ಪೊಲೀಸ್: ಆಮೂಲಾಗ್ರ ಬದಲಾವಣೆಗೆ ಸಲಹೆ

7

ಪೊಲೀಸ್: ಆಮೂಲಾಗ್ರ ಬದಲಾವಣೆಗೆ ಸಲಹೆ

Published:
Updated:
ಪೊಲೀಸ್: ಆಮೂಲಾಗ್ರ ಬದಲಾವಣೆಗೆ ಸಲಹೆ

ಬೆಂಗಳೂರು: `ಪೊಲೀಸ್ ತನಿಖಾ ವಿಧಾನ ಮತ್ತು ತರಬೇತಿ ಸೇರಿದಂತೆ ಇಡೀ ಪೊಲೀಸ್ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ತರಬೇಕು' ಎಂದು ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಸಲಹೆ ನೀಡಿದರು.ನಗರದ ನಿಮ್ಹಾನ್ಸ್ ಸಮ್ಮೇಳನ ಸಭಾಂಗಣದಲ್ಲಿ ಬುಧವಾರ ನಡೆದ ರಾಜ್ಯ ಮಹಿಳಾ ಪೊಲೀಸ್ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, `ದೇಶದ ಪೊಲೀಸ್ ವ್ಯವಸ್ಥೆ ಸ್ವಾತಂತ್ರ್ಯ ಪೂರ್ವದಲ್ಲಿ ಇದ್ದಂತೆಯೇ ಕಾರ್ಯ ನಿರ್ವಹಿಸುತ್ತಿದೆ. ಪೊಲೀಸರು ಇಂದಿಗೂ ಸ್ವತಂತ್ರರಾಗಿ ಕೆಲಸ ಮಾಡುತ್ತಿಲ್ಲ' ಎಂದರು.ಕಾನೂನು ಮತ್ತು ಸುವ್ಯವಸ್ಥೆ ಪಾಲನೆ, ತನಿಖೆ ಹಾಗೂ ನ್ಯಾಯಾಲಯ ಕಾರ್ಯ ಚಟುವಟಿಕೆಗಳ ನಿರ್ವಹಣೆಗೆ ಪ್ರತ್ಯೇಕ ಸಿಬ್ಬಂದಿಯನ್ನು ನಿಯೋಜಿಸಬೇಕು. ಮೂಲಭೂತವಾಗಿ ತರಬೇತಿ ಪ್ರಕಿಯೆಯಲ್ಲಿ ಸುಧಾರಣೆ ತರಬೇಕು. ಈ ನಿಟ್ಟಿನಲ್ಲಿ ನಿವೃತ್ತ ಪೊಲೀಸ್ ಮಹಾನಿರ್ದೇಶಕರನ್ನು ಒಳಗೊಂಡ ಸಮಿತಿ ರಚಿಸಿ, ಅವರಿಂದ ತರಬೇತಿ ಕೊಡಿಸಬೇಕು.

ಅಂತೆಯೇ ವರ್ಗಾವಣೆ ಪ್ರಕ್ರಿಯೆಯನ್ನು ಸುಧಾರಿಸಬೇಕು ಎಂದು ಅಭಿಪ್ರಾಯಪಟ್ಟರು.

ಸಿನಿಮಾ ಮತ್ತು ಟಿ.ವಿ ಮಾಧ್ಯಮದಲ್ಲಿ ಮಹಿಳೆಯರನ್ನು ಕೀಳಾಗಿ ಬಿಂಬಿಸಲಾಗುತ್ತಿದೆ. ಇದರಿಂದ ಸಮಾಜದ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತಿದೆ. ಇದು ಮಹಿಳೆಯರ ಮೇಲಿನ ಅಪರಾಧ ಕೃತ್ಯಗಳಿಗೆ ಕಾರಣವಾಗುತ್ತಿದೆ.

ಮಹಿಳೆಯರ ವಿರುದ್ಧದ ಅಪರಾಧ ಕೃತ್ಯಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಇಂತಹ ಅಪರಾಧ ಪ್ರಕರಣಗಳ ನಿಯಂತ್ರಣಕ್ಕೆ ಮತ್ತು ಶೀಘ್ರ ವಿಚಾರಣೆಗೆ ವಿಶೇಷ ಕಾನೂನು ಹಾಗೂ ಸಮಿತಿಯನ್ನು ರಚಿಸಬೇಕು. ಆ ವಿಶೇಷ ಸಮಿತಿಯು ಮಹಿಳಾ ನ್ಯಾಯಾಧೀಶರು, ಮಹಿಳಾ ಪೊಲೀಸ್ ಅಧಿಕಾರಿಗಳು ಹಾಗೂ ಮಹಿಳಾ ಕಾನೂನು ತಜ್ಞರನ್ನು ಒಳಗೊಂಡಿರಬೇಕು ಎಂದು ಹೇಳಿದರು.ಬೆಂಗಳೂರಿನ ಜ್ಞಾನಭಾರತಿ ಠಾಣೆ ವ್ಯಾಪ್ತಿಯಲ್ಲಿ ಕಾನೂನು ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ತನಿಖೆ ಸರಿಯಾಗಿ ನಡೆದಿಲ್ಲ. ಪ್ರಕರಣ ಸಂಬಂಧ ವೈದ್ಯರು ನೀಡಿರುವ ವರದಿ ಕೂಡ ತನಿಖೆಗೆ ಪೂರಕವಾಗಿಲ್ಲ.

ಈ ಸಂಗತಿ ನನ್ನ ಗಮನಕ್ಕೆ ಬಂದಿದ್ದು, ಆ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಸೂಚಿಸಿದ್ದೇನೆ. ದೆಹಲಿಯ ಸಾಮೂಹಿಕ ಅತ್ಯಾಚಾರ ಪ್ರಕರಣ ಮಹಿಳೆಯರ ವಿರುದ್ಧದ ಅಪರಾಧ ಕೃತ್ಯಗಳ ಗಂಭೀರತೆಯನ್ನು ಹೆಚ್ಚಿಸಿದೆ. ಮಹಿಳೆಯರ ಮೇಲೆ ನಡೆಯುತ್ತಿರುವ ಅಪರಾಧಗಳನ್ನು ತಡೆಯುವ ನಿಟ್ಟಿನಲ್ಲಿ ಸಾಮಾಜಿಕ ಕ್ರಾಂತಿ ಆಗಬೇಕು ಎಂದು ತಿಳಿಸಿದರು.`ರಾಜ್ಯದಲ್ಲಿ ಕೇವಲ ಹತ್ತು ಮಹಿಳಾ ಪೊಲೀಸ್ ಠಾಣೆಗಳಿವೆ ಮತ್ತು ಶೇ 4ರಷ್ಟು ಮಹಿಳಾ ಪೊಲೀಸ್ ಸಿಬ್ಬಂದಿ ಇದ್ದಾರೆ. ಆದ್ದರಿಂದ ಮಹಿಳಾ ಠಾಣೆಗಳು ಹಾಗೂ ಮಹಿಳಾ ಸಿಬ್ಬಂದಿ ಸಂಖ್ಯೆಯನ್ನು ಹೆಚ್ಚಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಬಸ್ ನಿಲ್ದಾಣ ಮತ್ತು ರೈಲು ನಿಲ್ದಾಣಗಳಲ್ಲಿ ಮಹಿಳಾ ಹೊರ ಠಾಣೆಗಳನ್ನು ಆರಂಭಿಸಬೇಕು' ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಲಾಲ್ ರೋಕುಮ ಪಚಾವೊ ಹೇಳಿದರು.ಅತ್ಯಾಚಾರ ಪ್ರಕರಣಗಳ ತನಿಖೆ ಮತ್ತು ವಿಚಾರಣೆ ಪ್ರಕ್ರಿಯೆಯಲ್ಲಿ ವಿಳಂಬವಾಗುತ್ತಿದೆ. ರಾಷ್ಟ್ರೀಯ ಅಪರಾಧ ದಾಖಲಾತಿ ವಿಭಾಗದ (ಎನ್‌ಸಿಆರ್‌ಬಿ) ವರದಿ ಪ್ರಕಾರ ದೇಶದಲ್ಲಿ ದಾಖಲಾಗುವ ಅತ್ಯಾಚಾರ ಪ್ರಕರಣಗಳಲ್ಲಿ ಶೇ 26.4ರಷ್ಟು ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಶೇ 27.7ರಷ್ಟು ಅಪರಾಧಿಗಳಿಗೆ ಶಿಕ್ಷೆಯಾಗುತ್ತಿದೆ ಎಂದರು.ಮಹಿಳೆಯರ ಮೇಲಿನ ಅಪರಾಧಗಳು, ಸಿಬ್ಬಂದಿಯ ವೃತ್ತಿಪರತೆ ಮತ್ತು ಸಾಮರ್ಥ್ಯ ವೃದ್ಧಿ, ಪೊಲೀಸ್ ವ್ಯವಸ್ಥೆಯಲ್ಲಿ ಮಹಿಳೆ ಹಾಗೂ ಮಾನವ ಸಾಗಣೆ ವಿಷಯಗಳ ಕುರಿತು ಸಮಾವೇಶದಲ್ಲಿ ಚರ್ಚೆ ನಡೆಯಿತು.ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಔರಾದ್‌ಕರ್, ಅಪರಾಧ ಮತ್ತು ತಾಂತ್ರಿಕ ಸೇವೆಗಳ ವಿಭಾಗದ ಎಡಿಜಿಪಿ ಎ.ಎಂ.ಪ್ರಸಾದ್, ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಸಿ.ಮಂಜುಳಾ, ನಿವೃತ್ತ ಡಿಜಿಪಿ ಜೀಜಾ ಹರಿಸಿಂಗ್, ರಾಜ್ಯ ಮೀಸಲು ಪೊಲೀಸ್ ಪಡೆ ಐಜಿಪಿ ಮಾಲಿನಿ ಕೃಷ್ಣಮೂರ್ತಿ ಪಾಲ್ಗೊಂಡಿದ್ದರು.ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಉಪ ಮುಖ್ಯಮಂತ್ರಿ ಆರ್.ಅಶೋಕ, ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ ವಿ.ಉಮೇಶ್, ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ ಭಾಗವಹಿಸಿದ್ದರು.`ರಾತ್ರಿ ಗಸ್ತು ತಿರುಗುತ್ತೇನೆ'

`ಮಹಿಳೆಯರ ರಕ್ಷಣೆಗಾಗಿ ರಾತ್ರಿ ವೇಳೆ ಖುದ್ದು ಗಸ್ತು ಮಾಡಲು ನಿರ್ಧರಿಸಿದ್ದೇನೆ. ರಾಜ್ಯ ಪೊಲೀಸ್ ಮಹಾನಿರ್ದೇಶಕರು ಹಾಗೂ ಪೊಲೀಸ್ ಅಧಿಕಾರಿಗಳು ಅನುಮತಿ ನೀಡಿದರೆ, ಬೆಂಗಳೂರಿನಲ್ಲಿ ಪ್ರತಿನಿತ್ಯ ರಾತ್ರಿ ಗಸ್ತು ತಿರುಗುತ್ತೇನೆ' ಎಂದು ರಾಜ್ಯಪಾಲರು ಇದೇ ಸಂದರ್ಭದಲ್ಲಿ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry