ಪೊಲೀಸ್ ಇಲಾಖೆಗೆ ಅಗತ್ಯ ಸೌಲಭ್ಯ ನೀಡಲು ಮನವಿ

7

ಪೊಲೀಸ್ ಇಲಾಖೆಗೆ ಅಗತ್ಯ ಸೌಲಭ್ಯ ನೀಡಲು ಮನವಿ

Published:
Updated:

ಯಾದಗಿರಿ: ಜಿಲ್ಲೆಯಲ್ಲಿ ಕೊಲೆ, ದರೋಡೆ, ಅಕ್ರಮ ಮದ್ಯ ಮಾರಾಟ, ಮಧ್ಯವರ್ತಿಗಳ ಹಾವಳಿ ವಿಪರೀತವಾಗಿದ್ದು, ಇದನ್ನು ತಡೆಗಟ್ಟಲು ಅಗತ್ಯ ಪೊಲೀಸ್ ಸಿಬ್ಬಂದಿ ಹಾಗೂ ಶ್ವಾನದಳದಂತಹ ಸೌಲಭ್ಯವನ್ನು ಜಿಲ್ಲೆಗೆ ನೀಡುವಂತೆ ಟೋಕರಿ ಕೋಲಿ ಸಮಾಜದ ಜಿಲ್ಲಾ ಘಟಕದ ವತಿಯಿಂದ ಗೃಹ ಸಚಿವರೂ ಆದ ಉಪಮುಖ್ಯಮಂತ್ರಿ ಆರ್. ಅಶೋಕ ಅವರಿಗೆ ಮನವಿ ಸಲ್ಲಿಸಲಾಯಿತು.



ಭಾಗದಲ್ಲಿ ಅಕ್ರಮ ಮದ್ಯ ಮಾರಾಟ ಜಾಲ ಹೆಚ್ಚಾಗಿದೆ. ಇದನ್ನು ನಿಯಂತ್ರಿಸಲು ಜಿಲ್ಲೆಗೆ ಹೆಚ್ಚಿನ ಸಿಬ್ಬಂದಿ ಅವಶ್ಯಕವಾಗಿದೆ. ಶ್ವಾನದಳ ನೀಡಿ ಅಪರಾಧ ಪ್ರಕರಣಗಳನ್ನು ಶೀಘ್ರ ಪತ್ತೆ ಮಾಡಲು ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು.



ಈ ಭಾಗದ ಅಭಿವೃದ್ಧಿಗೆ ಹೆಚ್ಚಿನ ಮಹತ್ವ ನೀಡಿರುವುದರಿಂದ ಜಿಲ್ಲೆಗೆ ಅನುಗುಣವಾಗಿ ಎಲ್ಲ ಸೌಲಭ್ಯ ನೀಡಿ ಈ ಜಿಲ್ಲೆಯನ್ನು ಪ್ರಗತಿ ಪಥದಲ್ಲಿ ಮುನ್ನಡೆಸಬೇಕು. ಈ ಜಿಲ್ಲೆ ಆಂಧ್ರ ಪ್ರದೇಶದ ಗಡಿ ಭಾಗಕ್ಕೆ ಹೊಂದಿಕೊಂಡಿದ್ದು, ಈ ಭಾಗದಲ್ಲಿ ಅಕ್ರಮ ಮದ್ಯ, ಹೆಂಡ ಸೇರಿದಂತೆ ಅಕ್ರಮ ಚಟುವಟಿಕೆ ರಾಜಾರೋಷವಾಗಿ ನಡೆಯುತ್ತಿವೆ.

 

ಬಡವರಿಗೆ ಸೂಕ್ತ ರಕ್ಷಣೆ ನಿಡಿ ಸುಳ್ಳು ಮೊಕದ್ದಮೆ ಹೂಡುವ ಅಧಿಕಾರಿಗಳಿಗೆ ಎಚ್ಚರಿಕೆ ನೀಡಬೇಕು. ಬಡವರಿಗಾಗುವ ಅನ್ಯಾಯವನ್ನು ತಪ್ಪಿಸಬೇಕು. ಗ್ರಾಮೀಣ ಭಾಗದಲ್ಲಿ ಪೊಲೀಸ್ ಠಾಣೆಗಳಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದ್ದು, ಅವರ ಅಣತಿಯಂತೆ ಮೊಕದ್ದಮೆಗಳು ದಾಖಲಾಗುತ್ತಿವೆ. ಅನಕ್ಷರಸ್ಥರಿಗೆ ಬಡವರಿಗೆ, ಹಿಂದುಳಿದವರಿಗೆ, ಅನ್ಯಾಯವಾಗುತ್ತಿದೆ ಎಂದು ತಿಳಿಸಿದರು.



  ಇಂತಹ ಅಕ್ರಮ ಚಟುವಟಿಕೆ ನಡೆಯದಂತೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ನಿರಪರಾಧಿಗಳಿಗೆ ಶಿಕ್ಷೆ ಆಗುವುದನ್ನು ತಡೆಯಬೇಕು. ದಲ್ಲಾಳಿ, ಮಧ್ಯವರ್ತಿಗಳ ಹಾವಳಿಯಿಂದ ನಿರಪರಾಧಿ ಅಮಾಯಕ ಬಡ ಜನತೆಗೆ ಅನ್ಯಾಯವಾಗದಂತೆ ಇಲಾಖೆಗೆ ಸೂಚನೆ ನೀಡಬೇಕು. ಅಂತಹ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಂಡು ಅನ್ಯಾಯ ಸರಿಪಡಿಸಬೇಕು ಎಂದು ಮನವಿ ಮಾಡಿದರು. 



ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಉಮೇಶ ಮುದ್ನಾಳ, ನಾಗೇಂದ್ರಪ್ಪ ಸಾಲಿಮನಿ ಶಹಾಪೂರ, ರಡ್ಡಿ ಮುಂಡರಗಿ ಹಾಗೂ  ನಿಜಶರಣ ಅಂಬಿಗರ ಚೌಡಯ್ಯನ ವಿವಿಧೋದ್ದೇಶ ಸಂಘದ ಪದಾಧಿಕಾರಿಗಳು ಹಾಜರಿದ್ದರು. .

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry