ಶುಕ್ರವಾರ, ನವೆಂಬರ್ 22, 2019
26 °C

`ಪೇಜ್‌ವರ್ಲ್ಡ್' ಬೌದ್ಧಿಕ ಜಗತ್ತು

Published:
Updated:

`ಗೃಹಿಣಿಯರಿಗೆ ಪುಸ್ತಕ ಮಳಿಗೆಯ ಹಂಗು ಯಾಕೆ? ಬುಟಿಕ್, ಬ್ಯೂಟಿಪಾರ್ಲರ್, ಫ್ಯಾನ್ಸಿ ಸ್ಟೋರ್ ತೆರೆಯಬಹುದಿತ್ತಲ್ವಾ?' ಎಂದು ಆ  ಇಬ್ಬರು ಗೃಹಿಣಿಯರಿಗೆ ವ್ಯಂಗ್ಯವಾಡಿದ ಮಂದಿಯೂ ಈಗ ಆ `ಯಕಃಶ್ಚಿತ್ ಪುಸ್ತಕ ಮಳಿಗೆ'ಯ ಚಟುವಟಿಕೆಗಳನ್ನು ಕಂಡು ದಂಗಾಗಿದ್ದಾರಂತೆ.ಜೆ.ಪಿ. ನಗರ ಏಳನೆ ಹಂತದ ಕೊತ್ತನೂರು ದಿಣ್ಣೆಯಲ್ಲಿರುವ `ಪೇಜ್ ವರ್ಲ್ಡ್ ಇಂಡಿಯಾ', `ಕೇವಲ ಒಂದು ಪುಸ್ತಕ ಮಳಿಗೆ'ಯಾಗಿ ಉಳಿಯದೆ ಬೌದ್ಧಿಕ ಚಿಂತನೆಗೆ ವೇದಿಕೆಯಾಗಿರುವುದು ಇದಕ್ಕೆ ಕಾರಣ. `ನೆರೆಹೊರೆಯ ಜ್ಞಾನ ಕೇಂದ್ರ' (ನೇಬರ್‌ಹುಡ್ ನಾಲೆಡ್ಜ್ ಹಬ್) ಎಂಬುದು ತಮ್ಮ ಪರಿಕಲ್ಪನೆಗೆ ಅವರಿಟ್ಟಿರುವ ಹೆಸರು.ಹಂಗಿಸುವವರಿಗೆ ಈ ಜೋಡಿ ಗೃಹಿಣಿಯರು ಅಂದರೆ ಛಾಯಾ ಕುಂಬಳೆ ಮತ್ತು ಸುಧಾ ಕಾಕಲ್ ಕೇವಲ ಗೃಹಿಣಿಯರು. ಆದರೆ ಅವರ ಕಣ್ಣುಗಳಲ್ಲಿ ದೂರದೃಷ್ಟಿಯಿದೆ, ಮಹತ್ವಾಕಾಂಕ್ಷೆಯಿದೆ. ಪುಸ್ತಕ ಮಳಿಗೆಯಲ್ಲಿ ಬಿಲ್ಲು ಮತ್ತು ಕಾಸು ಕೈ ಬದಲಾಯಿಸಿಕೊಂಡರೆ ಸಾಲದು, ಸಾಹಿತ್ಯಿಕ ಚಟುವಟಿಕೆಗಳಿಗೆ ಅದು ಸೂರು ಆಗಬೇಕು ಎಂಬ ಬಹಳ ದಿನಗಳ ಕನಸು ಹೊತ್ತು ಮಳಿಗೆ ತೆರೆದಿದ್ದರವರು. ಅವರ ಬೆನ್ನಿಗೆ ನಿಂತದ್ದು ಇಬ್ಬರ ಪತಿರಾಯರುಗಳು. ಒತ್ತಾಸೆ ಮತ್ತು ಮಾರ್ಗದರ್ಶನ ನೀಡಿದವರು ಲೇಖಕ ಅಶೋಕ ಹೆಗಡೆ ಅವರಂಥ ಸ್ನೇಹಿತರು.ಛಾಯಾ ಮತ್ತು ಸುಧಾ ಪದವೀಧರ ಹೆಣ್ಣುಮಕ್ಕಳು. ಮಲೆನಾಡಿನ ಪರಿಸರದಲ್ಲಿ ಶಾಲೆ, ಶಿಕ್ಷಣಕ್ಕಾಗಿ ಏಗುತ್ತಲೇ ಸಮಾಜವನ್ನು ಬಿಟ್ಟ ಕಣ್ಣುಗಳಿಂದ ನೋಡಿದವರು. ಸಮಸ್ಯೆಗಳನ್ನು ಹತ್ತಿರದಿಂದ ಬಲ್ಲವರು.`ಪುಸ್ತಕ ಓದುವ ಆಸೆ ಬೆಟ್ಟದಷ್ಟಿದ್ದರೂ ಇವತ್ತಿಗೂ ಸರ್ಕಾರಿ ಶಾಲೆ, ವಸತಿ ಶಾಲೆಗಳ ಮಕ್ಕಳಿಗೆ ಪಠ್ಯೇತರ ಪುಸ್ತಕಗಳು ದೊರಕುವುದಿಲ್ಲ. ಅಂತಹ ಹಳ್ಳಿಗಳು ನಮ್ಮ ಸುತ್ತಮುತ್ತಲಿನ ಊರುಗಳಲ್ಲಿ ಇವೆ. ನಾವು ಬೆಳೆದ ಪರಿಸರವೂ ಹಾಗೆಯೇ ಇತ್ತು.ಇಬ್ಬರಿಗೂ ಸಾಫ್ಟ್‌ವೇರ್ ಇಂಜಿನಿಯರ್‌ಗಳೊಂದಿಗೆ ಮದುವೆಯಾಗಿ ಬೆಂಗಳೂರಿಗೆ ಬಂದಾಗ ಮನೆಯೇ ನಮ್ಮ ಕಾರ್ಯಕ್ಷೇತ್ರ ವಿಸ್ತರಣೆಯಾಗಿತ್ತು. ಆದರೆ ಇಬ್ಬರಿಗೂ ಸಣ್ಣ ವಯಸ್ಸಿನಿಂದಲೂ ಸಾಹಿತ್ಯಿಕ ಮತ್ತು ಸಾಮಾಜಿಕ ಚಟುವಟಿಕೆಗಳ ಸಹವಾಸ ಸಿಕ್ಕಿದ್ದರಿಂದ ಮನಸ್ಸಿನ ಮೂಲೆಯಲ್ಲಿ ಅದರತ್ತ ತುಡಿತ ಇದ್ದೇ ಇತ್ತು. ಇದನ್ನು ಗಮನಿಸಿದ ನಮ್ಮಿಬ್ಬರ ಮನೆಯವರು ಇಂತಹುದೊಂದು ಪುಸ್ತಕ ಮಳಿಗೆ ತೆರೆಯುವ ನಮ್ಮ ಯೋಚನೆಗೆ ಸಹಕಾರವಿತ್ತರು. ಹೀಗೆ ಕಳೆದ ವರ್ಷವಷ್ಟೇ ಮಳಿಗೆ ತೆರೆದೆವು' ಎಂದು ತಮ್ಮ ಚಿಂತನೆ ಕಾರ್ಯರೂಪಕ್ಕೆ ಬಂದ ಬಗೆಯನ್ನು ವಿವರಿಸುತ್ತಾರೆ ಛಾಯಾ.ಹಬ್‌ನಲ್ಲಿ ಹಬ್ಬ

`ಇತರ ಪುಸ್ತಕ ಮಳಿಗೆಗಳಿಗಿಂತ ಭಿನ್ನ ಸ್ವರೂಪದಲ್ಲಿ ತಮ್ಮ ಮಳಿಗೆ ಹೊರಹೊಮ್ಮಬೇಕು ಎಂಬ ಚಿಂತನೆ ಕೃತಿಗಿಳಿದದ್ದು ವಾದಿರಾಜ ಭಟ್ ಅವರ ಕಥೆ ಹೇಳುವ ಕಾರ್ಯಕ್ರಮದ ಮೂಲಕ. ಮೊದಲ ಪ್ರಯತ್ನ. ಮಕ್ಕಳು, ದೊಡ್ಡವರು ಬರುತ್ತಾರೋ ಇಲ್ಲವೋ ಎಂಬ ಅಳುಕು ಇತ್ತು. ಆದರೆ ನಮ್ಮ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ವ್ಯಕ್ತವಾಯಿತು. ನಮಗೆ ಯಶಸ್ಸಿನ ಹಬ್ಬ' ಎಂದು ಹೇಳುತ್ತಾರೆ, ಸುಧಾ ಕಾಕಲ್.ಅದಾದ ಬಳಿಕ ಪ್ರತಿ ತಿಂಗಳೂ ಒಂದೊಂದು ಕ್ಷೇತ್ರದ ಅನುಭವಿಗಳು, ಸಾಧಕರು ಸಂವಾದಕ್ಕೆ ಬಂದುಹೋಗಿದ್ದಾರೆ. ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ, ಲೇಖಕಿ ಶಶಿ ದೇಶಪಾಂಡೆ, ಛಾಯಾಗ್ರಾಹಕ/ ಕಲಾವಿದ ರವಿಕುಮಾರ್ ಕಾಶಿ, ಹಿರಿಯ ಪತ್ರಕರ್ತ ಹಾಗೂ ಪರಿಸರವಾದಿ ನಾಗೇಶ್ ಹೆಗಡೆ ಮತ್ತಿತರ ಅನುಭವ ಕಥನ ಮತ್ತು ಸಂವಾದ ನಡೆದಿದೆ.ಕೊತ್ತನೂರು ದಿಣ್ಣೆ ಮುಖ್ಯರಸ್ತೆಯಲ್ಲಿರುವ `ಕಾಕಲ್ ಕೈರುಚಿ' ಹೋಟೆಲ್‌ನ ಹಿಂಭಾಗ (ಬಿಗ್‌ಬಜಾರ್ ಎದುರು)ದಲ್ಲಿದೆ `ಪೇಜ್‌ವರ್ಲ್ಡ್'. ಎರಡು ಮಹಡಿಯ ಕಟ್ಟಡದಲ್ಲಿ ನೆಲ ಮತ್ತು ಮೊದಲ ಮಹಡಿ ಪುಸ್ತಕ, ಸ್ಟೇಷನರಿ, ಸಂಗೀತ, ಸಿನಿಮಾ, ಕಲೆಗೆ ಸಂಬಂಧಿಸಿದ ಪುಸ್ತಕ/ಸೀಡಿ/ಡಿವಿಡಿಗಳ ಮಾರಾಟ ವಿಭಾಗ. ಆಕರ್ಷಕ ಉಡುಗೊರೆ ವಸ್ತುಗಳೂ ಇಲ್ಲಿ ಲಭ್ಯ. ಎರಡನೇ ಮಹಡಿಯಲ್ಲಿ ತಿಂಗಳ ಕಾರ್ಯಕ್ರಮ ನಡೆಯುವ ಸಭಾಂಗಣವಿದೆ.ಛಾಯಾ-ಸುಧಾ ಜೋಡಿ ಈ ಸಭಾಂಗಣವನ್ನು ಸಾಹಿತ್ಯಿಕ ಕಾರ್ಯಕ್ರಮಗಳಿಗೆ ಮೀಸಲಿಡಲು ಮುಂದಾಗಿದ್ದಾರೆ. `ಪುಸ್ತಕ ಬಿಡುಗಡೆ, ಸಾಹಿತ್ಯಿಕ ಚರ್ಚೆಯಂತಹ ಕಾರ್ಯಕ್ರಮಗಳನ್ನು ನಡೆಸಲಿಚ್ಛಿಸುವವರು ಈ ಸಭಾಂಗಣವನ್ನು ಬಳಸಿಕೊಳ್ಳಬಹುದು' ಎಂದು ಹೇಳುತ್ತಾರೆ ಸುಧಾ.`ನೇಬರ್‌ಹುಡ್ ನಾಲೆಜ್ ಹಬ್' ನಗರದೆಲ್ಲೆಡೆ ಇರಬೇಕು ಎಂಬುದು ನಮ್ಮಾಸೆ. ಪುಸ್ತಕಪ್ರಿಯರು ಮತ್ತು ಸಾಹಿತ್ಯಪ್ರೇಮಿಗಳು ಒಂದೆಡೆ ಕಲೆತು ವಿಚಾರ ವಿನಿಮಯ ಮಾಡಿಕೊಳ್ಳಲು ಇದೊಂದು ವೇದಿಕೆಯಾಗುತ್ತದೆ. ಜೊತೆಗೆ ನಮ್ಮ ಸುತ್ತಮುತ್ತ ಇರುವ ಸಾಧಕರೊಂದಿಗೆ ಮಾತುಕತೆ ನಡೆಸಲು ಒಂದು ನೆಪವಾಗುತ್ತದೆ ಎಂಬುದು ಅವರ ಅಭಿಪ್ರಾಯ.ಪೇಜ್‌ವರ್ಲ್ಡ್‌ನ ಬಗ್ಗೆ ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 2685 2222/96866 97491/

www.pageworldindia.com

 

ಈ ಬಾರಿ ಸ್ವಲ್ಪ ವಿಶೇಷ

ಏ. 6ರ ಶನಿವಾರ ನಡೆಯುವ `ಪೇಜ್‌ವರ್ಲ್ಡ್'ನ ಸಂವಾದಕ್ಕೆ ಆಹ್ವಾನಿತರು ಬರಹಗಾರ ಜಯಂತ್ ಕಾಯ್ಕಿಣಿ ಅವರು.

ಅನುಭವ ಕಥನ ಮತ್ತು ಸಂವಾದಕ್ಕಷ್ಟೇ ಮೀಸಲಾಗಿರುತ್ತಿದ್ದ ಕಾರ್ಯಕ್ರಮ ಈ ಬಾರಿ ಮಕ್ಕಳ ರಜೆಯ ನಿಮಿತ್ತ ಅವರಿಗಾಗಿ ಶನಿವಾರ ಮಧ್ಯಾಹ್ನ ಚಿತ್ರಕಲಾ ಸ್ಪರ್ಧೆ ಮತ್ತು ಶನಿವಾರ, ಭಾನುವಾರ ಕರಕುಶಲ ಸಂತೆಯನ್ನು ಏರ್ಪಡಿಸಿದ್ದಾರೆ. ಕಾಯ್ಕಿಣಿ ಮಾತು 5.30ಕ್ಕೆ ಶುರುವಾಗಲಿದ್ದು, ನಂತರ ಐಶ್ವರ್ಯಾ ಮಹೇಶ್ ಅವರಿಂದ ಲಘುಸಂಗೀತ ಕಾರ್ಯಕ್ರಮವಿರುತ್ತದೆ.

ಪ್ರತಿಕ್ರಿಯಿಸಿ (+)