ಪೇಜಾವರ ಶ್ರೀ ಪ್ರತಿಪಾದನೆ ದೈವದಲ್ಲಿ ಶ್ರದ್ಧೆ ಇಟ್ಟ ದಲಿತ ಶ್ರೇಷ್ಠ.

7

ಪೇಜಾವರ ಶ್ರೀ ಪ್ರತಿಪಾದನೆ ದೈವದಲ್ಲಿ ಶ್ರದ್ಧೆ ಇಟ್ಟ ದಲಿತ ಶ್ರೇಷ್ಠ.

Published:
Updated:

ಬೆಂಗಳೂರು: ‘ಚಾರಿತ್ರ್ಯವಿಲ್ಲದ ಬ್ರಾಹ್ಮಣನಿಗಿಂತ ದೈವದಲ್ಲಿ ಶ್ರದ್ಧೆ ಇಟ್ಟ ದಲಿತನೇ ಶ್ರೇಷ್ಠ. ಆತನೂ ಯಜ್ಞ ಮಾಡಲೂ ಅರ್ಹತೆ ಪಡೆದಿದ್ದಾನೆ’ ಎಂದು ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಪ್ರತಿಪಾದಿಸಿದರು.ತರಳಬಾಳು ಮಠವು ನಗರದ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿರುವ ತರಳಬಾಳು ಹುಣ್ಣಿಮೆ ಮಹೋತ್ಸವದ ಅಂಗವಾಗಿ ಶುಕ್ರವಾರ ನಡೆದ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ‘ಯಾರು ಜೀವನದಲ್ಲಿ ಚಾರಿತ್ರ್ಯವನ್ನು ಪಡೆದಿದ್ದಾರೋ ಅವರು ಭಗವಂತನಿಗೆ ಶ್ರೇಷ್ಠ ಎನಿಸುತ್ತಾರೆಯೇ ಹೊರತು ವರ್ಣಾಶ್ರಮದ ಹಿನ್ನೆಲೆಯಲ್ಲಿ ಶ್ರೇಷ್ಠರೆನಿಸುವುದಿಲ್ಲ’ ಎಂದು ಹೇಳಿದರು.‘ವಿಶ್ವಗುರು ಬಸವಣ್ಣ ಹಾಗೂ ಮಧ್ವಾಚಾರ್ಯರು ಸಮಾನತೆಯ ಬಗ್ಗೆ ಉಲ್ಲೇಖಿಸಿದ್ದಾರೆ. ಧರ್ಮದ ಆಚರಣೆಯ ವಿಧಾನವನ್ನೂ ವ್ಯತ್ಯಾಸವಿಲ್ಲದಂತೆ ಹೇಳಿದ್ದಾರೆ. ಬಸವಣ್ಣನವರು ಕಾಯಕವೇ ಕೈಲಾಸ ಎಂದು ಹೇಳಿದರೆ, ಮಧ್ವಾಚಾರ್ಯರು ಗೀತೆಗೆ ನೀಡಿದ ವ್ಯಾಖ್ಯಾನದಲ್ಲಿ ನೌಕರ, ವ್ಯಾಪಾರಿ, ಕಾರ್ಮಿಕ ಯಾರೇ ಆಗಲಿ ಕಾಯಕದಲ್ಲಿ ನಂಬಿಕೆಯಿಟ್ಟವರು ಸಮಾಜದಲ್ಲಿ ಉನ್ನತಿಯನ್ನು ಕಾಣುತ್ತಾರೆ ಎಂದು ಹೇಳಿದ್ದಾರೆ’ ಎಂದರು.‘ಸೋಹಂ ಎನ್ನದೇ ದಾಸೋಹಂ ಎನ್ನು, ಅಂದರೆ ಗಳಿಸಿದ್ದನ್ನು ತಮ್ಮ ಹಿತಕ್ಕೆ ಮಾತ್ರ ವಿನಿಯೋಗಿಸದೆ ಇತರರಿಗೆ ಹಂಚುವುದರಲ್ಲಿ ಜೀವನದ ಸಾರ್ಥಕತೆ ಇದೆ ಎಂಬುದನ್ನು ಈ ಮಹನೀಯರು ವ್ಯಾಖ್ಯಾನಗಳಲ್ಲಿ ಪ್ರತಿಪಾದಿಸಿದ್ದಾರೆ. ನೀರಿಗೆ ಹೇಗೆ ಬಣ್ಣ ಇಲ್ಲವೋ ಹಾಗೆಯೇ ದೇವರಿಗೂ ಬಣ್ಣ ಇಲ್ಲ. ಆದರೆ ನಾವು ಬಣ್ಣಗಳನ್ನು ಕಲ್ಪಿಸಿಕೊಂಡಿದ್ದೇವೆ. ಹಲವು ದೇವರುಗಳನ್ನು ಸೃಷ್ಟಿಸಿಕೊಂಡಿದ್ದೇವೆ. ನಾಯಿಯು ತನ್ನ ಯಜಮಾನ ಯಾವುದೇ ಬಣ್ಣದ ಬಟ್ಟೆ ಧರಿಸಿಕೊಂಡು ಬಂದರೂ ಗುರುತು ಹಿಡಿಯುತ್ತದೆ. ಆದರೆ ಮನುಷ್ಯ ದೇವರ ನೈಜತೆಯನ್ನು ಗುರುತಿಸುವ ಬದಲು ಬಣ್ಣಕ್ಕೆ ಮಹತ್ವ ನೀಡುವುದರಿಂದ ಆತ ನಾಯಿಗಿಂತ ಕಡೆಯಾಗುತ್ತಾನೆ’ ಎಂದರು.

ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಮಾತನಾಡಿ, ‘ನಗರದ ಥಳುಕಿಗೆ ಮಾರು ಹೋದ ಯುವಕರು ಪಟ್ಟಣ ಪ್ರದೇಶಕ್ಕೆ ವಲಸೆ ಬರುತ್ತಿದ್ದಾರೆ. ಕೃಷಿಯಲ್ಲಿ ಇದಕ್ಕಿಂತ ದುಪ್ಪಟ್ಟು ಸಂಪಾದನೆ ಮಾಡುವ ಅವಕಾಶವಿದ್ದರೂ ಆ ಕ್ಷೇತ್ರವನ್ನು ಬಯಸುತ್ತಿಲ್ಲ. ಉತ್ತಮ ಬಟ್ಟೆ ಹಾಕಿಕೊಂಡು ಶ್ರಮವಿಲ್ಲದ ಕೆಲಸ ಮಾಡುವುದೆ ಅವರಿಗೆ ಹೆಚ್ಚು ಇಷ್ಟವಾಗುತ್ತಿದೆ’ ಎಂದು ವಿಷಾದಿಸಿದರು.‘ಜಾನಪದ ಕಥೆಗಳಲ್ಲಿ ಜೀವನ ಮೌಲ್ಯ’ ವಿಷಯ ಕುರಿತು ಮಾತನಾಡಿದ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಅವರು, ‘ಇದ್ದದ್ದನ್ನು ಹಂಚಿಕೊಂಡು ತಿನ್ನಬೇಕು. ಹಣ, ಚಿನ್ನದ ಆಸೆಗೆ ಮರುಳಾದವರು ಹುಚ್ಚರಾಗುತ್ತಾರೆ. ಕೂಡಿ ಬಾಳುವುದರಲ್ಲಿ ಸುಖವಿದೆ ಎಂಬ ಆಶಯದ ಹಲವಾರು ಕಥೆಗಳನ್ನು ಜನಪದರು ಕಟ್ಟಿಕೊಟ್ಟರು’ ಎಂದರು.‘ಭಾರತವು ಪಾಶ್ಚಾತ್ಯರ ದಾಳಿಯಿಂದ ತನ್ನ ಸರ್ವಸ್ವವನ್ನು ಕಳೆದುಕೊಂಡಿತಾದರೂ ಧರ್ಮವನ್ನೂ ಮಾತ್ರ ಕಳೆದುಕೊಳ್ಳಲಿಲ್ಲ. ಅಂಥ ಶಕ್ತಿ ಧರ್ಮಕ್ಕಿದೆ. ಅಮೆರಿಕ ದುಡ್ಡು ಮಾಡಲು, ಉದ್ಯೋಗ ಮಾಡಲು ಹೋಗುವವರಿಗೆ ಬಸ್ ಸ್ಟ್ಯಾಂಡ್ ಇದ್ದಂತೆ. ಆದರೆ ಭಾರತದಂತೆ ಸಂಸ್ಕೃತಿಯನ್ನು ಹೊಂದಿರುವ ದೇಶವಲ್ಲ’ ಎಂದು ಸಚಿವ ಆರ್.ಅಶೋಕ ಹೇಳಿದರು.ತರಳಬಾಳು ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ಲೇಖಕ ಡಾ.ಬಂಜಗೆರೆ ಜಯಪ್ರಕಾಶ್ ‘ಧರ್ಮದ ಪ್ರಸ್ತುತತೆ’ ಕುರಿತು ಉಪನ್ಯಾಸ ನೀಡಿದರು.ಸಚಿವ ಸಿ.ಎಂ.ಉದಾಸಿ, ಶಾಸಕ ಸುರೇಶ್‌ಗೌಡ ಪಾಟೀಲ್, ಹೈಕೋರ್ಟ್ ನ್ಯಾಯಮೂರ್ತಿ ಮಂಜುಳಾ ಚೆಲ್ಲೂರ್, ಬೆಂಗಳೂರು ವಿಶ್ವವಿದ್ಯಾಲಯ ಕುಲಪತಿ ಡಾ. ಎನ್. ಪ್ರಭುದೇವ್, ತರಳಬಾಳು ಶಾಖಾಮಠ ಸಾಣೆಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry