ಪೇಲವ ಪ್ರಯೋಗ (ಚಿತ್ರ: ಪಂಚಾಮೃತ)

7

ಪೇಲವ ಪ್ರಯೋಗ (ಚಿತ್ರ: ಪಂಚಾಮೃತ)

Published:
Updated:
ಪೇಲವ ಪ್ರಯೋಗ (ಚಿತ್ರ: ಪಂಚಾಮೃತ)

`ಹಂಗು~, `ಅತಿಥಿ~ ಮತ್ತು `ಮುನಿತಾಯಿ~ ಎನ್ನುವ ಕನ್ನಡದ ಮೂರು ಪ್ರತ್ಯೇಕ ಸಣ್ಣಕಥೆಗಳನ್ನಿಟ್ಟುಕೊಂಡು ಪುಟ್ಟಣ್ಣ ಕಣಗಾಲ್ ನಿರ್ದೇಶಿಸಿದ್ದ `ಕಥಾಸಂಗಮ~ ಕನ್ನಡ ಮಾತ್ರವಲ್ಲ, ಭಾರತೀಯ ಚಿತ್ರೋದ್ಯಮದಲ್ಲೇ ಒಂದು ವಿಶಿಷ್ಟ ಪ್ರಯೋಗ.1975ರಲ್ಲಿ ಪುಟ್ಟಣ್ಣ ಮಾಡಿದ್ದ ಈ ಪ್ರಯೋಗವನ್ನು ಇತ್ತೀಚೆಗೆ ವಿ.ಕೆ.ಪ್ರಕಾಶ್ ತಮ್ಮ `ಐದೊಂದ್ಲ ಐದು~ ಚಿತ್ರದಲ್ಲಿ ಮಾಡಿದ್ದರು. ಐದು ಕಥೆಗಳನ್ನೊಳಗೊಂಡಿರುವ ಈ ಸಿನಿಮಾ ಗೋವಾದಲ್ಲಿ ನಡೆದ ಅಂತರ್‌ರಾಷ್ಟ್ರೀಯ ಚಿತ್ರೋತ್ಸವದ `ಪನೋರಮಾ~ ವಿಭಾಗಕ್ಕೆ ಆಯ್ಕೆಯಾದ ಗೌರವ ಹೊಂದಿದೆ. ಇಂಥದೇ ಇನ್ನೊಂದು ಪ್ರಯೋಗಶೀಲ ಸಿನಿಮಾ- `ಪಂಚಾಮೃತ~- ಈಗ ತೆರೆಕಂಡಿದೆ.`ಪಂಚಾಮೃತ~ ಆರು ಕಥೆಗಳ ಸಿನಿಗುಚ್ಛ. ಪುಟ್ಟಣ್ಣನವರ `ಕಥಾಸಂಗಮ~ದ ಸ್ಮರಣೆಯ ಮೂಲಕವೇ ಆರಂಭವಾಗುವ `ಪಂಚಾಮೃತ~ ಸಿನಿಮಾದ ಮಟ್ಟಿಗೆ ಕೆಲವು ಧನಾತ್ಮಕ ಅಂಶಗಳಿವೆ. ಅವುಗಳಲ್ಲಿ ಮುಖ್ಯವಾದುದು ಚಿತ್ರತಂಡದ ಪ್ರಯೋಗಶೀಲ ಪ್ರಯತ್ನ.ಸಿದ್ಧಸೂತ್ರಕ್ಕೆ ಬೆನ್ನುಹಾಕಿ ಸಿನಿಮಾ ಮಾಡುವುದು ಯಾವಾಗಲೂ ಸಾಹಸವೇ. ಅಂತೆಯೇ ನಿರ್ದೇಶಕರ ಸದಭಿರುಚಿ ಕೂಡ ಉಲ್ಲೇಖನೀಯ. ಮೆಚ್ಚತಕ್ಕ ಮತ್ತೊಂದು ಅಂಶ- `ಪಂಚಾಮೃತ~ದಲ್ಲಿ ತಾರೆಗಳ ಮೇಳವೇ ನಡೆದಿರುವುದು.

 

ಪೂಜಾ ಗಾಂಧಿ, ನೀತು, ರಘು ಮುಖರ್ಜಿ, ಸುಪ್ರೀತಾ, ರಮ್ಯಾ ಬಾರ್ನ, ಸಂತೋಷ್, ತಾರಾ, ಶ್ರೀನಗರ ಕಿಟ್ಟಿ, ಅಚ್ಯುತ ಕುಮಾರ್, ಯಜ್ಞಾಶೆಟ್ಟಿ, ರವಿಶಂಕರ್ ಸೇರಿದಂತೆ ಕಲಾವಿದರ ದೊಡ್ಡ ಬಳಗ ಈ ಚಿತ್ರದಲ್ಲಿದೆ. ಆದರೆ, ಈ ವಿಶೇಷಗಳಾಚೆಗೆ ಪ್ರೇಕ್ಷಕರನ್ನು ಸಿನಿಮಾ ಸೆಳೆಯುವುದಿಲ್ಲ ಎನ್ನುವುದು ಚಿತ್ರಕ್ಕೆ ಸಂಬಂಧಿಸಿದ ವಿಪರ್ಯಾಸ.ಪ್ರಯೋಗದ ನಿಟ್ಟಿನಲ್ಲಿ ತೋರಿಸಿರುವ ಉತ್ಸಾಹವನ್ನು ನಿರ್ದೇಶಕರು ಕಥೆಗಳ ಆಯ್ಕೆಯ ನಿಟ್ಟಿನಲ್ಲಿ ತೋರಿಸಿಲ್ಲ. ಸಿನಿಮಾದ ಆರಂಭ, ಮಧ್ಯಂತರ, ಕ್ಲೈಮ್ಯಾಕ್ಸ್ ಎನ್ನುವ ಅನುಕೂಲಗಳಿಲ್ಲದ ಇಂಥ ಪ್ರಯೋಗಗಳಿಗೆ ಆಯ್ದುಕೊಳ್ಳುವ ಕಥೆಗಳಿಗೆ ನೋಡುಗರನ್ನು ಬೆಚ್ಚಿಬೀಳಿಸುವ ಗುಣ ಇರಬೇಕಾಗುತ್ತದೆ.

 

ಆದರೆ, `ಪಂಚಾಮೃತ~ದ ಯಾವ ಕಥೆಗೂ ಇಂಥ ಧ್ವನಿಶಕ್ತಿ ಇಲ್ಲದಿರುವುದು ಸಿನಿಮಾವನ್ನು ನೀರಸಗೊಳಿಸಿದೆ. ಸೀತಾರಾಂ, ಸೇತುರಾಂರ ಕಿರುತೆರೆ ಧಾರಾವಾಹಿಗಳ ಕೆಲವು ಕಂತುಗಳು ಕೂಡ ನೋಡುಗರನ್ನು ಉದ್ವೇಗಗೊಳಿಸುತ್ತವೆ.ಅಂಥದೊಂದು ಕಾವು ಕೂಡ ಈ ಸಿನಿಮಾದ ಕಥೆಗಳಲ್ಲಿಲ್ಲ. ಎ.ಸಿ.ಮಹೇಂದರ್ ಛಾಯಾಗ್ರಹಣ, ಆಶ್ಲೇ-ಅಭಿಲಾಶ್ ಸಂಗೀತ ಸಿನಿಮಾದ ಮಂದ್ರ ಶ್ರುತಿಗೆ ತಕ್ಕನಾಗಿದೆ.ನಿರ್ದೇಶಕರು ತಮ್ಮದೇ ಕಥೆಗಳನ್ನು ಸಿನಿಮಾ ಮಾಡುವ ಬದಲು, ಕನ್ನಡ ಸಾಹಿತ್ಯದ ಅತ್ಯುತ್ತಮ ಕಥೆಗಳನ್ನು ಆರಿಸಿಕೊಂಡಿದ್ದಲ್ಲಿ ಬಹುಶಃ ಈ ಪ್ರಯೋಗ ರುಚಿಗಟ್ಟುತ್ತಿತ್ತೇನೊ? ನಾಗೇಶರು ಕಟ್ಟಿರುವ ಕಥೆಗಳು ಕೂಡ ಪೂರ್ಣ ಹೊಸತೇನಲ್ಲ.ಕಥೆಯೊಂದರಲ್ಲಿ- ಸಂಸಾರ ನಿಭಾಯಿಸಲಿಕ್ಕಾಗಿ ಹಬ್ಬದ ದಿನವೂ ಕೆಲಸಕ್ಕೆ ಹೊರಡುವ ಅಪ್ಪನಿಗೆ, ಆ ದಿನದ ಸಂಬಳವನ್ನು ತಾವೇ ಭರಿಸಲು ಮಕ್ಕಳು ಮುಂದಾಗುತ್ತಾರೆ. ಇನ್ನೊಂದು ಕಥೆಯಲ್ಲಿ- ಪರಾರಿಯಾದ ಕೈದಿ ಕೈಗೆ ಸಿಕ್ಕಾಗಲೂ ಪೊಲೀಸ್ ಅಧಿಕಾರಿ ಆತನನ್ನು ಬಂಧಿಸದೆ ಬಿಡುತ್ತಾನೆ.

 

ಮನೆಗೆ ಹೋಗಿ ಮಗಳೊಂದಿಗೆ ಹಬ್ಬ ಆಚರಿಸಿದ ನಂತರ ಆ ಕೈದಿ ಪೊಲೀಸ್ ಅಧಿಕಾರಿ ಮನೆಗೆ ಬಂದು ಶರಣಾಗುತ್ತಾನೆ. ಇವು ಈಗಾಗಲೇ ಅನೇಕ ರೂಪಗಳಲ್ಲಿ ಸಹೃದಯರಿಗೆ ಗೊತ್ತಿರುವ ಕಥೆಗಳೇ ಆಗಿವೆ.`ಶಸ್ತ್ರಚಿಕಿತ್ಸೆಯೇನೋ ಯಶಸ್ವಿ, ಆದರೆ ರೋಗಿ ಬದುಕಲಿಲ್ಲ~ ಎನ್ನುವ ಜನಪ್ರಿಯ ಮಾತು `ಪಂಚಾಮೃತ~ ಸಿನಿಮಾ ಸಂದರ್ಭದಲ್ಲಿ ನೆನಪಾಗುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry