ಸೋಮವಾರ, ಏಪ್ರಿಲ್ 19, 2021
28 °C

ಪೊಲೀಸರ ನಿರ್ಲಕ್ಷ್ಯ: ಜನರ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ: ಶನಿವಾರ ಸಾರ್ವತ್ರಿಕ ರಜೆ ಇದ್ದುದರಿಂದ ಹೊಟೆಲ್‌ನಲ್ಲಿ ಕೆಲಸ ಇರಲಿಲ್ಲ. ಮೂವರು ಯುವಕರು ಜೊತೆಗೂಡಿ, ಬಿಸಿಲಿನ ಬೇಗೆಯಿಂದ ತಣಿಯಲು ಚಾಮನಳ್ಳಿ ಬಳಿ ಬ್ರಿಡ್ಜ್ ಕಂ ಬ್ಯಾರೇಜ್‌ನ ಹಿನ್ನೀರಿನಲ್ಲಿ ಧುಮುಕಿದರು. ಬಿಸಿಲಿನ ತಾಪವನ್ನು ಕಡಿಮೆ ಮಾಡಿಕೊಳ್ಳಲು ಇಳಿದವರು ಜೀವಂತವಾಗಿ ಹೊರಗೆ ಬರಲೇ ಇಲ್ಲ. ಅಗ್ನಿಶಾಮಕ ದಳದ ಸಿಬ್ಬಂದಿ, ಈಜುಗಾರರು ನೀರಿಗೆ ಇಳಿದು, ಯುವಕರು ಶವಗಳನ್ನು ಹೊರತೆಗೆಯಬೇಕಾಯಿತು.

ಹೊಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ಮೂವರು ಯುವಕರಾದ ಮಹ್ಮದ್ ಗೌಸ್, ಮಹ್ಮದ್ ಜಲಾಲ್, ಮಹ್ಮದ್ ರಸೂಲ್ ಜೊತೆಗೂಡಿ, ಬೆಳಿಗ್ಗೆ 11 ಗಂಟೆಯ ಸುಮಾರಿಗೆ ಬ್ಯಾರೇಜ್‌ನ ಹಿನ್ನೀರಿನಲ್ಲಿ ಈಜಲು ತೆರಳಿದ್ದರು. ನೀರಿಗೆ ಇಳಿಯುವುದರಲ್ಲಿ ತಾ ಮುಂದು, ನಾ ಮುಂದು ಎನ್ನುವ ಭರಾಟೆಯಲ್ಲಿ ಜಿಗಿದ ಮೂವರು ಯುವಕರು, ಆಳವಾದ ನೀರಿನಲ್ಲಿ ಮುಳುಗಿದರು. ಒಬ್ಬರನ್ನು ಇನ್ನೊಬ್ಬರು ರಕ್ಷಿಸುವ ಭರದಲ್ಲಿ ಮೂವರೂ ನೀರಿನಲ್ಲಿ ಮುಳುಗಿ ಮೃತಪಟ್ಟರು. ಮೂವರಿಗೂ ಈಜಾಡಲು ಬರುತ್ತಿತ್ತು ಎನ್ನಲಾಗಿದೆ. ಅದ್ಹೇಗೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೋ ತಿಳಿಯದಾಗಿದೆ ಎಂದು ಕೆಲ ಯುವಕರು ಹೇಳಿದರು.

ಮಕ್ಕಳನ್ನು ಕಳೆದುಕೊಂಡ ತಂದೆ-ತಾಯಿ, ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಬೆಳಿಗ್ಗೆ ಮನೆಯಿಂದ ಹೋದವರು ಮಧ್ಯಾಹ್ನದ ವೇಳೆಗೆ ಶವವಾಗಿ ಮಲಗಿದ್ದಾರೆ ಎಂದು ತಮ್ಮ ನೋವು ತೋಡಿಕೊಳ್ಳುತ್ತಿದ್ದರು. 

ಭುಗಿಲೆದ್ದ ಆಕ್ರೋಶ: ಯುವಕರು ನೀರಿನಲ್ಲಿ ಮುಳುಗಿದ ಘಟನೆ ಬೆಳಿಗ್ಗೆ ಸುಮಾರು 11.30ಕ್ಕೆ ಸಂಭವಿಸಿದೆ. ಅಲ್ಲಿಯೇ ಇದ್ದ ಕೆಲವರು ನೀರಿನಲ್ಲಿ ಮುಳುಗಿ, ಯುವಕರನ್ನು ಹುಡುಕುವ ಯತ್ನವನ್ನೂ ಮಾಡಿದ್ದಾರೆ. ಆದರೆ ಮೂವರು ಯುವಕರು ಸಿಗದೇ ಇದ್ದುದರಿಂದ ಕೂಡಲೇ ಯಾದಗಿರಿಯಲ್ಲಿರುವ ಸಂಬಂಧಿಕರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿಗೂ ವಿಷಯ ತಿಳಿಸಲಾಯಿತು.

ಅಗ್ನಿಶಾಮಕದಳದವರೂ ಸ್ಥಳಕ್ಕೆ ಬಂದು ಯುವಕರನ್ನು ಹುಡುಕುವ ಯತ್ನ ಮಾಡಿದರು. ಒಂದೊಂದಾಗಿ ಶವಗಳು ಸಿಗುತ್ತಿದ್ದಂತೆಯೇ ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಗುತ್ತಿತ್ತು. ಇಷ್ಟೆಲ್ಲ ನಡೆಯುವವರೆಗೆ ಮಧ್ಯಾಹ್ನ 3 ಗಂಟೆ ಆಗಿತ್ತು. ಅಲ್ಲಿಯವರೆಗೂ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳಾಗಲಿ, ಸಿಬ್ಬಂದಿಗಳಾಗಲಿ ಬರಲಿಲ್ಲ.

ಇದರಿಂದ ಆಕ್ರೋಶಗೊಂಡ ಜನರು, ಸಂಬಂಧಿಕರು, ಶವಗಳನ್ನು ನೇರವಾಗಿ ಮನೆಗೆ ತೆಗೆದುಕೊಂಡು ಹೋಗಲು ತೀರ್ಮಾನಿಸಿದರು. ಮೂವರು ಯುವಕರ ಶವಗಳನ್ನು ಅಟೋರಿಕ್ಷಾದಲ್ಲಿ ಯಾದಗಿರಿಗೆ ಕಳುಹಿಸಲಾಯಿತು. ಇಷ್ಟೆಲ್ಲ ಘಟನೆಗಳು ನಡೆದ ನಂತರ ಚಾಮನಳ್ಳಿ ಬ್ರಿಡ್ಜ್ ಬಳಿ ಆಗಮಿಸಿದ ಗ್ರಾಮೀಣ ಠಾಣೆ ಸಬ್ ಇನ್ಸ್‌ಪೆಕ್ಟರ್ ಯಶವಂತ ಬಿಸನಳ್ಳಿ ಅವರೊಂದಿಗೆ ಕೆಲಕಾಲ ಮಾತಿನ ಚಕಮಕಿ ನಡೆಯಿತು.

 

ಚಾಮನಳ್ಳಿಯಿಂದ ನಗರದ ಹತ್ತಿಕುಣಿ ಕ್ರಾಸ್ ಬಳಿಗೆ ಬಂದ ಕೆಲ ಯುವಕರು ಗುಂಪು, ರಸ್ತೆ ತಡೆ ನಡೆಸಿತು. ಅಷ್ಟರಲ್ಲಿಯೇ ಮೃತಪಟ್ಟ ಯುವಕರು ಮನೆಗಳಿರುವ ಗಾಂಧಿ ವೃತ್ತ ಬಳಿಯೂ ರಸ್ತೆ ತಡೆ ನಡೆಸಲು ಇನ್ನೂ ಕೆಲ ಯುವಕರು ಮುಂದಾದರು. ಕೆಲಹೊತ್ತು ವಾಹನಗಳನ್ನೂ ತಡೆದು ನಿಲ್ಲಿಸಿದರು.

ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾ ಆಸ್ಪತ್ರೆಗೆ ಸಾಗಿಸುವಂತೆ ಕೆಲವರು ಸಲಹೆ ನೀಡಿದರೆ, ಇನ್ನೂ ಕೆಲವರು ಅದಕ್ಕೆ ವಿರೋಧ ವ್ಯಕ್ತಪಡಿಸಿದರು. ಶವಗಳನ್ನು ಅಟೋ ರಿಕ್ಷಾದಲ್ಲಿ ಹಾಕಲು ಅಡ್ಡಿಪಡಿಸಿದರು. ಇದರಿಂದ ಗಾಂಧಿ ವೃತ್ತದಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ಸ್ಥಳಕ್ಕೆ ಆಗಮಿಸಿದ ಸರ್ಕಲ್ ಇನ್ಸ್‌ಪೆಕ್ಟರ್ ಲೋಕೇಶ, ಸಬ್ ಇನ್ಸ್‌ಪೆಕ್ಟರ್‌ಗಳಾದ ಯಶವಂತ ಬಿಸನಳ್ಳಿ, ಪ್ರಕಾಶ ಯಾತನೂರ ಹಾಗೂ ಸಿಬ್ಬಂದಿ ಪರಿಸ್ಥಿತಿ ತಿಳಿಗೊಳಿಸಿದರು. ರಸ್ತೆ ತಡೆ ಮಾಡುತ್ತಿದ್ದ ಜನರನ್ನು ಚದುರಿಸಿ, ವಾಹನಗಳ ಓಡಾಟಕ್ಕೆ ಅನುವು ಮಾಡಿಕೊಟ್ಟರು. ನಂತರ ಕುಟುಂಬದ ಜನರೊಂದಿಗೆ ಮಾತನಾಡಿ, ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾ ಆಸ್ಪತ್ರೆಗೆ ಸಾಗಿಸಲು ಮನವೊಲಿಸಿದರು.

ಚಾಮನಳ್ಳಿ ಬ್ಯಾರೇಜ್ ಬಳಿ ಯುವಕರು ಮುಳುಗಿರುವ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಪತ್ರಕರ್ತರಿಗೂ ಕೆಲವರು ಅಡ್ಡಿಪಡಿಸಿದರು.

ಪೊಲೀಸರು ಬರದೇ ಇರುವುದರಿಂದ ಆಕ್ರೋಶಗೊಂಡಿದ್ದ ಜನರು, ದೃಶ್ಯ ಚಿತ್ರಿಕರಿಸಲು ಮುಂದಾದಾಗ ವಿಡಿಯೋ ಕ್ಯಾಮರಾ, ಕ್ಯಾಮೆರಾಗಳನ್ನು ಹಿಂದಕ್ಕೆ ತಳ್ಳಿದ ಘಟನೆಯೂ ನಡೆಯಿತು. ಇದರಿಂದಾಗಿ ಬೇರೆ ಮಾರ್ಗವಿಲ್ಲದೇ ಮಾಧ್ಯಮದ ಪ್ರತಿನಿಧಿಗಳು ನಗರಕ್ಕೆ ವಾಪಸ್ಸಾಗಬೇಕಾಯಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.