ಮಂಗಳವಾರ, ನವೆಂಬರ್ 19, 2019
27 °C

ಪೈಪ್ ಒಡೆದು ನೀರು ಸೋರಿಕೆ

Published:
Updated:

ಬಳ್ಳಾರಿ: ಬೇಸಿಗೆಯ ಕಾವು ಹೆಚ್ಚುತ್ತಲಿದ್ದು, ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಶುರುವಾಗಿದೆ. ಒಂದೆಡೆ, ಗ್ರಾಮೀಣ ಪ್ರದೇಶಗಳಿಗೆ ಕುಡಿಯುವ ನೀರು ದೊರೆಯದೆ ಜನತೆ ತತ್ತರಿಸಿದ್ದಾರೆ. ಇನ್ನೊಂದೆಡೆ ನಗರಕ್ಕೆ ನೀರು ಪೂರೈಸುವ ಪ್ರಮುಖ ಪೈಪ್‌ಲೈನ್ ಕಳೆದ ವಾರವೇ ನಗರದ ಹೊರ ವಲಯದಲ್ಲಿ ಒಡೆದು ಹೋಗಿದ್ದು, ನೀರು ಪೋಲಾಗುತ್ತಿದೆ.ಕೊಳಗಲ್ ರಸ್ತೆಯಲ್ಲಿನ ಕೊಂಡಯ್ಯ ನಗರ ಬಳಿ, ವಿಮಾನ ನಿಲ್ದಾಣದ ಎದುರು ಪೈಪ್‌ಲೈನ್ ಒಡೆದು ಹೋಗಿ ನೀರು ಹಳ್ಳದ ಮೂಲಕ ಹರಿದುಹೋಗುತ್ತಿದೆ.ಕಳೆದ ಒಂದು ವಾರದಿಂದ ಈ ಪೈಪ್ ಒಡೆದಿದ್ದು, ಜಲಪಾತದ ಮಾದರಿಯಲ್ಲಿ ನೀರು ಹರಿದು ಹಳ್ಳ ಸೇರುತ್ತಿದೆ. ಈ ಕುರಿತು ಪಾಲಿಕೆ ಹಾಗೂ ಜಲಮಂಡಳಿಯ ಗಮನಕ್ಕೆ ತಂದರೂ ಕ್ರಮ ಕೈಗೊಂಡಿಲ್ಲ ಎಂದು ಆ ಭಾಗದ ಜನತೆ ದೂರುತ್ತಾರೆ. ರಾತ್ರಿ ವೇಳೆಯಲ್ಲಿ ನಿಶ್ಯಬ್ಧ ಇರುವಾಗ ನೀರು ಹರಿಯುವುದು ಜಲಪಾತವನ್ನೇ ನೆನಪಿಸುತ್ತದೆ.

ಪೋಲಾಗಿ ಹರಿದ ನೀರು ಪಕ್ಕದ ಹಳ್ಳ ಸೇರುತ್ತಿದೆ. ಕುಡಿಯುವ ನೀರಿಗೆ ಪರದಾಟ ನಡೆದಿದ್ದರೂ ಸಂಬಂಧಿಸಿದವರು ಈ ಸಮಸ್ಯೆಯತ್ತ ಗಮನಹರಿಸಿಲ್ಲ. ಸುತ್ತಮುತ್ತಲಿನ ಕೆಲವು ನಿವಾಸಿಗಳು ಇಲ್ಲಿಂದಲೇ ಕುಡಿಯಲು ನೀರು ಸಂಗ್ರಹಿಸುವಲ್ಲಿ ನಿರತರಾಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.ಪಕ್ಕದ ಹಲ್ಳವು ಮಳೆಗಾಲದಲ್ಲಿ ಹರಿಯವುಂತೆಯೇ ಹರಿಯುತ್ತಿದ್ದು, ಜಾನುವಾರುಗಳು ಬಿಸಿಲಿನ ತಾಪದಿಂದ ರಕ್ಷಣೆ ಪಡೆಯಲು ಈ ಹಳ್ಳದ ಮೊರೆ ಹೋಗಿವೆ ಎಂದೂ ಅವರು ಹೇಳಿದ್ದಾರೆ.ದುರಸ್ತಿಗೆ ಕ್ರಮ: ಅಲ್ಲೆಪುರ ಕೇಂದ್ರ ಸ್ಥಾವರದಿಂದ ಮದರ್ ಟ್ಯಾಂಕ್‌ಗೆ ನೀರು ಪೂರೈಸುವ ಪಿಎಸ್‌ಸಿ ಪೈಪ್ ಕೊಳಗಲ್ ರಸ್ತೆಯಲ್ಲಿನ ವಿಮಾನ ನಿಲ್ದಾಣದ ಬಳಿ ಒಡೆದಿದ್ದು, ಇದೇ 6ರಂದು ಇದರ ದುರಸ್ತಿ ಕಾರ್ಯ ಕೈಗೆತ್ತಿಗೊಳ್ಳಲಾಗುವುದು. ಇದರಿಂದಾಗಿ ಏಪ್ರಿಲ್ 6 ಮತ್ತು 7ರಂದು ನಗರಕ್ಕೆ ನೀರು ಪೂರೈಸುವಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಪೌರಾಯುಕ್ತ ಡಿ.ಎಲ್. ನಾರಾಯಣ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)