ಬುಧವಾರ, ನವೆಂಬರ್ 13, 2019
28 °C

ಪೇಟೆ ಚೇತರಿಕೆ-ತಪ್ಪಿದ ಸುವರ್ಣಾವಕಾಶ

Published:
Updated:

ಇತ್ತೀಚಿನ ದಿನಗಳಲ್ಲಿ ಷೇರುಪೇಟೆಯಲ್ಲಿ ಕಾಣುತ್ತಿರುವ ಏರಿಳಿತದ ವೇಗ ಸಣ್ಣ ಹೂಡಿಕೆದಾರರನ್ನು ವಹಿವಾಟಿನಿಂದಲೇ ದೂರ ತಳ್ಳುತ್ತಿದೆ.ಹಿಂದೆಲ್ಲ ಕಂಪೆನಿಯ ಸಾಧನೆ, ಅದರ ಲಾಭಾಂಶ, ಪುಸ್ತಕ ಮೌಲ್ಯ, ಪ್ರತಿ ಷೇರಿನಗಳಿಕೆ, ಕಂಪೆನಿಯ ಭವಿಷ್ಯದ ಯೋಜನೆಗಳು, ಪ್ರವರ್ತಕರ ಸಾಮರ್ಥ್ಯ ಮೊದಲಾದ ಅಂಶಗಳನ್ನು ಪರಿಗಣಿಸಿಯೇ ಹೂಡಿಕೆ ಮಾಡುತ್ತಿದ್ದ ಪದ್ಧತಿ ಇದ್ದಿತು. ಆಗ ಸಹಜವಾಗಿಯೇ ದೀರ್ಘಕಾಲೀನ ಹೂಡಿಕೆಗೆ ಪೂರಕವಾದ ವಾತಾವರಣವಿತ್ತು. ಅಂತಹ ಪರಿಸ್ಥಿತಿ ಕ್ರಮೇಣ ಕಡಿಮೆ ಆಗುತ್ತಾ ಬಂದಿತು.ಇತ್ತೀಚಿನ ದಿನಗಳಲ್ಲಿ ಷೇರುಪೇಟೆ ಕುರಿತು ಅನುಭವಿಗಳು ಪಾರಿಭಾಷಿಕ ವಿಶ್ಲೇಷಣೆಯತ್ತ ಒಲವು ತೋರುತ್ತಾರೆಯೇ ಹೊರತು ಹಿಂದಿನ ದಿನಗಳಲ್ಲಿದ್ದಂತೆ ಕಂಪೆನಿಗಳನ್ನು ಕುರಿತ ಮೂಲ ಅಂಶಗಳತ್ತ ಗಮನ ಹರಿಸುವುದೇ ಇಲ್ಲ. ಎಲ್ಲರ ಗಮನ ಕೇವಲ ಬೆಲೆ ಏರಿಕೆಯತ್ತ ಇರುತ್ತದೆಯೇ ಹೊರತು ಸಾಧನೆ ಆಧಾರಿತ, ಲಾಭಾಂಶ ಇಳುವರಿಯತ್ತ ಇರುವುದಿಲ್ಲ.ಜತೆಗೇ, ಯಾಂತ್ರಿಕ ರೀತಿ ಚಟುವಟಿಕೆಯಾದ `ಅಲ್‌ಗೊರಿದಂ ಟ್ರೇಡಿಂಗ್' ಪದ್ಧತಿಯೂ ವಾತಾವರಣವನ್ನು ಕದಡಿದೆ. ಪೇಟೆಯಲ್ಲಿ ಸಣ್ಣ ಹೂಡಿಕೆದಾರರಿದ್ದಾಗ ಪ್ರತಿ ಇಳಿಕೆಯೂ ಅವರ ಬೆಂಬಲದಿಂದ ಚೇತರಿಕೆಗೊಂದು ಸ್ಥಿರತೆಗೆ ಅವಕಾಶವಿತ್ತು. ಈಗಿನ ದಿನಗಳಲ್ಲಿ ಸಣ್ಣ ಹೂಡಿಕೆದಾರರ ನಿರಾಸಕ್ತಿಯ ಕಾರಣ, ರೂ. 65 ಲಕ್ಷ ಕೋಟಿ ಬಂಡವಾಳೀಕರಣ ಮೌಲ್ಯವಿರುವ ಪೇಟೆಯಲ್ಲಿ ನಿತ್ಯ ರೂ. 1500 ಕೋಟಿಯಿಂದ 2000 ಕೋಟಿಯಷ್ಟು ಮಾತ್ರ ವಹಿವಾಟಾಗುತ್ತಿರುವುದು ಪರಿಸ್ಥಿತಿಗೆ ಹಿಡಿದ ಕನ್ನಡಿ.ಪ್ರಾಥಮಿಕ ಪೇಟೆಯಲ್ಲಿ 2011ರಲ್ಲಿ ಬಂದ ಕಂಪೆನಿಗಳಲ್ಲಿ ಬಹುತೇಕ ಕಂಪೆನಿಗಳು ಹೂಡಿಕೆದಾರರಿಗೆ ಹಾನಿಯುಂಟು ಮಾಡಿದವು. ದ್ವಿತೀಯ ಹಂತದ ಪೇಟೆಯಲ್ಲಿ ಹೂಡಿಕೆ ನಿರ್ಧರಿಸುವುದು ಕ್ಲಿಷ್ಟಕರ. ಹೀಗಿರುವಾಗ ಸಣ್ಣ ಹೂಡಿಕೆದಾರರು ಹಿಂದೆ ಸರಿದಿದ್ದಾರೆ. ಈಗಲೂ ವಾತಾವರಣ ಚೇತರಿಕೆ ಕಂಡರೆ ನಮ್ಮ ದೇಶದ ಮೂಲಸಂಪತ್ತು ಎನಿಸಿಕೊಂಡಿರುವ ಅಪಾರ ಸಂಖ್ಯೆಯ ಸಣ್ಣ ಹೂಡಿಕೆದಾರರು ಮರಳಿ ಪೇಟೆಯತ್ತ ಬರುತ್ತಾರೆ. ಈ ದಿಶೆಯಲ್ಲಿ ಸರ್ಕಾರ ಎದುರಿಗಿದ್ದ ಸುವರ್ಣಾವಕಾಶವನ್ನು ಕಳೆದು ಕೊಂಡಿದೆ.ಈ ಹಿಂದೆ 2002-03ರಲ್ಲಿಯೂ ಪೇಟೆ ವಹಿವಾಟು ಕ್ಷೀಣಿಸುತ್ತಿದ್ದಾಗ ಲಕ್ಷಗಟ್ಟಲೆ ಹೂಡಿಕೆದಾರರನ್ನು ಆಕರ್ಷಿಸಿ ಅವರು ಅಭೌತೀಕರಣ(ಡಿಮ್ಯಾಟ್) ಖಾತೆ ಆರಂಭಿಸಿ ಪೇಟೆಯಲ್ಲಿ ಆಸಕ್ತಿ ಮೂಡುವಂತೆ ಮಾಡಿದ್ದು ಕೆನರಾ ಬ್ಯಾಂಕ್‌ನ ರೂ. 385 ಕೋಟಿ ಮತ್ತು ಮಾರುತಿ ಸುಜುಕಿಯ ಆರಂಭಿಕ ಸಾರ್ವಜನಿಕ ಕೊಡುಗೆಯ(ಐಪಿಒ) ವಿತರಣೆ.ಕೆನರಾ ಬ್ಯಾಂಕ್ ರೂ. 35ರಂತೆ ಮಾರುತಿ ಸುಜುಕಿ ರೂ. 125ರಂತೆ ಆರಂಭಿಕ ಸಾರ್ವಜನಿಕ ಕೊಡುಗೆ ವಿತರಿಸಿದ್ದು ಅಧಿಕ ಸಂಖ್ಯೆಯ ಹೂಡಿಕೆದಾರರನ್ನು ಆಕರ್ಷಿಸಿದ್ದು ನಿಜ. ನಂತರ ಇದು ದ್ವಿತೀಯ ಹಂತದ ಪೇಟೆಯಲ್ಲಿ ಚುರುಕು ಮೂಡಿಸಿ ಪೇಟೆ ವಹಿವಾಟು ವಿಜೃಂಭಿಸುವಂತೆ ಮಾಡಿತ್ತು.ಈಗ ಭಾರತೀಯ ಷೇರುಪೇಟೆ ನಿಯಂತ್ರಣ ಪ್ರಾಧಿಕಾರ(ಸೆಬಿ), ಕಂಪೆನಿಗಳ ಷೇರುಗಳಲ್ಲಿ ಹಣ ಹೂಡುವಂತೆ ಸಾರ್ವಜನಿಕರಲ್ಲಿ ಆಸಕ್ತಿ ಮೂಡಿಸಲು ಪ್ರವರ್ತಕರ ಭಾಗಿತ್ವ ಮೊಟಕುಗೊಳಿಸಬೇಕೆಂಬ ನಿಯಮ ಜಾರಿಗೊಳಿಸಲು ಜೂನ್ ತಿಂಗಳವರೆಗೂ ಗಡುವು ನೀಡಿದೆ.ಅಲ್ಲದೆ ಸರ್ಕಾರದ ಬಂಡವಾಳ ಹಿಂತೆಗೆತದ ಕ್ರಮಗಳೂ ಸಣ್ಣ ಹೂಡಿಕೆದಾರರನ್ನು ಷೇರುಪೇಟೆಯತ್ತ ಮರಳಿ ತರಲು ಉತ್ತಮ ಅವಕಾಶವಾಗಿವೆ.ಇತ್ತೀಚೆಗೆ ಸರ್ಕಾರಿ ಸ್ವಾಮ್ಯದ `ಹಿಂದೂಸ್ಥಾನ್ ಕಾಪರ್' ಕಂಪೆನಿಯ ಷೇರಿನ ಬೆಲೆ ರೂ. 260ರಲ್ಲಿದ್ದಾಗ ರೂ. 155ರಂತೆ `ಆಫರ್ ಫಾರ್ ಸೇಲ್'(ಒಎಫ್‌ಎಸ್) ಗವಾಕ್ಷಿ ಮೂಲಕ ಬಂಡವಾಳ ಹಿಂತೆಗೆತ ಪ್ರಕ್ರಿಯೆ ನಡೆಯಿತು. ಇದೇ ಬೆಲೆಯಲ್ಲಿ ಸಾರ್ವಜನಿಕ ವಿತರಣೆಗೆ ಮುಂದಾಗಿದ್ದರೆ ಅಧಿಕ ಸಂಖ್ಯೆಯಲ್ಲಿ ಹೂಡಿಕೆದಾರರು ಭಾಗವಹಿಸಿ ನಂತರ ಷೇರು ವಿನಿಮಯ ಕೇಂದ್ರದಲ್ಲಿ ಚಟುವಟಿಕೆ ಉತ್ತಮಗೊಳಿಸಲು ಪೂರಕವಾಗುತ್ತಿತ್ತು.ಅದರಂತೆ ಮತ್ತಷ್ಟು ಕಂಪೆನಿಗಳು ಸಾರ್ವಜನಿಕ ಹಾಗೂ ಖಾಸಗಿ ಕಂಪೆನಿಗಳು ಈ ಆಫರ್ ಫಾರ್ ಸೇಲ್ ಗವಾಕ್ಷಿ ಮೂಲಕ ಷೇರು ಮಾರಾಟ ಮಾಡಿವೆ. ಸಾರ್ವಜನಿಕ ವಲಯದ ಕಂಪೆನಿಗಳು ಸಾರ್ವಜನಿಕ ವಿತರಣೆಗೆ ಮುಂದಾಗಿದ್ದಲ್ಲಿ ಮಹಾನಗರ, ನಗರ ಮತ್ತು ಗ್ರಾಮೀಣ ಹೂಡಿಕೆದಾರರನ್ನು ಆಕರ್ಷಿಸುವುದರ ಜತೆಗೇ `ಭಾರತೀಯ ಜೀವ ವಿಮಾ ನಿಗಮ'ವನ್ನು(ಎಲ್‌ಐಸಿ) ಅವಲಂಬಿಸಬೇಕಾದ ಅವಶ್ಯಕತೆ ಇರುತ್ತಿರಲಿಲ್ಲ. ಪೇಟೆಯ ಚಟುವಟಿಕೆ ಚುರುಕುಗೊಳಿಸಬಹುದಾಗಿದ್ದ ಅಪೂರ್ವ ಅವಕಾಶ ಕೈತಪ್ಪಿದೆ.ಮುಂದಿನ ದಿನಗಳಲ್ಲಾದರೂ ಆಕರ್ಷಕ ದರದಿಂದ ಸಣ್ಣ ಹೂಡಿಕೆದಾರರನ್ನು ಮರಳಿ ಬರುವಂತೆ ಪೇರೇಪಿಸಿದಲ್ಲಿ ಪೇಟೆಸಹಜ ಸ್ಥಿತಿಗೆ ಬರಲು ಸಹಕಾರಿಯಾಗುತ್ತದೆ, ಸ್ಥಿರತೆಯೂ ಮೂಡುತ್ತದೆ. ಇದರಿಂದ ವಿದೇಶಿ ಹಣಕಾಸು ಸಂಸ್ಥೆಗಳು (ಎಫ್‌ಐಐ) ಷೇರುಪೇಟೆಯತ್ತ ದಾಪುಗಾಲಿಟ್ಟು ಬರುತ್ತವೆ. ಇದು ಸರ್ವರೀತಿಯಿಂದಲೂ ಉತ್ತಮ ವಾತಾವರಣ ನಿರ್ಮಿಸಬಲ್ಲದು.ಸರ್ಕಾರ, ಪೇಟೆ ನಿಯಂತ್ರಕರು ಮತ್ತೊಮ್ಮೆ ಇಂಥ ಸುವರ್ಣಾವಕಾಶಕ್ಕೆ ದಾರಿ ಮಾಡಿಕೊಡುವರು ಎಂದು ನಿರೀಕ್ಷಿಸಬಹುದೇ?

ಪ್ರತಿಕ್ರಿಯಿಸಿ (+)