ಭಾನುವಾರ, ಏಪ್ರಿಲ್ 11, 2021
25 °C

ಪೊಲೀಸರ ಮೇಲೆ ಹಲ್ಲೆ: 10 ವರ್ಷ ಜೈಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕರ್ತವ್ಯನಿರತ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ ರೌಡಿಗಳಾದ ಜಫ್ರು, ವಾಸಿಂ ಮತ್ತು ಪ್ರೇಮ್ ಎಂಬುವರಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಐದನೇ ತ್ವರಿತ ನ್ಯಾಯಾಲಯ ಸೋಮವಾರ 10 ವರ್ಷ ಕಠಿಣ ಶಿಕ್ಷೆ ವಿಧಿಸಿದೆ.

ನಗರದ ಮೈಕೊಲೇಔಟ್ ಠಾಣೆಯಲ್ಲಿ ನಡೆದಿದ್ದ ಕೊಲೆ ಪ್ರಕರಣವೊಂದರ ಆರೋಪಿಯಾಗಿದ್ದ ಕುಖ್ಯಾತ ರೌಡಿ ನಸ್ರು ಎಂಬಾತ ಈ ಮೂರು ಮಂದಿಯ ಜತೆ 2005ರ ಮೇನಲ್ಲಿ ಆನೇಕಲ್‌ನ ವೀವರ್ಸ್‌ ಕಾಲೊನಿಯ ಮನೆಯೊಂದರಲ್ಲಿ ಅಡಗಿಕೊಂಡಿದ್ದ.

ಈ ಬಗ್ಗೆ ಮಾಹಿತಿ ಪಡೆದ ನಗರ ಕೇಂದ್ರ  ಅಪರಾಧ ವಿಭಾಗದ (ಸಿಸಿಬಿ) ಅಂದಿನ ಎಸಿಪಿ ಬಿ.ಕೆ.ಶಿವರಾಮ್, ಇನ್‌ಸ್ಪೆಕ್ಟರ್ ರತ್ನಾಕರ್ ಶೆಟ್ಟಿ ಮತ್ತು ಸಿಬ್ಬಂದಿ ತಂಡ ನಸ್ರು ಹಾಗೂ ಆತನ    ಸಹಚರರನ್ನು ಬಂಧಿಸುವ ಸಲುವಾಗಿ ವೀವರ್ಸ್‌ ಕಾಲೊನಿಗೆ ಹೋಗಿತ್ತು.   

 ನಸ್ರು ಸಹಚರರ ಜತೆ ಸೇರಿಕೊಂಡು ಪೊಲೀಸರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ.  ಆಗ ಪೊಲೀಸರು ನಸ್ರು ಮೇಲೆ ಗುಂಡು ಹಾರಿಸಿದಾಗ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದ. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಎಚ್.ರಾಮು ಅವರು ಆರೋಪಿಗಳಿಗೆ ಶಿಕ್ಷೆ ವಿಧಿಸಿ ಆದೇಶ ನೀಡಿದರು.

ಅತ್ಯಾಚಾರ: ಬಂಧನ

ಹದಿನೈದು ವರ್ಷದ ಬಾಲಕಿಯನ್ನು ಕರೆದೊಯ್ದು ಅತ್ಯಾಚಾರ ಎಸಗಿದ್ದ ಆರೋಪದ ಮೇಲೆ ವಾಸಿಂ ಪಾಷಾ (22) ಎಂಬಾತನನ್ನು ಕೊತ್ತನೂರು ಪೊಲೀಸರು ಬಂಧಿಸಿದ್ದಾರೆ.

ಆತ ಹೆಗಡೆ ನಗರದಲ್ಲಿರುವ ಬೈಕ್‌ಗಳ ರಿಪೇರಿ ಅಂಗಡಿ ಒಂದರಲ್ಲಿ ಮೆಕಾನಿಕ್ ಆಗಿದ್ದ. ಅದೇ ಬಡಾವಣೆಯ ಬಾಲಕಿಯೊಬ್ಬಳನ್ನು ಪ್ರೀತಿಸುತ್ತಿದ್ದ ಆತ, ಅವಳನ್ನು ಶುಕ್ರವಾರ (ಮಾ.18) ಶಿವನಸಮುದ್ರಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದ. ಈ ಸಂಬಂಧ ಬಾಲಕಿಯ ಪೋಷಕರು ನೀಡಿದ್ದ ದೂರು ಆಧರಿಸಿ ಆತನನ್ನು ಬಂಧಿಸಲಾಗಿದೆ ಎಂದು   ಪೊಲೀಸರು ಹೇಳಿದ್ದಾರೆ.

ಗಾಳಿಯಲ್ಲಿ ಗುಂಡು: ಇಬ್ಬರ ಬಂಧನ

ಕ್ಷುಲ್ಲಕ ಕಾರಣಕ್ಕೆ ರಾಜೇಶ್‌ಸಿಂಗ್ ಎಂಬುವರ ಮೇಲೆ ಭಾನುವಾರ ರಾತ್ರಿ ಹಲ್ಲೆ ನಡೆಸಿ ರಿವಾಲ್ವರ್‌ನಿಂದ ಗಾಳಿಯಲ್ಲಿ ಗುಂಡು ಹಾರಿಸಿದ್ದ ಆರೋಪದ ಮೇಲೆ ಗಣೇಶ್‌ರಾವ್ (37) ಮತ್ತು ವೆಂಕಟೇಶ್‌ರಾವ್ (33) ಎಂಬುವರನ್ನು ಚಿಕ್ಕಪೇಟೆ ಪೊಲೀಸರು ಬಂಧಿಸಿದ್ದಾರೆ.

ಅವರು ನಾಯಂಡಹಳ್ಳಿಯಲ್ಲಿರುವ ಎಸ್‌ಎಲ್‌ಎನ್ ಆಟೊ ಮೊಬೈಲ್ಸ್‌ನ ಮಾಲೀಕರು. ಮಹೀಂದ್ರ ಕಂಪೆನಿಯ ವಾಹನಗಳನ್ನು ಇಲ್ಲಿ ಸರ್ವಿಸ್ ಮಾಡಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕುಂಬಾರಪೇಟೆ ನಿವಾಸಿ ರಾಜೇಶ್‌ಸಿಂಗ್ ಮತ್ತು ಆತನ ಸ್ನೇಹಿತರಾದ ಧರಂ ಸಿಂಗ್, ಸಂತೋಷ್ ಸಿಂಗ್ ಮತ್ತು ಶೈಲೇಂದ್ರ ಸಿಂಗ್ ಎಂಬುವರು ಎರಡು ಬೈಕ್‌ಗಳಲ್ಲಿ ರಾತ್ರಿ ಮನೆಗೆ ಹೋಗುವಾಗ ಚಿಕ್ಕಪೇಟೆ ಆಸ್ಪತ್ರೆ ಹಿಂಭಾಗ ವಾಹನ ನಿಲ್ಲಿಸಿ ಮೂತ್ರ ವಿಸರ್ಜನೆಗೆ ಹೋಗಿದ್ದರು.

ಅದೇ ರಸ್ತೆಯಲ್ಲಿ ಕಾರಿನಲ್ಲಿ ಬಂದ ವೆಂಕಟೇಶ್ ಮತ್ತು ಗಣೇಶ್ ಅವರು ಬೈಕ್‌ಗಳನ್ನು ದಾರಿಯಲ್ಲಿ ನಿಲ್ಲಿಸಿದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಎರಡೂ ಗುಂಪುಗಳ ಮಧ್ಯೆ ಜಗಳವಾಯಿತು. ಈ ವೇಳೆ ವೆಂಕಟೇಶ್ ದೊಣ್ಣೆಯಿಂದ ರಾಜೇಶ್‌ಸಿಂಗ್ ಕಾಲಿಗೆ ಹೊಡೆದರು.  ಅನಂತರ ಪಿಸ್ತೂಲ್ ತೆಗೆದ ಗಣೇಶ್ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿದರು. ಇದರಿಂದ ಆತಂಕಗೊಂಡ ಆ ನಾಲ್ಕು ಮಂದಿ ಓಡಿ ಹೋಗಿದ್ದರು ಎಂದು ಪೊಲೀಸರು ಹೇಳಿದ್ದಾರೆ. ‘ಘಟನೆ ನಡೆದ ತಕ್ಷಣ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಯಿತು. ಜರ್ಮನ್ ನಿರ್ಮಿತ ಪಾಯಿಂಟ್ ಪಾಯಿಂಟ್ 32 ರಿವಾಲ್ವರ್ ಅನ್ನು ಅವರು ಬಳಸಿದ್ದರು. ಆ ರಿವಾಲ್ವರ್‌ಗೆ ಅವರು ಪರವಾನಗಿ ಪಡೆದಿದ್ದಾರೆ’ ಎಂದು ಪಶ್ಚಿಮ ವಿಭಾಗದ ಡಿಸಿಪಿ ಎಸ್.ಎನ್.ಸಿದ್ದರಾಮಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

 ಹೋಳಿ ಹಬ್ಬದಲ್ಲಿ ಪಾಲ್ಗೊಂಡಿದ್ದ ಎರಡೂ ಗುಂಪಿನ ಸದಸ್ಯರು ಪಾನಮತ್ತರಾಗಿ ಮನೆಗೆ ಹೋಗುತ್ತಿದ್ದ ವೇಳೆ ಈ ಘಟನೆ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಚಿಕ್ಕಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.