ಶುಕ್ರವಾರ, ಮೇ 20, 2022
21 °C

ಪೇಟೆಯಲ್ಲಿ ರೋಬಸ್ಟ ಕಾಫಿ ಘಮ ಘಮ

ಕೆ.ಜಿ. ಕೃಪಾಲ್ Updated:

ಅಕ್ಷರ ಗಾತ್ರ : | |

ಷೇರುಪೇಟೆಯನ್ನು ವರ್ಣಿಸುವಾಗ ಕೇವಲ ಸಂವೇದಿ ಸೂಚ್ಯಂಕವನ್ನಾಧರಿಸಿ ತೇಜಿಯಲ್ಲಿದೆ ಅಥವಾ ಇಳಿಕೆಯಲ್ಲಿದೆ ಎಂಬ ನಿರ್ಧಾರಕ್ಕೆ ಬರುವ ಕಾಲವಿದಲ್ಲ ಹಲವಾರು ಷೇರುಗಳು ವೈಯುಕ್ತಿಕ ಬೇಡಿಕೆ-ಪೂರೈಕೆಗೆ ತಕ್ಕಂತೆ ಏರಿಳಿತ ಕಾಣುತ್ತವೆ ಇದಕ್ಕೆ ಸೂಚ್ಯಂಕದ ದಿಶೆಯ ಅಗತ್ಯವಿಲ್ಲ ಉದಾಹರಣೆಯಾಗಿ ಹಿಂದಿನವಾರ ಅಂದರೆ ಶುಕ್ರವಾರ 11 ರಂದು ಅಂತ್ಯಗೊಂಡವಾರದಲ್ಲಿ ಸಂವೇದಿ ಸೂಚ್ಯಂಕ ಒಟ್ಟಾರೆ 312 ಪಾಯಿಂಟುಗಳ ಹಾನಿ ಅನುಭವಿಸಿ ಜೊತೆಗೆ ಮಧ್ಯಮ ಶ್ರೇಣಿ ಸೂಚ್ಯಂಕ 62 ಪಾಯಿಂಟುಗಳ, ಕೆಳಮಧ್ಯಮ ಶ್ರೇಣಿ ಸೂಚ್ಯಂಕ 99 ಪಾಯಿಂಟುಗಳ ಇಳಿಕೆ ಕಾಣುವಂತೆ ಮಾಡಿತು. ಸೋಜಿಗವೆಂದರೆ ವಿದೇಶೀ ವಿತ್ತೀಯ ಸಂಸ್ಥೆಗಳು ವಾರದಲ್ಲಿ ಒಟ್ಟಾರೆ 25 ಕೋಟಿ ರೂಪಾಯಿಗಳಷ್ಟು ಹಾಗೂ ಸ್ಥಳೀಯ ವಿತ್ತೀಯ ಸಂಸ್ಥೆಗಳ    ರೂ 239 ಕೋಟಿಯಷ್ಟು ಹಣ ಹೂಡಿಕೆ ಮಾಡಿವೆ. ಆದರೂ ಷೇರುಪೇಟೆಯ ಬಂಡವಾಳೀಕರಣ ಮೌಲ್ಯ ಅದರ ಹಿಂದಿನ ವಾರದ    ರೂ 65.29 ಲಕ್ಷ ಕೋಟಿಯಿಂದ  ರೂ 64.66 ಲಕ್ಷ ಕೋಟಿಗೆ ಇಳಿದಿತ್ತು. ಅಂದರೆ ಪ್ರತಿಯೊಂದಕ್ಕೂ ಅವುಗಳದೇ ಆದ ಕಾರಣವಿದೆ.ಸಾಮಾನ್ಯವಾಗಿ ಮದಿರೆಯ ಪಾನೀಯಗಳು, ಅಡ್ಡಾದಿಡ್ಡಿ ನಡೆಗೆ ಕಾರಣವಾದರೆ ಷೇರುಪೇಟೆಯಲ್ಲಿ ಹಿಂದಿನವಾರ ಕಾಫಿಯು ಅದೇ ಪ್ರಭಾವ ಬೀರಿದೆ. ಅಂದರೆ ಟಾಟಾ ಕಾಫಿ ಕಂಪೆನಿಯು ಒಂದೇ ವಾರದಲ್ಲಿ  ರೂ 575 ರ ಸಮೀಪದಿಂದ  ರೂ  847 ರವರೆಗೆ ಏರಿಕೆ ಕಂಡಿದ್ದು ಇದು ಹಿಂದಿನವಾರ ಅತ್ಯಂತ ಗರಿಷ್ಠವಾದ ಏರಿಕೆ ಅಂದರೆ ಶೇ. 47ಕ್ಕೂ ಹೆಚ್ಚಿನ ಮುನ್ನಡೆ ಗಳಿಸಿದ ಷೇರಾಗಿ ಹೊರಹೊಮ್ಮಿದೆ. ಈ ರಭಸದ ಏರಿಕೆಗೆ ಕಾರಣ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಅರೇಬಿಕಾ, ರೊಬಸ್ಟಗಳು ಅತ್ಯಂತ ಗಣನೀಯ ಏರಿಕೆ ಕಂಡಿರುವುದು ಅಲ್ಲದೆ ಕಂಪೆನಿಯ ಮತ್ತೊಂದು ಉತ್ಪನ್ನ ಕಾಳುಮೆಣಸಿನ ಬೆಲೆಯು ಹೆಚ್ಚಾಗಿರುವುದು, ಈ ಕಂಪೆನಿಯ ಷೇರಿನ ಬೆಲೆ ದಿಢೀರ್ ಹೆಚ್ಚಾಗಲು ಪ್ರೇರಕ ಅಂಶವಾಗಿದೆ.

ಶುಕ್ರವಾರದಂದು ಜಪಾನಿನಲ್ಲುಂಟಾದ ಭೂಕಂಪ- ಸುನಾಮಿಯೂ ಈ ಷೇರಿನ ಏರಿಕೆಗೆ ತಡೆಯಾಗದಾಯಿತು. ಈ ಕಂಪೆನಿಯ ಪ್ರವರ್ತಕ ಕಂಪೆನಿ ಟಾಟಾ ಗ್ಲೋಬಲ್ ಬೆವರೇಜಸ್ ಹೊಂದಿರುವ ಶೇ 57.48ರ ಭಾಗಿತ್ವವು ಸಂಪೂರ್ಣವಾಗಿ ಒತ್ತೆ ಇಡಲಾಗಿದೆ.

ಹೊಸ ಷೇರಿನ ವಿಚಾರ

* ಅಕ್ರೊಪೆಟಲ್ ಟೆಕ್ನಾಲಜೀಸ್ ಲಿಮಿಟೆಡ್ ಕಂಪೆನಿಯು ಇತ್ತೀಚೆಗೆ ಪ್ರತಿ ಷೇರಿಗೆ  ರೂ 90 ರಂತೆ ಸಾರ್ವಜನಿಕ ವಿತರಣೆ ಮಾಡಿದ್ದು ಮಾ. 10 ರಂದು ಬಿ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಿ ಆರಂಭದ ದಿನ  ರೂ 89 ರಿಂದ     ರೂ 150 ರವರೆಗೆ ಏರಿಳಿತ ಕಂಡು  ರೂ 101:35 ರಲ್ಲಿ ವಾರಾಂತ್ಯ ಕಂಡಿತು.

* ಸುದಾರ್ ಗಾರ್ಮೆಂಟ್ಸ್ ಲಿಮಿಟೆಡ್ ಕಂಪೆನಿಯು ಪ್ರತಿ ಷೇರಿಗೆ  ರೂ  77 ರಂತೆ ಸಾರ್ವಜನಿಕ ವಿತರಣೆ ಮಾಡಿದ್ದು ಮಾರ್ಚ್ 11 ರಿಂದ ‘ಬಿ’ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಿ ಆರಂಭದ ದಿನ ರೂ 74 ರಿಂದ  ರೂ 117.70 ರವರೆಗೆ ಏರಿಳಿತ ಕಂಡು  ರೂ 113.10 ರಲ್ಲಿ ಅಂತ್ಯಗೊಂಡಿತು.

* ಇತ್ತೀಚೆಗೆ ಪ್ರತಿ ಷೇರಿಗೆ  ರೂ 70 ರಂತೆ ಸಾರ್ವಜನಿಕ ವಿತರಣೆ ಮಾಡಿದ ಫೈನಿಮೊ ಟೆಕ್ಸ್ ಕೆಮಿಕಲ್ಸ್ ಲಿಮಿಟೆಡ್ ಮಾರ್ಚ್ 11 ರಂದು ‘ಬಿ’ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಯಿತು. ಆರಂಭದ ದಿನ  ರೂ 74.10 ರಿಂದ  ರೂ 157.90 ರವರೆಗೆ ಏರಿಳಿತ ಕಂಡು  ರೂ 140.90 ರಲ್ಲಿ ವಾರಾಂತ್ಯ ಕಂಡಿತು.

* ಸೆಲೆಬ್ರಿಟಿ ಫ್ಯಾಷನ್ಸ್ ಲಿ. ನಿಂದ ಬೇರ್ಪಡಿಸಿ ಅದರ ಟೆರೈನ್ ವಿಭಾಗ ಪಡೆದ ಇಂಡಿಯನ್ ಟೆರೈನ್ ಫ್ಯಾಷನ್ ಲಿಮಿಟೆಡ್ ಕಂಪೆನಿಯು ಮಾರ್ಚ್ 11 ರಂದು ‘ಟಿ’ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಯಿತು. ಅಂದು  ರೂ 40 ರಿಂದ ರೂ 92.60 ರವರೆಗೆ ಏರಿಳಿತ ಕಂಡು     ರೂ 85 ರಲ್ಲಿ ವಾರಾಂತ್ಯ ಕಂಡಿತು. ಪ್ರತಿ 7 ಸೆಲೆಬ್ರಿಟಿ ಫ್ಯಾಷನ್ ಷೇರಿಗೆ 2 ಇಂಡಿಯನ್ ಟೆರೈನ್ ಫ್ಯಾಷನ್ ಷೇರು ನೀಡಲಾಗಿತ್ತು.

* ಹಿಮಾಚಲ್ ಪ್ಯುಚರಿಸ್ಟಿಕ್ ಕಮ್ಯುನಿಕೇಷನ್ ಲಿ. ಕಂಪೆನಿಯ ಷೇರಿನ ಬಂಡವಾಳವನ್ನು ಶೇ. 90 ರಷ್ಟು ಕಡಿತಗೊಳಿಸಿ, ಅಂದರೆ  ರೂ 10ರ ಮುಖಬೆಲೆಯ ಷೇರನ್ನು  ರೂ 1ಕ್ಕೆ ಇಳಿಸಿ, ತನ್ನ ಹೊಸ ಅವತಾರದಲ್ಲಿ 9 ರಿಂದ ಟಿ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಿದೆ.

ಬೋನಸ್ ಷೇರಿನ ವಿಚಾರ

* ಸಾರ್ವಜನಿಕ ವಲಯದ ನ್ಯಾಶನಲ್ ಅಲ್ಯುಮಿನಿಯಂ ಕಂಪೆನಿಯು ವಿತರಿಸಲಿರುವ 1:1ರ ಬೋನಸ್ ಷೇರಿಗೆ ಮಾರ್ಚ್ 16 ನಿಗದಿತ ದಿನವಾಗಿದೆ. ಮಾರ್ಚ್ 15 ರಿಂದ ಬೋನಸ್ ಷೇರು ರಹಿತ ವಹಿವಾಟು ಆರಂಭವಾಗಲಿದೆ.

* ಆನ್ ಮೊಬೈಲ್ ಗ್ಲೋಬಲ್ ಲಿ. ಕಂಪೆನಿಯು 1:1ರ ಅನುಪಾತದ ಬೋನಸ್ ಷೇರು ಪ್ರಕಟಿಸಿದೆ.

* ಶಕ್ತಿ ಪಂಪ್ಸ್ (ಇಂಡಿಯಾ) ಲಿ. ಕಂಪೆನಿಯು 1:1ರ ಅನುಪಾತದ ಬೋನಸ್ ಷೇರು ವಿತರಿಸಲಿದೆ.

* ಟೆಕ್ಸ್‌ಟೈಲ್ ವಲಯದ ಎಸಿಐಎಲ್ ಕಾಟನ್ ಇಂಡಸ್ಟ್ರೀಸ್ ಕಂಪೆನಿ ಸಹ 1:1ರ ಅನುಪಾತದ ಬೋನಸ್ ಪ್ರಕಟಿಸಿದೆ.ಬೋನಸ್ ಡಿಬೆಂಚರ್

ಡಾಕ್ಟರ್ ರೆಡ್ಡಿಸ್ ಲ್ಯಾಬೊರೆಟರೀಸ್ ಲಿಮಿಟೆಡ್ ಕಂಪೆನಿಯು ವಿತರಿಸಬೇಕೆಂದಿರುವ ರೂ 5ರ ಮುಖಬೆಲೆಯ ಶೇ. 9.25ರ ಬಡ್ಡಿ ನೀಡುವ ಡಿಬೆಂಚರ್‌ಗಳನ್ನು ಪ್ರತಿ ಒಂದು ಷೇರಿಗೆ 6 ಡಿಬೆಂಚರ್‌ಗಳನ್ನು ನೀಡಲು ಆಂಧ್ರಪ್ರದೇಶದ ಹೈಕೋರ್ಟ್ ಅನುಮತಿಸಿದೆ ಈ ಕಾರಣ ಕಂಪೆನಿಯು 18ನೇ ಮಾರ್ಚ್ ನಿಗದಿತ ದಿನವಾಗಿ ಪ್ರಕಟಿಸಿದೆ. ಈ ಡಿಬೆಂಚರ್‌ಗಳ ಅವಧಿ 3 ವರ್ಷಗಳಾಗಿದೆ.ಹಕ್ಕಿನ ಷೇರು ವಿಚಾರ

* ಸಾರ್ವಜನಿಕ ವಲಯದ ಸ್ಟೇಟ್ ಬ್ಯಾಂಕ್ ಆಫ್ ಬಿಕನೂರ್ ಅಂಡ್ ಜಯಪುರ್ ವಿತರಿಸಲಿರುವ 2:5ರ ಅನುಪಾತದ ಪ್ರತಿ ಷೇರಿಗೆ  ರೂ 390 ರಂತೆ, ಹಕ್ಕಿನ ಷೇರಿಗೆ ಮಾರ್ಚ್ 17 ನಿಗದಿತ ದಿನವಾಗಿದೆ. ಹಕ್ಕಿನ ಷೇರು ವಿತರಣೆಯು ಮಾರ್ಚ್ 28 ರಿಂದ ಏಪ್ರಿಲ್ 11ರ ವರೆಗೆ ತೆರೆದಿರುತ್ತದೆ. ಎರಡು ಅಥವಾ ಅದಕ್ಕೂ ಕಡಿಮೆ ಷೇರು ಹೊಂದಿರುವವರಿಗೆ ಕನಿಷ್ಠ ಒಂದು ಷೇರನ್ನಾದರೂ ನೀಡುವ ಭರವಸೆ ಕಂಪೆನಿ ಪ್ರಕಟಿಸಿದೆ.

* ಸಾರ್ವಜನಿಕ ವಲಯದ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ವಿತರಿಸಲಿರುವ 3:5ರ ಅನುಪಾತದ ಹಕ್ಕಿನ ಷೇರಿನ ಬೆಲೆಯು ರೂ. 103 ಎಂದು ನಿಗಧಿಯಾಗಿದ್ದು ಮಾರ್ಚ್ 18 ನಿಗಧಿತ ದಿನವಾಗಿದೆ.

* ಎಲ್‌ಪೋರ್ಜ್ ಲಿ. ಕಂಪೆನಿಯು 16 ರಂದು ಹಕ್ಕಿನ ಏರಿನ ವಿತರಣೆಯನ್ನು ಪರಿಶೀಲಿಸಲಿದೆ.

ಮುಖ ಬೆಲೆ ಸೀಳಿಕೆ ವಿಚಾರ

* ನ್ಯಾಶನಲ್ ಅಲ್ಯುಮಿನಿಯಂ ಕಂಪೆನಿಯು ತನ್ನ ಷೇರಿನ ಮುಖಬೆಲೆಯನ್ನು  ್ಙ 10 ರಿಂದ  ್ಙ 5ಕ್ಕೆ ಸೀಳಲು ಮಾರ್ಚ್ 16 ನಿಗದಿತ ದಿನವಾಗಿದೆ. 15 ರಿಂದಲೇ ಹೊಸ ಅವತಾರದಲ್ಲಿ ವಹಿವಾಟು ಆರಂಭವಾಗಲಿದೆ.

* ಎಕ್ಸಿಲಾನ್ ಇನ್‌ಫ್ರಾಸ್ಟ್ರಕ್ಚರ್ ಕಂಪೆನಿಯ ಷೇರಿನ ಮುಖಬೆಲೆಯನ್ನು  ್ಙ 10 ರಿಂದ      ್ಙ 5ಕ್ಕೆ ಸೀಳಲು ಮಾರ್ಚ್ 25 ನಿಗದಿತ ದಿನಾಂಕವಾಗಿದೆ.

* ಬಾಫನ್ ಸ್ಪಿನ್ನಿಂಗ್ ಮಿಲ್ಸ್ ಅಂಡ್ ಎಕ್ಸ್‌ಫೋರ್ಟ್ಸ್ ಲಿ. ಕಂಪೆನಿಯು ಷೇರಿನ ಮುಖಬೆಲೆಯನ್ನು ಸಧ್ಯದ  ್ಙ 5 ರಿಂದ  ್ಙ 1ಕ್ಕೆ ಸೀಳಲು ನಿರ್ಧರಿಸಿದೆ.ವಾರದ ಪ್ರಶ್ನೆ

ನ್ಯಾಶನಲ್ ಸ್ಪಾಟ್ ಎಕ್ಸ್‌ಚೆಂಜ್‌ನಲ್ಲಿ ಬಂಗಾರ ಕೊಳ್ಳುವುದಕ್ಕೂ ಎಕ್ಸ್‌ಚೇಂಜ್ ಟ್ರೇಟೆಡ್ ಗೋಲ್ಡ್ ಫಂಡ್‌ಗಳ ಯೂನಿಟ್ ಕೊಳ್ಳುವುದಕ್ಕೂ ಇರುವ ವ್ಯತ್ಯಾಸವೇನು? ಇದರಲ್ಲಿ ಯಾವುದು ಸಣ್ಣ ಹೂಡಿಕೆದಾರರಿಗೆ ಅನುಕೂಲಕರ. ದಯವಿಟ್ಟು ತಿಳಿಸಿರಿ.ಉತ್ತರ: ನ್ಯಾಶನಲ್ ಸ್ಪಾಟ್ ಎಕ್ಸ್‌ಚೇಂಜ್‌ನಲ್ಲಿನ ವ್ಯವಹಾರವು ಮೂಲ ಲೋಹ ಅಂದರೆ ಬೆಳ್ಳಿ, ಬಂಗಾರ, ತಾಮ್ರ, ಸತು ಮತ್ತು ಸೀಸಗಳಲ್ಲಿ ವಹಿವಾಟಾಗುತ್ತಿದ್ದು ಇಲ್ಲಿ ಬಂಗಾರವು ಒಂದು ಗ್ರಾಂ ಘಟಕದಲ್ಲಿ, ಬೆಳ್ಳಿಯು 100 ಗ್ರಾಂಗಳ ಘಟಕಗಳಲ್ಲಿ ವಹಿವಟಿಗೆ ಅವಕಾಶವಿದೆ. ಇಲ್ಲಿ ನಡೆಸುವ ವಹಿವಾಟಿನಲ್ಲಿ ಕೊಳ್ಳುವ ಅಥವಾ ಮಾರಾಟ ಮಾಡುವ ಲೋಹವು ಡಿ-ಮ್ಯಾಟ್ ರೂಪದಲ್ಲಿದ್ದು ಕೊಂಡಂತಹ ಲೋಹಕ್ಕೆ ಅಕ್ಷರಶಃ ಮಾಲಿಕರಾಗುವರು.ಎಕ್ಸ್‌ಚೇಂಜ್ ಟ್ರೇಡ್ ಫಂಡ್‌ಗಳ ಯೂನಿಟ್‌ಗಳು ಒಂದು ಗ್ರಾಂ ಬಂಗಾರದ ಘಟಕವನ್ನಾಧರಿಸಿರುತ್ತದೆ. ಇಲ್ಲಿ ಬಂಗಾರದಲ್ಲಿ ಮ್ಯೂಚುಯಲ್ ಫಂಡ್ ಮೂಲಕ ಹೂಡಿಕೆ ಮಾಡಲಾಗುವುದು. ಅಂದರೆ ಇದು ಒಂದು ರೀತಿಯ ಪಾಲುದಾರಿಕೆ ಹೂಡಿಕೆಯಾಗುತ್ತದೆ. ಆ ನಿಧಿ ನಿರ್ವಹಣಾ ಸಂಸ್ಥೆಯ ಚಟುವಟಿಕೆಯನ್ನಾಧರಿಸಿ ಯೋಜನೆಯ ಲಾಭ ನಿರ್ಧರಿತವಾಗುವುದು. ಎಕ್ಸ್‌ಚೇಂಜ್ ಟ್ರೇಡೆಡ್ ಫಂಡ್‌ಗಳ ಯೂನಿಟ್‌ಗಳು ಸಹ ಡಿಮ್ಯಾಟ್ ರೂಪದಲ್ಲಿರುತ್ತದೆ.ಸ್ಪಾಟ್ ಎಕ್ಸ್‌ಚೇಂಜ್‌ನಲ್ಲಿ ಬಂಗಾರವನ್ನು ಕೊಳ್ಳುವ ಅಥವ ಮಾರಾಟ ಮಾಡುವ ನಿರ್ಧಾರ ಹೂಡಿಕೆದಾರರದಾಗಿರುತ್ತದೆ.ಆದರೆ ಗೋಲ್ಡ್ ಇ.ಟಿ.ಎಫ್.ಗಳಲ್ಲಿನ ಯೂನಿಟ್‌ಗಳ ವಹಿವಾಟು ಮಾತ್ರ ಹೂಡಿಕೆದಾರರು ನಡೆಸಬಹುದು. ನೇರವಾಗಿ ಬಂಗಾರವನ್ನಲ್ಲ. ಈ ಎರಡು ವಿಭಾಗಗಳಲ್ಲಿಯೂ ಷೇರುದಲ್ಲಾಲರಿಗೆ ಬ್ರೋಕರೇಜ್ ನೀಡಬೇಕಾಗಿರುವುದು, ಡಿಮ್ಯಾಟ್ ನಿರ್ವಹಣೆ ವೆಚ್ಚವಿರುತ್ತದೆ. ಗೋಲ್ಡ್ ನಿರ್ವಹಣಾ ಶುಲ್ಕವನ್ನು ನೀಡಬೇಕಾಗುತ್ತದೆ ಮತ್ತು ಈ ಯೂನಿಟ್ ಬೆಲೆಗಳು ಪರೋಕ್ಷವಾಗಿ ಬಂಗಾರದ ಬೆಲೆ ಅವಲಂಭಿಸುತ್ತವೆ.ಸ್ಪಾಟ್ ಎಕ್ಸ್‌ಚೇಂಜ್‌ನಲ್ಲಿ ಬಂಗಾರ, ಬೆಳ್ಳಿಗಳ ನೇರವಾಗಿ ಪೇಟೆಯ ಬೆಲೆಯನ್ನಾಧರಿಸಿರುತ್ತವೆ. ಹಾಗೂ ಸ್ಪಾಟ್ ಎಕ್ಸ್‌ಚೇಂಜ್‌ನ ಬಂಗಾರವನ್ನು ಭೌತಿಕವಾದ ಬಂಗಾರಕ್ಕೆ ಕೆಲವು ಆಯ್ದ ಅಧಿಕೃತ ಸಂಸ್ಥೆಗಳಲ್ಲಿ ಪರಿವರ್ತಿಸಿ ಕೊಳ್ಳಬಹುದಾಗಿದೆ. ಆದರೆ ಗೋಲ್ಡ್ ಇಟಿಎಫ್‌ಗಳಲ್ಲಿ ಈ ಪರಿವರ್ತನೆಗೆ ಅವಕಾಶವಿಲ್ಲ. ಈ ಕಾರಣಗಳಿಂದಾಗಿ ನ್ಯಾಶನಲ್ ಸ್ಪಾಟ್ ಎಕ್ಸ್‌ಚೇಂಜ್‌ನಲ್ಲಿನ ಹೂಡಿಕೆ ನೇರವಾಗಿದ್ದು ಅನುಕೂಲಕರವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.