ಶನಿವಾರ, ಅಕ್ಟೋಬರ್ 19, 2019
28 °C

ಪೈಪ್‌ಲೈನ್ ಕಾಮಗಾರಿಗೆ ಗ್ರಾಮಸ್ಥರ ತಡೆ

Published:
Updated:

ಮುಡಿಪು: ಬಂಟ್ವಾಳ ತಾಲ್ಲೂಕಿನ ತುಂಬೆಯಿಂದ, ಮುಡಿಪುವಿಗೆ ನೀರು ಸರಬರಾಜು ಯೋಜನೆಯಡಿ ಕೊಳವೆ ಅಳವಡಿಸುವ ಕಾಮಗಾರಿಗೆ ಮಂಗಳವಾರ ಮುಡಿಪುವಿನ ಕಾಯೆರ್‌ಗೋಳಿ ಎಂಬಲ್ಲಿ ಗ್ರಾಮಸ್ಥರು ತಡೆ ಒಡ್ಡಿದ್ದು, ಕೆಲಸ ಸ್ಥಗಿತಗೊಂಡಿದೆ.ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ವತಿಯಿಂದ ಕೈಗೊಳ್ಳಲಾಗುತ್ತಿರುವ ಈ ಯೋಜನೆ ವಿರುದ್ದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಯೋಜನೆಗೆ ಸಂಬಂಧಿಸಿ ಎರಡು ವರ್ಷಗಳ ಹಿಂದೆಯೇ ರೂಪುರೇಷೆ ಸಿದ್ಧಗೊಂಡಿತ್ತು. ಕಂಬ್ಲಪದವು ಬಳಿ ಬೃಹತ್ ಗಾತ್ರದ ನೀರಿನ ಟ್ಯಾಂಕ್ ಹಾಗೂ ಸಂಸ್ಕರಣಾ ಘಟಕ ಸ್ಥಾಪಿಸಿ, ನಂತರ ಇನ್‌ಪೋಸಿಸ್ ಹಾಗೂ ಇಲ್ಲಿನ ಕೈಗಾರಿಕಾ ಪ್ರದೇಶದಲ್ಲಿ ನಿರ್ಮಾಣವಾಗಲಿರುವ ಬೃಹತ್ ಕಂಪೆನಿಗಳಿಗೆ ನೀರು ಸರಬರಾಜು ಮಾಡುವ ಯೋಜನೆ ರೂಪಿಸಲಾಗಿದೆ. ಯೋಜನೆಯ ಆರಂಭದಲ್ಲಿ ನೀರು ಸರಬರಾಜು ಕೊಳವೆ ಹಾದು ಹೋಗುವ ಐದು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಂಟು ಗ್ರಾಮಗಳಿಗೆ ನೀರು ಕೊಡುವ ಬಗ್ಗೆ ಜನಪ್ರತಿನಿಧಿಗಳು ಹಾಗೂ ಊರಿನ ಮುಖಂಡರು ಕೆಐಎಡಿಬಿ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾಗ ಅಧಿಕಾರಿಗಳು ಇದಕ್ಕೆ ಒಪ್ಪಿದ್ದರು ಎನ್ನಲಾಗಿದೆ.ಆದರೆ ಈಗ ಅಧಿಕಾರಿಗಳು ಗ್ರಾಮಗಳಿಗೆ ನೀರು ಕೊಡುವ ಬಗ್ಗೆ ಕ್ರಮ ತೆಗೆದುಕೊಳ್ಳದೆ ತುಂಬೆಯಿಂದ ನೇರವಾಗಿ ಮುಡಿಪುವಿಗೆ ನೀರಿನ ಕೊಳವೆ ಅಳವಡಿಸುವ ಕಾಮಗಾರಿ ನಡೆಸುತ್ತ್ದ್ದಿದು, ಈಗಾಗಲೇ ಸಜಿಪ ಕಡೆಯಿಂದ ಮುಡಿಪು ಕಾಯೆರ್‌ಗೋಳಿವರೆಗೆ ಕಾಮಗಾರಿ ಮುಗಿಸ್ದ್ದಿದಾರೆ.ಆದರೆ ಕೆಐಎಡಿಬಿ ಅಧಿಕಾರಿಗಳು ಭರವಸೆ ಗಾಳಿಗೆತೂರಿ ಕಾಮಗಾರಿ ಆರಂಭಿಸಿರುವುದನ್ನು ಖಂಡಿಸಿ ಇತ್ತೀಚೆಗೆ ಇರಾ, ಕುರ್ನಾಡು, ನರಿಂಗಾನ, ಪಜೀರು ಹಾಗೂ ಬಾಳೆಪುಣಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಗ್ರಾಮಸ್ಥರು ಸಭೆ ಸೇರಿದ್ದರು. ಭರವಸೆ ಈಡೇರಿಸದೇ ಕಾಮಗಾರಿ ನಡೆಸಲು ಬಿಡುವುದಿಲ್ಲ ಎಂಬ ನಿರ್ಣಯ ಕೈಗೊಂಡಿದ್ದರು. ಮಂಗಳವಾರ ಮತ್ತೆ ಕೆಐಎಡಿಬಿಯವರು ಕಾಯೆರ್‌ಗೋಳಿ ಸಮೀಪ ಜೆಸಿಬಿ ಮೂಲಕ ಕಾಮಗಾರಿ ಆರಂಭಿಸಿದಾಗ ಜನಪ್ರತಿನಿಧಿಗಳು ಹಾಗೂ ಗ್ರಾಮಸ್ಥರು ತಡೆಯೊಡ್ಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಕುರ್ನಾಡು ಜಿಲ್ಲಾ ಪಂಚಾಯಿತಿ ಸದಸ್ಯ ಜುಬೇರ್, `ಕೆಐಎಡಿಬಿ ಅಧಿಕಾರಿಗಳು ಆರಂಭದಲ್ಲಿ ಎಂಟು ಗ್ರಾಮಗಳಿಗೆ ನೀರು ಕೊಡಲು ಒಪ್ಪಿದ್ದರು. ಇದೀಗ ನಮ್ಮ ಮಾತಿಗೆ ಬೆಲೆ ಕೊಡದೆ ಏಕಾಏಕಿ ಕಾಮಗಾರಿ ಆರಂಭಿಸಿದ್ದಾರೆ. ನಮ್ಮ ಭರವಸೆಯನ್ನು ಈಡೇರಿಸದೇ ಪೈಪ್‌ಲೈನ್ ಕಾಮಗಾರಿ ನಡೆಸಲು ಬಿಡುವುದಿಲ್ಲ~ ಎಂದು ಹೇಳಿದರು.ಪಜೀರು ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ಸೀತಾರಾಮ ಶೆಟ್ಟಿ ಮಾತನಾಡಿ `ಈಗಾಗಲೇ ಹಲವಾರು ಯೋಜನೆಗಳು ಈ ಭಾಗಕ್ಕೆ ಬಂದಿದ್ದರೂ ಊರಿನವರಿಗೆ ಒಂದಿಷ್ಟೂ ಪ್ರಯೋಜನವಾಗಿಲ್ಲ. ಆದರೆ ಕುಡಿಯುವ ನೀರು ಈ ಭಾಗಕ್ಕೆ ಅವಶ್ಯವಾಗಿದೆ. ಆದ್ದರಿಂದ ನಮಗೆ ನೀರು ಕೊಡದೆ ಯಾವುದೇ ಕಾಮಗಾರಿ ನಡೆಸಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.ಈ ಸಂದರ್ಭದಲ್ಲಿ ತಾ.ಪಂ ಸದಸ್ಯರಾದ ಉಮ್ಮರ್ ಫಜೀರು, ಇರಾ ಗ್ರಾ.ಪಂ ಅಧ್ಯಕ್ಷ ರಜಾಕ್ ಕುಕ್ಕಾಜೆ, ಕುರ್ನಾಡು ಗ್ರಾಪಂ ಮಾಜಿ ಅಧ್ಯಕ್ಷ ದೇವದಾಸ್ ಭಂಡಾರಿ, ನರಿಂಗಾನ ಗ್ರಾ.ಪಂ ಅಧ್ಯಕ್ಷ ಇಸ್ಮಾಯಿಲ್ ಮೀನಂಕೋಡಿ, ಫಜೀರು ಗ್ರಾ.ಪಂ. ಅಧ್ಯಕ್ಷ ನಝರ್ ಮೊಯ್ದಿನ್, ಮಾಜಿ ಅಧ್ಯಕ್ಷ ಇಂತಿಯಾಜ್ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಇದ್ದರು.ಪ್ರತಿಭಟನೆಗೆ ಸಿದ್ಧತೆ: ಮುಡಿಪು- ಇರಾ ವ್ಯಾಪ್ತಿಯಲ್ಲಿ ನೂರಾರು ಎಕರೆ ಪ್ರದೇಶಗಳನ್ನು ಕೆಐಎಡಿಬಿ ಸ್ವಾಧೀನಪಡಿಸಿಕೊಂಡಿದೆ. ಆದರೆ ಇಷ್ಟೆಲ್ಲಾ ಭೂಮಿ ಕೊಟ್ಟರೂ ಅವರು ನೀಡುವ ಭರವಸೆಯಂತೆ ಯಾವುದೇ ಸೌಲಭ್ಯಗಳನ್ನು ಊರಿನವರಿಗೆ ನೀಡುತ್ತಿಲ್ಲ. ಮುಡಿಪುವಿನಲ್ಲಿ ಇನ್‌ಫೊಸಿಸ್ ಕಂಪೆನಿ ನಿರ್ಮಾಣವಾದರೂ ಸ್ಥಳೀಯರಿಗೆ ಯಾವುದೇ ರೀತಿ ಪ್ರಯೋಜನವಾಗಿಲ್ಲ.ಇದೀಗ ಕುಡಿಯುವ ನೀರು ಕೇಳಿದರೂ ಅಧಿಕಾರಿಗಳು ಇಲ್ಲ ಎನ್ನುತ್ತಾರೆ. ಇಂತಹವರಿಗೆ ನಮ್ಮ ಭೂಮಿ ಬೇಕು. ನಮ್ಮ ಕಷ್ಟ ಬೇಕಾಗಿಲ್ಲ ಎಂದು ಸ್ಥಳೀಯರು ಅಳಲು ತೋಡಿಕೊಂಡಿದ್ದು, ಬೇಡಿಕೆಯನ್ನು ಈಡೇರಿಸದಿದ್ದರೆ ತೀವ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದ್ದಾರೆ.

Post Comments (+)