆಯ ಕಾರಣದಿಂದ ವಿವಿ ಮಾನ್ಯತೆ ಪಡೆಯಲು ವಿಫಲವಾಗಿರುವ ಬಿ.ಇಡಿ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರು ಮಾತ್ರ ಮೌಲ್ಯಮಾಪನ ಪ್ರಕ್ರಿಯೆಗೆ ತಡೆ ಒಡ್ಡುತ್ತಿದ್ದಾರೆ. 2012-13ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಸುಮಾರು 100ಕ್ಕಿಂತ ಹೆಚ್ಚು ಬಿ.ಇಡಿ ಕಾಲೇಜುಗಳು ಮಾನ್ಯತೆಗಾಗಿ ಅರ್ಜಿ ಸಲ್ಲಿಸಿದ್ದವು. ಆದರೆ, ಸಮರ್ಪಕ ಮೂಲಸೌಕರ್ಯಗಳು ಇಲ್ಲದೇ ಇರುವುದರಿಂದ ಅಧಿಕ ಪ್ರಮಾಣದಲ್ಲಿ ಕಾಲೇಜುಗಳು ಮಾನ್ಯತೆ ಪಡೆದಿಲ್ಲ' ಎಂದು ಸ್ಪಷ್ಟನೆ ನೀಡಿದರು.`ಇಂತಹ ಬೆದರಿಕೆಗೆ ಯಾವುದೇ ರೀತಿಯಲ್ಲೂ ವಿ.ವಿ ಮಣಿಯುವುದಿಲ್ಲ. ಬಿ.ಇಡಿ ಕಾರ್ಯಪಡೆಯ ವರದಿಯ ಪ್ರಕಾರ ಕನಿಷ್ಠ ಸೌಲಭ್ಯವನ್ನು ಹೊಂದದೇ ಇರುವ ಕಾಲೇಜುಗಳ ಮಾನ್ಯತೆಯನ್ನು ರದ್ದುಪಡಿಸಲಾಗಿದೆ. ಅಲ್ಲದೇ ನಿಗದಿತ ಸಮಯದೊಳಗೆ ಮೌಲ್ಯಮಾಪನ ಪ್ರಕ್ರಿಯೆ ಪೂರ್ಣಗೊಳಿಸುವ ಬಗ್ಗೆ ನಿರ್ದೇಶನ ನೀಡಲಾಗಿದೆ. ಅಗತ್ಯ ಬಿದ್ದರೆ ಪೊಲೀಸ್ ಸಹಕಾರದೊಂದಿಗೆ ಮೌಲ್ಯಮಾಪನ ಪ್ರಕ್ರಿಯೆಯನ್ನು ಆರಂಭಿಸಲಾಗುವುದು' ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry