ಪೊಲೀಸರ ಮಕ್ಕಳಿಗೆ ಮೀಸಲಾತಿ: ಮನವಿ

7

ಪೊಲೀಸರ ಮಕ್ಕಳಿಗೆ ಮೀಸಲಾತಿ: ಮನವಿ

Published:
Updated:
ಪೊಲೀಸರ ಮಕ್ಕಳಿಗೆ ಮೀಸಲಾತಿ: ಮನವಿ

ವಿಜಾಪುರ: ಸೇವೆಯಿಂದ ನಿವೃತ್ತರಾದ ಪೊಲೀಸರ ಮಕ್ಕಳಿಗೆ ಪೊಲೀಸ್ ಇಲಾಖೆಯ ನೇಮಕಾತಿಯಲ್ಲಿ ಶೇ.5ರಷ್ಟು ಮೀಸಲಾತಿ ನೀಡಬೇಕು ಎಂದು ನಿವೃತ್ತ ಪೊಲೀಸ್ ಉಪ ಅಧೀಕ್ಷಕ ಎಸ್.ಆರ್. ರಾಠೋಡ ಸಲಹೆ ಮಾಡಿದರು.ಇಲ್ಲಿಯ ಜಿಲ್ಲಾ ಪೊಲೀಸ್ ಪರೇಡ್ ಮೈದಾನದಲ್ಲಿ ಶನಿವಾರ ಹಮಿಕೊಂಡಿದ್ದ ಪೊಲೀಸ್ ಧ್ವಜ ದಿನಾಚರಣೆಯಲ್ಲಿ ಧ್ವಜ ವಂದನೆ ಸ್ವೀಕರಿಸಿ ಮಾತನಾಡಿ, ಪೊಲೀಸ್ ಕಲ್ಯಾಣ ನಿಧಿಯಿಂದ ನಿವೃತ್ತ ಪೊಲೀಸರ ಪತ್ನಿಯರಿಗೆ ಆರ್ಥಿಕ ನೆರವು ನೀಡಬೇಕು ಎಂದರು.

 

ಸದಾಕಾಲ ಒತ್ತಡದಲ್ಲಿಯೇ ಸೇವೆ ಸಲ್ಲಿಸುವ ಪೊಲೀಸರು, ನಿವೃತ್ತರಾದ ಮೇಲೆ ಹೆಚ್ಚು ಅನಾರೋಗ್ಯದಿಂದ ಬಳಲುತ್ತಾರೆ. ವಿಶ್ರಾಂತ ಜೀವನದಲ್ಲಿ ನೆಮದಿಯಿಂದ ಬದುಕಲು ನಿವೃತ್ತ ಅಧಿಕಾರಿ, ಪೇದೆಗಳೊಂದಿಗೆ ಅವರ ಪತ್ನಿಯರಿಗೂ ಪೊಲೀಸ್ ಕಲ್ಯಾಣ ನಿಧಿಯಿಂದ ನೆರವು ನೀಡಲು ನಿಯಮ ರೂಪಿಸಬೇಕು ಎಂದು ಮನವಿ ಮಾಡಿದರು.ಬದಲಾದ ಸಾಮಾಜಿಕ ಸನ್ನಿವೇಶದಲ್ಲಿ ದೇಶದ ಆಂತರಿಕ ಭದ್ರತೆ ಕಾಪಾಡುವ ಹೆಚ್ಚಿನ ಒತ್ತಡ ಪೊಲೀಸ್ ಇಲಾಖೆಯ ಮೇಲಿದೆ. ಅಪರಾಧ ಪ್ರಕರಣಗಳಿಗಿಂತ, ಕಾನೂನು ಸುವ್ಯವಸ್ಥೆ ನಿರ್ವಹಣೆ ಪೊಲೀಸರಿಗೆ ದೊಡ್ಡ ಸವಾಲಾಗಿದೆ. ಇಂತಹ ಸನ್ನಿವೇಶದಲ್ಲಿ ಪೊಲೀಸರಿಗೆ ಆಧುನಿಕ ಶಸ್ತ್ರಾಸ್ತ್ರಗಳನ್ನು ಸರ್ಕಾರ ನೀಡಬೇಕು ಎಂದರು.

 

ಮುಖ್ಯ ಅತಿಥಿಯಾಗಿದ್ದ ಜಿಲ್ಲಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟಿ, ಸಾರ್ವಜನಿಕರ ನೆಮದಿಗಾಗಿ ಪೊಲೀಸರು ಒದಗಿಸುತ್ತಿರುವ ಸೇವೆ ಅನನ್ಯ. ಕೌಟುಂಬಿಕ ಹಿತಾಸಕ್ತಿಗಳನ್ನು ಬದಿಗಿಟ್ಟು ಸಮಾಜದ ಶಾಂತಿ, ಸಾರ್ವಜನಿಕರ ನೆಮದಿ ಹಾಗೂ ಅವರ ಜೀವ ರಕ್ಷಣೆಗಾಗಿ ಶ್ರಮಿಸುತ್ತಿರುವ ಪೊಲೀಸ್‌ರ ಕರ್ತವ್ಯ ನಿರ್ವಹಣೆ ಶ್ಲಾಘನೀಯವಾದುದು ಎಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಡಿ.ಸಿ. ರಾಜಪ್ಪ , 1965ರ ಏಪ್ರಿಲ್ 2ರಂದು ಪೊಲೀಸ್ ಕಾಯ್ದೆ ಜಾರಿಗೆ ಬಂದ ನೆನಪಿಗಾಗಿ ಪೊಲೀಸ್ ಧ್ವಜ ದಿನಾಚರಣೆ ಆಚರಿಸಲಾಗುತ್ತಿದೆ. ಪೊಲೀಸ್‌ರ ನಿಸ್ವಾರ್ಥ ಸೇವೆಯ ಸರಣೆ ಹಾಗೂ ಕಲ್ಯಾಣ ಕಾರ್ಯಕ್ರಮಗಳ ಅಂಗವಾಗಿ ಪೊಲೀಸ್ ಧ್ವಜ ಮಾರಾಟದಿಂದ ಬಂದ ಹಣವನ್ನು ನಿವೃತ್ತ ಪೊಲೀಸರ ಕಲ್ಯಾಣಕ್ಕಾಗಿ ಬಳಸಲಾಗುತ್ತದೆ ಎಂದರು.

 

ಪೊಲೀಸರ ಕಲ್ಯಾಣಕ್ಕಾಗಿ ಜಿಲ್ಲಾ ಪೊಲೀಸ್ ಇಲಾಖೆ ಹಲವು ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ. ಸೇವಾ ನಿರತ ಪೊಲೀಸರು ಮರಣ ಹೊಂದಿದರೆ ಸರ್ಕಾರ ನೀಡುವ ಐದು ಸಾವಿರ ರೂಪಾಯಿ ಜೊತೆಗೆ ಜಿಲ್ಲಾ ಪೊಲೀಸ್ ಕಲ್ಯಾಣ ನಿಧಿಯಿಂದ 20 ಸಾವಿರ ರೂಪಾಯಿ ನೀಡುವ ಯೋಜನೆ ಜಾರಿಗೊಳಿಸಲಾಗಿದೆ. ಪೊಲೀಸರಿಗೆ ಆರೋಗ್ಯ ತಪಾಸಣೆ, ಮಕ್ಕಳ ಶಿಕ್ಷಣಕ್ಕೆ ಹಣಕಾಸಿನ ನೆರವು, ವಾಚನಾಲಯ, ವ್ಯಾಯಾಮ ಶಾಲೆ ತೆರೆಯಲಾಗಿದೆ. ಹೆಲ್ತ್‌ಕಾರ್ಡ್ ನೀಡಲಾಗಿದೆ ಎಂದು ತಿಳಿಸಿದರು.

 

ಐ.ಆರ್.ಬಿ. ಕಮಾಂಡೆಂಟ್ ಗಂಗಾಧರಪ್ಪ ವೇದಿಕೆಯಲ್ಲಿದ್ದರು.  ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಫ್.ಎ. ಟ್ರಾಸ್ಗರ್ ವಂದಿಸಿದರು. ಮಹಿಳಾ ಪೊಲೀಸ್, ಐಆರ್‌ಬಿ ಪೊಲೀಸ್ ತುಕಡಿ, ಮೀಸಲು ಪಡೆ ತುಕಡಿ ಹಾಗೂ ವಿವಿಧ ಪೊಲೀಸ್ ತುಕಡಿಗಳಿಂದ ಆಕರ್ಷಕ ಪಥ ಸಂಚಲನ ಜರುಗಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry