ಗುರುವಾರ , ಫೆಬ್ರವರಿ 25, 2021
29 °C
ಶ್ರೀಪೇಜಾವರ ಮಠದ ಯತಿವರೇಣ್ಯರ ಕೊಡುಗೆ

ಪೇಜಾವರ: ಸಮಾಜಕ್ಕೊಂದು ವರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪೇಜಾವರ: ಸಮಾಜಕ್ಕೊಂದು ವರ

ಶ್ರೀಜಗದ್ಗುರು ಶ್ರೀಮನ್ಮಧ್ವಾಚಾರ್ಯರು ಕಲಿಬಾಧೆಯಿಂದ ಬಳಲುತ್ತಿರುವ ಸಜ್ಜನರ ಕ್ಷೇಮಕ್ಕೋಸ್ಕರ ಉಡುಪಿಯಲ್ಲಿ ಶ್ರೀಕೃಷ್ಣನನ್ನು ಪ್ರತಿಷ್ಠಾಪಿಸಿದರು. ಮಂದಹಾಸ ಮೃದುಸುಂದರನಾದ ಶ್ರೀಕೃಷ್ಣನ ನಿರಂತರ ಪೂಜಾದಿ ವ್ಯವಸ್ಥೆಗಾಗಿ ಅಷ್ಟಯತಿಗಳನ್ನು ನಿಯುಕ್ತಿಗೊಳಿಸಿದರು. ಎರಡು ತಿಂಗಳಿಗೊಬ್ಬರಂತೆ ಎಂಟು ಯತಿಗಳು ಶ್ರೀಕೃಷ್ಣನ ಪರ್ಯಾಯವನ್ನು ನಡೆಸಿದರು. ಸುಮಾರು ಮುನ್ನೂರು ವರ್ಷಗಳ ಕಾಲ ಈ ವ್ಯವಸ್ಥೆಯು ನಡೆಯಿತು.ಮುಂದೆ ಈ ಅಷ್ಟಮಠಗಳಲ್ಲಿ ಒಂದಾದ ಕುಂಭಾಸಿ ಮಠದಲ್ಲಿ   (ಇಂದಿನ ಸೋದೆ ಮಠ) ಮಹಾಮಹಿಮರಾದ ಶ್ರೀವಾದಿರಾಜಗುರುಸಾರ್ವಭೌಮರು ವಿರಾಜಮಾನರಾದರು. ಇವರು ಉಡುಪಿಯ ಶ್ರೀಕೃಷ್ಣಮಠದ ಸಮಗ್ರ ಅಭಿವೃದ್ಧಿಯ ಹರಿಕಾರರು. ಎರಡು ತಿಂಗಳಿಗಿದ್ದ ಪರ್ಯಾಯದ ವ್ಯವಸ್ಥೆಯನ್ನು ಎರಡು ವರ್ಷಗಳಿಗೆ ಪರಿವರ್ತಿಸಿದರು. ಶ್ರೀಕೃಷ್ಣಮಠದ ಒಳಭಾಗದಲ್ಲಿ ಮುಖ್ಯಪ್ರಾಣ-ಮಧ್ವಾಚಾರ್ಯರ ಪ್ರತಿಷ್ಠಾಪನೆ, ಮಠದ ಸುತ್ತಲಿನ ರಥಬೀದಿಯಲ್ಲಿ ಅಷ್ಟಮಠಗಳ ನಿರ್ಮಾಣ, ಸಪ್ತೋತ್ಸವ, ಲಕ್ಷದೀಪೋತ್ಸವಾದಿಗಳೆಲ್ಲೂ ಇವರ ನೇತೃತ್ವದಲ್ಲಿ ಆರಂಭವಾದ ಕಾರ್ಯಗಳು. ಅಷ್ಟಮಠಗಳು ಶ್ರೀಫಲಿಮಾರು ಮಠದಿಂದ ಪ್ರಾರಂಭವಾಗಿ ಶ್ರೀಅದಮಾರು-ಶ್ರೀಕೃಷ್ಣಾಪುರ ಮಠ-ಶ್ರೀಪುತ್ತಿಗೆ ಮಠ-ಶ್ರೀಶೀರೂರು ಮಠ-ಶ್ರೀಸೋದೇ ಮಠ-ಶ್ರೀಕಾಣಿಯೂರು ಮಠ-ಶ್ರೀಪೇಜಾವರ ಮಠಕ್ಕೆ ಮುಕ್ತಾಯವಾಗುತ್ತದೆ.ಹದಿನಾಲ್ಕು ವರ್ಷಗಳಿಗೊಮ್ಮೆ ದೊರಕುವ ಶ್ರೀಕೃಷ್ಣಪೂಜಾ ಪರ್ಯಾಯದ ಸುವರ್ಣಾವಕಾಶ. ಈ ಕ್ರಮದಲ್ಲಿ ಈಗ 31 ನೆಯ ಚಕ್ರದ ಕೊನೆಯ ಪರ್ಯಾಯ. ಈ ಪರ್ಯಾಯ ಚಕ್ರದಲ್ಲಿ ಐದು ಬಾರಿ ಪರ್ಯಾಯವನ್ನು ಮಾಡಿದ ಭಾಗ್ಯವನ್ನು ಶ್ರೀಕೃಷ್ಣನು ಪರಮಪೂಜ್ಯ ಶ್ರೀ ಶ್ರೀ ಶ್ವೇಶತೀರ್ಥಶ್ರೀಪಾದರಿಗೆ ಕರುಣಿಸುತ್ತಿದ್ದಾನೆ. ನಮ್ಮ ಜೀವಿತದ ಅಪೂರ್ವ ಕ್ಷಣವನ್ನು ಕಂಡು ಧನ್ಯರಾಗೋಣ.ಉಡುಪಿಯ ಒಂದೊಂದು ಮಠವೂ ಒಂದೊಂದು ಗ್ರಾಮಗಳ ಹೆಸರನ್ನು ಹೊಂದಿದೆ. ಉದಾಹರಣೆಗೆ ಶ್ರೀ ಪೇಜಾವರ ಮಠವು ಪೇಜಾವರ ಗ್ರಾಮದ ಹೆಸರನ್ನು ಹೊಂದಿದೆ. ಶ್ರೀಮಧ್ವಾಚಾರ್ಯರು ತತ್ವವಾದದ ಸ್ಥಾಪನೆಗಾಗಿ ಪ್ರಸ್ಥಾನತ್ರಯಗಳಿಗೆ ಭಾಷ್ಯವನ್ನು ರಚಿಸಿದರು. ಭಗವಂತನಾದ ಶ್ರೀವೇದವ್ಯಾಸರಿಗೆ ಸಮ್ಮತವಾದ ಈ ಗ್ರಂಥಗಳು  ಸರ್ವಮೂಲ ಗ್ರಂಥಗಳೆಂದೇ ಪ್ರಸಿದ್ಧವಾದವು. ಶ್ರೀ ಮಧ್ವಾಚಾರ್ಯರು ರಚಿಸಿದ ಈ ಗ್ರಂಥಗಳು ಸರ್ವಮಾನ್ಯವಾಗಿವೆ. ಈ ಗ್ರಂಥಗಳ ಅಧ್ಯಯನ-ಅಧ್ಯಾಪನಗಳು ಯತಿಗಳಿಗೆ ವಿಶೇಷವಾಗಿದೆ. ಅನೇಕ ಯತಿವರೇಣ್ಯರು ಈ ಸರ್ವಮೂಲ ಗ್ರಂಥಗಳಿಗೆ ಟೀಕಾ-ಟಿಪ್ಪಣಿಗಳನ್ನು ರಚಿಸಿದ್ದಾರೆ.