ಪೊಲೀಸರಿಂದಲೇ ಅತ್ಯಾಚಾರ,ಕೊಲೆ

ಶುಕ್ರವಾರ, ಜೂಲೈ 19, 2019
29 °C

ಪೊಲೀಸರಿಂದಲೇ ಅತ್ಯಾಚಾರ,ಕೊಲೆ

Published:
Updated:

ಲಕಿಮ್‌ಪುರ್- ಖೇರಿ (ಐಎಎನ್‌ಎಸ್/ ಪಿಟಿಐ): ಸಮೀಪದ ಪೊಲೀಸ್ ಠಾಣೆಯಲ್ಲಿ ಸಾವಿಗೀಡಾದ ತಮ್ಮ ಮಗಳ ಮೇಲೆ ಪೊಲೀಸರು ಸಾಮೂಹಿಕ ಅತ್ಯಾಚಾರ ಎಸಗಿ ನಂತರ ಆಕೆಯನ್ನು ಕೊಲೆ ಮಾಡಿದ್ದಾರೆ ಎಂದು ದೂರಿರುವ ಬಾಲಕಿಯ ತಾಯಿ, ಪ್ರಕರಣದ ಬಗ್ಗೆ ಸಿಬಿಐ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.ಸಂತ್ರಸ್ತ ಕುಟುಂಬದವರು ಸಿಬಿಐ ತನಿಖೆಗೆ ಒತ್ತಾಯಿಸಿದರೆ ಅನುಮತಿ ನೀಡಲು ಸರ್ಕಾರದ ಆಕ್ಷೇಪವೇನೂ ಇಲ್ಲ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಮಾಯಾವತಿ ಹೇಳಿದ ನಂತರ ಹೀಗೆ ಒತ್ತಾಯಿಸಿದ್ದಾರೆ.`ವಾಸ್ತವಾಂಶಗಳನ್ನು ಮುಚ್ಚಿಡುವ ಪ್ರಯತ್ನ ನಡೆದಿದೆ. ಪ್ರಕರಣದ ಬಗ್ಗೆ ಏನನ್ನು ಬಿಂಬಿಸಲಾಗುತ್ತಿದೆಯೋ ಅದು ನಿಜವಲ್ಲ. ನನ್ನ ಮಗಳ ಶವವನ್ನು ನೋಡಿದ ನನಗೆ ಆಕೆಯ ಮೇಲೆ ಅತ್ಯಾಚಾರ ನಡೆದಿರುವುದು ದೃಢಪಟ್ಟಿದೆ. ರಾಜ್ಯ ಪೊಲೀಸರ ತನಿಖೆಯ ಬಗ್ಗೆ ನನಗೆ ಸಮಾಧಾನವಿಲ್ಲ~ ಎಂದು ತಾಯಿ ಹೇಳಿದ್ದಾರೆ.ಕೇಂದ್ರ ಮಧ್ಯಪ್ರವೇಶ: ಪ್ರಕರಣದಲ್ಲಿ ಮಧ್ಯಪ್ರವೇಶಿಸಿರುವ ಕೇಂದ್ರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಕೃಷ್ಣ ತೀರ್ಥ, ಲಕಿಮ್‌ಪುರ್ ಜಿಲ್ಲೆಯ ನಿಘಸಾನ್ ಪೊಲೀಸ್ ಠಾಣೆಯಲ್ಲಿ ಹದಿವಯಸ್ಸಿನ ಬಾಲಕಿ ಸಾವಿಗೀಡಾದ ಬಗ್ಗೆ ಪೊಲೀಸರ ಹೇಳಿಕೆಗಳಲ್ಲೇ ವೈರುದ್ಧ್ಯಗಳು ಇರುವುದರಿಂದ ಈ ಕುರಿತು ಸಿಬಿಐ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.ನಿಜ ಏನೆಂಬುದನ್ನು ತನಿಖೆಯಿಂದ ಪತ್ತೆಹಚ್ಚಲೇಬೇಕು. ಸಿಬಿಐ ತನಿಖೆ ನಡೆಸದೆ ವಾಸ್ತವವನ್ನು ಬಯಲಿಗೆಳಿಯಲು ಸಾಧ್ಯವಿಲ್ಲ. ಮೊದಲ ಮರಣೋತ್ತರ ಪರೀಕ್ಷೆ ನಂತರ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಲಾಗಿತ್ತು. ಆದರೆ ಎರಡನೇ ಮರಣೋತ್ತರ ಪರೀಕ್ಷೆಯಿಂದ, ಆಕೆಯ ಕತ್ತು ಬಿಗಿದು ಸಾಯಿಸಿರುವುದು ದೃಢಪಟ್ಟಿದೆ. ಈ ವೈರುದ್ಧ್ಯ ಪೊಲೀಸರು ಮತ್ತು ವೈದ್ಯರು ಸೇರಿ ತಮಗೆ ಬೇಕಾದಂತೆ ವರದಿ ಬರೆದುಕೊಳ್ಳುತ್ತಾರೆ ಎಂಬುದನ್ನು ತೋರಿಸಿದೆ ಎಂದು ಸಚಿವರು ದೂಷಿಸಿದ್ದಾರೆ.ಇದಕ್ಕೆ ಮುನ್ನ ಮಾಯಾವತಿ ಸಿಬಿಐ ತನಿಖೆಗೆ ಆಕ್ಷೇಪವಿಲ್ಲ ಎಂದಿದ್ದರಾದರೂ, ನೊಯ್ಡಾದ ಆರುಷಿ ಕೊಲೆ ತನಿಖೆಯನ್ನು ಗೋಜಲುಗೊಳಿಸಿರುವ ರೀತಿಯಲ್ಲೇ ಈ ತನಿಖೆಯನ್ನೂ ಗೊಂದಲಗೊಳಿಸುವ ಸಾಧ್ಯತೆ ಇದೆ ಎಂದು ಅನುಮಾನ ವ್ಯಕ್ತಪಡಿಸಿದ್ದರು.ಪೊಲೀಸ್ ಠಾಣೆಯಲ್ಲಿ 14 ವರ್ಷದ ಬಾಲಕಿಯನ್ನು ಕೊಲೆ ಮಾಡಿದ ಹೀನಕೃತ್ಯವನ್ನು ಖಂಡಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದರು.ಲಕಿಮ್‌ಪುರ್-ಖೇರಿಯ ನಿಘಸಾನ್ ಪೊಲೀಸ್ ಠಾಣೆಯಲ್ಲಿ ಜೂನ್ 10ರ ರಾತ್ರಿ ಬಾಲಕಿಯ ಶವ ಮರಕ್ಕೆ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry