ಮಂಗಳವಾರ, ನವೆಂಬರ್ 19, 2019
29 °C
ರಾಜ್ಯ ಪೊಲೀಸ್ ಧ್ವಜ ದಿನಾಚರಣೆ

`ಪೊಲೀಸರು ಕಾನೂನು ಜ್ಞಾನ ಹೆಚ್ಚಿಸಿಕೊಳ್ಳಲಿ'

Published:
Updated:

ಮಂಗಳೂರು: `ಕಾನೂನು ಕಾಪಾಡುವ ಪೊಲೀಸ್ ಸಿಬ್ಬಂದಿ ಕಾನೂನು ಪರಿಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕಾದ ಅಗತ್ಯವಿದೆ' ಎಂದು ನಿವೃತ್ತ ಪೊಲೀಸ್ ಉಪಾಧೀಕ್ಷಕ ವಿಶ್ವನಾಥ ಪಂಡಿತ್ ಅಭಿಪ್ರಾಯಪಟ್ಟರು.ಮಂಗಳೂರು ನಗರ ಪೊಲೀಸ್ ಕಮಿಷನರೇಟ್, ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಹಾಗೂ ಕರ್ನಾಟಕ ರಾಜ್ಯ ಮೀಸಲು ಪೊಲೀಸ್‌ನ 7ನೇ ಪಡೆಯ ಜಂಟಿ ಆಶ್ರಯದಲ್ಲಿ ಇಲ್ಲಿನ ಪೊಲೀಸ್ ಕವಾಯತು ಮೈದಾನದಲ್ಲಿ ಮಂಗಳವಾರ ನಡೆದ ರಾಜ್ಯ ಪೊಲೀಸ್ ಧ್ವಜ ದಿನಾಚರಣೆ ಹಾಗೂ ಕಲ್ಯಾಣ ದಿನಾಚರಣೆಯಲ್ಲಿ ಗೌರವವಂದನೆ ಸ್ವೀಕರಿಸಿ ಅವರು ಮಾತನಾಡಿದರು.`ದಸ್ತಗಿರಿ ಮಾಡುವ ಸಂದರ್ಭದಲ್ಲಿ ಆರೋಪಿ ಬಯಸಿದರೆ ಯಾವ ಕಾರಣಕ್ಕೆ ಹಾಗೂ ಯಾವ ಕಾಯ್ದೆ ಅಡಿ ಬಂಧಿಸಲಾಗುತ್ತಿದೆ ಎಂಬ ಬಗ್ಗೆ ಪೊಲೀಸ್ ಸಿಬ್ಬಂದಿ ವಿವರಣೆ ನೀಡಬೇಕು. ಆದರೆ, ಬಹುತೇಕ ಸಿಬ್ಬಂದಿಗೆ ಇಷ್ಟು ಕಾನೂನು ಪರಿಜ್ಞಾನವೂ ಇಲ್ಲ. ಮೇಲಧಿಕಾರಿಗಳು ಹೇಳಿದ್ದಾರೆ ಎಂದು ಬಂಧಿಸುವ ಪರಿಪಾಠ ಮುಂದುವರಿದಿದೆ' ಎಂದರು.`ಪೊಲೀಸರು ಮಾನವೀಯತೆ ರೂಢಿಸಿಕೊಳ್ಳುವ ಅಗತ್ಯವಿದೆ. ತೋಳ್ಬಲ ಪರೋಪಕಾರಕ್ಕಾಗಿ ಬಳಕೆಯಾಗಬೇಕೇ ಹೊರತು ಬಡವರಿಗೆ ಕಿರುಕುಳ ನೀಡುವುದಕ್ಕೆ ಅಲ್ಲ. ಸಣ್ಣ ಪುಟ್ಟ ಕಾರಣಕ್ಕೂ ಪೊಲೀಸ್ ತುಕಡಿಗಳನ್ನು ಬಳಸಿ ಲಾಠಿ ಚಾರ್ಜ್ ನಡೆಸುವ ಪ್ರಕರಣಗಳು ಹೆಚ್ಚುತ್ತಿವೆ.ಉದ್ವಿಗ್ನ ಪರಿಸ್ಥಿತಿ ನಿಭಾಯಿಸುವಾಗ ಕರ್ತವ್ಯನಿರತ ಪೊಲೀಸರತ್ತ ಕಲ್ಲು ತೂರಿಬಂದರೂ ಸಮಾಧಾನದಿಂದ ಪರಿಸ್ಥಿತಿ ನಿಭಾಯಿಸಬೇಕೇ ಹೊರತು ಪ್ರತಿಯಾಗಿ ಕಲ್ಲು ತೂರುವುದಲ್ಲ' ಎಂದು ಅವರು ಕಿವಿಮಾತು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಪಶ್ಚಿಮ ವಲಯ ಪೊಲೀಸ್ ಮಹಾ ನಿರೀಕ್ಷಕ ಪ್ರತಾಪ ರೆಡ್ಡಿ ಮಾತನಾಡಿ, `ಕಠಿಣ ಪರಿಸ್ಥಿತಿಗಳನ್ನು ನಿಭಾಯಿಸುವ ಸಂದರ್ಭಗಳಲ್ಲಿ ಸಾರ್ವಜನಿಕರೂ ಪೊಲೀಸರ ಜತೆ ಕೈಜೋಡಿಸಬೇಕು' ಎಂದರು.ಈ ಬಾರಿ ಮುಖ್ಯಮಂತ್ರಿ ಪದಕ ಗಳಿಸಿದ ಉಳ್ಳಾಲ ವೃತ್ತ ನಿರೀಕ್ಷಕ ಮದನ್ ಎ.ಗಾಂವ್ಕರ್, ಸಂಚಾರಿ ಪೊಲೀಸ್ ನಯನಾ ಶ್ರೀಯಾನ್, ನಗರ ಸಶಸ್ತ್ರ ಮೀಸಲು ಪಡೆಯ ಶಿವ ನಾಯ್ಕ, ಡಿಸಿಐಬಿಯ ಸಂಜೀವ ಪೂಜಾರಿ, ಅರಣ್ಯ ಸಂಚಾರಿ ದಳದ ಉಮೇಶ್ ಎಚ್., ಉಡುಪಿಯ ವಾಯ್ಲೆಟ್ ಫೆಮಿನಾ, ತರೀಕೆರೆಯ ಸದಾನಂದ ನಾಯ್ಕ, ಮಲ್ಪೆಯ ರವಿಚಂದ್ರ ಅವರಿಗೆ ಐಜಿಪಿ ಅಭಿನಂದನೆ ಸಲ್ಲಿಸಿದರು.ಪೊಲೀಸ್ ಧ್ವಜವನ್ನು ವಿಶ್ವನಾಥ ಪಂಡಿತ್ ಅವರು ಬಿಡುಗಡೆ ಮಾಡಿದರು. ಪೊಲೀಸ್ ಧ್ವಜಕ್ಕೆ ವಂದನೆ ಸಲ್ಲಿಸಲಾಯಿತು. ಬಳಿಕ ಪಥಸಂಚಲನ ನಡೆಯಿತು.2012-13ನೇ ಸಾಲಿನಲ್ಲಿ ನಿವೃತ್ತರಾದ ಪೊಲೀಸ್ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗೆ ಅಭಿನಂದನೆ ಸಲ್ಲಿಸಲಾಯಿತು.ಪೊಲೀಸ್ ಸಿಬ್ಬಂದಿಯ ಪ್ರತಿಭಾನ್ವಿತ ಮಕ್ಕಳನ್ನು ಅಭಿನಂದಿಸಲಾಯಿತು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ಕೃಪಾ ಪಿ.ಜೆ ಹಾಗೂ ಪ್ರೀತಂ ಎಂ.ಆರ್ ಅವರಿಗೆ ಬೋಳ ಪುಷ್ಪರಾಜ ಶೆಟ್ಟಿ ನಗದು ಬಹುಮಾನ, ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ ವಿಜ್ಞಾನ ವಿಭಾಗದ ವಿದ್ಯಾರ್ಥಿ ಪೃಥ್ವಿ ನಾಯ್ಕ, ವಾಣಿಜ್ಯ ವಿಭಾಗದ ವಿದ್ಯಾರ್ಥಿ ಪ್ರಜ್ಞಾ ಹಾಗೂ ಕಲಾ ವಿಭಾಗದ ತನ್ವೀರ್ ಪ್ರತಿಭಾ ಪುರಸ್ಕಾರಕ್ಕೆ ಆಯ್ಕೆಯಾಗಿದ್ದರು.ನಗರ ಪೊಲೀಸ್ ಆಯುಕ್ತ ಮನೀಶ್ ಖರ್ಬಿಕರ್, ದ.ಕ. ಜಿಲ್ಲಾ ಪೊಲೀಸ್ ವರಿಷ್ಠ ಅಭಿಷೇಕ್ ಗೋಯೆಲ್ ಮತ್ತಿತರರಿದ್ದರು.

ಲೆನೆಟ್ ಕ್ಯಾಸ್ತಲಿನೊ ಕಾರ್ಯಕ್ರಮ ನಿರೂಪಿಸಿದರು.

ಪ್ರತಿಕ್ರಿಯಿಸಿ (+)