ಪೈ ರಕ್ಷಣೆಗೆ ಇಬ್ಬರು ಗನ್‌ಮೆನ್

7

ಪೈ ರಕ್ಷಣೆಗೆ ಇಬ್ಬರು ಗನ್‌ಮೆನ್

Published:
Updated:
ಪೈ ರಕ್ಷಣೆಗೆ ಇಬ್ಬರು ಗನ್‌ಮೆನ್

ಬೆಂಗಳೂರು: `ಉದ್ಯಮಿ ದಯಾನಂದ ಪೈ ಅವರ ಕಾರಿನ ಮೇಲೆ ದುಷ್ಕರ್ಮಿಗಳು ಮಂಗಳವಾರ ಗುಂಡಿನ ದಾಳಿ ನಡೆಸಿರುವ ಹಿನ್ನೆಲೆಯಲ್ಲಿ ಪೈ ಅವರ ರಕ್ಷಣೆಗೆ ಇಬ್ಬರು ಗನ್‌ಮೆನ್‌ಗಳನ್ನು ನಿಯೋಜಿಸಲಾಗಿದೆ~ ಎಂದು ನಗರ ಪೊಲೀಸ್ ಕಮಿಷನರ್ ಜ್ಯೋತಿ ಪ್ರಕಾಶ್ ಮಿರ್ಜಿ ತಿಳಿಸಿದ್ದಾರೆ.ಈ ಸಂಬಂಧ `ಪ್ರಜಾವಾಣಿ~ಯೊಂದಿಗೆ ಮಾತನಾಡಿದ ಮಿರ್ಜಿ, `ಪೈ ಅವರು ಪೊಲೀಸ್ ಭದ್ರತೆಯನ್ನು ಕೋರಿಲ್ಲ. ಆದರೆ, ಪೈ ಕುಟುಂಬಕ್ಕೆ ಎಚ್ಚರಿಕೆ ನೀಡುವ ಸಲುವಾಗಿ ದಾಳಿ ನಡೆಸಿದ್ದಾಗಿ ಕುಖ್ಯಾತ ರೌಡಿ ಹೆಬ್ಬೆಟ್ಟು ಮಂಜ ಖಾಸಗಿ ವಾಹಿನಿಗೆ ಕರೆ ಮಾಡಿ ಹೇಳಿದ್ದಾನೆ ಎಂಬ ಸುದ್ದಿ ಇದೆ. ಅಲ್ಲದೇ, ದಾಳಿ ನಡೆಯುವುದಕ್ಕೂ ಮುನ್ನ ಪೈ ಅವರ ಮೊಬೈಲ್‌ಗೂ ಹೆಬ್ಬೆಟ್ಟು ಮಂಜನ ಹೆಸರಿನಿಂದ ಎರಡು ಬಾರಿ ಕರೆ ಬಂದಿತ್ತು. ಈ ಕಾರಣದಿಂದ ಅವರಿಗೆ ರಕ್ಷಣೆ ನೀಡಲಾಗಿದೆ~ ಎಂದರು.`ಘಟನಾ ಸ್ಥಳದಲ್ಲಿ ಸಿಕ್ಕ ಗುಂಡನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್) ಕಳುಹಿಸಲಾಗಿತ್ತು. ಗುಂಡಿನ ತಪಾಸಣೆ ನಡೆಸಿದ ಎಫ್‌ಎಸ್‌ಎಲ್ ತಜ್ಞರು, ದುಷ್ಕರ್ಮಿಗಳು 0.22 ಎಂಎಂನ ದೇಶಿ ನಿರ್ಮಿತ ಪಿಸ್ತೂಲಿನಿಂದ ದಾಳಿ ನಡೆಸಿದ್ದಾರೆ. ಕಾರಿನ ಸಮೀಪ ಬಂದು ಗುಂಡು ಹಾರಿಸಿರುವುದರಿಂದ ವಾಹನ ಗಾಜಿಗೆ ಹಾನಿಯಾಗಿದೆ ಎಂದು ತಜ್ಞರು ಹೇಳಿದ್ದಾರೆ~ ಎಂದು ಪೊಲೀಸರು ತಿಳಿಸಿದ್ದಾರೆ.`ದಾಳಿ ನಡೆದ ಕೆಲ ಹೊತ್ತಿನಲ್ಲೇ ಕುಖ್ಯಾತ ರೌಡಿ ಹೆಬ್ಬೆಟ್ಟು ಮಂಜ ಮಾಧ್ಯಮಕ್ಕೆ ಕರೆ ಮಾಡಿ ದೇವನಹಳ್ಳಿ ಜಮೀನು ವಿವಾದ ಸಂಬಂಧ ನಾನೇ ಈ ದಾಳಿ ನಡೆಸಿದೆ ಎಂದು ಹೇಳಿದ್ದಾನೆ ಎನ್ನಲಾಗಿದೆ. ಆದರೆ, ಕರೆ ಮಾಡಿದ್ದು ಹೆಬ್ಬೆಟ್ಟು ಮಂಜನೇ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ.ಆತನ ಹೆಸರನ್ನು ಬಳಸಿಕೊಂಡು ಯಾರೋ ದುಷ್ಕರ್ಮಿಗಳು ಹಣ ಕೀಳಲು ಈ ಕೃತ್ಯ ಎಸಗಿರುವ ಸಾಧ್ಯತೆಗಳೂ ಇರಬಹುದು. ಈ ಹಿಂದೆ ಕೆಲ ಕಿಡಿಗೇಡಿಗಳು ರೌಡಿ ರವಿ ಪೂಜಾರಿ ಹೆಸರಿನಲ್ಲಿ ಉದ್ಯಮಿಯೊಬ್ಬರಿಗೆ ಕರೆ ಮಾಡಿ ಬೆದರಿಕೆ ಹಾಕಿದ್ದರು~ ಎಂದು ಪೊಲೀಸರು ಮಾಹಿತಿನೀಡಿದರು.`ಹೆಬ್ಬೆಟ್ಟು ಮಂಜ ಅಷ್ಟೇನು ಪ್ರಭಾವಿ ರೌಡಿಯಲ್ಲ. ಕೊಲೆ ಪ್ರಕರಣ ಸಂಬಂಧ ಜೈಲು ಸೇರಿದ್ದ ಆತ ಜಾಮೀನು ಪಡೆದು ಹೊರಬಂದಿದ್ದ. ಎದುರಾಳಿ ಗುಂಪಿನ ರೌಡಿಗಳಿಂದ ಭಯ ಬಿದ್ದು ದುಬೈ ಸೇರಿದವನು. ಈಗ ಥಾಯ್ಲೆಂಡ್‌ನಲ್ಲಿ ತಲೆಮರೆಸಿಕೊಂಡಿದ್ದಾನೆ.

 

ಪೈ ಅವರ ಮೇಲೆ ದಾಳಿ ನಡೆದಿರುವ ವಿಷಯ ತಿಳಿದು, ರೌಡಿ ವಲಯದಲ್ಲಿ ತನ್ನ ಹೆಸರು ಗುರುತಿಸಿಕೊಳ್ಳಬೇಕೆಂದು ಆತ ಮಾಧ್ಯಮಗಳಿಗೆ ಕರೆ ಮಾಡಿರಬಹುದು. ಹೀಗಾಗಿ  ಮಾಧ್ಯಮಗಳು ಮಂಜನನ್ನು ಮೇಲೇರಿಸುವುದು ಬೇಡ. ಈಗ ಆತ ನಗರದ ಉದ್ಯಮಿಗಳಿಗೆ ಕರೆ ಮಾಡಿ ಹಣಕ್ಕಾಗಿ ಬೆದರಿಕೆ ಹಾಕುವ ಸಾಧ್ಯತೆಗಳಿವೆ~ ಎಂದು ಸಿಸಿಬಿ ಪೊಲೀಸರು ಹೇಳಿದ್ದಾರೆ.`ಕರೆ ಮಾಡಿದ ವ್ಯಕ್ತಿ ದೇವನಹಳ್ಳಿಯಲ್ಲಿರುವ ಜಮೀನು ವಿಷಯವಾಗಿ ಮಾತನಾಡಿದ. ಆದರೆ, ಅಲ್ಲಿ ನಮ್ಮ ಕುಟುಂಬಕ್ಕೆ ಸೇರಿದ ಯಾವುದೇ ಜಮೀನಿಲ್ಲ. ಅಲ್ಲಿರುವ ಭೂಮಿ ನನ್ನ ಸ್ನೇಹಿತ ಷಾ ಎಂಬಾತನಿಗೆ ಸೇರಿದ್ದು. ಇದರಿಂದ ರೌಡಿ ಗೊಂದಲಕ್ಕೊಳಗಾಗಿರಬಹುದು. 30-35 ವರ್ಷದಿಂದ ಉದ್ಯಮಿಯಾಗಿ ಗುರುತಿಸಿಕೊಂಡಿರುವ ನನಗೆ ಇಂತಹ ಅನುಭವ ಇದೆ ಮೊದಲು. ಆ ಜಮೀನು ನಮ್ಮದಲ್ಲ ಎಂಬುದು ಕರೆ ಮಾಡಿದ ವ್ಯಕ್ತಿಗೆ ಈಗಾಗಲೇ ತಿಳಿದಿರುತ್ತದೆ. ಹೀಗಾಗಿ ನಮಗೆ ಯಾವುದೇ ಭಯವಿಲ್ಲ~ ಎಂದು ದಯಾನಂದ ಪೈ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry