ಭಾನುವಾರ, ಮೇ 9, 2021
26 °C

ಪೊಲೀಸ್ ಅಧಿಕಾರಿ ಪುತ್ರಿ ಆತ್ಮಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪೊಲೀಸ್ ಅಧಿಕಾರಿಯೊಬ್ಬರ ಪುತ್ರಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜೆ.ಪಿ.ನಗರ ಸಮೀಪದ ಸಂತೃಪ್ತಿನಗರದಲ್ಲಿ ಭಾನುವಾರ ಮಧ್ಯಾಹ್ನ ನಡೆದಿದೆ.ಕಂದಾಯ ಇಲಾಖೆಯ ಒತ್ತುವರಿ ತೆರವು ಘಟಕದ ಡಿವೈಎಸ್ಪಿ ಗೆಜ್ಜಪ್ಪ ಅವರ ಪುತ್ರಿ ಮಾನಸ (26) ಆತ್ಮಹತ್ಯೆ ಮಾಡಿಕೊಂಡವರು. ಮಲ್ಲತ್ತಹಳ್ಳಿ ಸಮೀಪದ ಕಂಪೆನಿಯೊಂದರಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದ ಅವರು ಮೋಹನ್‌ಕುಮಾರ್ ಎಂಬುವರನ್ನು ಎರಡೂವರೆ ವರ್ಷದ ಹಿಂದೆ ವಿವಾಹವಾಗಿದ್ದರು.ಮೂಲತಃ ಮೈಸೂರಿನ ಮೋಹನ್‌ಕುಮಾರ್, ನಗರದ ಕಂಪೆನಿಯೊಂದರಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದಾರೆ. ಅವರು ಕಂಪೆನಿಯ ಕೆಲಸದ ನಿಮಿತ್ತ ಒಂದು ವರ್ಷದ ಹಿಂದೆ ಆಸ್ಟ್ರೇಲಿಯಾಗೆ ಹೋಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.ಪತಿ ವಿದೇಶಕ್ಕೆ ಹೋಗಿದ್ದ ಹಿನ್ನೆಲೆಯಲ್ಲಿ ಮಾನಸ ಅವರು, ಸಂತೃಪ್ತಿನಗರದ 13ನೇ ಅಡ್ಡರಸ್ತೆಯಲ್ಲಿರುವ ತವರು ಮನೆಯಲ್ಲಿ ನೆಲೆಸಿದ್ದರು. ಗೆಜ್ಜಪ್ಪ ಮತ್ತು ಅವರ ಪತ್ನಿ ಗೀತಾ ಅವರು ಸ್ವಂತ ಊರಾದ ಹಿರಿಯೂರು ತಾಲ್ಲೂಕಿನ ಸಕ್ಕರ ಗ್ರಾಮಕ್ಕೆ ಮೂರು ದಿನಗಳ ಹಿಂದೆ ಹೋಗಿದ್ದರು. ಮಾನಸ ಅವರ ಸಹೋದರ ಉಲ್ಲಾಸ್ ಅವರು ಪೋಷಕರನ್ನು ನಗರಕ್ಕೆ ಕರೆದುಕೊಂಡು ಬರಲು ಭಾನುವಾರ ಬೆಳಿಗ್ಗೆ ಕಾರಿನಲ್ಲಿ ಸಕ್ಕರ ಗ್ರಾಮಕ್ಕೆ ಹೋಗಿದ್ದರು. ಮನೆಯಲ್ಲಿ ಒಬ್ಬರೇ ಇದ್ದ ಮಾನಸ ಮಧ್ಯಾಹ್ನ ನೇಣು ಹಾಕಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.`ಪೋಷಕರು ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ನನಗೆ ಉತ್ತಮ ಜೀವನ ಕಲ್ಪಿಸಿಕೊಟ್ಟ ಪೋಷಕರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ನನ್ನ ಸಾವಿಗೆ ಯಾರು ಕಾರಣರಲ್ಲ. ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ~ ಎಂದು ಅವರು ಪತ್ರ ಬರೆದಿಟ್ಟಿದ್ದಾರೆ. ಅಲ್ಲದೇ ಅವರು, `ಭಾನುವಾರ ನನ್ನ ಜೀವನದ ಕೊನೆಯ ದಿನ. ಇನ್ನೂ ಮುಂದೆ ನಾನು ನಿಮಗೆ ಸಿಗುವುದಿಲ್ಲ~ ಎಂದು ಹಲವು ಸ್ನೇಹಿತರು ಹಾಗೂ ಸಹೋದ್ಯೋಗಿಗಳ ಮೊಬೈಲ್‌ಗಳಿಗೆ ಶನಿವಾರ ಮಧ್ಯರಾತ್ರಿ ಎಸ್‌ಎಂಎಸ್ ಸಹ ಕಳುಹಿಸಿದ್ದರು.ಆ ಎಸ್‌ಎಂಎಸ್ ನೋಡಿ ಆತಂಕಗೊಂಡ ಸ್ನೇಹಿತೆ ಕವಿತಾ ಎಂಬುವರು ಮಧ್ಯಾಹ್ನ ಅವರ ಮನೆಯ ಬಳಿ ಬಂದು ನೋಡಿದಾಗ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಹುಳಿಮಾವು ಠಾಣೆಯಲ್ಲಿ ದೂರು ದಾಖಲಾಗಿದೆ.ಅನ್ಯೋನ್ಯವಾಗಿದ್ದರು: `ಮಾನಸ ಐದು ತಿಂಗಳ ಹಿಂದೆಯಷ್ಟೇ ಆಸ್ಟ್ರೇಲಿಯಾಗೆ ಹೋಗಿ ಪತಿಯನ್ನು ಭೇಟಿಯಾಗಿ ಬಂದಿದ್ದಳು. ದಂಪತಿ ಅನ್ಯೋನ್ಯವಾಗಿದ್ದರು. ಮೋಹನ್‌ಕುಮಾರ್ ಕುಟುಂಬ ಸದಸ್ಯರು ಅವಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಆದರೂ ಆಕೆ ಏಕೆ ಆತ್ಮಹತ್ಯೆ ಮಾಡಿಕೊಂಡಳು ಎಂಬುದು ಗೊತ್ತಿಲ್ಲ~ ಎಂದು ಗೆಜ್ಜಪ್ಪ ಅವರ ಸಂಬಂಧಿಕರು `ಪ್ರಜಾವಾಣಿ~ಗೆ ತಿಳಿಸಿದರು.ಅಪಘಾತ: ಬಾಲಕಿ ಸಾವು

