ಸೋಮವಾರ, ಮಾರ್ಚ್ 1, 2021
28 °C

ಪೇಜಾವರರ ಪರ್ಯಾಯಕ್ಕೆ ಕಳೆಗಟ್ಟಿದ ಉಡುಪಿ ನಗರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪೇಜಾವರರ ಪರ್ಯಾಯಕ್ಕೆ ಕಳೆಗಟ್ಟಿದ ಉಡುಪಿ ನಗರ

ಉಡುಪಿ: ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಅವರ ಪಂಚಮ ಪರ್ಯಾಯಕ್ಕೆ ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿದ್ದು ಉಡುಪಿ ನಗರ ಕಳೆಗಟ್ಟಿದೆ. ಶನಿವಾರ ಹಾಗೂ ಭಾನುವಾರ ನಡೆಯುವ ಧಾರ್ಮಿಕ,   ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಾವಿರು ಜನರು ಭಾಗವಹಿಸುವ ನಿರೀಕ್ಷೆ ಇದೆ.ನಗರದ ಜೋಡುಗಟ್ಟೆಯಿಂದ ಭಾನುವಾರ ಮಧ್ಯರಾತ್ರಿ ನಡೆಯುವ ಪರ್ಯಾಯ ಮೆರವಣಿಗೆಯನ್ನು ಅದ್ದೂರಿಯಾಗಿ ನಡೆಸಲು ಯೋಜನೆ ರೂಪಿಸಲಾಗಿದೆ. ಶ್ರೀ ವಾದಿರಾಜತೀರ್ಥರು, ಶೇಷಶಯನ ಮಹಾವಿಷ್ಣು ಸೇರಿದಂತೆ ಹತ್ತು ಸ್ತಬ್ಧಚಿತ್ರಗಳು, ಮಹಾರಾಷ್ಟ್ರ, ಪಂಜಾಬ್‌, ಗುಜರಾತ್‌, ಕೇರಳ ಸೇರಿದಂತೆ 12 ಅನ್ಯರಾಜ್ಯಗಳ ಕಲಾತಂಡಗಳು. ಮಹಿಳಾ ವೀರಗಾಸೆ, ಕೊಂಬು– ಕಹಳೆ, ಡೊಳ್ಳು ಕುಣಿತ, ಕಂಗೀಲು ನೃತ್ಯವೂ ಒಳಗೊಂಡಂತೆ ರಾಜ್ಯದ 25 ಜನಪದ ತಂಡಗಳು, ಬ್ಯಾಂಡ್‌ಸೆಟ್‌ಗಳು, ಕರಾವಳಿಯ ಹುಲಿವೇಷ ತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ. ಇದರ ಜತೆಗೆ ಶ್ರಿಕೃಷ್ಣ ಮಠದ ಸಾಂಪ್ರದಾಯಿಕ ಬ್ಯಾಂಡ್‌ಸೆಟ್‌, ವೇದಘೋಷ, ನಾಗಸ್ವರ ವಾದ್ಯವೂ ಇರಲಿದೆ.ಮೆರವಣಿಗೆಯ ಮೂಲಕ ರಥಬೀದಿಗೆ ತೆರಳುವ ವಿಶ್ವೇಶತೀರ್ಥ ಸ್ವಾಮೀಜಿ ಅವರು ಕನಕನ ಕಿಂಡಿಯ ಮೂಲಕ ಶ್ರೀಕೃಷ್ಣನ ದರ್ಶನ ಪಡೆದು ಪೀಠಾರೋಹಣ ಮಾಡುವರು. ಸ್ವಾಮೀಜಿ ಅವರು ನಡೆಸುವ ಪರ್ಯಾಯ ದರ್ಬಾರ್‌ನಲ್ಲಿ ಆಂಧ್ರಪ್ರದೇಶ, ರಾಜಸ್ತಾನ, ಮಹಾರಾಷ್ಟ್ರದ ಮುಖ್ಯಮಂತ್ರಿಗಳು, ಕೇಂದ್ರ ಹಾಗೂ ರಾಜ್ಯದ ಮಂತ್ರಿಗಳು ಸೇರಿ ಸುಮಾರು 42 ಮಂದಿ ಅತಿ ಗಣ್ಯ ವ್ಯಕ್ತಿಗಳು ಭಾಗವಹಿಸುವ ನಿರೀಕ್ಷೆ ಇದೆ. ಈ ವರೆಗೆ ಕೃಷ್ಣ ಮಠದ ರಾಜಾಂಗಣದಲ್ಲಿ ದರ್ಬಾರ್‌ ನಡೆಸಲಾಗುತ್ತಿತ್ತು. ಆದರೆ ಈ ಬಾರಿ ಭಾರಿ ಸಂಖ್ಯೆಯಲ್ಲಿ ಜನರು ಪಾಳ್ಗೊಳ್ಳುವ ಸೂಚನೆ ಅರಿತು ರಾಜಾಂಗಣದ ಪಾರ್ಕಿಂಗ್‌ ಪ್ರದೇಶದಲ್ಲಿ ವಿಶಾಲವಾದ ವೇದಿಕೆ (ಆನಂದತೀರ್ಥ ಮಂಟಪ) ನಿರ್ಮಾಣ ಮಾಡಲಾಗಿದೆ. 8,000 ಜನರು ಕುಳಿತು ಪರ್ಯಾಯ ದರ್ಬಾರ್‌ ವೀಕ್ಷಿಸಬಹುದಾಗಿದೆ.ಬಿಗಿ ಪೊಲೀಸ್‌ ಬಂದೋಬಸ್ತ್‌: ಇಬ್ಬರು ಎಸ್ಪಿಗಳ ಮಾರ್ಗದರ್ಶನದಲ್ಲಿ ಸುಮಾರು 1,500 ಸಿವಿಲ್‌ ಪೊಲೀಸ್‌, ರಾಜ್ಯ ಮೀಸಲು ಪಡೆ, ನಗರ ಸಶಸ್ತ್ರ ಮೀಸಲು ಪಡೆ, ಗೃಹರಕ್ಷಕ ಸಿಬ್ಬಂದಿ ಭದ್ರತೆಗೆ ನಿಯೋಜಿಸಲಾಗುತ್ತಿದೆ. ಜಿಲ್ಲೆಯ ನಿವೃತ್ತ ಪೊಲೀಸ್‌ ಅಧಿಕಾರಿಗಳ ಸಂಘದ ಸದಸ್ಯರು ಸ್ವಯಂ ಪ್ರೇರಿತರಾಗಿ ಭದ್ರತಾ ಕೆಲಸದಲ್ಲಿ ತೊಡಗುವರು.ಅಂದಗೊಂಡ ನಗರ: ಉಡುಪಿ ನಗರವನ್ನು ಸ್ವಚ್ಛಗೊಳಿಸಲಾಗಿದೆ. ಅಂಗಡಿ ಮುಂಗಟ್ಟುಗಳು, ಖಾಸಗಿ ಸಂಸ್ಥೆಗಳು, ಬ್ಯಾಂಕ್‌, ವಿಮಾ ಕಚೇರಿಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸುವುದರಿಂದ ನಗರಕ್ಕೆ ಜೀವ ಕಳೆ ಬಂದಿದೆ. ಶುಭಾಶಯ ಕೋರುವ ಫ್ಲೆಕ್ಸ್‌ಗಳನ್ನು ಎಲ್ಲೆಡೆ ಅಳವಡಿಸಲಾಗಿದೆ. ರಥಬೀದಿಯನ್ನು ರಂಗೋಲಿಯಿಂದ ಸಿಂಗರಿಸಲಾಗಿದೆ.

ಲಕ್ಷ ಜನರಿಗೆ  ಅನ್ನ ಸಂತರ್ಪಣೆ

ಪರ್ಯಾಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪೀಠ ಏರುವ ಮುನ್ನಾ ದಿನ ಅಂದರೆ ಜನವರಿ 17ರ ರಾತ್ರಿ ಮಹಾ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ. ಒಂದು ಲಕ್ಷ ಜನರಿಗೆ ಊಟದ ವ್ಯವಸ್ಥೆ ಮಾಡಲಾಗುತ್ತಿದೆ. ಸ್ವ ಸಹಾಯ ಪದ್ಧತಿಯಲ್ಲಿ ಜನರು ಊಟ ಮಾಡಬಹುದು. 500 ಮಂದಿ ಸ್ವಯಂ ಸೇವಕರು ಊಟದ ವ್ಯವಸ್ಥೆ ನೋಡಿಕೊಳ್ಳುವರು. ಜನವರಿ 18ರಂದು ಸಹ ಸಾವಿರಾರು ಜನರಿಗೆ ಊಟದ ವ್ಯವಸ್ಥೆ ಇದೆ.

ಭದ್ರತೆಗೆ ಹೆಚ್ಚಿನ ಸಿಬ್ಬಂದಿ ಬೇಕಾಗುತ್ತದೆ. ಅಲ್ಲದೆ ಪರ್ಯಾಯ ಮಹೋತ್ಸವಕ್ಕೆ ನಿವೃತ್ತ ಪೊಲೀಸ್‌ ಸಿಬ್ಬಂದಿಯ ಕಾಣಿಕೆಯೂ ಇರಲಿ ಎಂದು 2 ದಿನ ಕೆಲಸ ಮಾಡಲಿದ್ದೇವೆ.- ಡಾ. ಪ್ರಭುದೇವ ಬಿ ಮಾನೆ, ನಿವೃತ್ತ ಡಿವೈಎಸ್ಪಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.