ಪೇಟೆಯಲ್ಲಿ ಉತ್ಸಾಹ ಮೂಡಿಸದ ತ್ರೈಮಾಸಿಕ ಸಾಧನೆ

7

ಪೇಟೆಯಲ್ಲಿ ಉತ್ಸಾಹ ಮೂಡಿಸದ ತ್ರೈಮಾಸಿಕ ಸಾಧನೆ

Published:
Updated:

ಷೇರುಪೇಟೆಯ ಸಂವೇದಿ ಸೂಚ್ಯಂಕವನ್ನು ಆಧಾರವಾಗಿಸಿ ಪೇಟೆಯ ಪರಿಸ್ಥಿತಿಯನ್ನು ವರ್ಣಿಸುವುದು ಸರಿಯಲ್ಲವೆಂಬುದು ಹಿಂದಿನ ವಾರದ ಬೆಳವಣಿಗೆಗಳನ್ನು ಪರಿಶೀಲಿಸಿದಾಗ ತಿಳಿಯವುದು. ಇದುವರೆಗೂ ಪ್ರಕಟವಾಗಿರುವ ಕಂಪೆನಿಗಳ ತ್ರೈಮಾಸಿಕ ಫಲಿತಾಂಶಗಳು ಅದರಲ್ಲೂ ಅಗ್ರಮಾನ್ಯ ಕಂಪೆನಿಗಳ ಫಲಿತಾಂಶಗಳು ಕಳಪೆಯಾಗಿರದೆ ಇರುವುದು ಸಕಾರಾತ್ಮಕವಾಗಿದೆ.ಬಹಳಷ್ಟು ಕಂಪೆನಿಗಳು ಲಾಭಾಂಶ ಪ್ರಕಟಿಸಿವೆ ಹಾಗೂ ಲಾಭಾಂಶ ಪ್ರಕಟಿಸುವ ಕಾರ್ಯಸೂಚಿ ಪ್ರಕಟಿಸಿವೆ. ಈ ಸಂದರ್ಭದಲ್ಲಿ ಹೂಡಿಕೆದಾರರು ಪ್ರಮುಖವಾಗಿ ಗಮನಿಸಬೇಕಾದ ಅಂಶವೆಂದರೆ ಲಾಭಾಂಶ ಪ್ರಕಟವಾದ ಕೂಡಲೆ ಅದರ ಆಸೆಯಿಂದ ಕೊಳ್ಳುವುದಕ್ಕೆ ಮುಂದಾಗದೆ, ಕೊಳ್ಳುವ ಷೇರು ಲಾಭಾಂಶ ಪಡೆಯುವ ಅರ್ಹತೆ ಹೊಂದಿದೆಯೇ ಎಂಬುದನ್ನು ಮನದಟ್ಟು ಮಾಡಿಕೊಂಡು ನಿರ್ಧರಿಸಬೇಕು.ಕಾರಣ ಈಗಿನ ದಿನಗಳಲ್ಲಿ ಕಂಪೆನಿಗಳು ಲಾಭಾಂಶ ಪ್ರಕಟಿಸುವ ಮುನ್ನವೇ ನಿಗದಿತ ದಿನಾಂಕವನ್ನು ಪ್ರಕಟಿಸಿ, ಲಾಭಾಂಶ ಘೋಷಣೆ ನಂತರ ಕೊಳ್ಳುವ ಅವಕಾಶವನ್ನು ಮಿತಗೊಳಿಸಿರುತ್ತವೆ. ಷೇರುಪೇಟೆ ಸಂವೇದಿ ಸೂಚ್ಯಂಕವು ಕಳೆದವಾರ 147 ಪಾಯಿಂಟುಗಳ ಏರಿಕೆಯನ್ನು ಪಡೆದಿದೆಯಾದರೂ ಪ್ರಮುಖ ಕಂಪೆನಿಗಳಾದ ಎಕ್ಸೈಡ್ ಇಂಡಸ್ಟ್ರೀಸ್, ಕೋರಮಂಡಲ್ ಇಂಟರ್‌ನ್ಯಾಶನಲ್, ರಿಲೈಯನ್ಸ್ ಇನ್‌ಫ್ರಾಸ್ಟ್ರಕ್ಚರ್, ಒ.ಎನ್.ಜಿ.ಸಿ., ಸಿಂಟೆಕ್ಸ್‌ಗಳು ಕುಸಿತ ಕಂಡವು ಕಾರಣಗಳು ವೈವಿಧ್ಯಮಯವಾಗಿವೆ.ಒ.ಎನ್.ಜಿ.ಸಿ. ಕಂಪೆನಿಯ ಮುಂಬೈ ಬಂದರಿನಿಂದ ಸಮುದ್ರದಾಚೆಗೆ ಎಳೆದಿರುವ ಪೈಪ್‌ಲೈನ್‌ನಲ್ಲಿ ಉಂಟಾದ ಸೋರುವಿಕೆಯ ಕಾರಣ, ಮಾರಾಟದ ಒತ್ತಡವನ್ನೆದುರಿಸಿತು. ಇದಕ್ಕೆ ವಿರುದ್ಧವಾಗಿ ಸತತವಾದ ಇಳಿಕೆ ಕಂಡಿದ್ದ ಬ್ಯಾಂಕಿಂಗ್ ವಲಯದ ಕೆನರಾಬ್ಯಾಂಕ್, ಐಸಿಐಸಿಐ ಬ್ಯಾಂಕ್, ಅಲ್ಲಹಾಬಾದ್ ಬ್ಯಾಂಕ್‌ಗಳಲ್ಲದೆ ಉತ್ತಮ ಫಲಿತಾಂಶ ಪ್ರಕಟಿಸಿದ ಆಪ್ಟೋಸರ್ಕ್ಯುಟ್, ಎಲ್‌ಐಸಿ ಹೌಸಿಂಗ್, ಟಿ.ಸಿ.ಎಸ್. ಹೆಚ್‌ಸಿಎಲ್ ಟೆಕ್‌ಗಳು ಆಕರ್ಷಕ ಏರಿಕೆ ಪಡೆದವು.ಕಂಪೆನಿಗಳ ಫಲಿತಾಂಶದಿಂದ ಉತ್ತೇಜನಗೊಳ್ಳದೆ ಹಣದುಬ್ಬರ ಹಾಗೂ ಬಡ್ಡಿದರ ಏರಿಕೆಯ ಕರಾಳ ಪ್ರಭಾವವೋ ಹೆಚ್ಚಿ ವಹಿವಾಟಿನ ಗಾತ್ರವನ್ನು ಕ್ಷಿಣಿಸುವಂತೆ ಮಾಡಿತು. ವಿದೇಶೀ ವಿತ್ತೀಯ ಸಂಸ್ಥೆಗಳು ಒಟ್ಟಾರೆ ` 1680 ಕೋಟಿಗೂ ಹೆಚ್ಚು ಮಾರಾಟ ಮಾಡಿದರೆ ಸ್ವದೇಶೀ ಸಂಸ್ಥೆಗಳು ರೂ. 1310 ಕೋಟಿ ಮೌಲ್ಯದ ಷೇರು ಖರೀದಿಸಿದವು. ಷೇರುಪೇಟೆಯ ಬಂಡವಾಳೀಕರಣ ಮೌಲ್ಯವು ರೂ.  68.28 ಲಕ್ಷ ಕೋಟಿಯಲ್ಲಿ ಸ್ಥಿರತೆ ಕಂಡಿತ್ತು.ಬೋನಸ್ ಷೇರಿನ ವಿಚಾರ

* ಹಿಂದೂಸ್ಥಾನ್ ಷೇರಿನ ಝಿಂಕ್ ಕಂಪೆನಿಯು 1:1ರ ಅನುಪಾತದ ಬೋನಸ್ ಷೇರು ಪ್ರಕಟಿಸಿದೆ.

* ಔರಂ ಸಾಪ್ಟ್‌ವೇರ್ ಸಿಸ್ಟಂ ಕಂಪೆನಿ ವಿತರಿಸಲಿರುವ 1:2ರ ಅನುಪಾತದ ಬೋನಸ್ ಷೇರಿಗೆ ಫೆಬ್ರವರಿ 4, ನಿಗದಿತ ದಿನವಾಗಿದೆ.

* ಮಾರ್ಸನ್ಸ್ ಲಿ. ಕಂಪೆನಿಯು 1:4ರ ಅನುಪಾತದ ಬೋನಸ್ ಪ್ರಕಟಿಸಿದೆ.

* ಶ್ರೀನಾಥ್ ಕಮರ್ಷಿಯಲ್ ಅಂಡ್ ಫೈನಾನ್ಸ್ ಕಂಪೆನಿಯು 24 ರಂದು ಬೋನಸ್ ಷೇರು ವಿತರಣೆಯನ್ನು ಪರಿಶೀಲಿಸಲಿದೆ.

* ಬಂಡಾರಿ ಹೊಸೈರೀಸ್ ಎಕ್ಸ್‌ಪೋರ್ಟ್ ಲಿ. ಕಂಪೆನಿಯು 7:20ರ ಅನುಪಾತದ ಬೋನಸ್ ಪ್ರಕಟಿಸಿದೆ.

* ಎಸ್‌ಇ ಇನ್ವೆಸ್ಟ್‌ಮೆಂಟ್ಸ್ ಕಂಪೆನಿಯು 24 ರಂದು ಬೋನಸ್ ಷೇರು ವಿತರಣೆ ಪರಿಶೀಲನೆಯ ಸಭೆಯನ್ನು ಫೆಬ್ರವರಿ 7ಕ್ಕೆ ಮುಂದೂಡಿದೆ.ಹೊಸ ಷೇರಿನ ವಿಚಾರ

ಪ್ರತಿ ಷೇರಿಗೆ ` 110 ರಂತೆ ಸಾರ್ವಜನಿಕ ವಿತರಣೆ ಮಾಡಿದ ಸಿ. ಮಹೇಂದ್ರ ಎಕ್ಸ್‌ಪೋರ್ಟ್ ಲಿಮಿಟೆಡ್, ಕಂಪೆನಿಯು 20 ರಂದು ‘ಬಿ’ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಿ ಆರಂಭದ ದಿನ ರೂ. 110 ರಿಂದ ರೂ.  120.90 ರವರೆಗೆ ಏರಿಳಿತ ಕಂಡು ರೂ.  117 ರಲ್ಲಿ ವಾರಾಂತ್ಯ ಕಂಡಿತು.* ಮಿಡ್ ಡೇ ಮಲ್ಟಿಮೀಡಿಯಾದಿಂದ ಪ್ರಿಂಟಿಂಗ್ ವಿಭಾಗದ ಮಿಡ್‌ಡೇ ಇನ್‌ಫೊ ಮೀಡಿಯಾವನ್ನು ಬೇರ್ಪಡಿಸಿ ಜಾಗರಣ ಪ್ರಕಾಶನದಲ್ಲಿ ವಿಲೀನಗೊಳಿಸಿದ ನಂತರ ಉಳಿದ ಚಟುವಟಿಕೆಯ ಕಂಪೆನಿಯು 20 ರಿಂದ ಟಿ. ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಯಿತು.   ರೂ. 8.25 ರಲ್ಲಿ ವಾರಾಂತ್ಯ ಕಂಡಿತು.* ಟಾಟಾ ಸ್ಟೀಲ್ ಕಂಪೆನಿಯ ಮತ್ತಷ್ಟು ಷೇರು ವಿತರಣೆಯಲ್ಲಿ 83,25,000 ಷೇರುಗಳನ್ನು ಆ್ಯಂಕರ್ ಇನ್ವೆಸ್ಟರ್‌ಗಳಿಗೆ ವಿತರಿಸಿದ್ದು ಇದರಲ್ಲಿ ಅಬುದುಬೈ ಇನ್ವೆಸ್ಟ್‌ಮೆಂಟ್ ಅಥಾರಿಟಿ, ನೊಮುರಾ ಮಾರಿಷಸ್, ಮೆಕರಿ ಬ್ಯಾಂಕ್, ಕ್ರೆಡಿಟ್‌ಸ್ಯುಸೆ, ಗೌರ್ನಮೆಂಟ್ ಆಫ್ ಸಿಂಗಾಪುರ, ಮಾರ್ಗನ್‌ಸ್ಟಾನ್ಲಿ ಮುಂತಾದ ವಿದೇಶೀ ವಿತ್ತೀಯ ಸಂಸ್ಥೆಗಳಲ್ಲದೆ ರಿಲೈಯನ್ಸ್ ಲೈಫ್ ಇನ್ಸೂರನ್ಸ್, ಬಜಾಜ್ ಅಲೈಯನ್ಸ್ ಲೈಫ್ ಇನ್ಸೂರನ್ಸ್, ಮೆಟ್ ಲೈಫ್ ಇನ್ಸೂರನ್ಸ್‌ಗಳೂ ಸೇರಿವೆ.ಈ ಷೇರುಗಳು ಕೇವಲ ಒಂದು ತಿಂಗಳು ಮಾತ್ರ ಸ್ತಬ್ದವಾಗಿದ್ದು ನಂತರ ರಿಟೇಲ್ ವಿಭಾಗದಲ್ಲಿ ಕೇಲ 1.6 ಪಟ್ಟು ಸಂಗ್ರಹವಾಗಿದ್ದು ಹೆಚ್ಚಿನವರಿಗೆ ಉತ್ತಮ ಅಲ್ಲಾಟ್‌ಮೆಂಟ್ ದೊರೆಯಬಹುದಾಗಿದ್ದು, ಮಾರಾಟದ ಒತ್ತಡ ಸೃಷ್ಟಿಯಾಗಬಹುದಾಗಿದೆ.ಮುಖಬೆಲೆ ಸೀಳಿಕೆ ವಿಚಾರ

* ಕಿರಿಡೈಸ್ ಅಂಡ್ ಕೆಮಿಕಲ್ಸ್ ಕಂಪೆನಿಯು ಮುಖಬೆಲೆ ಸೀಳಿಕೆ ವಿಚಾರವನ್ನು ಕೈಬಿಟ್ಟಿದೆ.

* ಹಿಂದೂಸ್ಥಾನ್ ಝಿಂಕ್ ಕಂಪೆನಿಯು ತನ್ನ ಷೇರಿನ ಮುಖಬೆಲೆಯನ್ನು ಸದ್ಯದ ರೂ. 10 ರಿಂದ ` 2ಕ್ಕೆ ಸೀಳಲು ನಿರ್ಧರಿಸಿದೆ.

* ನೆಸ್ಕೊ ಲಿ. ಕಂಪೆನಿಯು ಫೆಬ್ರವರಿ 10 ರಂದು ಷೇರಿನ ಮುಖಬೆಲೆ ಸೀಳಿಕೆ ಪರಿಶೀಲಿಸಲಿದೆ.

* ಔರಂ ಸಾಪ್ಟ್‌ವೇರ್ ಸಿಸ್ಟಂ ಕಂಪೆನಿಯ ಷೇರಿನ ಮುಖಬೆಲೆಯನ್ನು ` 10 ರಿಂದ ` 2ಕ್ಕೆ ಸೀಳಲು ಫೆಬ್ರವರಿ 4 ನಿಗದಿತ ದಿನಾಂಕವಾಗಿದೆ.

* ಇಂಕಾ ಪೈನ್-ಲೀಸ್ ಕಂಪೆನಿಯ ಷೇರಿನ ಮುಖಬೆಲೆಯನ್ನು ` 10 ರಿಂದ ರೂ. 2ಕ್ಕೆ ಸೀಳಲಿದೆ.ಲಾಭಾಂಶ ವಿಚಾರ

ಕಂಟೇನರ್ಸ್‌ ಕಾರ್ಪೊರೇಷನ್ ಶೇ. 75 (ನಿಗದಿತ ದಿನ: 31.1.11) ಎಡಲ್ಪಿಸ್ ಕ್ಯಾಪಿಟಲ್ ಶೇ. 25 (ಮುಖಬೆಲೆ ರೂ.  1), ಪೊಸೆಕೊ ಶೇ. 70, ಗ್ರೀವ್ಸ್ ಕಾಟನ್ ಶೇ. 20 (ಮುಖಬೆಲೆ ರೂ.  2/- ನಿಗದಿತ ದಿನ: 7.2.11) ಹೆಚ್‌ಸಿಎಲ್ ಟೆಕ್ನಾಲಜಿ ಶೇ. 100 (ಮುಖಬೆಲೆ ರೂ.  2) ಪವರ್ ಫೈನಾನ್ಸ್ ಕಾರ್ಪೊರೇಷನ್ ಶೇ. 30, ಪರ್ಸಿಸ್ಟಂಟ್ ಸಿಸ್ಟಂ ಶೇ. 20, ರಾಣಿ ಮದ್ರಾಸ್ ಶೇ. 45 (ನಿಗದಿತ ದಿನ: 3.2.11), ಟಿ.ಸಿ.ಎಸ್. ಶೇ. 100 (ಮುಖಬೆಲೆ ರೂ.  1, ನಿ. ದಿ: 28.1.11), ಟ್ರಾನ್ಸ್‌ಪೋರ್ಟ್ ಕಾರ್ಪೊರೇಷನ್ ಶೇ. 20 (ಮುಖಬೆಲೆ ರೂ.  2), ಟಿವಿಎಸ್ ಮೋಟಾರ್ಸ್ ಶೇ. 50 (ಮುಖಬೆಲೆ ರೂ.  1), ವಿಪ್ರೊ ಶೇ. 100 (ಮುಖಬೆಲೆ ರೂ. 2).ಹಕ್ಕಿನ ಷೇರು ವಿತರಣೆ

* ಗಾಯತ್ರಿ ಪ್ರಾಜೆಕ್ಟ್ ಲಿ. ಕಂಪೆನಿ  ರೂ. 400 ಕೋಟಿ ಮೌಲ್ಯದ ಹಕ್ಕಿನ ಷೇರು ವಿತರಿಸಲಿದೆ.

* ಕರ್ನಾಟಕ ಬ್ಯಾಂಕ್ ಲಿ. ವಿತರಿಸುವ 2:5ರ ಅನುಪಾತದ ಹಕ್ಕಿನ ಷೇರು ಯೋಜನೆಗೆ ನಿಗದಿತ ದಿನ ಗೊತ್ತುಪಡಿಸಲು 24 ರಂದು ಆಡಳಿತ ಮಂಡಳಿ ಸಭೆ ಕರೆಯಲಾಗಿದೆ.

* ಇಂಡೋ ಫೈನಾನ್ಸ್ ಲಿ. 21 ರಂದು ಹಕ್ಕಿನ ಷೇರು ಯೋಜನೆ ಪರಿಶೀಲಿಸಿದೆ.ಮೈಸೂರ್ ಲ್ಯಾಂಪ್ಸ್

ಈ ಕಂಪೆನಿಯನ್ನು ಸಂಪೂರ್ಣವಾಗಿ ಮುಚ್ಚುವ ಸರ್ಕಾರದ ಯೋಜನೆಯನ್ನು ಪ್ರಶ್ನಿಸಿದ್ದ ಕಾರ್ಮಿಕ ವೃಂದದ ವಾದವನ್ನು ರಾಜ್ಯ ಹೈಕೋರ್ಟ್ ಪುರಸ್ಕರಿಸಿ ಸರ್ಕಾರ ಜನವರಿ 4, 2002 ರಂದು ಹೊರಡಿಸಿದ್ದ ಆದೇಶವನ್ನು ರದ್ದುಗೊಳಿಸಿದೆ. ಹಾಗೂ ಕಾರ್ಮಿಕ ವೃಂದಕ್ಕೆ ಸಲ್ಲಬೇಕಾದ ಸವಲತ್ತುಗಳ ಪರಿಹಾರವನ್ನು ಪುನರ್ ಪರಿಶೀಲಿಸಬೇಕೆಂದು ಆದೇಶಿಸಿದೆ.ಹೂಡಿಕೆದಾರರ ಶಿಬಿರ

‘ಬುಲ್ಸ್ ಐ’ ಅಕಾಡೆಮಿಯವರು ಜನವರಿ 30 ರಂದು ಭಾನುವಾರ ಮಲ್ಲೇಶ್ವರದ ‘ಎಂಎಲ್‌ಎ’ ಕಾಲೇಜಿನ ಆವರಣದಲ್ಲಿ ಹೂಡಿಕೆದಾರರ ಜಾಗೃತಿ ಶಿಬಿರವನ್ನು ಏರ್ಪಡಿಸಿದ್ದಾರೆ. ಬೆಂಗಳೂರು ಷೇರು ವಿನಿಮಯ ಕೇಂದ್ರದ ಸದಸ್ಯರಾದ ಕೆ.ಜಿ. ಕೃಪಾಲ್‌ರವರು ಮತ್ತು ಪರಿಭಾಷಿಕ ವಿಶ್ಲೇಷಕರಾದ ಶ್ರೀಯುತ ರುದ್ರಮೂರ್ತಿಯವರು ಉಪನ್ಯಾಸ ನೀಡುವರು. ಭಾಗವಹಿಸಲು ಆಸಕ್ತರು ಸಾಗರ್ ಅವರನ್ನು ಮೊಬೈಲ್ ಸಂಖ್ಯೆ 9731199114 ರಲ್ಲಿ ಸಂಪರ್ಕಿಸಬಹುದು.

ವಾರದ ಪ್ರಶ್ನೆ

ಟಾಟಾ ಕಾಫಿ ಷೇರನ್ನು ಈಗಿನ ದರದಲ್ಲಿ ಕೊಳ್ಳಬಹುದೇ, ಈ ಷೇರು ರೂ. 900 ರವರೆಗೂ ಹೋಗುವ ಸಾಧ್ಯತೆ ಇದೆ ಎನ್ನುವರು ದಯವಿಟ್ಟು ತಿಳಿಸಿರಿ?

ಉತ್ತರ:
ಟಾಟಾ ಕಾಫಿ ಕಂಪೆನಿಯು ಪ್ರಪ್ರಥಮವಾಗಿ ಉತ್ತಮವಾದ ಕಂಪೆನಿ. ಈ ಕಂಪೆನಿ 19 ಕಾಫಿ ಎಸ್ಟೇಟ್‌ಗಳನ್ನು ಹೊಂದಿದೆ. ಕೊಡಗು, ಹಾಸನ ಚಿಕ್ಕಮಂಗಳೂರು ಜಿಲ್ಲೆ ತಮಿಳುನಾಡಿನ ವಲ್‌ಪರೈ ಜಿಲ್ಲೆಯಲ್ಲೂ ಸುಮಾರು 8 ಸಾವಿರ ಹೆಕ್ಟೇರ್‌ನ ಎಸ್ಟೇಟ್ ಹೊಂದಿರುವ ಈ ಕಂಪೆನಿ ಹತ್ತು ಸಾವಿರ ಮೆಟ್ರಿಕ್ ಟನ್ ಅರೇಬಿಕಾ ಮತ್ತು ರೊಬೊಸ್ಟ ಬೀಜಗಳನ್ನು ಉತ್ಪಾದಿಸುತ್ತದೆ.ಇದಲ್ಲದೆ ನಾಲ್ಕು ಸಾವಿರದೈದುನೂರು ಹೆಕ್ಟೇರ್ ಟೀ ಎಸ್ಟೇಟ್ ಸಹ ಹೊಂದಿದ್ದು 6.5 ದಶಲಕ್ಷ ಕಿಲೋ ಟೀ ಉತ್ಪಾದಿಸುತ್ತಿದೆ. ಈ ಕಂಪೆನಿಯ ಮೂಲವು ವಿದೇಶೀ ಸ್ವಾಮ್ಯದ್ದಾಗಿ ಈ ಹಿಂದೆ ಕನ್ಸಾಲಿಡೇಟೆಡ್ ಕಾಫಿ ಲಿ. ಎಂದಿತ್ತು 1991-92 ರಲ್ಲಿ ಟಾಟಾ ಟೀ ಕಂಪೆನಿ ತೆರೆದ ಕರೆಯ ಮೇಲೆ ಕಂಪೆನಿಯ ನಿಯಂತ್ರಣ ಪಡೆದು ಟಾಟಾ ಸಮೂಹಕ್ಕೆ ಸೇರಿಸಿಕೊಂಡಿತು. 1999 ರಲ್ಲಿ ಏಶಿಯನ್ ಕಾಫಿಯೊಂದಿಗೆ ಮತ್ತೆರಡು ಕಂಪೆನಿಗಳನ್ನು ವಿಲೀನಗೊಳಿಸಿಕೊಂಡು, ವಿಶ್ವದ ಸಮಗ್ರ ತೋಟದ ಕಂಪೆನಿಯಾಗಿ ಹೊರಹೊಮ್ಮಿತು. 2000ದಲ್ಲಿ ಈ ಕಂಪೆನಿಯ ಹೆಸರನ್ನು ‘ಟಾಟಾ ಕಾಫಿ’ ಎಂದು ಬದಲಿಸಲಾಯಿತು.ಕಂಪೆನಿಯ ಕಳೆದ ಡಿಸೆಂಬರ್‌ನಲ್ಲಿ ಶೇ. 50ರ ಲಾಭಾಂಶ ವಿತರಿಸಿದೆ. ರೂ. 18.68 ಕೋಟಿ ಬಂಡವಾಳವಿರುವ ಈ ಕಂಪೆನಿಯ ಕಳೆದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ರೂ. 10.93 ಕೋಟಿ ಲಾಭ ಗಳಿಸಿದೆ. ಈ ಕಂಪೆನಿಯು ಇತ್ತೀಚೆಗೆ ‘ಸ್ಟಾರ್‌ಬಕ್ಸ್’ ಕಂಪೆನಿಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಸರಣಿ ಕೆಫೆ, ಬೀಜ ಸಂಗ್ರಹಣೆ, ಬೀಜ ಹುರಿಯುವಿಕೆ ವಲಯಕ್ಕೆ ಪ್ರವೇಶಿಸಲಿದೆ.ಈ ಕಂಪೆನಿಯ ಷೇರಿನ ಬೆಲೆಯು ಕಳೆದ ಒಂದು ವರ್ಷದಲ್ಲಿ ಕನಿಷ್ಠ ರೂ. 326 ರಿಂದ ಗರಿಷ್ಠ 730 ರವರೆಗೂ ಇದೆ. ಶುಕ್ರವಾರ 21 ರಂದು ಮಧ್ಯಂತರದಲ್ಲಿ ತಲುಪಿದ ರೂ.  730.80 ವಾರ್ಷಿಕ ಗರಿಷ್ಠವಾಗಿದೆ. ಕಳೆದ ಒಂದು ತಿಂಗಳಲ್ಲಿ ರೂ.  455 ಕನಿಷ್ಠ ಬೆಲೆಯಾಗಿದ್ದು ಈಗ ರೂ. 714ರ ಸಮೀಪವಿದೆ.ಹಿಂದಿನ ತಿಂಗಳು ಹಿತಾಸಕ್ತ ಚಟುವಟಿಕೆಗಳನ್ನು ತನಿಖೆಗೊಳಪಡಿಸುವ ಸುದ್ದಿಯಿಂದ ಪೇಟೆಯು ಭಾರಿ ಕುಸಿತ ಕಂಡ ಸಮಯದಲ್ಲಿ ಈ ಕಂಪೆನಿಯ ಷೇರು 10ನೇ ಡಿಸೆಂಬರ್ ರೂ. 355 ರವರೆಗೂ ಕುಸಿದು ಜನವರಿ 21ಕ್ಕೆ ರೂ. 730 ರವರೆಗೂ ಜಿಗಿದು ರೂ. 714.90 ರಲ್ಲಿರುವ ಈ ಕಂಪೆನಿಯು ಈ ಹಂತದಲ್ಲಿ ಹೂಡಿಕೆಗೆ ಆಯ್ಕೆ ಮಾಡಿಕೊಳ್ಳುವುದು ತರವಲ್ಲ. ಕಂಪೆನಿಯು ಒಳ್ಳೆಯದೆಂದು ಗರಿಷ್ಠ ಹಂತದಲ್ಲಿ ಕೊಂಡರೆ ಹೂಡಿಕೆ ಬೆಳೆಯಲು ಅವಕಾಶವೆಲ್ಲಿ? ಇದು ಮಾರಾಟಕ್ಕೆ ಯೋಗ್ಯ ದರ, ಕೊಳ್ಳುವುದಕ್ಕಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry