ಮಂಗಳವಾರ, ನವೆಂಬರ್ 19, 2019
26 °C
ಟೆನಿಸ್: ಇಂದಿನಿಂದ ಭಾರತ-ಇಂಡೊನೇಷ್ಯಾ ನಡುವೆ ಡೇವಿಸ್ ಕಪ್ ಹಣಾಹಣಿ

ಪೇಸ್, ಸೋಮದೇವ್ ಮೇಲೆ ಭರವಸೆ

Published:
Updated:
ಪೇಸ್, ಸೋಮದೇವ್ ಮೇಲೆ ಭರವಸೆ

ಬೆಂಗಳೂರು: ಹೊಸತನಕ್ಕೆ ತುಡಿಯುವುದೇ ಜೀವನ. ಹೊಸ ಸವಾಲನ್ನು ಮೆಟ್ಟಿ ನಿಲ್ಲುವುದೇ ಛಲ. ಆಯ್ಕೆ ವಿವಾದ, ಬಂಡಾಯದ ಬಿಸಿ, ಒಡಕು ಹಾಗೂ ಹಲವು ವಿವಾದಗಳಿಂದ ತಾತ್ಕಾಲಿಕವಾಗಿ ಹೊರಬಂದಿರುವ ಭಾರತದ ಟೆನಿಸ್ ಈಗ ಹೊಸ ಸವಾಲಿಗೆ ಎದೆಕೊಡಲು ಸಜ್ಜಾಗಿ ನಿಂತಿದೆ.ಅಂದಹಾಗೆ, ಉದ್ಯಾನ ನಗರಿಯ ಕರ್ನಾಟಕ ರಾಜ್ಯ ಲಾನ್ ಟೆನಿಸ್ ಸಂಸ್ಥೆ (ಕೆಎಸ್‌ಎಲ್‌ಟಿಎ) ಕೋರ್ಟ್‌ನಲ್ಲಿ ಇನ್ನು ಮೂರು ದಿನ ಟೆನಿಸ್ ಉತ್ಸವ. ಅದಕ್ಕೆ ಶುಕ್ರವಾರ ಮಧ್ಯಾಹ್ನ ಮುನ್ನುಡಿ ಲಭಿಸಲಿದೆ. ಇಂಡೊನೇಷ್ಯಾ ಎದುರು ಏಷ್ಯಾ ಓಸೀನಿಯಾ (ಗುಂಪು-1) ಡೇವಿಸ್ ಕಪ್ ಟೆನಿಸ್ ಪ್ಲೇ ಆಫ್ ಪಂದ್ಯಗಳನ್ನು ಗೆದ್ದೇ ಗೆಲ್ಲುವ ಉತ್ಸಾಹದಲ್ಲಿ ಭಾರತ ತಂಡವಿದೆ. ಇದರಲ್ಲಿ ಗೆದ್ದರೆ ಗುಂಪು ಒಂದರಲ್ಲಿ ಆತಿಥೇಯರ ಸ್ಥಾನ ಗಟ್ಟಿಯಾಗಲಿದೆ.ಅನುಭವಿ ಹಾಗೂ ಹಿರಿಯ ಆಟಗಾರ ಲಿಯಾಂಡರ್ ಪೇಸ್ ಅವರ ಉಪಸ್ಥಿತಿಯೇ ಭಾರತ ತಂಡಕ್ಕೆ ಆನೆಬಲ. ಸಿಂಗಲ್ಸ್‌ನಲ್ಲಿ ಭಾರತದ ಅಗ್ರಮಾನ್ಯ ಆಟಗಾರ ಸೋಮದೇವ್ ದೇವ್‌ವರ್ಮನ್ ಅವರ ಹೋರಾಟದ ಛಲದ ಬಲವಿದೆ. ವಾರದ ಹಿಂದೆ ಮಿಯಾಮಿ ಮಾಸ್ಟರ್ಸ್ ಟೆನಿಸ್ ಟೂರ್ನಿಯಲ್ಲಿ ವಿಶ್ವದ ಮೊದಲ ರ್‍ಯಾಂಕ್‌ನ ಆಟಗಾರ ನೊವಾಕ್ ಜೊಕೊವಿಚ್ ಎದುರು ಆಡಿ ಬಂದಿರುವ ಸೋಮದೇವ್ ಈಗ ವಿಶ್ವಾಸದ ಖನಿ.`ಹಿಂದಿನ ಘಟನೆಗಳನ್ನು ಮರೆತು ಆಡಬೇಕು. ಕಣದಲ್ಲಿದ್ದಾಗ ಹಿಂದಿನ ಘಟನೆಗಳು ಖಂಡಿತ ನೆನಪಾಗುವುದಿಲ್ಲ. ನಮ್ಮ ಗುರಿ ಇಂಡೊನೇಷ್ಯಾ ವನ್ನು ಮಣಿಸುವುದು' ಎಂದು ಸೋಮ್ ಸ್ಪಷ್ಟವಾಗಿ ನುಡಿದಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಈ ಆಟಗಾರ ಬಂಡಾಯದ ಸಾರಥ್ಯ ವಹಿಸಿದ್ದರು.`ಎದುರಾಳಿ ತಂಡದ ಯಾವುದೇ ಆಟಗಾರನನ್ನು ನಾವು ಲಘುವಾಗಿ ಪರಿಗಣಿಸುವುದಿಲ್ಲ. ಈ ಹೋರಾಟಕ್ಕೆ ನಾವು ಪೂರ್ಣವಾಗಿ ಸಿದ್ಧರಾಗಿದ್ದೇವೆ. ಯೋಜನಾಬದ್ಧವಾಗಿ ಅಭ್ಯಾಸ ನಡೆಸಿದ್ದೇವೆ. ಅದನ್ನು ಕಣದಲ್ಲಿ ಯಶಸ್ವಿಯಾಗಿ ಕಾರ್ಯರೂಪಕ್ಕೆ ತರಬೇಕು' ಎಂದು ಅವರು ಗುರುವಾರ ಏಟ್ರಿಯಾ ಹೋಟೆಲ್‌ನಲ್ಲಿ ನಡೆದ ಡ್ರಾ ವೇಳೆ ಹೇಳಿದರು.ಯೂಕಿ ಭಾಂಬ್ರಿ ಹಾಗೂ ಸನಮ್ ಸಿಂಗ್ ಅವರಂಥ ಯುವ ಆಟಗಾರರು ತಮ್ಮ ಸಾಮರ್ಥ್ಯ ಮೆರೆಯಲು ಇದು ಅತ್ಯುತ್ತಮ ವೇದಿಕೆ. ಕೋಶ್ ಜೀಶನ್ ಅಲಿಗೆ ಇದು ಎರಡನೇ ಟೂರ್ನಿ. ಆದರೆ ಈ ಪಂದ್ಯಗಳ ಬಳಿಕ `ಆಟವಾಡದ ನಾಯಕ' ಎಸ್.ಕೆ.ಮಿಶ್ರಾ ವಿದಾಯ ಹೇಳುವ ಸಾಧ್ಯತೆ ಇದೆ.ಶುಕ್ರವಾರ ನಡೆಯಲಿರುವ ಮೊದಲ ಸಿಂಗಲ್ಸ್‌ನಲ್ಲಿ ಸೋಮದೇವ್ ಅವರು ತಮಗಿಂತ ರ್‍ಯಾಂಕ್‌ನಲ್ಲಿ ತುಂಬಾ ದೂರ ಇರುವ ವಿಸ್ನು ಆದಿ ನುಗ್ರೊಹೊ ಎದುರು ಆಡಲಿದ್ದಾರೆ. ಹಾಗಾಗಿ ಈ ಪೈಪೋಟಿಯಲ್ಲಿ ಸೋಮ್ ನೆಚ್ಚಿನ ಆಟಗಾರ. ಈ ಪಂದ್ಯದ ಬಳಿಕ ಯೂಕಿ ಅವರು ಕ್ರಿಸ್ಟೋಫರ್ ರುಂಗ್‌ಕತ್ ಸವಾಲು ಎದುರಿಸಲಿದ್ದಾರೆ. ಈ ಹಣಾಹಣಿ ಆಸಕ್ತಿ ಮೂಡಿಸಿದೆ. ಏಕೆಂದರೆ ಉಭಯ ಆಟಗಾರರು ಸಮಬಲ ಹೊಂದಿದ್ದಾರೆ.ಆದರೆ ಈ ಡೇವಿಸ್ ಕಪ್ ಹೋರಾಟದಲ್ಲಿ ಪ್ರೇಕ್ಷಕರ ಚಿತ್ತ ಇರುವುದು ಲಿಯಾಂಡರ್ ಅವರತ್ತ. 21 ವರ್ಷಗಳಿಂದ ಟೆನಿಸ್ ಆಡುತ್ತಿರುವ ಪೇಸ್ ಶನಿವಾರ ನಡೆಯಲಿರುವ ಡಬಲ್ಸ್‌ನಲ್ಲಿ ಯುವ ಆಟಗಾರ ಸನಮ್ ಜೊತೆಗೂಡಿ ಆಡಲಿದ್ದಾರೆ. ಈ ಪಂದ್ಯಕ್ಕೆ ಹೆಚ್ಚು ಟಿಕೆಟ್‌ಗಳು ಮಾರಾಟವಾಗಿವೆ. ಭಾನುವಾರ ರಿವರ್ಸ್ ಸಿಂಗಲ್ಸ್ ಜರುಗಲಿವೆ.ಫೆಬ್ರುವರಿಯಲ್ಲಿ ದಕ್ಷಿಣ ಕೊರಿಯಾ ವಿರುದ್ಧ 1-4ರಲ್ಲಿ ಸೋಲು ಕಂಡಿದ್ದ ಭಾರತ ಡೇವಿಸ್ ಕಪ್ ಟೂರ್ನಿಯ ಎರಡನೇ ಹಂತ ತಲುಪುವ ಅವಕಾಶ ಕಳೆದುಕೊಂಡಿತ್ತು. ಏಳು ವರ್ಷಗಳ ಬಳಿಕ ಸ್ವದೇಶದಲ್ಲಿ ಸೋಲು ಎದುರಾಗಿತ್ತು. ಆ ಕಾರಣ ಈಗ ಪ್ಲೇ ಆಫ್ ಗುಂಪಿನಲ್ಲಿ ಆಡಬೇಕಾಗಿದೆ.ಪ್ರೇಕ್ಷಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೆಳೆಯಲು ಸಂಜೆ ವೇಳೆ ಪಂದ್ಯಗಳನ್ನು ಆಯೋಜಿಸಲು ಕೆಎಸ್‌ಎಲ್‌ಟಿಎ ನಿರ್ಧರಿಸಿದೆ. ಹಾಗಾಗಿ ಪಂದ್ಯಗಳನ್ನು ಹೊನಲು ಬೆಳಕಿನಲ್ಲಿಯೂ ನಡೆಸಲು ಅವಕಾಶ ಲಭಿಸಿದೆ.

..........28 ವರ್ಷಗಳ ಬಳಿಕ....

ಕೆಎಸ್‌ಎಲ್‌ಟಿಎನಲ್ಲಿ 1985 ರಲ್ಲಿ ಕೊನೆಯದಾಗಿ ಡೇವಿಸ್ ಕಪ್ ಪಂದ್ಯ ನಡೆದಿತ್ತು. ಆ ಹಣಾಹಣಿಯಲ್ಲಿ ಭಾರತ 1-4ರಲ್ಲಿ ಸ್ವೀಡನ್ ಎದುರು ಸೋಲು ಕಂಡಿತ್ತು. ಸ್ವೀಡನ್ ಸೆಮಿಫೈನಲ್ ಪ್ರವೇಶಿಸಿತ್ತು.ವಿಜಯ್ ಅಮೃತ್‌ರಾಜ್, ಆನಂದ್ ಅಮೃತ್‌ರಾಜ್, ರಮೇಶ್ ಕೃಷ್ಣನ್ ಮತ್ತು ಶಶಿ ಮೆನನ್ ಅವರು ಭಾರತ ತಂಡದಲ್ಲಿದ್ದರು. ಮ್ಯಾಟ್ಸ್ ವಿಲಾಂಡರ್, ಆಂಡ್ರೆಸ್    ಜೇರ್ಡ್, ಸ್ಟೀಫನ್ ಎಡ್ಬರ್ಗ್ ಮತ್ತು ಜೋಕಿಮ್ ನೆಸ್ಟೋರ್ಮ್ ಸ್ವೀಡನ್ ಪರ ಆಡಿದ್ದರು.

ಈಗ 28 ವರ್ಷಗಳ ಬಳಿಕ ಉದ್ಯಾನ ನಗರಿಗೆ ಡೇವಿಸ್ ಕಪ್ ಮರಳಿದೆ.******

ಸ್ಥಳೀಯ ಆಟಗಾರರು ಇಲ್ಲದ ಪಂದ್ಯಗಳು...

ಸ್ಥಳೀಯ ಆಟಗಾರರಾದ ಮಹೇಶ್ ಭೂಪತಿ ಹಾಗೂ ರೋಹನ್ ಬೋಪಣ್ಣ ಈ ಡೇವಿಸ್ ಕಪ್ ಪಂದ್ಯಗಳಲ್ಲಿ ಆಡುತ್ತಿಲ್ಲ. ತಮ್ಮದೇ ಊರಿನಲ್ಲಿ ನಡೆಯುವ ಪ್ರತಿಷ್ಠಿತ ಪಂದ್ಯಗಳಲ್ಲಿ ಆಡುವ ಅವಕಾಶ ಕಳೆದುಕೊಂಡಿದ್ದಾರೆ. ಬಂಡಾಯವೆದ್ದಿದ್ದ ಕಾರಣ ಅವರಿಗೆ ಆಯ್ಕೆ ಸಮಿತಿ ಸ್ಥಾನ ನೀಡಿಲ್ಲ. ಅವರ ಅನುಪಸ್ಥಿತಿ ಸ್ಥಳೀಯ ಟೆನಿಸ್ ಪ್ರೇಕ್ಷಕರ ಉತ್ಸಾಹವನ್ನೂ ಕಡಿಮೆ ಮಾಡಿದೆ. ಈ ಕ್ರೀಡಾಂಗಣದಲ್ಲಿ ಮೂರು ಸಾವಿರಕ್ಕೂ ಅಧಿಕ ಆಸನಗಳ ವ್ಯವಸ್ಥೆ ಮಾಡಲಾಗಿದೆ.*********

ಪೇಸ್ ಪಾಲಿಗೆ ಇದು 50ನೇ ಡೇವಿಸ್ ಕಪ್

ಹಿರಿಯ ಹಾಗೂ ಅನುಭವಿ ಆಟಗಾರ ಪೇಸ್ ಅವರಿಗೆ ಇದು ಸ್ಮರಣೀಯ ಪಂದ್ಯ. ಏಕೆಂದರೆ ಅವರ ಪಾಲಿಗಿದು 50ನೇ ಡೇವಿಸ್ ಕಪ್ ಟೂರ್ನಿ. 1990ರಲ್ಲಿ ಅವರು ಮೊದಲ ಬಾರಿ ಆಡಿದ್ದರು. ಈಗಾಗಲೇ ಅವರಿಗೆ `ಡೇವಿಸ್ ಕಪ್ ಬದ್ಧತೆ ಪ್ರಶಸ್ತಿ' ಕೂಡ ಲಭಿಸಿದೆ. ಇದುವರೆಗೆ ಅವರು 119 ಪಂದ್ಯಗಳಲ್ಲಿ ಆಡಿದ್ದು 87ರಲ್ಲಿ ಗೆಲುವು ಕಂಡಿದ್ದಾರೆ. 

ಪ್ರತಿಕ್ರಿಯಿಸಿ (+)