ಮಂಗಳವಾರ, ಜೂನ್ 15, 2021
26 °C
ಕ್ರಿಕೆಟ್‌: ಇಂದು ಭಾರತ-ಪಾಕಿಸ್ತಾನ ಪಂದ್ಯ; ಶುಭಾರಂಭದ ನಿರೀಕ್ಷೆಯಲ್ಲಿ ದೋನಿ ಬಳಗ

ಪೈಪೋಟಿಯ ಕುತೂಹಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೀರ್‌ಪುರ: ಇತ್ತೀಚಿನ ದಿನಗಳಲ್ಲಿ ಎದುರಾದ ಸೋಲಿನ ಕಹಿಯನ್ನು ಮರೆಯಲು ಪ್ರಯತ್ನಿಸುತ್ತಿರುವ ಭಾರತ ತಂಡ ಟ್ವೆಂಟಿ-20 ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಪ್ರಶಸ್ತಿಯೆಡೆಗಿನ ಅಭಿಯಾನವನ್ನು ಶುಕ್ರವಾರ ಆರಂಭಿಸಲಿದೆ.ಷೇರ್‌ ಎ ಬಾಂಗ್ಲಾ ಕ್ರೀಡಾಂಗಣದಲ್ಲಿ  ನಡೆಯುವ ತನ್ನ ಮೊದಲ ಪಂದ್ಯದಲ್ಲಿ ಮಹೇಂದ್ರ ಸಿಂಗ್‌ ದೋನಿ ಬಳಗ ಪಾಕಿಸ್ತಾನದ ಸವಾಲನ್ನು ಎದುರಿಸಲಿದೆ. ಸಾಂಪ್ರ ದಾಯಿಕ ಎದುರಾಳಿಗಳ ನಡುವಿನ ಈ ಹೋರಾಟ ಕ್ರಿಕೆಟ್‌ ಪ್ರಿಯರ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.ಇತ್ತೀಚೆಗೆ ನಡೆದ ಏಷ್ಯಾಕಪ್‌ ಟೂರ್ನಿಯ ಪಂದ್ಯ ದಲ್ಲಿ ಭಾರತ ತಂಡ ಪಾಕಿಸ್ತಾನದ ಕೈಯಲ್ಲಿ ಸೋಲು ಅನುಭವಿಸಿತ್ತು. ಆದರೆ ಈ ಫಲಿತಾಂಶ ಮಹಿ ಬಳಗದ ಮೇಲೆ ಯಾವುದೇ ಪರಿಣಾಮ ಬೀರದು. ಏಕೆಂದರೆ ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ತಂಡ ಪಾಕಿಸ್ತಾನದ ಕೈಯಲ್ಲಿ ಒಮ್ಮೆಯೂ ಸೋಲು ಅನುಭ ವಿಸಿಲ್ಲ. ಆದ್ದರಿಂದ ಇತಿಹಾಸದ ಬಲ ಭಾರತದ ಪರವಾಗಿದೆ.ದೋನಿ ಬಳಗ ಬುಧವಾರ ನಡೆದ ಅಭ್ಯಾಸ ಪಂದ್ಯದಲ್ಲಿ ಇಂಗ್ಲೆಂಡ್‌ ತಂಡವನ್ನು ಮಣಿಸಿತ್ತು. ಇದರಿಂದ ಆಟಗಾರರ ಆತ್ಮವಿಶ್ವಾಸ ಹೆಚ್ಚಿದೆ. ವಿಶ್ವಕಪ್‌ ಟೂರ್ನಿಯಲ್ಲಿ ಪಾಕ್‌ ವಿರುದ್ಧ ಹೊಂದಿರುವ ಗೆಲುವಿನ ದಾಖಲೆಯನ್ನು ಮುಂದುವರಿಸಿಕೊಂಡು ಹೋಗಲು ಎಲ್ಲ ಆಟಗಾರರು ಸಜ್ಜಾಗಿದ್ದಾರೆ.ಮೊಹಮ್ಮದ್‌ ಹಫೀಜ್‌ ನೇತೃತ್ವದ ಪಾಕ್‌ ತಂಡ ಅಪಾಯಕಾರಿ ಎಂಬುದು ಭಾರತಕ್ಕೆ ತಿಳಿದಿದೆ. ಏಷ್ಯಾಕಪ್‌ ಟೂರ್ನಿಯಲ್ಲಿ ಶಾಹಿದ್‌ ಆಫ್ರಿದಿ ಅಂತಿಮ ಓವರ್‌ನಲ್ಲಿ ಎರಡು ಸಿಕ್ಸರ್‌ ಸಿಡಿಸಿ ಗೆಲುವನ್ನು ಭಾರತದ ಕೈಯಿಂದ ಕಿತ್ತುಕೊಂಡಿದ್ದರು. ಆ ಕಹಿಯನ್ನು ‘ಮಹಿ’ ಬಳಗ ಇನ್ನೂ ಮರೆತಿಲ್ಲ.2012ರ ವಿಶ್ವಕಪ್‌ ಬಳಿಕ ಭಾರತ ತಂಡ ಕೇವಲ ಐದು ಟಿ-20 ಅಂತರರಾಷ್ಟ್ರೀಯ ಪಂದ್ಯಗಳನ್ನಾಡಿದೆ. ಇದರಲ್ಲಿ ಮೂರರಲ್ಲಿ ಗೆಲುವು ಪಡೆದಿದ್ದರೆ, ಎರಡು ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಆದರೆ ಭಾರತದ ಆಟಗಾರರು ಐಪಿಎಲ್‌ನಲ್ಲಿ ಆಡಿರುವ ಕಾರಣ ಅನುಭವದ ಕೊರತೆ ಕಾಡದು.ದೋನಿ ಬಳಗ ಬ್ಯಾಟಿಂಗ್‌ನಲ್ಲಿ ವಿರಾಟ್‌ ಕೊಹ್ಲಿ ಅವರನ್ನೇ ನೆಚ್ಚಿಕೊಂಡಿದೆ. ದೆಹಲಿಯ ಈ ಬ್ಯಾಟ್ಸ್‌ಮನ್‌ ಇಂಗ್ಲೆಂಡ್‌ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಅಜೇಯ 74 ರನ್‌ ಗಳಿಸಿದ್ದರು. ಸುರೇಶ್‌ ರೈನಾ ಕೂಡಾ ಭರವಸೆ ಮೂಡಿಸಿದ್ದಾರೆ. ಯುವರಾಜ್‌ ಸಿಂಗ್‌ ಹಾಗೂ ದೋನಿ ವೇಗವಾಗಿ ರನ್‌ ಪೇರಿಸುವ ತಾಕತ್ತು ಹೊಂದಿದ್ದಾರೆ.ಆದರೆ ಆರಂಭಿಕ ಆಟಗಾರರಾದ ರೋಹಿತ್‌ ಶರ್ಮ ಮತ್ತು ಶಿಖರ್‌ ಧವನ್‌ ಅವರ ಫಾರ್ಮ್‌ ಆತಂಕಕ್ಕೆ ಎಡೆಮಾಡಿಕೊಟ್ಟಿದೆ. ಎರಡೂ ಅಭ್ಯಾಸ ಪಂದ್ಯಗಳಲ್ಲಿ ಇವರು ವಿಫಲರಾಗಿದ್ದರು. ಅಂತಿಮ ಇಲೆವೆನ್‌ನಲ್ಲಿ ಯಾರಿಗೆ ಸ್ಥಾನ ನೀಡಬೇಕು ಎಂಬುದು ದೋನಿ ಚಿಂತೆಗೆ ಕಾರಣವಾಗಿರುವುದು ನಿಜ.ಬೌಲಿಂಗ್‌ನಲ್ಲಿ ಸ್ಪಿನ್ನರ್‌ಗಳಾದ ಆರ್‌. ಅಶ್ವಿನ್‌ ಮತ್ತು ರವೀಂದ್ರ ಜಡೇಜ ಮೇಲೆ ಭಾರತ ಹೆಚ್ಚಿನ ಭರವಸೆ ಇಟ್ಟುಕೊಂಡಿದೆ. ವೇಗದ ಬೌಲರ್‌ ಮೊಹಮ್ಮದ್‌ ಶಮಿ ಅಂತಿಮ ಇಲೆವೆನ್‌ನಲ್ಲಿ ಆಡುವುದು ಖಚಿತ. ಎರಡನೇ ವೇಗಿಯ ರೂಪದಲ್ಲಿ ಭುವನೇಶ್ವರ್‌ ಕುಮಾರ್‌ ಅಥವಾ ವರುಣ್‌ ಆ್ಯರನ್‌ ಅವಕಾಶ ಗಿಟ್ಟಿಸಿಕೊಳ್ಳಬಹುದು.ಸವಾಲೊಡ್ಡಲಿರುವ ಅಫ್ರಿದಿ, ಅಜ್ಮಲ್‌

ಪಾಕ್‌ ತಂಡ ಅನುಭವಿ ಹಾಗೂ ಯುವ ಆಟಗಾರರನ್ನು ಒಳಗೊಂಡಿದೆ. ನಾಯಕ ಹಫೀಜ್‌, ಅಹ್ಮದ್‌ ಶೆಹಜಾದ್‌ ಹಾಗೂ ಕಮ್ರನ್‌ ಮತ್ತು ಉಮರ್‌ ಅಕ್ಮಲ್‌ ಸಹೋದರರು ಈ ತಂಡದ ಬ್ಯಾಟಿಂಗ್‌ನ ಪ್ರಧಾನ ಶಕ್ತಿ ಎನಿಸಿಕೊಂಡಿದ್ದಾರೆ.ಆದರೆ ಭಾರತಕ್ಕೆ  ಸವಾಲಾಗಿ ಪರಿಣಮಿಸಲಿರುವ ಇಬ್ಬರು ಆಟಗಾರರೆಂದರೆ ಶಾಹಿದ್‌ ಆಫ್ರಿದಿ ಮತ್ತು ಸಯೀದ್‌ ಅಜ್ಮಲ್‌. ಅಫ್ರಿದಿ ಹೇಗೆ ಆಡುವರು ಎಂಬುದನ್ನು ಊಹಿಸುವುದು ಕಷ್ಟ. ಏಷ್ಯಾ ಕಪ್‌ ಟೂರ್ನಿಯಲ್ಲಿ ಅಬ್ಬರಿಸಿದ್ದ ಈ ಬ್ಯಾಟ್ಸ್‌ಮನ್‌ ಉತ್ತಮ ಫಾರ್ಮ್‌ನಲ್ಲಿದ್ದಾರೆ.ಅದೇ ರೀತಿ ಸಯೀದ್‌ ಅಜ್ಮಲ್‌ ಅವರ ನಾಲ್ಕು ಓವರ್‌ಗಳನ್ನು ಸಮರ್ಥವಾಗಿ ಎದುರಿಸಿ ನಿಂತರೆ ಭಾರತಕ್ಕೆ ಗೆಲುವು ಪಡೆಯುವುದು ಕಷ್ಟವಾಗದು.ಪಾಕ್‌ ಎದುರು ಭಾರತ ಒಮ್ಮೆಯೂ ಸೋತಿಲ್ಲ

ಏಕದಿನ ಮತ್ತು ಟ್ವೆಂಟಿ-20 ವಿಶ್ವಕಪ್‌ನಲ್ಲಿ ಭಾರತ ತಂಡ ಪಾಕಿಸ್ತಾನದ ಎದುರೂ ಒಮ್ಮೆಯೂ ಸೋತಿಲ್ಲ. ಆದ್ದರಿಂದ ಇತಿಹಾಸ ಭಾರತದ ಪರವಾಗಿದೆ.

ಟ್ವೆಂಟಿ-20 ವಿಶ್ವಕಪ್‌ನಲ್ಲಿ ಈ ಹಿಂದೆ ಮೂರು ಸಲ ಪರಸ್ಪರ ಪೈಪೋಟಿ ನಡೆಸಿದಾಗಲೂ ‘ಮಹಿ’ ಬಳಗ ಜಯ ಸಾಧಿಸಿತ್ತು. 2007ರ ವಿಶ್ವಕಪ್‌ನ ಲೀಗ್‌ ಹಂತದ ಪಂದ್ಯ ‘ಟೈ’ನಲ್ಲಿ ಕೊನೆಗೊಂಡಿತ್ತು. ಆದರೆ ‘ಬೌಲ್‌ ಔಟ್‌’ನಲ್ಲಿ ಭಾರತ ಜಯ ಸಾಧಿಸಿತ್ತು. ಅದೇ ಟೂರ್ನಿಯ ಫೈನಲ್‌ನಲ್ಲಿ ಐದು ರನ್‌ಗಳ ಗೆಲುವು ಪಡೆದ ದೋನಿ ಬಳಗ ಚಾಂಪಿಯನ್‌ ಆಗಿತ್ತು. 2012 ರಲ್ಲಿ ಶ್ರೀಲಂಕಾದಲ್ಲಿ ನಡೆದ ಟೂರ್ನಿಯ ಪಂದ್ಯದಲ್ಲಿ ಭಾರತ ಎಂಟು ವಿಕೆಟ್‌ಗಳ ಸುಲಭ ಜಯ ಸಾಧಿಸಿತ್ತು.

ಏಕದಿನ ವಿಶ್ವಕಪ್‌ನಲ್ಲಿ ಆಡಿದ ಐದೂ ಪಂದ್ಯಗಳಲ್ಲಿ ಭಾರತ ಗೆದ್ದಿದೆ.‘ಬೌಲಿಂಗ್‌ ಚಿಂತೆಗೆ ಕಾರಣ’

ಮೀರ್‌ಪುರ: ಟ್ವೆಂಟಿ-20 ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಭಾರತ ತಂಡದ ಯಶಸ್ಸು ಬ್ಯಾಟ್ಸ್‌ಮನ್‌ಗಳನ್ನು ಅವಲಂಬಿಸಿದೆ ಎಂದು ನಾಯಕ ಮಹೇಂದ್ರ ಸಿಂಗ್‌ ದೋನಿ ಹೇಳಿದ್ದಾರೆ.

‘ಬೌಲಿಂಗ್‌ ವಿಭಾಗ ಅಲ್ಪ ಚಿಂತೆಗೆ ಕಾರಣವಾಗಿದೆ. ಆದ್ದರಿಂದ ಬ್ಯಾಟ್ಸ್‌ಮನ್‌ಗಳು ಉತ್ತಮ ಪ್ರದರ್ಶನ ನೀಡಿ ಬೌಲರ್‌ಗಳ ಮೇಲಿನ ಒತ್ತಡ ಕಡಿಮೆ ಮಾಡಬೇಕು’ ಎಂದು ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಭಾರತ ತಂಡದ ನಾಯಕ ತಿಳಿಸಿದ್ದಾರೆ.‘ನಮ್ಮ ತಂಡದ ಬ್ಯಾಟಿಂಗ್‌ಗೆ ಹೋಲಿಸಿ ನೋಡಿದರೆ ಬೌಲಿಂಗ್‌ ವಿಭಾಗ ದುರ್ಬಲವಾಗಿದೆ. ಇದು ಚಿಂತೆಗೆ ಕಾರ ಣವಾಗಿದೆ. ಆದ್ದರಿಂದ ಬ್ಯಾಟಿಂಗ್‌ನಲ್ಲಿ ಶ್ರೇಷ್ಠ ಪ್ರದರ್ಶನ ನೀಡಿ 10-15 ರಷ್ಟು ಅಧಿಕ ರನ್‌ ಗಳಿಸಬೇಕು. ಅದೇ ರೀತಿ ಕೊನೆಯ ಓವರ್‌ಗಳಲ್ಲಿ ಎದುರಾಳಿಗಳು ಹೆಚ್ಚು ರನ್‌ ಗಳಿಸ ದಂತೆ ನೋಡಿಕೊಳ್ಳಬೇಕು. ಹಾಗಾದಲ್ಲಿ ನಮಗೆ ಪ್ರಶಸ್ತಿ ಗೆಲ್ಲುವ ಉತ್ತಮ ಅವಕಾಶವಿದೆ’ ಎಂದು  ಅವರು ತಿಳಿಸಿದ್ದಾರೆ.ತಂಡಗಳು ಇಂತಿವೆ

ಭಾರತ: ಮಹೇಂದ್ರ ಸಿಂಗ್‌ ದೋನಿ (ನಾಯಕ), ವರುಣ್‌ ಆ್ಯರನ್‌, ಸ್ಟುವರ್ಟ್‌ ಬಿನ್ನಿ, ಶಿಖರ್‌ ಧವನ್‌, ರವೀಂದ್ರ ಜಡೇಜ, ವಿರಾಟ್‌ ಕೊಹ್ಲಿ, ಭುವನೇಶ್ವರ್‌ ಕುಮಾರ್‌, ಅಮಿತ್‌ ಮಿಶ್ರಾ, ಅಜಿಂಕ್ಯ ರಹಾನೆ, ರವಿಚಂದ್ರನ್‌ ಅಶ್ವಿನ್‌, ಸುರೇಶ್‌ ರೈನಾ, ಮೊಹಮ್ಮದ್‌ ಶಮಿ, ಮೋಹಿತ್‌ ಶರ್ಮ, ರೋಹಿತ್‌ ಶರ್ಮ, ಯುವರಾಜ್‌ ಸಿಂಗ್‌

ಪಾಕಿಸ್ತಾನ: ಮೊಹಮ್ಮದ್‌ ಹಫೀಜ್‌ (ನಾಯಕ), ಅಹ್ಮದ್‌ ಶೆಹಜಾದ್‌, ಬಿಲಾವಲ್‌ ಭಟ್ಟಿ, ಜುನೈದ್‌ ಖಾನ್‌, ಕಮ್ರನ್‌ ಅಕ್ಮಲ್‌, ಸಯೀದ್‌ ಅಜ್ಮಲ್‌, ಶಾಹಿದ್‌ ಅಫ್ರಿದಿ, ಶರ್ಜೀಲ್‌ ಖಾನ್‌, ಶೋಯಬ್‌ ಮಲಿಕ್‌, ಸೊಹೈಬ್‌ ಮಕ್ಸೂದ್‌, ಸೊಹೇಲ್‌ ತನ್ವೀರ್‌, ಮೊಹಮ್ಮದ್‌ ತಲ್ಹಾ, ಉಮರ್‌ ಅಕ್ಮಲ್‌, ಉಮರ್‌ ಗುಲ್‌, ಜುಲ್ಫಿಕರ್‌ ಬಾಬರ್‌

ಪಂದ್ಯದ ಆರಂಭ: ರಾತ್ರಿ 7.00ಕ್ಕೆ

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.