ಉಡುಪಿಯ ಅಷ್ಟಮಠಗಳಲ್ಲಿ  ಒಂದೊಂದು ಮಠವೂ ಒಂದೊಂದು ಗ್ರಾಮಗಳ ಹೆಸರನ್ನು ಹೊಂದಿದೆ. ಒಂದು ಸಮಯದಲ್ಲಿ ಅತ್ಯಂತ ಬಡಮಠವಾಗಿದ್ದ ಶ್ರೀಪೇಜಾವರ ಮಠವು ಇಂದು ಶ್ರೀವಿಶ್ವೇಶತೀರ್ಥಶ್ರೀಪಾದರಿಂದ ಅತ್ಯಂತ ಪ್ರಸಿದ್ಧಿಯನ್ನು ಪಡೆದಿದೆ.ಶ್ರೀ ಮಧ್ವಾಚಾರ್ಯರ ಸಾಕ್ಷಾತ್ ಶಿಷ್ಯರು ಶ್ರೀ ಅಧೋಕ್ಷಜತೀರ್ಥರು. ಮಹಾತಪಸ್ವಿಗಳಾಗಿದ್ದ ಇವರು ಶ್ರೀ ಪೇಜಾವರ ಮಠದ ಮೂಲಪುರುಷರು. ಶ್ರೀಮಧ್ವಾಚಾರ್ಯರು ಈ ಸಂಸ್ಥಾನಕ್ಕೆ ರುಕ್ಮಿಣಿ ಸತ್ಯಭಾಮಾ ಸಮೇತ ವಿಠ್ಠಲದೇವರನ್ನು ನೀಡಿದ್ದಾರೆ. ಅಜ ವಿಠ್ಠಲ ಎಂದೇ ಈ ದೇವರನ್ನು ಕರೆಯುತ್ತಾರೆ. ಶ್ರೀ ಅಧೋಕ್ಷಜತೀರ್ಥರು ಸಕಲಶಾಸ್ತ್ರಪಾರಂಗತರಾಗಿದ್ದರು. ವಿರಕ್ತರಾಗಿದ್ದ ಇವರು ಶ್ರೀ ಕಮಲಾಕ್ಷತೀರ್ಥರಿಗೆ ಆಶ್ರಮವನ್ನು ನೀಡಿ ತೀರ್ಥಯಾತ್ರೆಗೆ ಹೊರಟು ಧನುಷ್ಕೋಟಿಯಲ್ಲಿ ನಿರ್ಯಾಣವನ್ನು ಹೊಂದಿದರು. ಶ್ರೀ ಕಮಲಾಕ್ಷತೀರ್ಥರು ಹರಿಗಾಥಾ ಸ್ತೋತ್ರಮ್ ಎಂಬ ಕೃತಿಯನ್ನು ರಚಿಸಿದ್ದಾರೆ.ಇವರು ಶ್ರೀ ಪುಷ್ಕರಾಕ್ಷತೀರ್ಥರಿಗೆ ಪೀಠವನ್ನು ಒಪ್ಪಿಸಿ ನಿರ್ಯಾಣವನ್ನು ಹೊಂದಿದರು. ಶ್ರೀ ಪುಷ್ಕರಾಕ್ಷತೀರ್ಥರು ಶ್ರೀ ಅಮರೇಂದ್ರ

ತೀರ್ಥರಿಗೆ ಸಂಸ್ಥಾನವನ್ನು ನೀಡಿದರು. ಶ್ರೀ ಅಮರೇಂದ್ರತೀರ್ಥರು ಶ್ರೀ ಮಹೇಂದ್ರತೀರ್ಥರಿಗೆ ಸಂಸ್ಥಾನವನ್ನು ಕೊಟ್ಟರು. ಅತ್ಯಂತ ಕಠಿಣವಾದ ಉಪವಾಸಾದಿ ವ್ರತಾಚರಣೆಗಳನ್ನು ಆಚರಿಸಿ ಶ್ರೀ ವಿಜಯಧ್ವಜತೀರ್ಥರನ್ನು ಶಿಷ್ಯರನ್ನಾಗಿ ಸ್ವೀಕರಿಸಿ ಗೋದಾವರೀ ತೀರದಲ್ಲಿ ದೇಹತ್ಯಾಗವನ್ನು ಮಾಡಿದರು. ಮುಖ್ಯಪ್ರಾಣದೇವರ ಸನ್ನಿಧಾನವುಳ್ಳ ಶ್ರೀ ವಿಜಯಧ್ವಜತೀರ್ಥರು ಕಾಸರಗೋಡಿನ ಸಮೀಪವಿರುವ ಪರಮಪಾವನವಾದ ಕಣ್ವತೀರ್ಥದಲ್ಲಿ ವಾಸವಾಗಿದ್ದರು.ಮಹರ್ಷಿಗಳಾದ  ಕಣ್ವರು ಇಲ್ಲಿ ಶ್ರೀರಾಮನನ್ನು ಪೂಜಿಸಿ ಸಿದ್ಧಿಯನ್ನು ಪಡೆದುಕೊಂಡರು. ಶ್ರೀರಾಮನ ನಿತ್ಯ ಸನ್ನಿಧಾನವನ್ನು ತಿಳಿದ ಲಂಕಾಧಿಪತಿಯಾದ ವಿಭೀಷಣನು ಇಲ್ಲಿಗೆ ಬಂದು ಶ್ರೀರಾಮನನ್ನು ಪೂಜಿಸಿದನು. ಈ ದಿವ್ಯ ಸನ್ನಿಧಿಯಲ್ಲಿ ಶ್ರೀವಿಜಯಧ್ವಜತೀರ್ಥರು ಮುಖ್ಯಪ್ರಾಣದೇವರನ್ನು ಪ್ರತಿಷ್ಠಾಪಿಸಿದ್ದಾರೆ. ಶ್ರೀಮದ್ಭಾಗವತಕ್ಕೆ ಪದರತ್ನಾವಲೀ ಎಂಬ ವ್ಯಾಖ್ಯಾನವನ್ನು ಬರೆದು ಶ್ರೀಕೃಷ್ಣನಿಗೆ ಸಮರ್ಪಿಸಿದ್ದಾರೆ. ತಮ್ಮ ತಪಸ್ಸಿನ ಪ್ರಭಾವದಿಂದ ಪ್ರಕೃತಿಯನ್ನೇ ನಿಯಂತ್ರಿಸಿದ್ದರು.ಇವರು ಶ್ರೀ ಉತ್ತಮತೀರ್ಥರಿಗೆ ಸಂಸ್ಥಾನವನ್ನು ಒಪ್ಪಿಸಿ ಕಣ್ವತೀರ್ಥದಲ್ಲಿ ವೃಂದಾವನಸ್ಥರಾದರು. ಈ ಪರಂಪರೆಯಲ್ಲಿ ಹದಿನಾರನೆಯವರಾದ ಶ್ರೀವಿಶ್ವೇಶ್ವರತೀರ್ಥರು ಶ್ರೀವಾದಿರಾಜಗುರುಸಾರ್ವಭೌಮರಲ್ಲಿ ಅಧ್ಯಯನವನ್ನು ಮಾಡಿದ ಮಹಾಮಹಿಮರು. ಇವರು ಐತರೇಯಭಾಷ್ಯಕ್ಕೆ ಅಪೂರ್ವ ವ್ಯಾಖ್ಯಾನವನ್ನು ರಚಿಸಿದ್ದಾರೆ. ಭಗವದ್ಗೀತಾ ವಿವರಣ, ನ್ಯಾಯಸುಧಾ ಸಂಗ್ರಹ ಮುಂತಾದ ವ್ಯಾಖ್ಯಾನಗ್ರಂಥಗಳನ್ನು ರಚಿಸಿದ್ದಾರೆ. ಅನೇಕ ವ್ಯಾಖ್ಯಾನಕಾರರು ಇವರನ್ನು ಕೊಂಡಾಡಿದ್ದಾರೆ. ಇವರು ಶ್ರೀವಿಶ್ವಭೂಷಣತೀರ್ಥರಿಗೆ ಸಂಸ್ಥಾನವನ್ನು ಒಪ್ಪಿಸಿದರು.ಈ ಪರಂಪರೆಯ ಇಪ್ಪತ್ತೊಂದನೆಯ ಯತಿಗಳಾದ ಶ್ರೀವಿಶ್ವಪತಿತೀರ್ಥರು ಅತ್ಯಂತ ಪ್ರಸಿದ್ಧರು. ಇವರು ಅನೇಕ ಗ್ರಂಥಗಳಿಗೆ ವ್ಯಾಖ್ಯಾನವನ್ನು ರಚಿಸಿದ್ದಾರೆ. ದ್ವಾದಶಸ್ತೋತ್ರ, ವಾಯುಸ್ತುತಿ, ಪಂಚಸ್ತುತಿ, ಮಣಿಮಂಜರೀ, ಸುಮಧ್ವವಿಜಯ , ಸಂಗ್ರಹರಾಮಾಯಣ , ನರಸಿಂಹಸ್ತುತಿ , ಕೃಷ್ಣಾಷ್ಟಕ ಮೊದಲಾದ ಸ್ತೋತ್ರಗಳಿಗೆ ವ್ಯಾಖ್ಯಾನವನ್ನು ರಚಿಸಿದ್ದಾರೆ. ಇವರು ಶ್ರೀವಿಶ್ವನಿಧಿತೀರ್ಥರಿಗೆ ಸಂಸ್ಥಾನವನ್ನು ಒಪ್ಪಿಸಿದರು. ಈ ಪರಂಪರೆಯ ಮೂವತ್ತೊಂದನೆಯ ಯತಿಗಳಾದ ಶ್ರೀವಿಶ್ವಜ್ಞತೀರ್ಥರು ಸದಾ ಪಾಠಪ್ರವಚನಗಳಲ್ಲಿ ಆಸಕ್ತಿವುಳ್ಳವರಾಗಿದ್ದರು. ಇವರು ಎರಡು ಬಾರಿ ಪರ್ಯಾ

ಯವನ್ನು ವೈಭವದಿಂದ ನಡೆಸಿದರು. ಇವರು ಪರಮತ ಸಹಿಷ್ಣುಗಳಾಗಿದ್ದರು. ಮೂರನೆಯ ಬಾರಿಗೆ ಪರ್ಯಾಯದ ಸಿದ್ಧತೆಯಲ್ಲಿದ್ದಾಗ ದೈವಾಧೀನರಾದರು.ಇವರು ಶಿಷ್ಯರಾದ ಶ್ರೀವಿಶ್ವಮಾನ್ಯತೀರ್ಥರು ಅನೇಕ ಅಭಿವೃದ್ಧಿಕಾರ್ಯಗಳನ್ನು ಮಾಡಿದರು. ಎರಡು ಬಾರಿ ಯಶಸ್ವೀ ಪರ್ಯಾಯವನ್ನು ಮಾಡಿದರು. ಹಂಪೆಯ ಚಕ್ರತೀರ್ಥದಲ್ಲಿ ಶ್ರೀವಿಶ್ವೇಶತೀರ್ಥರಿಗೆ ಯತ್ಯಾಶ್ರಮವನ್ನು ನೀಡಿ ಕಣ್ವತೀರ್ಥದಲ್ಲಿ ವೃಂದಾವನಸ್ಥರಾದರು.ನ್ಯಾಯ ವೇದಾಂತ ಶಾಸ್ತ್ರ ಪಂಡಿತ: ವಿಶ್ವೇಶ ತೀರ್ಥರು

1931ರ ಏಪ್ರಿಲ್‌ 27ರಂದು ಜನಿಸಿದ ಶ್ರೀವಿಶ್ವೇಶತೀರ್ಥರು ಶ್ರೀಭಂಡಾರಕೇರಿ ಮಠಾಧೀಶರಾಗಿದ್ದ ಶ್ರೀವಿದ್ಯಾಮಾನ್ಯತೀರ್ಥರಲ್ಲಿ ವೇದಾಂತ ಅಧ್ಯಯನವನ್ನು ಮಾಡಿದರು. ನ್ಯಾಯ ವೇದಾಂತಾದಿ ಶಾಸ್ತ್ರಗಳಲ್ಲಿ ಅಪಾರವಾದ ಪಾಂಡಿತ್ಯವನ್ನು ಪಡೆದಿದ್ದಾರೆ. ದೇಶದ ವಿವಿಧ ಭಾಗಗಳಲ್ಲಿ ನಡೆದ ವಾಕ್ಯಾರ್ಥಗೋಷ್ಠಿಗಳಲ್ಲಿ ಇವರ ಅದ್ಭುತ ಪ್ರತಿಭಾಸಾಮರ್ಥ್ಯಕ್ಕೆ ವಿದ್ವತ್‌ ವೃಂದವೇ ತಲೆಬಾಗಿತು. ಅಖಿಲಭಾರತ ಮಾಧ್ವಮಹಾಮಂಡಲವನ್ನು ಬೆಂಗಳೂರಿನಲ್ಲಿ ಸ್ಥಾಪಿಸಿ ಸರ್ವಮೂಲಗ್ರಂಥಗಳನ್ನು ತಿಳಿಯಾದ ಕನ್ನಡದಲ್ಲಿ ಅನುವಾದಿಸಿ ಸಮರ್ಪಿಸಿದ ಕೀರ್ತಿ ಇವರದು. ವೇದಾಂತದ ಸಂರಕ್ಷಣೆಗಾಗಿ ಬೆಂಗಳೂರಿನಲ್ಲಿ ಪೂರ್ಣಪ್ರಜ್ಞ ವಿದ್ಯಾಪೀಠವನ್ನು ಸ್ಥಾಪಿಸಿ ಅಲ್ಲಿ ಹನ್ನೊಂದು ವರ್ಷಗಳ ಅಧ್ಯಯನವನ್ನು ಪೂರೈಸಿದ ವಿದ್ಯಾರ್ಥಿಗಳಿಗೆ ತಾವೇ ಎರಡು ವರ್ಷ ಸುಧಾಪಾಠವನ್ನು ಇವತ್ತಿಗೂ ನಡೆಸುತ್ತಿದ್ದಾರೆ. ಅನೇಕ ತತ್ವಜ್ಞಾನ ಸಮ್ಮೇಳನಗಳನ್ನು ದೇಶದ ವಿವಿಧ ಭಾಗಗಳಲ್ಲಿ ನಡೆಸಿ ವಿದ್ವಾಂಸರಿಂದ ಪ್ರಬಂಧಗಳನ್ನು ಮಂಡಿಸಿದ್ದಾರೆ. ಪೂರ್ಣಪ್ರಜ್ಞ ಸಂಶೋಧನ ಮಂದಿರವನ್ನು ಸ್ಥಾಪಿಸಿ ಅನೇಕ ಅಪ್ರಕಟಿತ ಗ್ರಂಥಗಳನ್ನು ಪ್ರಕಾಶನಗೊಳಿಸಿದ್ದಾರೆ.ಸಾವಿರಾರು ವಿದ್ಯಾರ್ಥಿಗಳಿಗೆ ಉಚಿತವಾದ ಅಶನ-ವಸನಗಳ ಜೊತೆಗೆ ವಿದ್ಯಾದಾನವನ್ನು ಮಾಡಿದ ಶ್ರೇಷ್ಠ ಕುಲಪತಿಗಳಾಗಿದ್ದಾರೆ. ಅನೇಕ ಪೀಠಾಧಿಪತಿಗಳೂ ಇವರಲ್ಲೇ ಅಧ್ಯಯನವನ್ನು ಮಾಡಿದ ಶಿಷ್ಯರಾಗಿದ್ದಾರೆ. ದೇಶದ ಶ್ರೇಷ್ಠ ವಿದ್ವಾಂಸರಾದ ಖಡಂಗ ರಾಮಚಂದ್ರಶಾಸ್ತ್ರಿಗಳು, ಕೊಚ್ಚಿಯ ಮಹಾರಾಜ, ಅನಂತಕೃಷ್ಣಶಾಸ್ತ್ರಿ ಮೊದಲಾದವರು ಇವರ ವಿದ್ವತ್ತಿಗೆ ಮೂಕವಿಸ್ಮಿತರಾಗಿದ್ದಾರೆ. ಗೀತಾಸಾರೋದ್ಧಾರ ಮೊದಲಾದ ಸರಳ ಕನ್ನಡದಲ್ಲಿ ಅನುವಾದಿಸಿದ ಇವರ ಕೃತಿಗಳು ಅತ್ಯಂತ ಜನಪ್ರಿಯವಾಗಿವೆ. ಯಾಂತ್ರಿಕ ವಾತಾವರಣದಲ್ಲಿಯೂ ಪ್ರಾಚೀನ ಪದ್ಧತಿಯಲ್ಲಿ ಶಾಸ್ತ್ರಾಧ್ಯಯನವನ್ನು ಮಾಡಿದ ವಿದ್ವಾಂಸರನ್ನು ಪೋಷಿಸಲು ಪಂಡಿತಪೋಷಣಾನಿಧಿ, ವಿದ್ಯಾಮಾನ್ಯಪ್ರಶಸ್ತಿ, ವಿಶ್ವೇಶಪ್ರಶಸ್ತಿಗಳು  ವಿದ್ಯಾಸಂರಕ್ಷಣೆಗೆ ಇವರಿಗಿರುವ ಕಾಳಜಿಯನ್ನು ಶ್ರದ್ಧೆಯನ್ನು ತೋರಿಸುತ್ತದೆ. 32 ಕ್ಕೂ  ಹೆಚ್ಚಿನ ಸುಧಾಪಾಠ

ವನ್ನು ವಿದ್ಯಾರ್ಥಿಗಳಿಗೆ ಮಾಡಿ ವೈಭವದ ಮಂಗಳೋತ್ಸವಗಳನ್ನು ನಡೆಸಿದ್ದಾರೆ. ಬಿಡುವಿಲ್ಲದ ನಿರಂತರ ಕಾರ್ಯಕ್ರಮಗಳ

ಲ್ಲಿಯೂ ತಪ್ಪದೇ ಪ್ರತಿದಿನವೂ ಸುಧಾಪಾಠ ಮಾಡುವ ಇವರ ದೀಕ್ಷೆಯನ್ನು ಎಲ್ಲ ಯತಿವರೇಣ್ಯರೂ ಕೊಂಡಾಡಿದ್ದಾರೆ. ಇಂಥಹ ಆದರ್ಶ ಯತಿಗಳಿವರು.  ನಿಜವಾದ ಯತಿಕುಲ ಮುಕುಟರಾದ ಇವರು ಶಾಸ್ತ್ರಪ್ರಪಂಚಕ್ಕೆ ಅಮೋಘವಾದ ಕೊಡುಗೆಯನ್ನು ನೀಡಿದ ಇವರು ತಮ್ಮ ಪ್ರಿಯಶಿಷ್ಯರಾದ ಶ್ರೀವಿಶ್ವಪ್ರಸನ್ನತೀರ್ಥಶ್ರೀಪಾದರೊಡನೆ ಪಂಚಮ ಐತಿಹಾಸಿಕ ಪರ್ಯಾಯ ಪೀಠಾರೋಹಣದ ಸಂಭ್ರಮದಲ್ಲಿದ್ದಾರೆ. ಈ ಸುವರ್ಣಕ್ಷಣದಲ್ಲಿ ಯತಿದ್ವಯರಿಗೆ ಅನಂತಾನಂತ ಪ್ರಣಾಮಗಳು.

(ಲೇಖಕರು ಉಡುಪಿಯ . ಶ್ರೀವಾದಿರಾಜ ಸಂಶೋಧನ ಪ್ರತಿಷ್ಠಾನದ  ನಿರ್ದೇಶಕರು.)

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.