ಮಂಗಳವಾರ, ನವೆಂಬರ್ 19, 2019
23 °C

ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚದೇ ಪ್ರೇಮಿಗಳ ಹುಡಕಬೇಕೇ?

Published:
Updated:

ಬೆಂಗಳೂರು: `ಬಾಂಬ್ ಸ್ಫೋಟದ ಆರೋಪಿಗಳನ್ನು ಪತ್ತೆ ಮಾಡಬೇಕಿರುವ ಪೊಲೀಸರು ಪ್ರೀತಿಸಿ ಓಡಿಹೋಗುವ ನಿಮ್ಮಂಥವರ ಬೆಂಬತ್ತಬೇಕಾದ ಸ್ಥಿತಿ ಎದುರಾಗಿದೆ...' ಎಂದು ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹಾಜರಾಗುವುದನ್ನೂ ಮರೆತು ಪ್ರೇಮಿಯ ಜೊತೆ ಪರಾರಿಯಾದ ಯುವತಿಯೊಬ್ಬಳ ಪ್ರಕರಣದ ವಿಚಾರಣೆ ವೇಳೆ ಹೈಕೋರ್ಟ್ ವಿಷಾದ ವ್ಯಕ್ತಪಡಿಸಿದೆ.ಬೆಂಗಳೂರಿನ ಬಾಣಸವಾಡಿಯ ಮಾನವಿ (ಹೆಸರು ಬದಲಾಯಿಸಲಾಗಿದೆ) ಎಂಬ ಯುವತಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ದಿನವೇ ತನ್ನ ಪ್ರಿಯಕರನ ಜೊತೆ ಪರಾರಿಯಾಗಿದ್ದಳು. ಹಗಲಿಡೀ ನಗರದಲ್ಲಿ ಸುತ್ತಾಡಿಸಿದ ಪ್ರಿಯಕರ ರಾತ್ರಿ ವೇಳೆ ಅವಳನ್ನು ಮೆಜೆಸ್ಟಿಕ್‌ನಲ್ಲಿ ಬಿಟ್ಟು ತಲೆಮರೆಸಿಕೊಂಡಿದ್ದ. ಮಗಳನ್ನು ಹುಡುಕಿಕೊಡಿ ಎಂದು ಪಾಲಕರು ಹೈಕೋರ್ಟ್‌ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು.ನ್ಯಾಯಾಲಯದ ಆದೇಶದ ಅನುಸಾರ ಅವಳನ್ನು ಪೊಲೀಸರು ಗುರುವಾರ ನ್ಯಾಯಮೂರ್ತಿ ಮೋಹನ ಶಾಂತನಗೌಡರ ನೇತೃತ್ವದ ವಿಭಾಗೀಯ ಪೀಠದೆದುರು ಹಾಜರುಪಡಿಸಿದರು. `ಪ್ರೀತಿ ಅಂದರೆ ಏನು ಎಂಬುದು ನಿನಗೆ ಗೊತ್ತಾ? ಯಾವ ಮಾಯೆಗೆ ಒಳಗಾಗಿ ನಿಮ್ಮಂಥವರು ಮನೆ ಬಿಟ್ಟು ಓಡಿಹೋಗುತ್ತಾರೆ? ಜೀವನ ಅಂದರೆ ಇಷ್ಟೇ ಎಂದು ತಿಳಿದುಕೊಂಡಿದ್ದೀರಾ?' ಎಂದು ನ್ಯಾಯಪೀಠ ಯುವತಿಯನ್ನು ಪ್ರಶ್ನಿಸಿತು. ಪಾಲಕರ ಜೊತೆ ತೆರಳುವಂತೆ ಯುವತಿಗೆ ನ್ಯಾಯಪೀಠ ನಿರ್ದೇಶನ ನೀಡಿತು.

ಪ್ರತಿಕ್ರಿಯಿಸಿ (+)