ರಸ್ತೆ ದಾಟುತ್ತಿದ್ದ ಮಕ್ಕಳಿಗೆ ಆಟೊ ಡಿಕ್ಕಿ ಹೊಡೆದ ಪರಿಣಾಮ ಎಂಟು ವರ್ಷದ ಬಾಲಕಿ ಸಾವನ್ನಪ್ಪಿದ್ದು, ಮತ್ತೊಬ್ಬ ಬಾಲಕ ಗಾಯಗೊಂಡ ಘಟನೆ ರಾಜಾಜಿನಗರ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ಸಂಭವಿಸಿದೆ.ಮೂಲತಃ ಗುಲ್ಬರ್ಗದವರಾದ ಮೊಗಲಯ್ಯ ಅವರ ಮಗಳು ಸೋನಿ ಮೃತಪಟ್ಟಿದ್ದಾಳೆ. ಮಹಾಲಕ್ಷ್ಮೀ ಲೇಔಟ್‌ನ ಏಳನೇ ಮುಖ್ಯರಸ್ತೆಯಲ್ಲಿ ನಿರ್ಮಾಣವಾಗುತ್ತಿರುವ ಕಟ್ಟಡದಲ್ಲಿ ಕೂಲಿ ಕೆಲಸ ಮಾಡಲು ಮೊಗಲಯ್ಯ ಕುಟುಂಬದ ಸದಸ್ಯರೊಂದಿಗೆ ನಗರಕ್ಕೆ ಬಂದಿದ್ದರು ಎಂದು ಪೊಲೀಸರು ತಿಳಿಸಿದರು.

ಮೊಗಲಯ್ಯ ಅವರ ತಮ್ಮನ ಮಗ ಬಾಗೇಶ್ (7) ಹಾಗೂ ಸೋನಿ ಅಂಗಡಿಗೆ ಹೋಗಲು ರಸ್ತೆ ದಾಟುತ್ತಿದ್ದ ವೇಳೆ ವೇಗವಾಗಿ ಬಂದ ಆಟೊ ಅವರಿಗೆ ಡಿಕ್ಕಿ ಹೊಡೆದಿದೆ.ಘಟನೆಯಲ್ಲಿ ಗಾಯಗೊಂಡ ಇಬ್ಬರನ್ನು ಅದೇ ವಾಹನದಲ್ಲಿ ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಯಿತು. ನಂತರ ಬಾಲಕಿಯನ್ನು ಎಂ.ಎಸ್ ರಾಮಯ್ಯ ಆಸ್ಪತ್ರೆಗೆ ವರ್ಗಾಯಿಸಲಾಯಿತು.ಆದರೆ, ಒಂಬತ್ತು ಗಂಟೆಗೆ ಸೋನಿ ಸಾವನಪ್ಪಿದಳು ಎಂದು ಪೊಲೀಸರು ಮಾಹಿತಿ ನೀಡಿದರು.

ಬಾಗೇಶ್ ಪ್ರಾಣಾಪಾಯದಿಂದ ಪಾರಾಗಿದ್ದು, ಆಟೊ ಚಾಲಕ ತಲೆ ಮರೆಸಿಕೊಂಡಿದ್ದಾನೆ. ರಾಜಾಜಿನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮನೆ ಬಾಗಿಲು ಮುರಿದು ಕಳವು

ಕುಟುಂಬ ಸದಸ್ಯರೆಲ್ಲಾ ಊರಿಗೆ ಹೋಗಿದ್ದ ವೇಳೆ ಮನೆ ಬಾಗಿಲು ಮುರಿದು ಒಳನುಗ್ಗಿದ ದುಷ್ಕರ್ಮಿಗಳು ಹಣ ಮತ್ತು ಚಿನ್ನಾಭರಣ ದೋಚಿರುವ ಘಟನೆ ಅಮೃತಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಘಟನೆ ಸಂಬಂಧ ಹೆಬ್ಬಾಳದ ಮಾರುತಿಲೇಔಟ್ ನಿವಾಸಿ ನಾರಾಯಣಸ್ವಾಮಿ ಎಂಬುವರು ದೂರು ನೀಡಿದ್ದಾರೆ. `ಗುರುವಾರ (ಏ.12) ಕುಟುಂಬ ಸದಸ್ಯರೊಂದಿಗೆ ಶಿಡ್ಲಘಟ್ಟಕ್ಕೆ ಹೋಗಿದ್ದೆವು. ಶನಿವಾರ ಸಂಜೆ ಮನೆಗೆ ಹಿಂತಿರುಗಿದಾಗ ಕಳ್ಳತನವಾಗಿರುವುದು ಗೊತ್ತಾಯಿತು~ ಎಂದು ದೂರಿನಲ್ಲಿ ತಿಳಿಸಿದ್ದಾರೆ.

 ಒಟ್ಟು ಮೂರುವರೆ ಲಕ್ಷ ಮೊತ್ತದ ಚಿನ್ನಾಭರಣ ಕಳವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.ಅತ್ಯಾಚಾರ: ನಾಲ್ವರ ಬಂಧನ

ಯಲಹಂಕ ಉಪನಗರದ ನಾಲ್ಕನೇ ಹಂತದಲ್ಲಿರುವ ಮನೆಯೊಂದರ ಮೇಲೆ ದಾಳಿ ನಡೆಸಿದ ಅಮೃತಹಳ್ಳಿ ಪೊಲೀಸರು, ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪದ ಮೇಲೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.ಕೇರಳ ಮೂಲದವರಾದ ವಿಷ್ಣು, ಯತೀಶ್, ಅಶ್ವಿನ್ ಹಾಗೂ ರೋಹಿರಾಜ್ ಬಂಧಿತರು. ಖಚಿತ ಮಾಹಿತಿಯಿಂದ ಶನಿವಾರ ರಾತ್ರಿ ದಾಳಿ ನಡೆಸಿ ಬಾಲಕಿಯನ್ನು ರಕ್ಷಿಸಲಾಯಿತು ಎಂದು ಪೊಲೀಸರು ತಿಳಿಸಿದರು.ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ವರದಿ ಬಂದ ನಂತರ ಹೆಚ್ಚಿನ ಮಾಹಿತಿ ತಿಳಿಯಲಿದೆ.ಆರೋಪಿಗಳ ವಿರುದ್ಧ ಅಪಹರಣ ಹಾಗೂ ಅತ್ಯಾಚಾರ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.ಕೊಲೆ: ಆರೋಪಿ ಬಂಧನ

ಪದ್ಮನಾಭನಗರದಲ್ಲಿ ಶನಿವಾರ ರಾತ್ರಿ ನಡೆದಿದ್ದ ಪ್ರಕಾಶ್ (42) ಅವರ ಕೊಲೆ ಪ್ರಕರಣದ ಆರೋಪಿ ಮಹೇಶ್‌ಕುಮಾರ್ ಎಂಬಾತನನ್ನು ಬನಶಂಕರಿ ಪೊಲೀಸರು ಬಂಧಿಸಿದ್ದಾರೆ.ಆರೋಪಿಯು ಪ್ರಕಾಶ್ ಅವರ ಪತ್ನಿಯ ಜತೆ ಅನುಚಿತವಾಗಿ ವರ್ತಿಸುತ್ತಿದ್ದ. ಈ ವಿಷಯವಾಗಿ ಆರೋಪಿ ಮತ್ತು ಪ್ರಕಾಶ್ ನಡುವೆ ರಾತ್ರಿ ಮಾತಿನ ಚಕಮಕಿ ನಡೆದು ಜಗಳವಾಯಿತು.ಈ ಸಂದರ್ಭದಲ್ಲಿ ಆತ, ಅವರಿಗೆ ಕತ್ತರಿಯಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.