ಪೇಲವ ಭೂತ (ಚಿತ್ರ: ಭೂತ್ ರಿಟರ್ನ್ಸ್ (ಹಿಂದಿ)

7

ಪೇಲವ ಭೂತ (ಚಿತ್ರ: ಭೂತ್ ರಿಟರ್ನ್ಸ್ (ಹಿಂದಿ)

Published:
Updated:

ನಿರ್ಮಾಪಕ: ಜಿತೇಂದ್ರ ಜೈನ್

ನಿರ್ದೇಶಕ: ರಾಮ್‌ಗೋಪಾಲ್ ವರ್ಮಾ

ತಾರಾಗಣ: ಮನೀಷಾ ಕೋಯಿರಾಲ, ಜೆ.ಡಿ. ಚಕ್ರವರ್ತಿ, ಮಧುಶಾಲಿನಿ, ಅಲಯಾನ ಶರ್ಮಾ, ಕೌಶಾಂಕ್ ಮತ್ತಿತರರು.ಸಿನಿಮಾದ ಆದಿಯಿಂದ ಅಂತ್ಯದವರೆಗೂ ಪ್ರೇಕ್ಷಕನನ್ನು ಕುತೂಹಲದ ಕಡಲಲ್ಲಿ ಮುಳುಗಿಸುವ ಕಲೆ ನಿರ್ದೇಶಕ ರಾಮ್‌ಗೋಪಾಲ್ ವರ್ಮಾರಿಗೆ ಕರಗತ.ಮನೋವೈಜ್ಞಾನಿಕ ಥ್ರಿಲ್ಲರ್, ಭೂಗತ ಜಗತ್ತು, ರಾಜಕೀಯ, ಹಾರರ್ ಹೀಗೆ ವಸ್ತು ಯಾವುದಾದರೂ ಅವರ ಸಿನಿಮಾಗಳು ವಿಭಿನ್ನ ಎಂದು ಗುರುತಿಸುವ ಮಟ್ಟಿಗೆ ಅದರಲ್ಲಿ ಅವರ ಶ್ರಮ ಕಾಣುತ್ತದೆ.2003ರಲ್ಲಿ ತೆರೆಕಂಡಿದ್ದ ಹಾರರ್ ಚಿತ್ರ `ಭೂತ್~ ಅವರಿಗೆ ಬಾಲಿವುಡ್‌ನ ಉತ್ತಮ ನಿರ್ದೇಶಕ ಎಂಬ ಪ್ರಶಸ್ತಿಯನ್ನೂ ತಂದುಕೊಟ್ಟಿತ್ತು. ಅದೇ ಚಿತ್ರದ ಮುಂದುವರಿದ ಭಾಗದಂತಿರುವ `ಭೂತ್ ರಿಟರ್ನ್ಸ್~ ರಾಮ್‌ಗೋಪಾಲ್ ವರ್ಮಾರಂಥ ನಿರ್ದೇಶಕರೂ ಇಷ್ಟು ನೀರಸವಾಗಿ ಹಾರರ್ ಚಿತ್ರವನ್ನು ನಿರ್ದೇಶಿಸುತ್ತಾರೆಯೇ ಎಂಬ ಪ್ರಶ್ನೆ ಹುಟ್ಟುಹಾಕುವಂತಿದೆ.`ಭೂತ್~ ಚಿತ್ರದಲ್ಲಿ ಕುತೂಹಲಕಾರಿ ಕಥೆಯಿತ್ತು. ಅದಕ್ಕೆ ಪೂರಕವಾಗಿ ಬೆಚ್ಚಿಬೀಳಿಸುವ ದೃಶ್ಯಗಳು, ತಂತ್ರಜ್ಞಾನದ ಬಳಕೆ, ದೃಶ್ಯೀಕರಣ, ನುರಿತ ಕಲಾವಿದರ ದಂಡು ಎಲ್ಲವೂ ಇತ್ತು. ಭೂತ `ಮರಳಿ ಬರುವ~ ಎರಡನೇ ಕಥಾನಕದಲ್ಲಿ ಈ ಯಾವ ಅಂಶಗಳೂ ಇಲ್ಲ ಎಂದು ಒಂದೇ ಮಾತಿನಲ್ಲಿ ಹೇಳುವಷ್ಟು ಅನಾಸಕ್ತಿಯಿಂದ ವರ್ಮಾ ಸಿನಿಮಾ ಮಾಡಿದ್ದಾರೆ.

 

ಚಿತ್ರಕಥೆಯಲ್ಲಾಗಲೀ, ನಿರೂಪಣೆಯಲ್ಲಾಗಿ ವರ್ಮಾ ನಿಪುಣತೆಯ ಲವಲೇಶವೂ ಗೋಚರಿಸುವುದಿಲ್ಲ. ಅವಸರದಲ್ಲಿ ಹೆಣೆದ ಕಥೆಯನ್ನು ಹಾರರ್ ಸಿನಿಮಾದ ಆಂತರ್ಯಗಳನ್ನು ಅರಿಯದ ಅಪಕ್ವ ನಿರ್ದೇಶಕನೊಬ್ಬ ಸೃಷ್ಟಿಸಿದ ಚಿತ್ರದಂತಿದೆ.ಇಲ್ಲಿರುವುದು ಮರಿದೆವ್ವದ ಕಥೆ. ಇದಕ್ಕೆ ಆಕಾರ- ವಿಕಾರ ಮುಖವಾಗಲೀ ಇಲ್ಲ. ತಾನಿರುವ ಮನೆಗೆ ಬಾಡಿಗೆಗೆ ಬರುವ ಕುಟುಂಬದ ಒಂದು ಮಗುವಿನೊಂದಿಗೆ ಇದು ಸ್ನೇಹ ಬೆಳೆಸುತ್ತದೆ.

 

ಮಗುವಿನೊಂದಿಗೆ ತನ್ನ ಪಾಡಿಗೆ ತಾನು ಆಟವಾಡುವ ಈ ದೆವ್ವ ಯಾರಿಗೂ ವಿನಾಕಾರಣ ಉಪಟಳ ನೀಡುವುದಿಲ್ಲ. ಆದರೆ ತನ್ನ ವಿರುದ್ಧ ಯಾರಾದರೂ ಮಾತನಾಡಿದರೆ ಅದು ಸಹಿಸುವುದಿಲ್ಲ. ಅವರನ್ನು ಸಾಯಿಸುವುದೇ ಅದರ ಅಂತಿಮ ಗುರಿ. ಇದಿಷ್ಟೇ ಸಿನಿಮಾದ ತಿರುಳು.ಚಿತ್ರದ ಅವಧಿ ಕೇವಲ 90 ನಿಮಿಷ. ಅದಕ್ಕೂ ದೃಶ್ಯಗಳನ್ನು ಹಿಗ್ಗಿಸಿ ಎಳೆಯಲು ವರ್ಮಾ ಹೆಣಗಾಡಿದ್ದಾರೆ. ಅದರ ಪರಿಣಾಮವಾಗಿಯೇ ಅನಗತ್ಯ, ಶುಷ್ಕ ಸನ್ನಿವೇಶಗಳ ಸೃಷ್ಟಿ.ಒಂದೇ ಕೋನದಿಂದ ದೃಶ್ಯಗಳನ್ನು ಹಿಡಿದಿಡುವ ಪ್ರಯೋಗ ಅಲ್ಲಲ್ಲಿ ಪರಿಣಾಮಕಾರಿಯೆನಿಸುತ್ತದೆ. ಪಾತ್ರ ಪೋಷಣೆಯಲ್ಲೂ ವರ್ಮಾ ಎಡವಿದ್ದಾರೆ. ಚಿತ್ರವನ್ನು ಇಲ್ಲಿಗೇ ಮುಗಿಸಲೇಬೇಕು ಎಂದು ಪಣತೊಟ್ಟಂತೆ ಅಂತ್ಯ ನೀಡಿದಂತಿದೆ.ದೀರ್ಘಕಾಲದ ಬಳಿಕ ನಟಿಸಿರುವ ಮನೀಷಾ ಕೋಯಿರಾಲ ಮತ್ತು ಮಧುಶಾಲಿನಿ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಪುಟ್ಟ ಹುಡುಗಿ ಅಲಯಾನ ಶರ್ಮಾಳ ಅಭಿನಯ ಗಮನಾರ್ಹ. ಅವರ ಮಧ್ಯೆ ಜೆ.ಡಿ. ಚಕ್ರವರ್ತಿ ಅವರದು ಪೇಲವ ನಟನೆ.ಹಿನ್ನೆಲೆ ಸಂಗೀತ ಚಿತ್ರದ ಮತ್ತೊಂದು ವೈಫಲ್ಯ. ಭೂತ ಓಡಾಡುವಾಗ ರೊಮ್ಯಾಂಟಿಕ್ ಸನ್ನಿವೇಶಕ್ಕೆ ತಕ್ಕ ಹಿನ್ನೆಲೆ ಸಂಗೀತ ಕೇಳಿಬರುವುದು ವಿಶೇಷ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry