ಗುರುವಾರ , ನವೆಂಬರ್ 14, 2019
23 °C
ಬೆಂಗಳೂರಿನ ಮಲ್ಲೇಶ್ವರದ ಬಿಜೆಪಿ ಕಚೇರಿ ಬಳಿ ಸ್ಫೋಟ

ಪೈಪ್ ಬಾಂಬ್ ಬಳಕೆ

Published:
Updated:

ಬೆಂಗಳೂರು: ನಗರದ ಮಲ್ಲೇಶ್ವರದಲ್ಲಿ ಬಿಜೆಪಿ ಕಚೇರಿ ಬಳಿ ಬುಧವಾರ ನಡೆದ ಬಾಂಬ್ ಸ್ಫೋಟದಲ್ಲಿ ಪೈಪ್ ಬಾಂಬ್ ಬಳಕೆ ಮಾಡಿದ್ದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್) ಅಧಿಕಾರಿಗಳು ಗುರುವಾರ ತಿಳಿಸಿದರು.ಸ್ಫೋಟ ನಡೆದ ಸ್ಥಳದ ಸುತ್ತಲಿನ ಪ್ರದೇಶದಲ್ಲಿ ಲಿಥಿಯಂ ಹಾಗೂ ಆಲ್ಕಲೈನ್‌ನ ಅವಶೇಷಗಳು ಪತ್ತೆಮಾಡಿರುವ ಎಫ್‌ಎಸ್‌ಎಲ್ ಪರಿಣಿತರು ಇದೊಂದು ಪೈಪ್‌ನಲ್ಲಿ ಹುದುಗಿಸಿಡಲಾದ ಸುಧಾರಿತ ಸ್ಫೋಟಕ ವಸ್ತುಗಳಿಂದ (ಐಇಡಿ) ತಯಾರಿಸಲಾದ ಬಾಂಬ್ (ಪೈಪ್ ಬಾಂಬ್) ಎಂದು ಅಭಿಪ್ರಾಯಪಟ್ಟರು.ಪೈಪ್‌ನಲ್ಲಿ ಬಾಂಬ್ ಹುದುಗಿಸಿಟ್ಟ ದುಷ್ಕರ್ಮಿಗಳು ಅದನ್ನು ಸಂಶಯ ಬರದ ಹಾಗೆ ಬೈಕ್‌ಗೆ ಅಳವಡಿಸಿದ್ದು, ಈ ಬಾಂಬ್‌ನಲ್ಲಿ ಸುಲಭವಾಗಿ ಎಲ್ಲೆಡೆ ದೊರೆಯುವ ಕಲ್ಲು ಗಣಿಗಾರಿಕೆಯಲ್ಲಿ ಬಳಕೆ ಮಾಡುವ ಅಮೋನಿಯಂ ನೈಟ್ರೇಟ್ ಬಳಕೆ ಮಾಡಲಾಗಿದೆ ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದರು.ಈ ಬಾಂಬ್ ಅನ್ನು ಬ್ಯಾಟರಿ ಚಾಲಿತ ಟೈಮರ್‌ನಿಂದ ಸ್ಫೋಟಿಸಲಾಗಿದೆ. ಅಲ್ಲದೇ, ಬಾಂಬ್ ತಯಾರಿಕೆಯಲ್ಲಿ ಯಾವುದೇ ಚೂರುಗಳು, ಗುಂಡುಗಳು ಹಾಗೂ ಬಾಲ್ ಬೇರಿಂಗ್ ಬಳಕೆ ಮಾಡಿಲ್ಲ. ಒಂದು ವೇಳೆ ಅವುಗಳನ್ನು ಬಳಕೆ ಮಾಡಿದ್ದರೆ ಹಾನಿಯ ಪ್ರಮಾಣ ಇನ್ನು ಹೆಚ್ಚುತಿತ್ತು ಎಂದು ಎಫ್‌ಎಸ್‌ಎಲ್ ಪರಿಣಿತರು ಹೇಳಿದರು.ಸ್ಫೋಟದಲ್ಲಿ ಬಳಸಲಾದ ಸ್ಫೋಟಕ ಸಾಧನ ತಯಾರಿಕೆಯ ಹಿನ್ನೆಲೆಯನ್ನು ಅರಿಯುವ ದೃಷ್ಟಿಯಿಂದ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಸಿಬ್ಬಂದಿಗಳು ಘಟನಾಸ್ಥಳದಲ್ಲಿ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರತಿಕ್ರಿಯಿಸಿ (+)