ಪೊಲೀಸರ ‘ಆಡುಂಬೊಲ’ದಲ್ಲಿ ಯಾಸೀನ್‌!

6

ಪೊಲೀಸರ ‘ಆಡುಂಬೊಲ’ದಲ್ಲಿ ಯಾಸೀನ್‌!

Published:
Updated:

ಚಪೋರ (ಗೋವಾ): ಇಂಡಿಯನ್‌ ಮುಜಾಹಿದೀನ್‌ ಸಂಚುಕೋರ ಯಾಸೀನ್‌ ಭಟ್ಕಳ ರಾಷ್ಟ್ರದ ಎಲ್ಲಾ ತಾಣ­ಗಳನ್ನು ಬಿಟ್ಟು ಗೋವಾದ ಚಪೋರ ಎಂಬ ಕಡಲ­ತಡಿಯ ಹಳ್ಳಿಯನ್ನೇ ತನ್ನ ಅಡಗುತಾಣ ಮಾಡಿಕೊಂಡಿ­ದ್ದಾದರೂ ಏಕೆ?ಚಪೋರ ಮೂಲತಃ ಮೀನುಗಾರಿಕೆಯನ್ನೇ ನಂಬಿದ್ದ ಗ್ರಾಮವಾದರೂ ಈಗ ಅದು ಕೇವಲ ಮೀನುಗಾರಿಕೆಗೆ ಸೀಮಿ­ತವಾದ ಗ್ರಾಮವಲ್ಲ. ರಾಜಧಾನಿ ಪಣಜಿಯಿಂದ 25 ಕಿ.ಮೀ. ದೂರದಲ್ಲಿರುವ ಈ ಗ್ರಾಮವು ಸದ್ಯ ಮಾದಕ ವಸ್ತು ಹಾಗೂ ಅಮಲುಕಾರಕಗಳ ಅಕ್ರಮ ಮಾರಾಟಕ್ಕೆ ಕುಖ್ಯಾತವಾದ ತಾಣವಾಗಿದೆ.ಕರಾಳ ದಂಧೆಗೆ ಹೆಸರಾದ ಇಂತಹ ಪ್ರದೇಶವನ್ನು ಯಾಸೀನ್‌ ಅಡಗುದಾಣವನ್ನಾಗಿ ಆಯ್ಕೆ ಮಾಡಿ­ಕೊಂಡಿದ್ದು ಕೇವಲ ಕಾಕತಾಳೀಯವಲ್ಲ ಎನ್ನುತ್ತಾರೆ ಪೊಲೀಸ್‌ ಅಧಿಕಾರಿಗಳು.ಅಂದಹಾಗೆ, ಯಾಸೀನ್‌ನಂತಹ ಪಾತಕಿಗಳಿಗೆ ಇಂತಹ ಅಡಗುದಾಣ ಸಿದ್ಧ ಮಾಡಿಕೊಟ್ಟವರೂ ಪರೋಕ್ಷವಾಗಿ ಪೊಲೀಸರೇ ಎಂಬುದು ವಿಪರ್ಯಾಸದ ಸಂಗತಿಯಾದರೂ, ಅದು ಒಪ್ಪಲೇಬೇಕಾದ ಸತ್ಯ!ಕಾರಣವಿಷ್ಟೆ; ಚಪೋರ ಗ್ರಾಮದಲ್ಲಿನ ಅಕ್ರಮ ಮಾದಕ ದಂಧೆ ಪೊಲೀ­ಸರಿಗೆ ಗೊತ್ತಿ­ಲ್ಲದ ಸಂಗ­ತಿ­­ಯೇನೂ ಅಲ್ಲ. ಆದರೆ, ಲಂಚದ ಆಸೆಗೆ ಬಿದ್ದ ಇಲಾಖೆಯ ಸಿಬ್ಬಂದಿ ‘ಮಾಮೂ­ಲಿ’ಗೆ ಕೈ­ಒಡ್ಡುತ್ತಾ ಅದನ್ನು ಹಾಗೆಯೇ ಬೆಳೆ­ಯಲು ಬಿಟ್ಟಿ­ದ್ದಾರೆ.ಅಲ್ಲಿ ಏನೇ ನಡೆ­ದರೂ ಅದನ್ನವರು ಗಮನಿಸಲೂ ಹೋಗು­ವುದಿಲ್ಲ. ತಮ್ಮ ಜೇಬು ತುಂಬುತ್ತಾ ಹೋದರೆ, ಅದಷ್ಟೇ ಅವರಿಗೆ ಸಾಕು!ಇದು ಯಾಸೀನ್‌ಗೆ ಗೊತ್ತಿತ್ತು. ಹೀಗಾಗಿ , ಇಂತಹ ಪ್ರದೇಶದಲ್ಲಿ ಇದ್ದರೆ ತಾನು ಸುರಕ್ಷಿತ ಎಂದು ಆತ ಅಂದಾಜಿಸಿದ. ಅಲ್ಲೊಂದು ಬಾಡಿಗೆ ಮನೆ ಹಿಡಿದು ಹೆಚ್ಚಿನ ಚಿಂತೆಯಿಲ್ಲದೆ ಬಾಂಬ್‌ ತಯಾರಿಕೆಯಲ್ಲಿ ತೊಡಗಿದ್ದ.ಆತ ಬಾಡಿಗೆಗೆ ಇದ್ದ ಮನೆಯಿಂದ ರಾಷ್ಟ್ರೀಯ ತನಿಖಾ ದಳದ ಸಿಬ್ಬಂದಿ ಕಳೆದ ಶನಿವಾರ ಬಾಂಬ್‌ ತಯಾರಿಕಾ ಸಾಧನ ವಶಪಡಿಸಿಕೊಂಡಿ­ರುವುದೇ ಇದಕ್ಕೆ ನಿದರ್ಶನ.ಗೋವಾಗೆ ಪ್ರತಿನಿತ್ಯ ಹತ್ತಾರು ಸಾವಿರ ಪ್ರವಾಸಿಗರು ಭೇಟಿ ನೀಡುತ್ತಾರೆ. ಅವರಾರಿಗೂ ರಾಜಧಾನಿಯಿಂದ 25 ಕಿ.ಮೀ. ದೂರದ ಸಮುದ್ರ ದಡದ ಈ ಹಳ್ಳಿಯ ಬಗ್ಗೆ ಗೊತ್ತಿರಲಿಕ್ಕಿಲ್ಲ.  ಆದರೆ, ಹಶೀಶ್‌, ಮರಿಜು­ವಾನಾ, ಮನಸ್ಸನ್ನು ಉನ್ಮಾದಕ್ಕೆ ದೂಡುವ ಕೆಟಮೈನ್‌ ಇವುಗಳಿಗಾಗಿ ಹಪಹಪಿಸುವವರಿಗೆ ಖಂಡಿತವಾಗಿಯೂ ಈ ತಾಣದ ಬಗ್ಗೆ ಗೊತ್ತಿದ್ದೇ ತೀರುವಷ್ಟು ಇದು ಕುಖ್ಯಾತವಾಗಿದೆ.ಗೋವಾದ ಅತಿ ದೊಡ್ಡ ಮಾದಕ ವಸ್ತು ಪೂರೈಕೆ ಕುಳಗಳು ಚಪೋರ ಹಾಗೂ ಆಸುಪಾಸಿನ ಪ್ರದೇಶಕ್ಕೆ ಸೇರಿದವರೆಂಬುದು ಮತ್ತೊಂದು ಗಮನಾರ್ಹ ಸಂಗತಿ.ಇಂತಹ ಜಾಗಕ್ಕೆ ರಾಜಕಾರಣಿಗಳ ಅಭಯವೂ ಇದ್ದೇ ಇದೆ. ಕಳೆದ ತಿಂಗಳು ಚಪೋರದಲ್ಲಿ ಹೊಸ ಪೊಲೀಸ್‌ ಠಾಣೆ ಉದ್ಘಾಟನೆ ವೇಳೆ ಬಿಜೆಪಿ ಶಾಸಕ ದಯಾನಂದ್‌  ಮಂಡ್ರೇಕರ್‌ ಅವರು ಆಡಿದ ಮಾತು­ಗಳೇ ಇದಕ್ಕೆ ಸಾಕ್ಷಿಅವತ್ತಿನ ಕಾರ್ಯಕ್ರಮದಲ್ಲಿ, ಅಲ್ಲಿನ ಉನ್ಮಾದಕ ರೇವ್‌ ಪಾರ್ಟಿಗಳ ಪದೇಪದೇ ದಾಳಿ ನಡೆಸಿದ್ದ ಐಪಿಎಸ್‌ ಅಧಿಕಾರಿಯನ್ನು ಶಾಸಕರು ‘ಗೂಂಡಾ’ ಎಂದು ಕರೆದು ಆಕ್ರೋಶ ವ್ಯಕ್ತಪಡಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry