ಸೋಮವಾರ, ಡಿಸೆಂಬರ್ 16, 2019
17 °C

`ಪೊಲೀಸರ ಸಣ್ಣ ತಪ್ಪುಗಳಿಗೆ ದೊಡ್ಡ ಶಿಕ್ಷೆ ಬೇಡ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಪೊಲೀಸ್ ಕರ್ತವ್ಯದಲ್ಲಿ ಆಗುವ ಸಣ್ಣ-ಪುಟ್ಟ ವ್ಯತ್ಯಾಸ, ತಪ್ಪುಗಳಿಗೆ ಹಿರಿಯ ಅಧಿಕಾರಿಗಳು ದೊಡ್ಡ ಶಿಸ್ತುಕ್ರಮ ಕೈಗೊಳ್ಳುವುದರಿಂದ ಪೊಲೀಸರ ಆತ್ಮಸ್ಥೈರ್ಯ ಕುಂದಿದಂತಾಗುತ್ತದೆ ಎಂದು ನಿವೃತ್ತ ಸಹಾಯಕ ಪೊಲೀಸ್ ಉಪ ನಿರೀಕ್ಷಕ ಬಿ. ರಾಜೀವಶೆಟ್ಟಿ ಅಭಿಪ್ರಾಯಪಟ್ಟರು.ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಮಂಗಳವಾರ ನಡೆದ `ಪೊಲೀಸ್ ಧ್ವಜ ದಿನಾಚರಣೆ' ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಪೊಲೀಸರಿಗೆ ಸ್ಥೈರ್ಯ ಹೆಚ್ಚಿಸುವ ಪ್ರೋತ್ಸಾಹದ ಕ್ರಮಗಳನ್ನು ಉನ್ನತ ಪೊಲೀಸ್ ಅಧಿಕಾರಿ ಅನುಸರಿಸಬೇಕು ಎಂದರು.ಕರ್ತವ್ಯನಿರತ ಪೊಲೀಸರಿಗೆ ಇರುವ `ಆರೋಗ್ಯ ಭಾಗ್ಯ ವಿಮಾ ಯೋಜನೆ'ಯನ್ನು ನಿವೃತ್ತ ಪೊಲೀಸರಿಗೆ ವಿಸ್ತರಿಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಕೋರಿದ ಅವರು, ಪೊಲೀಸರು ಸದಾ ಒತ್ತಡದಲ್ಲಿ ಕೆಲಸ ಮಾಡುತ್ತಾರೆ. ಜನರೊಂದಿಗೆ ಉತ್ತಮ ಬಾಂಧವ್ಯ ಹೊಂದಬೇಕು. ಜನರಿಗೆ ತಮ್ಮ ಕೈಲಾದ ಸಹಾಯ ಮಾಡಿದರೆ ಪೊಲೀಸರ ಬಗ್ಗೆ ಜನರಿಗೆ ವಿಶ್ವಾಸ ಮೂಡುತ್ತದೆ ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೌಶಲೇಂದ್ರಕುಮಾರ್ ಮಾತನಾಡಿ, ಪೊಲೀಸರು ಜನಸ್ನೇಹಿ ಆಗಿರಬೇಕಾದರೆ ಜನರೊಂದಿಗೆ ಸಂವೇದನಾಶೀಲರಾಗಿ ಸ್ಪಂದಿಸುವುದು ಮುಖ್ಯ. ಪೊಲೀಸರ ಶ್ರಮಕ್ಕೆ ಜನರಿಂದ ಪುರಸ್ಕಾರ ಸಿಗಬೇಕು ಎಂದರು.ಇದೀಗ ಸಾರ್ವತ್ರಿಕ ಚುನಾವಣೆ ಬಂದಿದೆ. ಈ ಸಂದರ್ಭದಲ್ಲಿ ಪೊಲೀಸರು ವಿಶೇಷವಾಗಿ ಕರ್ತವ್ಯ ನಿರ್ವಹಿಸಬೇಕಿದೆ. ಈ ಮೂಲಕ  ಶಿವಮೊಗ್ಗ ಪೊಲೀಸ್, ಮಾದರಿ ಪೊಲೀಸ್ ಎಂಬ ಹೆಗ್ಗಳಿಕೆ ಪಡೆಯಬೇಕು ಎಂದರು.ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕ  ಸಿ. ಬಸವರಾಜು ಪೊಲೀಸ್ ಕಲ್ಯಾಣ ವರದಿ ವಾಚಿಸಿದರು. ಅತಿಥಿ, ಗಣ್ಯರಿಗೆ ಪೊಲೀಸ್ ಧ್ವಜ ವಿತರಿಸಿ, ಪೊಲೀಸ್ ಕಲ್ಯಾಣ ನಿಧಿಗೆ ದೇಣಿಗೆ  ಸಂಗ್ರಹಿಸಲಾಯಿತು.ಪ್ರೊಬೆಷನ್ ಐಪಿಎಸ್ ಅಧಿಕಾರಿ ಅಣ್ಣಮಲೆ ನೇತೃತ್ವದ ಆರು ತುಕಡಿಗಳ ಕವಾಯತು ಆಕರ್ಷಕವಾಗಿತ್ತು.

ಪ್ರತಿಕ್ರಿಯಿಸಿ (+)