ಬೆಂಗಳೂರು: ಅಪಹರಣಗೊಂಡ 15 ವರ್ಷದ ಬಾಲಕಿಯನ್ನು ಹುಡುಕುವಲ್ಲಿ ಬೇಜವಾಬ್ದಾರಿಯಿಂದ ವರ್ತಿಸಿದ್ದೂ ಅಲ್ಲದೇ, ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್‌ಗೆ ವ್ಯತಿರಿಕ್ತವಾಗಿ ಪ್ರಮಾಣ ಪತ್ರ ಸಲ್ಲಿಸಿದ್ದ ಪೊಲೀಸ್ ಇಲಾಖೆಯ ವರ್ತನೆಗೆ ಗುರುವಾರ ಹೈಕೋರ್ಟ್ ಕೆಂಡಾಮಂಡಲವಾಗಿದೆ.
‘ಇದು ರಾಜ್ಯದಲ್ಲಿನ ಪೊಲೀಸರ ಶಿಸ್ತು ಪಾಲನೆಯನ್ನು ಎತ್ತಿ ತೋರಿಸುತ್ತದೆ. ಯಾವ ರೀತಿಯ ವ್ಯಕ್ತಿಗಳು ಪೊಲೀಸ್ ಇಲಾಖೆಯನ್ನು ಆಳುತ್ತಿದ್ದಾರೆ ಎನ್ನುವುದಕ್ಕೆ ಇದೊಂದು ಒಳ್ಳೆಯ ಉದಾಹರಣೆಯಾಗಿದೆ. ಈ ಇಲಾಖೆಯಲ್ಲಿ ಉನ್ನತ ಹುದ್ದೆಯಲ್ಲಿ ಇರುವ ಅಧಿಕಾರಿಗಳು ಕೂಡ ತಮ್ಮ ಇಲಾಖೆಯಲ್ಲಿನ ಇಂತಹ ಕಳಂಕಿತ ಪೊಲೀಸರ ವಿರುದ್ಧ ಕ್ರಮ ತೆಗೆದುಕೊಳ್ಳದಿರುವುದು ವಿಷಾದನೀಯ. ಇದರಿಂದಾಗಿಯೇ ಸಾರ್ವಜನಿಕರು ಈ ಇಲಾಖೆಯಲ್ಲಿ ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ’ ಎಂದು ತಿಳಿಸಿದ
ನ್ಯಾಯಮೂರ್ತಿ ಎನ್.ಕುಮಾರ್ ನೇತೃತ್ವದ ವಿಭಾಗೀಯ ಪೀಠ, ‘ಪೊಲೀಸ್ ಇಲಾಖೆಯಲ್ಲಿ ಇರುವ ಇಂತಹ ಲಜ್ಜೆಗೆಟ್ಟ ವ್ಯಕ್ತಿಗಳನ್ನು ತೆಗೆಯಲು ಇದು ಸಕಾಲ’ ಎಂದು ನಗರ ಪೊಲೀಸ್ ಕಮಿಷನರ್ ಅವರಿಗೆ ಸೂಚಿಸಿದ್ದಾರೆ.
ದೇವನಹಳ್ಳಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ವಿದ್ಯಾಧರ ಡಿ. ಬೈಕೇರಿಕಲ್ ಅವರ ವಿರುದ್ಧ ಸಲ್ಲಿಸಿರುವ ಹೇಬಿಯಸ್ ಕಾರ್ಪಸ್ ಅರ್ಜಿ ಇದಾಗಿದೆ.
ಪ್ರಕರಣದ ವಿವರ: ದೇವನಹಳ್ಳಿಯ ನಿವಾಸಿ ಮಾಲಿನಿ (ಹೆಸರು ಬದಲಾಯಿಸಲಾಗಿದೆ; ಬಾಲಕಿ ಸದ್ಯ ಪೋಷಕರ ಬಳಿ ಇದ್ದಾಳೆ).) ಕಳೆದ ಜೂನ್ 9ರಂದು ನಾಪತ್ತೆಯಾಗಿದ್ದಳು. ಆಕೆಯ ತಂದೆ ಪೊಲೀಸರಲ್ಲಿ ದೂರು ನೀಡಿದ್ದರೂ ಯಾವುದೇ ಸುಳಿವು ಸಿಗಲಿಲ್ಲ.
ಇದರಿಂದ ಅವರು, ಮಗಳ ಹಾಜರಿಗೆ ಆದೇಶಿಸುವಂತೆ ಕೋರಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ವಿದ್ಯಾಧರ ಅವರು, ಕೋರ್ಟ್‌ನಿಂದ ಕೆಲವು ಬಾರಿ ಆದೇಶ ಹೊರಟ ನಂತರ ಮಾಲಿನಿಯನ್ನು ಹಾಜರು ಪಡಿಸಿದ್ದರು ಕೂಡ ಆರೋಪಿಗಳನ್ನು ರಕ್ಷಿಸುವ ರೀತಿಯಲ್ಲಿ ಅವರ ಪ್ರಮಾಣ ಪತ್ರ ಇತ್ತು. ಎರಡು ಬಾರಿ ಸಲ್ಲಿಸಿದ್ದ ಪ್ರಮಾಣ ಪತ್ರದಲ್ಲಿ ವ್ಯತಿರಿಕ್ತ ಹೇಳಿಕೆ ನೀಡಿದ್ದೂ ಅಲ್ಲದೇ ಬಾಲಕಿಯ ಮೇಲೆ ನಡೆದ ಅತ್ಯಾಚಾರದ ಕುರುಹುಗಳನ್ನು ನಾಶಪಡಿಸಲು ಪೊಲೀಸರು ಮಾಡಿರುವ ಯತ್ನಗಳು ಪೀಠಕ್ಕೆ ತಿಳಿಯಿತು.
ಇದರ ಜೊತೆ ಅಪಹರಣದಲ್ಲಿ ಭಾಗಿಯಾದ ಇನ್ನೊಬ್ಬ ಆರೋಪಿ ಸುಬ್ರಮಣಿ ಎಂಬುವವನ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ. ಇದರಿಂದಾಗಿ ‘ಪರಿಶಿಷ್ಟ ಜನಾಂಗದ ಬಾಲಕಿಯನ್ನು ಈ ರೀತಿಯಾಗಿ ಹೀನಾಯವಾಗಿ ನಡೆಸಿಕೊಂಡ ಎಲ್ಲರ ವಿರುದ್ಧವೂ ಕ್ರಮ ತೆಗೆದುಕೊಂಡು, ಆ ಬಗ್ಗೆ ತಿಳಿಸಿ’ ಎಂದು ಪೀಠ ನಿರ್ದೇಶಿಸಿದೆ.
‘ನಿಮ್ಮ ಮಕ್ಕಳೇ ಅಪಹೃತರಾದರೆ?’
~ನಿಮ್ಮ ಮಕ್ಕಳು ಅಪಹರಣವಾದರೆ, ಅಥವಾ ಇದ್ದಕ್ಕಿದ್ದಂತೆ ಕಾಣೆಯಾದರೆ ನೀವು ಹೇಗೆ ವರ್ತಿಸುತ್ತೀರಿ, ಆಗಲೂ ಇದೇ ರೀತಿ ಬೇಜವಾಬ್ದಾರಿಯಿಂದ ವರ್ತಿಸುತ್ತೀರಾ ಅಥವಾ ಮಕ್ಕಳನ್ನು ಹುಡುಕಲು ನಿಜವಾಗಿಯೂ ಪ್ರಯತ್ನ ಪಡುತ್ತೀರಾ..?
‘ಹೀಗೆಂದು ನಿಮ್ಮನ್ನು ನೀವು ಪ್ರಶ್ನಿಸಿಕೊಳ್ಳಿ. ಅಪಹರಣವಾದ ಮಕ್ಕಳ ಜಾಗದಲ್ಲಿ ನಿಮ್ಮ ಮಕ್ಕಳನ್ನು ಕಲ್ಪಿಸಿಕೊಂಡು ತನಿಖೆ ನಡೆಸಿ. ಆಗ ತನಿಖೆ ಯಶಸ್ವಿಯಾಗುತ್ತದೆ. ಇದನ್ನೇ ನಿಮ್ಮ ಅಧೀನದಲ್ಲಿ ಇರುವ ಪೊಲೀಸರಿಗೂ ತಿಳಿಸಿ’ ಎಂದು ನ್ಯಾಯಮೂರ್ತಿಗಳು ನಗರ ಪೊಲೀಸ್ ಕಮಿಷನರ್ ಶಂಕರ ಬಿದರಿಯವರಿಗೆ ವಿಚಾರಣೆ ವೇಳೆ ಸಲಹೆ ನೀಡಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.