ಪೊಲೀಸರು-ವಿಧಿವಿಜ್ಞಾನ ಸಿಬ್ಬಂದಿಗೆ ತರಾಟೆ

7
ಮಾನಭಂಗ ಪ್ರಕರಣದ ಡಿಎನ್‌ಎ ವರದಿ ವಿಳಂಬ

ಪೊಲೀಸರು-ವಿಧಿವಿಜ್ಞಾನ ಸಿಬ್ಬಂದಿಗೆ ತರಾಟೆ

Published:
Updated:

ನವದೆಹಲಿ (ಪಿಟಿಐ): ಅಗತ್ಯ ರಾಸಾಯನಿಕಗಳ ಕೊರತೆಯ ನೆಪವೊಡ್ಡಿ ಮಾನಭಂಗ ಪ್ರಕರಣಕ್ಕೆ ಸಂಬಂಧಿಸಿದ ಡಿಎನ್‌ಎ ವರದಿ ನೀಡಲು ಅನಗತ್ಯ ವಿಳಂಬ ಮಾಡಿದ ದೆಹಲಿ ಮೂಲದ ವಿಧಿವಿಜ್ಞಾನ ಪ್ರಯೋಗಾಲಯವನ್ನು (ಎಫ್‌ಎಸ್‌ಎಲ್) ನ್ಯಾಯಾಲಯ ತೀವ್ರ ತರಾಟೆಗೆ ತೆಗೆದುಕೊಂಡಿದೆ.ವಿಧಿವಿಜ್ಞಾನ ಪ್ರಯೋಗಾಲಯ ನಿಗದಿತ ಅವಧಿಯಲ್ಲಿ ವರದಿ ನೀಡದ ಕಾರಣ ನ್ಯಾಯದಾನ ಪ್ರಕ್ರಿಯೆಯಲ್ಲಿ ವಿಳಂಬವಾಗುತ್ತಿದೆ. ಅನಗತ್ಯ ವಿಳಂಬದ ಹಿಂದೆ ಪ್ರಯೋಗಾಲಯದ ಕರ್ತವ್ಯಲೋಪ ಎದ್ದು ಕಾಣುತ್ತಿದೆ ಎಂದು ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶೆ ಕಾಮಿನಿ ಲೌ ಅಸಮಾಧಾನ ವ್ಯಕ್ತಪಡಿಸಿದರು.ಬಾಲಕಿಯೊಬ್ಬಳ ಮೇಲೆ ಅವಳ ಚಿಕ್ಕಪ್ಪನೇ ಮಾನಭಂಗ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆ ವೇಳೆ ಅಸಮಾಧಾನ ಹೊರಹಾಕಿದ ನ್ಯಾಯಾಧೀಶರು, ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲು ವಿಳಂಬ ಮಾಡಿದ ದೆಹಲಿ ಪೊಲೀಸರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಇಂತಹ ಪ್ರಕರಣಗಳ ತನಿಖೆಗೆ ಪೊಲೀಸ್ ಇಲಾಖೆಗೆ ಆಸಕ್ತಿಯೇ ಇಲ್ಲವೆಂದು ಕಾಣುತ್ತಿದೆ. ನ್ಯಾಯಾಲಯದ ಆದೇಶದ ಹೊರತಾಗಿಯೂ ಪ್ರಕರಣವನ್ನು ಪೊಲಿಸ್ ಇಲಾಖೆ ಗಂಭೀರವಾಗಿ ಪರಿಗಣಿಸಿಲ್ಲವೆಂದು ತೋರುತ್ತದೆ ಎಂದು ಕಿವಿ ಹಿಂಡಿದರು.ಪೊಲೀಸರ ಈ ನಡವಳಿಕೆ ತಮಗೆ ದಿಗ್ಭ್ರಮೆ ಮೂಡಿಸಿದ್ದು, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ತಾಕೀತು ಮಾಡಿದರು. 

ಪ್ರಕರಣದ ತನಿಖಾಧಿಕಾರಿ ಮತ್ತು ಸಮಯ್‌ಪುರ ಬದ್ಲಿ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳ ವಿರುದ್ಧ ಇಲಾಖೆ ಶಿಸ್ತು ಕ್ರಮ ಜರುಗಿಸಿದೆ ಎಂದು ನ್ಯಾಯಾಲಯದ ಗಮನಕ್ಕೆ ತರಲಾಯಿತು. ಈ ಕುರಿತು ನ್ಯಾಯಾಲಯದ ಎದುರು ಖುದ್ದಾಗಿ ಹಾಜರಾಗಿ ವಿವರಣೆ ನೀಡುವಂತೆ ಪ್ರಯೋಗಾಲಯದ ನಿರ್ದೇಶಕರೂ ಆಗಿರುವ ದೆಹಲಿ ಗೃಹ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿಗೆ ನ್ಯಾಯಾಲಯ ಆದೇಶಿಸಿತ್ತು.ಅದರಂತೆ ಮಂಗಳವಾರ ನ್ಯಾಯಾಲಯಕ್ಕೆ ಹಾಜರಾದ ಎಫ್‌ಎಸ್‌ಎಲ್ ನಿರ್ದೇಶಕ ಜಿ.ಪಿ. ಸಿಂಗ್, ಮಾನಭಂಗದಂತಹ ಪ್ರಕರಣಗಳಿಗೆ ಸಂಬಂಧಿಸಿದ ವರದಿಗಳನ್ನು ಆದಷ್ಟು ಶೀಘ್ರ ನೀಡಲು ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry