ಗುರುವಾರ , ಜನವರಿ 23, 2020
28 °C

ಪೊಲೀಸರ ಸಹಕಾರ ಇಲ್ಲ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಸಮಸ್ಯೆಯಲ್ಲಿರುವ ಮಕ್ಕಳಿಗೆ ನೆರವಾಗುವ ಸಂದರ್ಭದಲ್ಲಿ ಮಕ್ಕಳ ಕಲ್ಯಾಣ ಸಮಿತಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಬಂಧಪಟ್ಟ ಇಲಾಖೆಗಳು ಸರಿಯಾಗಿ ಸಹಕರಿಸುತ್ತಿಲ್ಲ ಎಂದು  ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಆಶಾ ನಾಯಕ್‌ ಹೇಳಿದರು.



ಅವರು ಸೋಮವಾರ ನಗರದ ಸಿಒಡಿಪಿ ಸಭಾಂಗಣದಲ್ಲಿ ಪಡಿ ವೆಲೋರೆಡ್‌ ಮತ್ತು ಮಂಗಳೂರು ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಸಂಘಟನೆ ವತಿಯಿಂದ, ಲೈಂಗಿಕ ದೌರ್ಜನ್ಯದಿಂದ ಮಕ್ಕಳನ್ನು ರಕ್ಷಿಸುವ ಕಾಯ್ದೆ  (ಪಿಒಸಿಎಸ್‌ಒ–2012) ಕಾಯ್ದೆ ಕುರಿತ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.



ಪಿಒಸಿಎಸ್‌ಒ ಕಾಯ್ದೆ ಅನುಷ್ಠಾನಗೊಂಡಿದ್ದರೂ ಜಿಲ್ಲೆಯಲ್ಲಿ ಈ ಕಾಯ್ದೆಯನ್ನು ಯಶಸ್ವಿಯಾಗಿ ಜಾರಿಗೊಳಿಸುವ ವಿಚಾರದಲ್ಲಿ  ಹಲವಾರು ಲೋಪದೋಷಗಳು ಎದುರಾಗಿವೆ. ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ನಿರ್ವಹಿಸುವಾಗ ಪೊಲೀಸ್‌ ಇಲಾಖೆ ಮತ್ತು ಸರ್ಕಾರೇತರ ಸಂಸ್ಥೆಗಳೇ ಮಕ್ಕಳ ಹಕ್ಕುಗಳನ್ನು ಉಲ್ಲಂಘಿಸುತ್ತಿವೆ. ವಾಸ್ತವವಾಗಿ ಇಂತಹ ಪ್ರಕರಣಗಳಲ್ಲಿ ಪೊಲೀಸರು,



ಸಂಘಟನೆಗಳು ಮತ್ತು ಮಾಧ್ಯಮದ ನೆರವು ಅತ್ಯಗತ್ಯ ಎಂದು ಅವರು ಅಭಿಪ್ರಾಯಪಟ್ಟರು. ದೌರ್ಜನ್ಯಕ್ಕೆ ಒಳಗಾದ ಮಗು ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರಾಗುವುದು ಅಗತ್ಯ ಎಂಬ ವಿಷಯ ಕಾಯ್ದೆಯಲ್ಲಿದ್ದರೂ ಹಲವು ಬಾರಿ ಪೊಲೀಸರು ಈ ವಿಷಯವನ್ನು ಕೈಬಿಡುತ್ತಾರೆ. ಸಮಿತಿಯೇ ಪೊಲೀಸರನ್ನು ಭೇಟಿಯಾದಾಗಲೂ ಅವರು ತೀರಾ ಉದಾಸೀನ ಧೋರಣೆ ತಳೆಯುತ್ತಾರೆ. ಸಮಿತಿ ನಡೆಸುವ ಇಡೀ ಪ್ರಕ್ರಿಯೆಗೆ ಅಗೌರವ ತೋರಿಸುವುದಲ್ಲದೆ ಮಕ್ಕಳ ಕಲ್ಯಾಣ ಸಮಿತಿಗೆ ಯಾವುದೇ ಅಧಿಕಾರ ಇಲ್ಲ ಎಂಬಂತೆ ವರ್ತಿಸುತ್ತಾರೆ. ಸರ್ಕಾರೇತರ ಸಂಸ್ಥೆಗಳೂ ಕೂಡ ದೌರ್ಜನ್ಯಕ್ಕೆ ಒಳಗಾದ ಮಗುವಿನ ಹೆಸರನ್ನು ಬಹಿರಂಗ ಪಡಿಸುವ ಮೂಲಕ ಮಕ್ಕಳ ಹಕ್ಕುಗಳನ್ನು ಉಲ್ಲಂಘಿಸುತ್ತಾರೆ ಎಂದು ಅವರು ಆರೋಪಿಸಿದರು.



ಇತ್ತೀಚೆಗೆ ದೌರ್ಜನ್ಯಕ್ಕೆ ಒಳಗಾದ ಅಪ್ರಾಪ್ತ ವಯಸ್ಸಿನ ಹೆಣ್ಣುಮಗು ರಾತ್ರಿಯಿಡೀ ಪೊಲೀಸ್‌ ಠಾಣೆಯಲ್ಲಿ ಕುಳಿತುಕೊಳ್ಳಬೇಕಾಯಿತು. ಆದರೆ ಕಾಯ್ದೆ ಪ್ರಕಾರ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತ ಮಗು ಮುಸ್ಸಂಜೆಯ ಬಳಿಕ ಪೊಲೀಸ್‌ ಠಾಣೆಯಲ್ಲಿ ಇರಬಾರದು. ದೂರು ದಾಖಲಾದ ಕೂಡಲೇ ಮಗುವನ್ನು ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿ­ಸಬೇಕು ಎಂದು ಕಾಯ್ದೆ ಈ ಕುರಿತು ನಿಖರವಾಗಿ ಹೇಳಿದ್ದರೂ ಪೊಲೀಸರು ಈ ಪ್ರಕ್ರಿಯೆಯನ್ನು ಅನುಸರಿಸುತ್ತಿಲ್ಲ . ದೌರ್ಜನ್ಯವನ್ನು ಸಾಬೀತುಪಡಿಸಲು ಪರಿಸ್ಥಿತಿಯ ಸಾಕ್ಷಿಯಿಲ್ಲದೇ ಇದ್ದರೂ ಕೇವಲ ವೈದ್ಯಕೀಯ ಸಾಕ್ಷಿಯೊಂದೇ ಸಾಕು ಎಂದು ಅವರು ಹೇಳಿದರು.



ನವರಿಯಿಂದ ಜಿಲ್ಲೆಯಲ್ಲಿ ಜಾಗೃತಿ

ಕಾಯ್ದೆ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸೋಮವಾರ ನಡೆದ ಕಾರ್ಯಾಗಾರದಲ್ಲಿ 30 ಮಂದಿ ತರಬೇತುದಾರರು ಭಾಗವಹಿಸಿದರು. ಅವರೆಲ್ಲರೂ ಜನವರಿ ಮೊದಲ ವಾರದಿಂದ ದಕ್ಷಿಣ ಕನ್ನಡದ 50 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದ್ದಾರೆ. ಫೆಬ್ರವರಿ ತಿಂಗಳ ಅಂತ್ಯದವರೆಗೆ ಈ ಜಾಗೃತಿ ಕಾರ್ಯಕ್ರಮ ಮುಂದುವರೆಯಲಿದೆ. ಬಳಿಕ ಈ ಜಾಗೃತಿ ಕಾರ್ಯಕ್ರಮಗಳನ್ನು  ಇತರ ಕಡೆಗಳಲ್ಲಿಯೂ ಹಮ್ಮಿಕೊಳ್ಳುವ ಉದ್ದೇಶವಿದೆ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪಡಿ ವೆಲೋರೆಡ್‌ ನಿರ್ದೇಶಕ ರೆನ್ನಿ ಡಿಸೋಜ ಹೇಳಿದರು.

ಪ್ರತಿಕ್ರಿಯಿಸಿ (+)