ಪೇಪರ್ ಸುಗಂಧ

7

ಪೇಪರ್ ಸುಗಂಧ

Published:
Updated:
ಪೇಪರ್ ಸುಗಂಧ

ಕಾಗದವನ್ನು ಬಳಸಿದ ನಂತರ ಬಿಸಾಡುವವರೇ ಹೆಚ್ಚು. ಆದರೆ ಕಾಗದದಿಂದ ಏನೆಲ್ಲಾ ವೈವಿಧ್ಯ ಮೂಡಿಸಬಹುದು ಎಂಬುದನ್ನು ತೋರಿಸಿದ್ದಾರೆ ನಗರದ ವೀಣಾ ಮತ್ತು ದಿವ್ಯಾ. ಇವರು ಪೇಪರ್‌ನಿಂದ ಹಲವು ನಮೂನೆಯ ಅಲಂಕಾರಿಕ ಸಾಮಗ್ರಿಗಳನ್ನು ಹೊರತಂದಿದ್ದು, ಅವು ಪರಿಸರಸ್ನೇಹಿ ಎಂಬುದೇ ವಿಶೇಷ.ಪೇಪರ್‌ನಿಂದ ಅತಿ ಸುಂದರವೆನಿಸುವ ಪರಿಸರ ಸ್ನೇಹಿ ಉತ್ಪನ್ನಗಳನ್ನು ರೂಪಿಸುತ್ತಿರುವ ಇವರಿಗೆ ಕಾಗದದ ಈ ಕಲೆ ಒಲಿದದ್ದು ಎರಡು ವರ್ಷದ ಹಿಂದಷ್ಟೆ. ಪೇಪರ್ ಕ್ವಿಲ್ಲಿಂಗ್ ಕಲೆಯನ್ನು ಅಭ್ಯಸಿಸಿಕೊಂಡು ಸುಗಂಧ ಕ್ರಿಯೇಷನ್ಸ್ ಎಂಬ ಹೆಸರಿನಲ್ಲಿ ಅತ್ತೆ ವೀಣಾ ಮತ್ತು ಸೊಸೆ ದಿವ್ಯಾ ಒಟ್ಟಾಗಿ ಪೇಪರ್‌ನಲ್ಲಿ ವಿಧ ವಿಧ ಗೃಹೋಪಯೋಗಿ ಮತ್ತು ಫ್ಯಾಷನ್ ಸಾಮಗ್ರಿಗಳನ್ನು ತಯಾರಿಸುತ್ತಿದ್ದಾರೆ.

ಅಂದ ಚೆಂದದ ಫ್ಯಾಷನ್ ಆಭರಣಗಳು, ಮಲ್ಟಿ ಯುಟಿಲಿಟಿ ಹೋಲ್ಡರ್, ಚಿಟ್ ಬಾಕ್ಸ್, ವಿಸಿಟಿಂಗ್ ಕಾರ್ಡ್ ಹೋಲ್ಡರ್, ಟಿಶ್ಯೂ ಬಾಕ್ಸ್, ಕೋಸ್ಟರ್, ಆಭರಣದ ಪೆಟ್ಟಿಗೆ, ಫೋಲ್ಡರ್, ಮಲ್ಟಿ ಯುಟಿಲಿಟಿ ಟ್ರೇ, ಲ್ಯಾಂಪ್, ಫ್ರಿಡ್ಜ್ ಮ್ಯಾಗ್ನೆಟ್, ಪೆನ್ಸಿಲ್, ಪೇಪರ್ ಪೆನ್, ಫೋಟೊ ಫ್ರೇಮ್, ಗೊಂಬೆ ಹೀಗೆ ಹಲವು ವಸ್ತುಗಳನ್ನು ಪೇಪರ್‌ನಲ್ಲಿ ತಯಾರಿಸಿ ಸೈ ಎನಿಸಿಕೊಂಡಿರುವ ಇವರದ್ದು ಟೆರಕೋಟಾ ಬೊಂಬೆಗಳನ್ನು ಮಾಡುವಲ್ಲೂ ಎತ್ತಿದ ಕೈ.ಉಪನ್ಯಾಸಕಿಯಾಗಿದ್ದ ವೀಣಾ ಅವರು ನಿವೃತ್ತರಾದ ನಂತರ ಪರಿಸರ ಪ್ರೇಮದಿಂದ ಈ ಕಲೆಯನ್ನು ಆರಿಸಿಕೊಂಡರು. ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ದಿವ್ಯಾ ಕೂಡ ಇವರೊಂದಿಗೆ ಕೈ ಜೋಡಿಸಿದರು.ಪ್ಲಾಸ್ಟಿಕ್, ಗ್ಲಾಸ್‌ನಿಂದ ತಯಾರಿಸಲಾದ ಉತ್ಪನ್ನಗಳು ಪರಿಸರಕ್ಕೆ ಹಾನಿಯುಂಟುಮಾಡುತ್ತವೆ. ಆದ್ದರಿಂದ ಪರಿಸರಕ್ಕೆ ಪೂರಕವಾಗಿರುವ ಮತ್ತು ಕಾಗದವನ್ನು ಪುನರ್ಬಳಕೆ ಮಾಡಿಕೊಳ್ಳಬಹುದಾದ ಸಾಧ್ಯತೆಯನ್ನು ಹುಡುಕುತ್ತಿದ್ದಾಗ ಕಂಡಿದ್ದು ಈ ಕಲೆಯಂತೆ.ಮೊದಮೊದಲು ಶುಭಾಶಯ ಪತ್ರಗಳನ್ನು ತಯಾರಿಸಲು ಆರಂಭಿಸಿದ ಇವರು, ನಂತರ ಪೇಪರ್ ಕ್ವಿಲಿಂಗ್ ಕಲೆಯಲ್ಲಿ ಪಳಗಿ ವೈವಿಧ್ಯತೆ ಕಂಡುಕೊಳ್ಳಲು ಆರಂಭಿಸಿದರು. ಆನಂತರ ಹಿಡಿದಿದ್ದು ಫೋಟೊ ಫ್ರೇಮ್ ತಯಾರಿಕೆ. ಆದರೆ ಇವಿಷ್ಟಕ್ಕೇ ಮನಸ್ಸು ನಿಲ್ಲಲಿಲ್ಲ. ಕಾಗದವನ್ನು ತಮ್ಮಿಷ್ಟದ ಆಕಾರಕ್ಕೆ, ವಿನ್ಯಾಸಕ್ಕೆ ಒಗ್ಗಿಸಿಕೊಂಡು ಅತ್ಯಾಕರ್ಷಕ ಆಭರಣಗಳನ್ನು ತಯಾರಿಸಲು ಕಲಿತರು.

`ಕಾಗದ ಅತಿ ಸುಲಭವಾಗಿ ಸಿಗುವ ವಸ್ತು. ಆದರೆ ಅದನ್ನು ಉಪಯುಕ್ತವಾಗಿ ಬಳಸಿಕೊಳ್ಳುವವರು ಕಡಿಮೆ.ಆದ್ದರಿಂದ ಕಾಗದವನ್ನು ಬಳಸಿ ಕಾಲಕ್ಕೆ ತಕ್ಕಂತೆ ಆ ಕಲೆಯಲ್ಲಿ ಹೇಗೆ ವಿನ್ಯಾಸವನ್ನು ಹೊರತರಬಹುದು ಎಂಬುದನ್ನು ಪ್ರತಿನಿತ್ಯ ಪ್ರಯೋಗಕ್ಕೆ ಒಡ್ಡುತ್ತೇವೆ. ಪ್ರತಿ ಬಾರಿ ಪ್ರದರ್ಶನ ಇಟ್ಟಾಗಲೂ ಜನರಿಂದ ಅದ್ಭುತ ಪ್ರತಿಕ್ರಿಯೆ ಬರುತ್ತದೆ. ವಿಭಿನ್ನತೆ ಬಯಸುವವರಿಗೆ ಇಲ್ಲಿ ಆಯ್ಕೆ ಹೆಚ್ಚು. ಈಗೀಗ ಕಂಪೆನಿಗಳಿಂದಲೂ ಉಡುಗೊರೆ ನೀಡಲು ಈ ಬಗೆಯ ವಸ್ತುಗಳಿಗೆ ಬೇಡಿಕೆ ಇದೆ' ಎಂದು ಸಂತಸದಿಂದ ಪೇಪರ್‌ನ ಆಭರಣವನ್ನು ತೋರುತ್ತಿದ್ದರು ದಿವ್ಯಾ.ಕೇವಲ ಆಭರಣವಷ್ಟೇ ಅಲ್ಲ, ಇವರ ಕೈಯ್ಯಲ್ಲಿ ಪೇಪರ್‌ನಿಂದ ಮಾಡಿದ ಚೆಂದದ ಗೃಹೋಪಯೋಗಿ ವಸ್ತುಗಳೂ ವಿನ್ಯಾಸಗೊಂಡಿವೆ. ಗೃಹಾಲಂಕಾರಕ್ಕೆ, ಆಫೀಸ್‌ನ ಅಂದಕ್ಕೆ ಒಪ್ಪುವ, ಉಡುಗೊರೆ ನೀಡಲು ಹೇಳಿಮಾಡಿಸಿದಂತಹ ಹಲವು ಬಗೆಯ ಸಾಮಗ್ರಿಗಳನ್ನು ಇಬ್ಬರೂ ಸೇರಿ ಹೊರತಂದಿದ್ದಾರೆ. 25 ರೂಪಾಯಿಯಿಂದ ಆರಂಭಗೊಂಡು 600ರೂವರೆಗೂ ತಲುಪುವ ಇವರ ಪೇಪರ್ ಸಾಮಗ್ರಿಗಳು ಬೇಗನೆ ಹಾಳಾಗುವುದಿಲ್ಲ ಎಂದು ಖಾತರಿಪಡಿಸುತ್ತಾರೆ.`ನೀರಿಗೆ ಬಿದ್ದರೆ ಪೇಪರ್ ವಸ್ತುಗಳು ಹಾಳಾಗುವುದು ಖಂಡಿತ ಎಂದು ಕೆಲವರು ಅಂದುಕೊಂಡಿದ್ದಾರೆ. ಆದರೆ ವಿನ್ಯಾಸಗೊಳಿಸಿದ ನಂತರ ಹಾಳಾಗದಂತೆ ತೆಳುವಾದ ಮೇಲೊದಿಕೆಯನ್ನು ಹಾಕುವುದರಿಂದ ದೀರ್ಘ ಕಾಲ ಬಾಳಿಕೆ ಬರುತ್ತದೆ. ಈಗೀಗ ಹೆಚ್ಚು ಬಣ್ಣಗಳನ್ನು, ವೈವಿಧ್ಯತೆಯನ್ನು ಹುಡುಕುವ ಕಾಲೇಜು ಹುಡುಗಿಯರು ಪೇಪರ್ ಆಭರಣಗಳನ್ನು ಹೆಚ್ಚು ಖರೀದಿಸುತ್ತಾರೆ. ಜೊತೆಗೆ ಉಡುಗೊರೆ ಕಾರಣಕ್ಕೆ ಹಲವು ಕಡೆಯಿಂದಲೂ ಬೇಡಿಕೆ ಬಂದಿದೆ' ಎಂದು ವಿವರಣೆ ನೀಡಿದರು ವೀಣಾ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry