ಭಾನುವಾರ, ಜೂನ್ 13, 2021
24 °C

ಪೊಲೀಸರ ಕಂಡರೆ ವಕೀಲರಿಗೆ ಭಯ: ಸುಬ್ಬಾರೆಡ್ಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪೊಲೀಸರ ಕಂಡರೆ ವಕೀಲರಿಗೆ ಭಯ: ಸುಬ್ಬಾರೆಡ್ಡಿ

ಬೆಂಗಳೂರು: `ಭದ್ರತೆ ದೃಷ್ಟಿಯಿಂದ ಹೈಕೋರ್ಟ್ ಹಾಗೂ ಸಿವಿಲ್ ಕೋರ್ಟ್‌ಗಳಲ್ಲಿ ನಿಯೋಜಿಸಲಾದ ಪೊಲೀಸ್ ಪಡೆಗಳನ್ನು ಹಿಂದಕ್ಕೆ ಪಡೆದರೆ ಮಾತ್ರ ನಾವು ನಮ್ಮ ಮುಷ್ಕರ ನಿಲ್ಲಿಸಿ ನ್ಯಾಯಾಂಗ ಕಲಾಪಕ್ಕೆ ಹಾಜರಾಗುತ್ತೇವೆ..~- ಇದು ಬೆಂಗಳೂರು ವಕೀಲರ ಸಂಘವು ಮುಖ್ಯ ನ್ಯಾಯಮೂರ್ತಿಗಳಲ್ಲಿ ಬುಧವಾರ ಮಾಡಿಕೊಂಡಿರುವ ಮನವಿ.ಇದೇ ಎರಡರಂದು ಮಾಧ್ಯಮ, ಪೊಲೀಸ್ ಹಾಗೂ ವಕೀಲರ ನಡುವೆ ನಡೆದಿರುವ ಜಟಾಪಟಿ ಹಿನ್ನೆಲೆಯಲ್ಲಿ ಯಾವುದೇ ಕ್ಷಣದಲ್ಲಿ ಅಹಿತಕರ ಘಟನೆ ನಡೆಯಬಹುದು ಎಂಬ ಕಾರಣಕ್ಕಾಗಿ ಪೊಲೀಸ್ ಪಡೆಗಳನ್ನು ಕೋರ್ಟ್‌ಗಳಲ್ಲಿ ನಿಯೋಜಿಸಲಾಗಿದೆ. ಆದರೆ ಇದು ಬೇಡ ಎನ್ನುವುದು ಸಂಘದ ಹಲವು ವಕೀಲರ ಮನವಿ.ಬುಧವಾರ ಬೆಳಿಗ್ಗೆ 10.30ಕ್ಕೆ ಕಲಾಪ ಆರಂಭಗೊಳ್ಳುತ್ತಿದ್ದಂತೆ ಸಂಘದ ಅಧ್ಯಕ್ಷ ಕೆ.ಎನ್.ಸುಬ್ಬಾರೆಡ್ಡಿ ಅವರು ಈ ಮನವಿ ಸಲ್ಲಿಸಿದರು. `ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ನ್ಯಾಯಾಲಯಗಳಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಪೊಲೀಸ್ ಪಡೆ ನಿಯೋಜಿಸಲಾಗಿದೆ. ಈ ಪರಿಯ ಪೊಲೀಸರನ್ನು ಕಂಡು ಯುವ ವಕೀಲರು ಕೋರ್ಟ್‌ಗೆ ಬರಲು ಹೆದರುತ್ತಿದ್ದಾರೆ.`ಕಲಾಪ ಬಹಿಷ್ಕಾರಕ್ಕೆ ಸಂಬಂಧಿಸಿದಂತೆ ಸದ್ಯ ಪರಿಸ್ಥಿತಿ ಶಾಂತವಾಗಿದೆ. ವಕೀಲರು ಮುಷ್ಕರ ಕೈಬಿಡಲು ತಯಾರಿದ್ದಾರೆ. ಪರಿಸ್ಥಿತಿ ತಿಳಿಯಾಗಬೇಕಾದರೆ ಪೊಲೀಸರು ಇರಬಾರದು~ಎಂದು ಹಾಸ್ಯದ ಧಾಟಿಯಲ್ಲಿ ಹೇಳಿದರು.ಅಷ್ಟೇ ಹಾಸ್ಯಭರಿತವಾಗಿ ಉತ್ತರ ನೀಡಿದ ನ್ಯಾ.ಸೇನ್, `ನೀವು ಹೆದರಬೇಡಿ. ಮಾರ್ಚ್ 2ರಂದು ವಕೀಲರ ಮೇಲೆ ಹಲ್ಲೆ ಮಾಡಿರುವ ಆರೋಪ ಹೊತ್ತ ಪೊಲೀಸರನ್ನು ಇಲ್ಲಿ ನಿಯೋಜನೆ ಮಾಡುವುದಿಲ್ಲ. ಆದರೆ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲೇಬೇಕು. ಮೊದಲು ಮುಷ್ಕರ ಕೈಬಿಟ್ಟು ಕೆಲಸಕ್ಕೆ ಬನ್ನಿ~ ಎಂದರು.ಅದಕ್ಕೆ ಸುಬ್ಬಾರೆಡ್ಡಿ, `ಹೈಕೋರ್ಟ್ ಆವರಣದೊಳಗೆ ಪೊಲೀಸರಿಗೆ ಏನು ಕೆಲಸ? ಬೇಕಿದ್ದರೆ ಅವರನ್ನು ಕೋರ್ಟ್ ಆವರಣದ ಹೊರಕ್ಕೆ ಕಬ್ಬನ್ ಉದ್ಯಾನದ ಬಳಿ ಇರುವಂತೆ ಸೂಚಿಸಿ~ ಎಂದರು.ಅದಕ್ಕೆ ನ್ಯಾ.ಸೇನ್, `ಒಂದು ವೇಳೆ ಪೊಲೀಸ್ ಪಡೆಯನ್ನು ನಿಯೋಜನೆ ಮಾಡದಿದ್ದರೆ ಯಾವುದಾದರೂ ಪಟ್ಟಭದ್ರ ಹಿತಾಸಕ್ತಿಗಳು ಇಲ್ಲಿಗೆ ಬಂದು ಗಲಾಟೆ ಆರಂಭಿಸಿದರೆ, ಅದು ಬೇರೆ ರೂಪ ಪಡೆದುಕೊಳ್ಳುತ್ತದೆ.ಹಾಗಾಗಲು ನಾವು ಬಿಡುವುದಿಲ್ಲ. ನೀವು ಶಾಂತಿಯುತವಾಗಿ ಪ್ರತಿಭಟನೆ ಮಾಡಿದ್ದರೆ ನಾವು ವಿರೋಧ ವ್ಯಕ್ತಪಡಿಸುತ್ತಿರಲಿಲ್ಲ~ ಎಂದರು.ಅದಕ್ಕೆ ಸುಬ್ಬಾರೆಡ್ಡಿ `ಗಾಂಧಿ ಯುಗ ಈಗ ಹೋಗಿದೆ. ನನಗೆ ವಯಸ್ಸಾಗಿರುವ ಕಾರಣ ನಾನು ನಿಮ್ಮ ಮಾತನ್ನು ಒಪ್ಪಬಹುದು. ಆದರೆ ಯುವ ವಕೀಲರು ಇದನ್ನು ಕೇಳುವುದಿಲ್ಲ~ ಎಂದರು. ಕೊನೆಗೆ ಮುಷ್ಕರ ಕೈಬಿಡುವಂತೆ ನ್ಯಾ.ಸೇನ್ ಪುನಃ ಹೇಳಿದರು.ಮುಂದುವರಿದ ಮುಷ್ಕರ: `ಈ ಹಿಂದೆ ಮುಷ್ಕರ ಹಿಂದಕ್ಕೆ ಪಡೆಯುವುದಾಗಿ ನನ್ನ ಬಳಿ ನೀವು ಎಷ್ಟು ಬಾರಿ ಹೇಳಿಲ್ಲ? ಅದಕ್ಕೆ ನಿಮಗೆ ಬೇಕಾದ ವ್ಯವಸ್ಥೆ ಕಲ್ಪಿಸುವುದಾಗಿ ಭರವಸೆಯನ್ನೂ ನೀಡಿದ್ದೆ. ಆದರೂ ಮುಷ್ಕರ ಮುಂದುವರಿಸಿದ್ದೀರಿ. ಇದನ್ನು ನಾವು ಸಹಿಸುವುದಿಲ್ಲ. ನನ್ನ ಜೊತೆ ಸಭೆಯಲ್ಲಿ ಏನು ಭರವಸೆ ನೀಡಿದ್ದೀರಿ, ಹಾಗೆ ನೀವು ಹೊರಗಡೆ ನಡೆದುಕೊಳ್ಳುತ್ತಿಲ್ಲ. ನಿಮ್ಮ ಬೇಡಿಕೆ ಈಡೇರಿಸದೇ ಹೋದರೆ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳುವುದಾಗಿ ಹೇಳುತ್ತಿದ್ದೀರಿ, ಒಬ್ಬ ನ್ಯಾಯಮೂರ್ತಿ ಎದುರು ನೀವು ಹೀಗೆ ಹೇಗೆ ಹೇಳುತ್ತೀರಿ~ ಎಂದು ಸುಬ್ಬಾ ರೆಡ್ಡಿಯವರನ್ನು ನ್ಯಾ.ಸೇನ್ ಖಾರವಾಗಿ ಪ್ರಶ್ನಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.